ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ ಬಂದಿದೆ. ಹಿರಿಯ ಚಿತ್ರನಿರ್ದೇಶಕ ಡಾ.ಗಿರೀಶ್‌ ಕಾಸರವಳ್ಳಿ ಮತ್ತು ಹಿರಿಯ ಪತ್ರಕರ್ತೆ ಡಾ.ವಿಜಯಮ್ಮ ಸಂಘದ ಲಾಂಛನ ಬಿಡುಗಡೆಗೊಳಿಸಿದರು.

”ಕನ್ನಡದ ಒಟ್ಟು ಸಿನಿಮಾ ಬೆಳವಣಿಗೆ, ಇತಿಹಾಸವನ್ನು ರಾಷ್ಟ್ರೀಯ ನೆಲೆಯಲ್ಲಿ ವಿಶ್ಲೇಷಣೆ ಮಾಡುವುದು ತುರ್ತು ಅಗತ್ಯವಿದೆ. ‘ಸಂಸ್ಕಾರ’ , ‘ಸ್ಕೂಲ್ ಮಾಸ್ಟರ್ ‘ ರೀತಿಯ ಮಹತ್ವದ ಚಿತ್ರಗಳನ್ನು ಸರಿಯಾಗಿ ಬಿಂಬಿಸುವ ಕೆಲಸ ಆಗಿಲ್ಲ. ರೌಡಿಸಂ ಮಾದರಿಯ ಸಿನಿಮಾಗಳನ್ನು‌ ಹೆಚ್ಚು ಹೆಚ್ಚು ಪ್ರೊಜೆಕ್ಟ್ ಮಾಡಿ ರಾಜ್ಯದ ಹೊರಗೂ ಕನ್ನಡ ಚಿತ್ರಗಳ ಕುರಿತಂತೆ ನಾವೇ ತಪ್ಪು ಕಲ್ಪನೆ ಮೂಡಿಸಿದ್ದೇವೆ. ಅದನ್ನು ಹೋಗಲಾಡಿಸುವ ಅಗತ್ಯವಿದೆ” ಎಂದರು ಹಿರಿಯ ಚಿತ್ರನಿರ್ದೇಶಕ ಗಿರೀಶ್‌ ಕಾಸರವಳ್ಳಿ. ನಿನ್ನೆ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

”ಕನ್ನಡದ ಅಸ್ಮಿತೆ, ಕಲಾತ್ಮಕ ಹೆಗ್ಗಳಿಕೆ ತೋರಿಸಬೇಕು, ಆ ಕೆಲಸ ಆಗಬೇಕು. ಬೆಂಗಳೂರು ಅಲ್ಲದೆ ರಾಜ್ಯದ ಆಚೆಗೂ ಕನ್ನಡದಲ್ಲಿ ಈ ರೀತಿ ಸಾಧನೆ ಆಗಿದೆ ಎನ್ನುವುದು ತಿಳಿಸಬೇಕು. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳನ್ನು ಪ್ರೊಜೆಕ್ಟ್ ಮಾಡುತ್ತಿಲ್ಲ. ಕನ್ನಡದಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಬೇರೆಯೇ ರೀತಿಯ ಚಿತ್ರಗಳು ಆಗುತ್ತಿವೆ. ‘ಬಳೆ ಕೆಂಪ’, ‘ಪಿಂಕಿ ಎಲ್ಲಿ’, ‘ನಾನು ಕುಸುಮ’, ‘ಪೆದ್ರೋ’, ‘ಶಿವಮ್ಮ’ ಮುಂತಾದ ಚಿತ್ರಗಳು ಜಗತ್ತಿನಾದ್ಯಂತ ಸದ್ದು ಮಾಡುತ್ತಿವೆ. ಅವುಗಳು ಜನರಿಗೆ ತಲುಪುತ್ತಿಲ್ಲವಷ್ಟೆ. ದಲಿತ, ಬಂಡಾಯ ಸಾಹಿತ್ಯ ಕನ್ನಡ ಚಿತ್ರರಂಗದಲ್ಲಿ ಚಿತ್ರ ಗೀತೆಗಳಲ್ಲಿ ಬಂದಿವೆ. ಸಿನಿಮಾದಲ್ಲಿ ಬಂದಿಲ್ಲ. ‌ಅದನ್ನು ದಾಖಲು ಮಾಡುವ ಅಗತ್ಯವಿದೆ” ಎಂದರು.

ವಿಮರ್ಶಕರಿಂದ ಮಾಧ್ಯಮ, ಉದ್ಯಮ ಬೆಳೆಯುತ್ತದೆ ಎನ್ನುವುದು ಕಾಸರವಳ್ಳಿ ಅವರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು, “ನಾನು ಚಿತ್ರರಂಗ ಪ್ರವೇಶಿಸಿದ್ದು 1975ರಲ್ಲಿ. ಆಗ ಚಲನಚಿತ್ರ ಪತ್ರಕರ್ತಕರು ಬೆನ್ನೆಲುಬಾಗಿದ್ದರಿಂದ ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಯಿತು. ಕೃತಿಕಾರ ಇಲ್ಲದಿದ್ದರೆ ವಿಮರ್ಶಕನ ಅಗತ್ಯವಿಲ್ಲ. ವಿಮರ್ಶಕ ಆಮ್ಲಜನಕದ ರೀತಿ ಕೆಲಸ ಮಾಡುತ್ತಾರೆ. ಸಿನಿಮಾ ವಿಮರ್ಶೆ ಮಾಡದಿದ್ದರೆ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಿಂದೆ ಪತ್ರಕರ್ತರ ಪರಿಷತ್ ಪ್ರತಿ ವಾರ ವಿಮರ್ಶೆಗಳ ವಿಮರ್ಶೆ ಸಂವಾದ ಕಾರ್ಯಕ್ರಮ ನಡೆಸುತ್ತಿತ್ತು. ಇದು ನಿರ್ದೇಶಕರನ್ನು ಉತ್ತೇಜಿಸುವ ಕಾರ್ಯಕ್ರಮವಾಗಿತ್ತು” ಎಂದರು.

ಹಿರಿಯ ಪರ್ತಕರ್ತೆ, ಲೇಖಕಿ ಡಾ.ವಿಜಯಾ ಅವರು ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಪತ್ರಕರ್ತರ ಕೊಡುಗೆ ಮತ್ತು ವಿವಿಧ ವಿಷಯಗ‌ಳ‌ ಕುರಿತು ಮಾತನಾಡಿದರು. ಸಂಘದ ಅಧ್ಯಕ್ಷ ಬಾ.ನಾ.ಸುಬ್ರಹ್ಮಣ್ಯ ಸಂಘದ ಕಾರ್ಯ ಚಟುವಟಿಕೆ, ಉದ್ದೇಶಗಳ ಕುರಿತು ವಿವರಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ಚಲನಚಿತ್ರ ಅಕಾಡಮಿ ಅಧ್ಯಕ್ಷ ಅಶೋಕ್ ಕಶ್ಯಪ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಅರಸ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಅಖಿಲ ಬಾರತ ಕಾರ್ಯನಿರತ ಒಕ್ಕೂಟದ ಅಧ್ಯಕ್ಷ ಬಿ.ವಿ ಮಲ್ಲಿಕಾರ್ಜುನಯ್ಯ, ಮಾಧ್ಯಮ ತಜ್ಞ ಜಿ.ಎನ್. ಮೋಹನ್, ಹಿರಿಯ ಚಲನಚಿತ್ರ ಪತ್ರಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Connect with

Please enter your comment!
Please enter your name here