ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್‌ ವಾರ್‌’ ಹಿಂದಿ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ‘ಕಾಂತಾರ’ ಸಿನಿಮಾ ಖ್ಯಾತಿಯ ಕನ್ನಡತಿ ಸಪ್ತಮಿ ಗೌಡ ನಟಿಸಿದ್ದಾರೆ. ಸೆಪ್ಟೆಂಬರ್‌ 28ರಂದು ಮೂಲ ಹಿಂದಿ ಸೇರಿದಂತೆ ಒಟ್ಟು ಹನ್ನೊಂದು ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

‘ದಿಕಾಶ್ಮೀರ್ ಫೈಲ್ಸ್’ ಬಳಿಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ತಯಾರಾಗಿರುವ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಟೀಸರ್ ಹಾಗೂ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಕುರಿತ ಪ್ರಯೋಗದ ದೃಶ್ಯದೊಂದಿಗೆ ಆರಂಭವಾಗುವ ಟೀಸರ್‌ನಲ್ಲಿ ಭಾರತೀಯ ವಿಜ್ಞಾನಿಗಳು ವ್ಯಾಕ್ಸಿನ್‌ಗಾಗಿ ಪಟ್ಟ ಶ್ರಮವನ್ನು ಕಟ್ಟಿಕೊಡಲಾಗಿದೆ. “A war you didn’t know you fought. And won” ಎಂದು ಆರಂಭದಲ್ಲಿ ನಿರ್ದೇಶಕ ಅಗ್ನಿಹೋತ್ರಿ ಹೇಳಿಕೊಂಡಿದ್ದರು. ಚಿತ್ರದ ಬಗ್ಗೆ ಅವರು ಎಲ್ಲಿಯೂ ಹೆಚ್ಚಿನ ಮಾಹಿತಿ ಹೊರಗೆಡಹಿಲ್ಲ. ಶೀರ್ಷಿಕೆಯೇ ಹೇಳುವಂತೆ ಕೋವಿಡ್‌ ಲಸಿಕೆ ಸುತ್ತ ಕತೆ ಹೆಣೆದಿರುವಂತಿದೆ. ಟೀಸರ್‌ನಲ್ಲಿ ಈ ಮಾಹಿತಿ ಸಿಗುತ್ತದೆ.

ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ‘ಕಾಂತಾರ’ ಖ್ಯಾತಿಯ ಸಪ್ತಮಿ ಗೌಡ ನಟಿಸಿದ್ದಾರೆ. ಇದೇ ವರ್ಷ ಜನವರಿ ತಿಂಗಳಲ್ಲಿ ನಿರ್ದೇಶಕ ಅಗ್ನಿಹೋತ್ರಿ ತಮ್ಮ ಟ್ವಿಟರ್‌ನಲ್ಲಿ, ‘Welcome Sapthami. Your role in #TheVaccineWar will touch many hearts.’ ಎಂದು ಚಿತ್ರತಂಡಕ್ಕೆ ಸಪ್ತಮಿ ಅವರನ್ನು ಸ್ವಾಗತಿಸಿದ್ದರು. ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಾನಾ ಪಾಟೇಕರ್‌, ಪಲ್ಲವಿ ಜೋಷಿ, ಅನುಪಮ್ ಖೇರ್ ಇದ್ದಾರೆ. ‘ಕಾಶ್ಮೀರ್‌ ಫೈಲ್ಸ್’​ ನಿರ್ಮಾಪಕ ಅಭಿಷೇಕ್​ ಅಗರ್‌ವಾಲ್‌ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ಐ ಆ್ಯಮ್ ಬುದ್ಧ ಸಹಯೋಗದಲ್ಲಿ ಪಲ್ಲವಿ ಜೋಶಿ ಕೂಡ ಸಿನಿಮಾದ ಸಹನಿರ್ಮಾಪಕಿಯಾಗಿದ್ದಾರೆ. ಸೆಪ್ಟಂಬರ್​ 28ರಂದೇ ‘ದಿ ವ್ಯಾಕ್ಸಿನ್​ ವಾರ್’ ಚಿತ್ರ 11 ಭಾಷೆಗಳಲ್ಲಿ ತೆರೆಕಾಣಲಿದೆ. ಇದೇ ದಿನ ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ಪ್ರಭಾಸ್‌ ನಟಿಸಿರುವ ‘ಸಲಾರ್‌’ ಕೂಡ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here