ಪ್ರಶಾಂತ್‌ ವರ್ಮಾ ನಿರ್ದೇಶನದ ‘ಅಧೀರ’ ಸಿನಿಮಾ ಮೂಲಕ ದಕ್ಷಿಣ ಭಾರತದ ಖ್ಯಾತ ನಿರ್ಮಾಪಕ ದಾನಯ್ಯ ಪುತ್ರ ಕಲ್ಯಾಣ್‌ ದಾಸರಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಇದೊಂದು ಸೂಪರ್‌ ಹೀರೋ ಸಿನಿಮಾ ಆಗಿದ್ದು, ಟೀಸರ್‌ ಬಿಡುಗಡೆಯಾಗಿದೆ.

‘ಸೂಪರ್ ಹೀರೋ ಹನುಮಾನ್’, ‘ಆಕ್ಷನ್ ಥ್ರಿಲ್ಲರ್ ಕಲ್ಕಿ’, ‘ಜೊಂಬಿ ರೆಡ್ಡಿ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಪ್ರಶಾಂತ್ ವರ್ಮಾ ‘ಅಧೀರ’ ಚಿತ್ರದೊಂದಿಗೆ ಮರಳುತ್ತಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ನಿರ್ಮಾಪಕ ದಾನಯ್ಯ (RRR ಸಿನಿಮಾ ನಿರ್ಮಾಪಕ) ಅವರ ಪುತ್ರ ಕಲ್ಯಾಣ್‌ ದಾಸರಿ ಅವರು ಈ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ನಿರ್ದೇಶಕ ಎಸ್.ಎಸ್.ರಾಜಮೌಳಿ, ಖ್ಯಾತ ನಟರಾದ ಜೂನಿಯರ್ NTR, ರಾಮ್ ಚರಣ್ ತೇಜಾ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಬಾಲ್ಯದಿಂದಲೇ ‘ಅಧೀರ’ನಲ್ಲಿ ಒಂದು ಮಹಾನ್ ಶಕ್ತಿ ಅಡಕವಾಗಿರುತ್ತದೆ. ಆತ ಬೆಳೆದಂತೆಲ್ಲಾ ಬಲಿಶಾಲಿಯಾಗಿ, ಧೀರ-ಶೂರನಾಗಿ ಬೆಳೆಯುತ್ತಾನೆ. ಎಲ್ಲಾ ಸೂಪರ್ ಹೀರೋಗಳಂತೆ ಈತ ದುಷ್ಟರನ್ನು ನಾಶ ಮಾಡಿ, ಮುಗ್ದರನ್ನು ರಕ್ಷಿಸುತ್ತಾನೆ. ಸಖತ್ ಪವರ್ ಫುಲ್ ಆಗಿ ಮೂಡಿ ಬಂದಿರುವ ‘ಅಧೀರ’ ಟೀಸರ್ ಕೊನೆಯ ಭಾಗದಲ್ಲಿ ಇಂದ್ರನ ವಜ್ರಾಯುಧ ಮಾದರಿಯಲ್ಲೊಂದು ಆಯುಧ ಪ್ರದರ್ಶಿಸಲಾಗಿದೆ. ಹಾಲಿವುಡ್ ದೃಶ್ಯ ವೈಭೋಗದ ಮೆರುಗು ಟೀಸರ್ ಗುಣಮಟ್ಟವನ್ನು ಹೆಚ್ಚಿಸಿದೆ.

ಭಾರತದ ಪೌರಾಣಿಕ ಪಾತ್ರಗಳಿಂದ ಸ್ಫೂರ್ತಿ ಪಡೆದ ನಿರ್ದೇಶಕ ಪ್ರಶಾಂತ್ ವರ್ಮಾ, ಹಾಲಿವುಡ್ ಸಿನಿಮಾಗಳಾದ ಮಾರ್ವೆಲ್ ಮತ್ತು ಡಿಸಿಯಂತ ಸೂಪರ್ ಹೀರೋಗಳ ಕಾನ್ಸೆಪ್ಟ್‌ನಲ್ಲಿ ‘ಅಧೀರ’ ಸಿನಿಮಾವನ್ನು ತಯಾರಿಸುತ್ತಿದ್ದು, ಅದ್ಭುತ ಸಾಹಸ ದೃಶ್ಯಗಳು ಸಿನಿಮಾದಲ್ಲಿರಲಿವೆ. ಮೊದಲ ಟೀಸರ್ ಝಲಕ್‌ನಲ್ಲಿ ಕಲ್ಯಾಣ್ ಭರವಸೆಯ ನಾಯಕ ಅನ್ನೋದನ್ನು ಪ್ರೋವ್ ಮಾಡಿದ್ದಾರೆ. ‘ಅಧೀರ’ ಸಿನಿಮಾವನ್ನು ಪ್ರೈಮ್ ಶೋ ಎಂಟರ್ ಟೈನರ್ ಬ್ಯಾನರ್ ನಡಿ ಕೆ.ನಿರಂಜನ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದು, ಚೈತನ್ಯ ಅರ್ಪಿಸುತ್ತಿದ್ದಾರೆ. ಗೌರಿಹರಿ ಮ್ಯೂಸಿಕ್, ದಾಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್ ಸಿನಿಮಾಕ್ಕಿದೆ. ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ‌ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತಯಾರಾಗಲಿದೆ.

LEAVE A REPLY

Connect with

Please enter your comment!
Please enter your name here