ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗುತ್ತಿರುವ ‘James May : Our man in India’ ಸೀಸನ್ 3ಯಲ್ಲಿ ಮೂರು ಸಂಚಿಕೆಗಳಿದ್ದು ಪ್ರತಿಯೊಂದು ಸಂಚಿಕೆಯೂ ಸರಿಸುಮಾರು 50 ನಿಮಿಷ ಅವಧಿಯದ್ದು. ಮೂರನೇ ಮತ್ತು ಕೊನೆ ಸಂಚಿಕೆಯಲ್ಲಿ, ಜೇಮ್ಸ್ ಡಾರ್ಜಿಲಿಂಗ್, ಕೋಲ್ಕತ್ತಾ ಮತ್ತು ಸುಂದರ್ ಬನವನ್ನು ತೋರಿಸುತ್ತಾರೆ. ಅಂದಹಾಗೆ ಈ ಸರಣಿಯಲ್ಲಿ ದಕ್ಷಿಣ ಭಾರತವನ್ನು ಸೇರಿಸಿಲ್ಲ. ಹಾಗಾಗಿ ಜೇಮ್ಸ್ ಕಂಡಷ್ಟು ಭಾರತ ಮಾತ್ರ ಪ್ರೇಕ್ಷಕರಿಗೆ ಕಾಣಲು ಸಿಗುತ್ತದೆ.

ಭಾರತವು ಪ್ರಪಂಚದ ಅತ್ಯಂತ ವೈವಿಧ್ಯಮಯ ರಾಷ್ಟ್ರಗಳಲ್ಲಿ ಒಂದಾಗಿದೆ. ಇದನ್ನು ತಮ್ಮ ಡಾಕ್ಯುಸೀರಿಸ್‌ನಲ್ಲಿ ಸೆರೆಹಿಡಿದಿದ್ದಾರೆ ಪ್ರಸಿದ್ಧ ದೂರದರ್ಶನ ನಿರೂಪಕ ಮತ್ತು ಪತ್ರಕರ್ತ ಜೇಮ್ಸ್ ಮೇ. ‘ಜೇಮ್ಸ್ ಮೇ: ಅವರ್ ಮ್ಯಾನ್ ಇನ್ ಇಂಡಿಯಾ’ ಮೂಲಕ ಭಾರತದ ವಿವಿಧ ಮೆಟ್ರೋ ನಗರಗಳಿಗೆ ಪ್ರಯಾಣಿಸಿ, ಅಲ್ಲಿನ ತಳುಕು-ಬಳುಕು ಜತೆ ಸಾಮಾನ್ಯ ಜೀವನದ, ಸಂಸ್ಕೃತಿ, ಆಚಾರ ವಿಚಾರ ಮತ್ತು ಜೀವ ವೈವಿಧ್ಯದ ಒಂದು ಝಲಕ್ ಅನ್ನು ನಮ್ಮ ಮುಂದಿಟ್ಟಿದ್ದಾರೆ. ವಿಶೇಷ ಎಂದರೆ ಇಲ್ಲಿ ಮಸಾಲಾ ಇಲ್ಲ, ಸುದೀರ್ಘ ಮಾತು, ರೋಚಕತೆ ಇಲ್ಲ. ಇದ್ದದ್ದನ್ನು ಇದ್ದಂತೆ ತೋರಿಸಿ, ಪ್ರೇಕ್ಷಕರನ್ನು ದೇಶ ಸುತ್ತಲು ಜತೆಗೆ ಕರೆದೊಯ್ಯುತ್ತಾರೆ ಮೇ.

ಈ ಸರಣಿಯಲ್ಲಿ ಜೇಮ್ಸ್ ಮೇ ಅವರ ಈ ಯಾತ್ರೆ ಅರಬ್ಬೀ ಸಮುದ್ರದಿಂದ ಆರಂಭವಾಗಿ ಬಂಗಾಳ ಕೊಲ್ಲಿಯಲ್ಲಿ ಮುಕ್ತಾಯಗೊಳ್ಳುತ್ತದೆ. ರಾಜಸ್ಥಾನದ ಸುಡುವ ಮರುಭೂಮಿಗಳಿಂದ ಹಿಡಿದು ಹಿಮಾಲಯದ ರುದ್ರರಮಣೀಯ ತಪ್ಪಲಿನವರೆಗೆ ವಿಸ್ಮಯಕಾರಿ ಭೂದೃಶ್ಯಗಳನ್ನು ಇಲ್ಲಿ ಚಂದವಾಗಿ ಸೆರೆಹಿಡಿಯಲಾಗಿದೆ. ದಾರಿಯುದ್ದಕ್ಕೂ, ಅವರು ಸುಂದರಬನ್ಸ್‌ನ ಮ್ಯಾಂಗ್ರೋವ್ ಕಾಡುಗಳಿಂದ ಮುಂಬೈ, ದೆಹಲಿ ಮತ್ತು ಕೋಲ್ಕತ್ತಾದ ಬ್ಯುಸಿ ಮಹಾನಗರಗಳ ವೈವಿಧ್ಯಮಯ ಪರಿಸರಗಳನ್ನು ನಮ್ಮ ಮುಂದೆ ತಂದಿಡುತ್ತಾರೆ.

ಬ್ರಿಟೀಷರಿಗೆ ಅಥವಾ ಯಾವುದೇ ವಿದೇಶಿಯರಿಗೆ ಭಾರತ ಎಂದಾಗ ತಕ್ಷಣ ‘ಸ್ಲಂ ಡಾಗ್ ಮಿಲೇನಿಯರ್’ ಸಿನಿಮಾ ನೆನಪಾಗುತ್ತದೆಯೇನೋ. ಜೇಮ್ಸ್ ಮೇ ಅವರಿಗೂ ಮುಂಬೈ ಸ್ಲಮ್ ಬಗ್ಗೆಯೇ ಕುತೂಹಲ. ಸರಣಿಯ ಮೊದಲ ಸಂಚಿಕೆಯಲ್ಲಿ, ಜೇಮ್ಸ್ ಮುಂಬೈನ ಧಾರಾವಿ ಪ್ರದೇಶದಿಂದ ರಾಜಸ್ಥಾನದ ಅಜ್ಮೆರ್‌ಗೆ ಪ್ರಯಾಣಿಸುತ್ತಾರೆ. ಮಹಾರಾಷ್ಟ್ರದ ಧಾರಾವಿಯು ಅತಿದೊಡ್ಡ ಕೊಳೆಗೇರಿಗಳಲ್ಲಿ ಒಂದು. ಸುಮಾರು 2.39 ಚದರ ಕಿ.ಮೀ. ವ್ಯಾಪ್ತಿಯ ಈ ಕೊಳಗೇರಿಯಲ್ಲಿ 300,000ದಿಂದ ಒಂದು ಮಿಲಿಯನ್ ಜನರು ವಾಸಿಸುತ್ತಾರೆ. ಜನನಿಬಿಡ ಕೊಳಗೇರಿಯಲ್ಲಿ ಜೇಮ್ಸ್ ಮತ್ತು ಅವನ ತಂಡವು ಪ್ರಯಾಣಿಸಿ ಇಲ್ಲಿನ ಜನರು ಯಾವ ರೀತಿ ವಾಸಿಸುತ್ತಾರೆ ಎಂಬುದನ್ನು ತೋರಿಸುತ್ತಾರೆ.

ಗಮನಿಸಬೇಕಾದ ವಿಷಯವೆಂದರೆ ಕೊಳಗೇರಿ ಬಗ್ಗೆ ಅಯ್ಯೋ.. ಪಾಪ, ಅಥವಾ ಗಬ್ಬು ಎನ್ನುವಂತೆ ಇಲ್ಲಿ ತೋರಿಸಿಲ್ಲ. ಇಲ್ಲಿಯೇ ‘ಸ್ಲಮ್‌ಡಾಗ್ ಮಿಲಿಯನೇರ್’ ಅನ್ನು ಚಿತ್ರೀಕರಿಸಿದ್ದು ಅಲ್ವಾ ಎನ್ನುವ ಜೇಮ್ಸ್, ಅಲ್ಲಿ ವಾಸಿಸುವ ಜನರು ಶ್ರಮಜೀವಿಗಳು ಮತ್ತು ಉದ್ಯಮಶೀಲರು ಎಂಬುನ್ನು ನೋಡಿ ಆಶ್ಚರ್ಯಚಕಿತರಾದರು. ಮರುಬಳಕೆಗಾಗಿ ಹಳೇ ಪ್ಲಾಸ್ಟಿಕ್ ಅನ್ನು ಕರಗಿಸುವ ವ್ಯಾಪಾರ, ದಿನಕ್ಕೆ ಚಹಾ ಕುಡಿಯುವ ಸಾವಿರಾರು ಮಣ್ಣಿನ ಕಪ್‌ಗಳನ್ನು ತಯಾರಿಸುವ ಉದ್ಯಮ, ಚರ್ಮದ ಕಾರ್ಖಾನೆಗಳಿಗೆ ಜೇಮ್ಸ್ ಭೇಟಿ ನೀಡುತ್ತಾರೆ. ಹಾಗಾಗಿ ಇಲ್ಲಿನ ಉದ್ಯಮದ ಬಗ್ಗೆಯೂ ಚಿಕ್ಕದಾದ ಅರಿವು ನೋಡುಗರಿಗೆ ದಕ್ಕುತ್ತದೆ.

ಮುಂಬೈ ನಗರದಲ್ಲಿ ಪ್ರಯಾಣಿಸುವಾಗ ಗಿಜಿಗಿಡುವ ರಸ್ತೆ, ಟ್ರಾಫಿಕ್ ಸಿಗ್ನಲ್‌ನಲ್ಲಿಯೂ ಹಾರ್ನ್ ಮಾಡುವ ವಾಹನಗಳನ್ನು ನೋಡಿ, ಇದನ್ನು ಭಾರತದ ಅನಧಿಕೃತ ಭಾಷೆ ಎಂದು ಘೋಷಿಸಬೇಕು ಅಂತಾರೆ ಜೇಮ್ಸ್ . ಮುಂಬೈಯಲ್ಲಿ ಅಡ್ಡಾಡುವುದಕ್ಕಾಗಿ ಜೇಮ್ಸ್‌ಗೆ ಸಹಾಯ ಮಾಡಲು ಪ್ರಸಿದ್ಧ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅದಿತಿ ಮಿತ್ತಲ್ ಜತೆಯಾಗುತ್ತಾರೆ. ನಗೆ ಚಟಾಕಿಗಳೊಂದಿಗೆ ಸ್ವಾಗತಿಸುವ ಅದಿತಿ -ಸ್ಟ್ಯಾಂಡ್-ಅಪ್ ಕಾಮಿಡಿ ಶೋಗೆ ಕರೆದೊಯ್ಯುತ್ತಾರೆ. ಮುಂಬೈಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಅದಿತಿ, ಜೇಮ್ಸ್ ಮತ್ತು ಅವನ ಬ್ರಿಟಿಷ್ ಮೂಲದ ಬಗ್ಗೆ ಕಾಲೆಳೆದು ನಗೆಯುಕ್ಕಿಸುತ್ತಾರೆ.

ಸರಣಿಯ ಎರಡನೇ ಸಂಚಿಕೆಯಲ್ಲಿ, ಜೇಮ್ಸ್ ರಾಜಸ್ಥಾನದ ಕೆಲವು ಭಾಗಗಳನ್ನು ತೋರಿಸಿದ್ದು ನಂತರ ಅಲ್ಲಿಂದ ಮಹಾರಾಜಾಸ್ ಎಕ್ಸ್‌ಪ್ರೆಸ್‌ನಲ್ಲಿ ದೆಹಲಿಗೆ ಪ್ರಯಾಣಿಸುತ್ತಾರೆ. ರಾಜಸ್ಥಾನದಲ್ಲಿ, ಜೇಮ್ಸ್ ಗಾಳಿಪಟ ಹಾರಾಟ, ಭಾರತೀಯರು ಹೋಳಿ ಹಬ್ಬವನ್ನು ಹೇಗೆ ಆಚರಿಸುತ್ತಾರೆ ಎಂಬುದನ್ನು ಸಹ ತೋರಿಸುತ್ತಾರೆ. ಸಂಚಿಕೆಯ ಕೊನೆಯಲ್ಲಿ, ಜೇಮ್ಸ್ ದೆಹಲಿಗೆ ಬರುತ್ತಾರೆ. ದೆಹಲಿಯಲ್ಲಿ ಅವರು ಚಾಂದಿನಿ ಚೌಕ್ ಪ್ರದೇಶವನ್ನು ಮಾತ್ರ ಕವರ್ ಮಾಡುತ್ತಾರೆ. ದೆಹಲಿ ಅಂದ್ರೆ ಕೇವಲ ಚಾಂದಿನಿ ಚೌಕ್‌ ಅಲ್ಲ.. ಅದು ಅದಕ್ಕಿಂತ ಹೆಚ್ಚು! ನಂತರ, ಅವರು ಉದ್ಯಮಿ ವಿಕ್ರಮಜಿತ್ ಸಿಂಗ್ ಅವರೊಂದಿಗೆ ಮೀರತ್‌ಗೆ ಭೇಟಿ ನೀಡುತ್ತಾರೆ. ಆಗ್ರಾ ಮತ್ತು ವಾರಣಾಸಿಗೆ ತ್ವರಿತ ಭೇಟಿ ನೀಡಿದ ನಂತರ ಜೇಮ್ಸ್ ಸಂಚಿಕೆಯನ್ನು ಮುಕ್ತಾಯಗೊಳಿಸುತ್ತಾರೆ. ವಾರಣಾಸಿಯಲ್ಲಿ ಗಂಗಾ ಆರತಿ ಬಗ್ಗೆ ತೋರಿಸಿದ್ದು ನಯನ ಮನೋಹರವಾಗಿದೆ.

ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗುತ್ತಿರುವ ‘James May : Our man in India’ ಸೀಸನ್ 3ಯಲ್ಲಿ ಮೂರು ಸಂಚಿಕೆಗಳಿದ್ದು ಪ್ರತಿಯೊಂದು ಸಂಚಿಕೆಯೂ ಸರಿಸುಮಾರು 50 ನಿಮಿಷ ಅವಧಿಯದ್ದು. ಮೂರನೇ ಮತ್ತು ಕೊನೆ ಸಂಚಿಕೆಯಲ್ಲಿ, ಜೇಮ್ಸ್ ಡಾರ್ಜಿಲಿಂಗ್, ಕೋಲ್ಕತ್ತಾ ಮತ್ತು ಸುಂದರ್ ಬನವನ್ನು ತೋರಿಸುತ್ತಾರೆ. ಜೇಮ್ಸ್ ಜತೆ ಮತ್ತೆ ಅದಿತಿ ಜೊತೆಯಾಗುತ್ತಾಳೆ. ಇಲ್ಲಿಯೂ ಅದಿತಿ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಬ್ರೇಕ್‌ಫಾಸ್ಟ್ ಟೇಬಲ್‌ನಲ್ಲಿ ಬ್ರಿಟಿಷರು ಮತ್ತು ಅವರ ಪಾಕಪದ್ಧತಿ ಬಗ್ಗೆ ಅದಿತ್ ತಮಾಷೆ ಮಾಡಿ ಇಲ್ಲಿಯೂ ಕಾಲೆಳೆಯುತ್ತಾಳೆ. ಅಂದಹಾಗೆ ಈ ಸರಣಿಯಲ್ಲಿ ದಕ್ಷಿಣ ಭಾರತವನ್ನು ಸೇರಿಸಿಲ್ಲ. ಹಾಗಾಗಿ ಜೇಮ್ಸ್ ಕಂಡಷ್ಟು ಭಾರತ ಮಾತ್ರ ಪ್ರೇಕ್ಷಕರಿಗೆ ಕಾಣಲು ಸಿಗುತ್ತದೆ.

LEAVE A REPLY

Connect with

Please enter your comment!
Please enter your name here