ನಟ ಪುನೀತ್ ರಾಜಕುಮಾರ ಸಮಾಧಿ ಎದುರು ‘ಬನಾರಸ್’ ಸಿನಿಮಾದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ. ಜಯತೀರ್ಥ ನಿರ್ದೇಶನದಲ್ಲಿ ಝೈದ್ ಖಾನ್ ಮತ್ತು ಸೊನಾಲ್ ಮಾಂಟೆರೊ ನಟಿಸಿರುವ ಪ್ಯಾನ್ ಇಂಡಿಯಾ ಚಿತ್ರವಿದು. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಯಾರೂ ನಿರೀಕ್ಷಿಸದಂಥಾ ದುರಂತ ಘಟಿಸದಿದ್ದರೆ ಈ ದಿನ ಪುನೀತ್ ರಾಜಕುಮಾರ್ ಅವರೇ ಖುದ್ದಾಗಿ ‘ಬನಾರಸ್’ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ ಬಿಡುಗಡೆಗೊಳಿಸ ಬೇಕಿತ್ತು. ದುರಾದೃಷ್ಟವಶಾತ್ ಅವರು ಮರೆಯಾಗಿದ್ದಾರೆ. ಅವರು ತೋರಿದ ಪ್ರೀತಿಯನ್ನು ಮನಸಲ್ಲಿಟ್ಟುಕೊಂಡು ಅವರ ಪುಣ್ಯಭೂಮಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಇದಕ್ಕೂ ಮುನ್ನ ಚಿತ್ರತಂಡ ವರನಟ ಡಾ.ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್, ಅಂಬರೀಶ್ ಹಾಗೂ ಪುನೀತ್ ರಾಜ್‍ಕುಮಾರ್ ಅವರ ಸಮಾಧಿಗಳಿಗೆ ಪೂಜೆ ಸಲ್ಲಿಸಿತು. ನಂತರ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಸಮಾಧಿಗೂ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಸಂಸ್ಥೆಯ ಕಡೆಯಿಂದ ಅದ್ಧೂರಿಯಾಗಿ ನಿರ್ಮಾಣಗೊಂಡಿರುವ ಈ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಫಸ್ಟ್ ಲುಕ್‌ಗೆ ಕೆಲ ಹೊತ್ತಿನಲ್ಲೇ ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗಿದೆ. ಮೋಷನ್ ಪೋಸ್ಟರ್ ವೀಕ್ಷಿಸಿದರೆ ಅದ್ಧೂರಿತನ ಮತ್ತು ವಿಭಿನ್ನ ಕಥಾಹಂದರದ ಸುಳಿವು ಸಿಗುತ್ತದೆ. ಚಿತ್ರದ ಶೇ. 90ರಷ್ಟು ಚಿತ್ರೀಕರಣವನ್ನು ಬನಾರಸ್‌ನ ಮನಮೋಹಕ ಪರಿಸರದಲ್ಲಿ ನಡೆಸಲಾಗಿದೆ. ಇಲ್ಲಿನ 84 ಘಾಟ್ ಪ್ರದೇಶಗಳಲ್ಲಿ ಸಿನಿಮಾ ಚಿತ್ರಣಗೊಂಡಿರುವುದು ಪ್ರಧಾನ ಅಂಶ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಏಕಕಾಲದಲ್ಲಿಯೇ ಐದು ಭಾಷೆಗಳಲ್ಲಿ ತಯಾರಾಗಿದೆ. ಸೂಕ್ಷ್ಮಸಂವೇದಿ ನಿರ್ದೇಶಕ ಎಂದೇ ಹೆಸರು ಮಾಡಿರುವ ಜಯತೀರ್ಥ ಸಾರಥ್ಯದಲ್ಲಿ ತಯಾರಾಗಿರುವ ಪ್ರಯೋಗ ಎನ್ನುವ ಕಾರಣಕ್ಕೂ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಶಾಸಕ ಜಮೀರ್ ಅಹಮದ್ ಪುತ್ರ ಝಯೀದ್ ಖಾನ್ ಈ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಫಸ್ಟ್ ಲುಕ್ ಬಿಡುಗಡೆಯ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕ ಜಯತೀರ್ಥ, ನಾಯಕ ನಾಯಕಿಯರಾದ ಝೈದ್ ಖಾನ್, ಸೋನಲ್ ಮಾಂಟೆರೊ, ಹಾಸ್ಯನಟ ಸುಜಯ್ ಮುಂತಾದವರು ಉಪಸ್ಥಿತರಿದ್ದರು.