ಝಗಮಗಿಸುಗ ಸ್ಟೇಜ್. ಕಣ್ಣಾಯಿಸದ ಕಡೆಯಲ್ಲಾ ಅಭಿಮಾನಿಗಳು. ಇಳಿ‌ಸಂಜೆಯಲ್ಲಿ‌ಸಂಗೀತ-ನೃತ್ಯದ ಯಾನ. ನೆಚ್ಚಿನ ಸ್ಟಾರ್ಸ್ ಕಣ್ತುಂಬಿಕೊಂಡು‌ ಪುಳಕರಾದ ಸಿನಿಪ್ರೇಮಿಗಳು. ಇದು ಗಡಿನಾಡು ಚಿಕ್ಕಬಳ್ಳಾಪುರದಲ್ಲಿ ನಡೆದ ‘RRR’ ಅದ್ಧೂರಿ ಪ್ರೀ-ರಿಲೀಸ್ ಇವೆಂಟ್ ಝಲಕ್.

ಪಂಚಭಾಷೆಯಲ್ಲಿ ಅದ್ಧೂರಿಯಾಗಿ ತೆರೆಕಾಣುತ್ತಿರುವ ಮಲ್ಟಿಸ್ಟಾರ್ ಸಿನಿಮಾ ‘RRR’ ಪ್ರೀ-ರಿಲೀಸ್ ಇವೆಂಟ್ ನಿನ್ನೆ ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ನಡೆಯಿತು. ಇಳಿಸಂಜೆಯಲ್ಲಿ ಅದ್ಧೂರಿಯಾಗಿ ನಡೆದ ಪ್ರೀ-ರಿಲೀಸ್ ಇವೆಂಟ್‌ಗೆ ಜನಸಾಗರವೇ ಹರಿದು ಬಂದಿತ್ತು. ಸುಮಾರು ನೂರು ಎಕರೆ ಜಾಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಕೆ.ಸುಧಾಕರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಇಡೀ ‘RRR’ ಬಳಗ ಸಾಕ್ಷಿಯಾಯ್ತು.

ಅಪ್ಪು ನೆನಪು
ಕನ್ನಡ ಭಾಷೆ, ಕನ್ನಡಿಗರ ಮೇಲೆ ವಿಶೇಷ ಅಭಿಮಾನ ಹೊಂದಿರುವ ಜ್ಯೂನಿಯರ್‌ ಎನ್‌ಟಿಆರ್ ಕನ್ನಡದಲ್ಲಿಯೇ ಮಾತು ಆರಂಭಿಸಿ ಎಲ್ಲರ ಗಮನಸೆಳೆದರು. ಅಪ್ಪು ಎಲ್ಲಿಯೂ ಹೋಗಿಲ್ಲ.. ಗಾಳಿ, ನೀರು ಎಲ್ಲೆಡೆ ಅಪ್ಪು ಇದ್ದಾರೆ ಎಂದು ನೆಚ್ಚಿನ ಗೆಳೆಯನನ್ನು ನೆನೆದರು ತಾರಕ್. ಅಪ್ಪು ಆದರ್ಶಗಳನ್ನು ಪಾಲಿಸುವಂತೆ ಸಲಹೆ ಮಾಡಿದರು. ಮಾರ್ಚ್ 25ಕ್ಕೆ ತ್ರಿಬಲ್ ಸಿನಿಮಾವನ್ನು ಫ್ಯಾಮಿಲಿ ಸಮೇತರಾಗಿ ನೋಡಿ‌ ಅಂತ ಮನವಿ‌ ಮಾಡಿಕೊಂಡರು.

ಕನ್ನಡಕ್ಕೆ ಹೆಚ್ಚು ಸ್ಕ್ರೀನ್‌ ಕೊಡಿ
ತ್ರಿಬಲ್ ಸಿನಿಮಾ ಪ್ರೀ-ರಿಲೀಸ್ ಇವೆಂಟ್‌ಗೆ ಸ್ಪೆಷಲ್ ಗೆಸ್ಟ್ ಆಗಿ ಆಗಮಿಸಿದ್ದ ನಟ ಶಿವರಾಜ್ ಕುಮಾರ್, “ಒಂದು ಕಡೆ ಸಂತೋಷನೂ ಆಗ್ತಾ ಇದೆ, ಮತ್ತೊಂದು ಕಡೆ ದುಃಖ ಇದೆ. ಅಪ್ಪುನ ಕಳೆದುಕೊಂಡು ದುಃಖದಲ್ಲಿದ್ದೇವೆ. ನಮ್ಮ ದುಃಖದಲ್ಲಿ ಭಾರತೀಯ ಚಿತ್ರರಂಗ ಇದೆ, ಸರ್ಕಾರ ಇದೆ. ಬೊಮ್ಮಾಯಿ ಅವರು ಅಣ್ಣನ ಸ್ಥಾನದಲ್ಲಿ ನಿಂತಿದ್ದಾರೆ. ನಮಗಾದಷ್ಟೇ ನೋವು ಅವರಿಗೂ ಆಗಿದೆ. ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಬಂದು ನಾವು ನಿಮ್ಮ ತಮ್ಮಂದಿರು ಎಂದಾಗ ಖುಷಿ ಆಯ್ತು. ಅಪ್ಪುನ ಇವರಲ್ಲಿ, ಅಭಿಮಾನಿಗಳಲ್ಲಿ ಕಾಣ್ತೀದ್ದೇನೆ. ನಾನು ರಾಜಮೌಳಿ ದೊಡ್ಡ ಫ್ಯಾನ್​. ಜ್ಯೂ. ಎನ್​ಟಿಆರ್​ ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದೀನಿ. ರಾಮ್​ ಚರಣ್​, ಪವನ್​ ಕಲ್ಯಾಣ್​, ಚಿರಂಜೀವಿ, ಅಜಿತ್​, ವಿಜಯ್​ ಪ್ರತಿಯೊಬ್ಬರ ಸಿನಿಮಾನೂ ನಾನು ಥಿಯೇಟರ್​ನಲ್ಲೇ ನೋಡೋದು. ನನಗೆ ಮನೆಯಲ್ಲೇ ಶೋ ಹಾಕಿಸಿಕೊಂಡು ಸಿನಿಮಾ ನೋಡೋದು ಇಷ್ಟ ಇಲ್ಲ. ನಾನು ಅಭಿಮಾನಿ ತರಹ ಥಿಯೇಟರ್​ಗೆ ಹೋಗೆ ಸಿನಿಮಾ ನೋಡೋದು. ‘RRR’ ಕನ್ನಡ ವರ್ಷನ್‌ ಹೆಚ್ಚು ಹಾಕಿ” ಎಂದು ‘RRR’ ತಂಡಕ್ಕೆ ಶುಭ ಹಾರೈಸಿದರು.

RRR ಬಳಗಕ್ಕೆ ಧನ್ಯವಾದ ಹೇಳಿದ ಮೌಳಿ
ನಿರ್ದೇಶಕ ರಾಜಮೌಳಿ ಅವರು ಅದ್ಧೂರಿ ಪ್ರಿ-ರಿಲೀಸ್ ಇವೆಂಟ್‌ನಲ್ಲಿ ಇಡೀ ಚಿತ್ರತಂಡಕ್ಕೆ‌ ಧನ್ಯವಾದ ತಿಳಿಸಿದರು. ಶಿವಣ್ಣ, ಮುಖ್ಯಮಂತ್ರಿ, ಆರೋಗ್ಯ ಸಚಿವರ ಬಗ್ಗೆ ಕನ್ನಡದಲ್ಲಿಯೇ ಮಾತನಾಡಿ ಗಮನಸೆಳೆದ‌ ಮೌಳಿ, ಇಂತಹ ಅದ್ಧೂರಿ ಇವೆಂಟ್ ಆಯೋಜಿಸಿದ KVN ಸಂಸ್ಥೆಯ ಒಡೆಯ ವೆಂಕಟ್ ಅವರಿಗೆ ಧನ್ಯವಾದ ತಿಳಿಸಿದರು.‌ “ಸ್ವಾತಂತ್ರ್ಯ ಹೋರಾಟದ ಸತ್ಯಗಳು ಯುವಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ. ಸ್ವಾತಂತ್ರ್ಯ ಸೇನಾನಿ RRR ಸಿನಿಮಾ ನೋಡಿ‌ ಇಡೀ‌ ದೇಶ ಹೆಮ್ಮೆಪಡಲಿದೆ” ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿತ್ತೂರು ರಾಣಿ ಚೆನ್ನಮ್ಮ ಬಗ್ಗೆ RRR ಸಿನಿಮಾದಲ್ಲಿ ತೋರಿಸಿರುವುದು ಹೆಮ್ಮೆ ಎಂದರು.

2000 ಸ್ಕ್ರೀನ್‌ಗಳಲ್ಲಿ ಸಿನಿಮಾ
ಭಾರತದ ಅತಿ‌ದೊಡ್ಡ ಇವೆಂಟ್‌ ಅನ್ನು ಚಿಕ್ಕಬಳ್ಳಾಪುರದಲ್ಲಿ ಏರ್ಪಡಿಸಿದ್ದ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ಹೌಸ್ RRR ಸಿನಿಮಾ ಕರುನಾಡಿನಾದ್ಯಂತ ಚಿತ್ರವನ್ನು ವಿತರಣೆ‌ ಮಾಡಲಿದೆ. ಮೂಲ ತೆಲುಗು ಸೇರಿದಂತೆ ಕನ್ನಡ ಡಬ್ಬಿಂಗ್‌ ವರ್ಷನ್‌ನ 2000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಕಾಣಲಿದೆ. ಸುಮಾರು 450 ಕೋಟಿ ಬಜೆಟ್ ನಲ್ಲಿ ದಾನಯ್ಯ ಸಿನಿಮಾಗೆ ಬಂಡವಾಳ ಹೂಡಿದ್ದು, ರಾಜಮೌಳಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ದೊಡ್ಡತಾರಾಬಳಗ ಸಿನಿಮಾದಲ್ಲಿ ನಟಿಸಿದ್ದು, ಇದೇ 25ಕ್ಕೆ ವರ್ಲ್ಡ್ ವೈಡ್ ಸಿನಿಮಾ ರಿಲೀಸ್ ಅಗ್ತಿದೆ.

LEAVE A REPLY

Connect with

Please enter your comment!
Please enter your name here