ಖ್ಯಾತ ತಮಿಳು ನಿರ್ದೇಶಕ ಬಾಲಾ ನಿರ್ದೇಶನದಲ್ಲಿ ಚಿತ್ರದಲ್ಲಿ ನಟಿಸುತ್ತಿರುವುದಾಗಿ ನಟ ಸೂರ್ಯ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಸೂರ್ಯ ವೃತ್ತಿ ಬದುಕಿಗೆ ತಿರುವು ನೀಡಿದ ನಿರ್ದೇಶಕ ಬಾಲಾ. ಈಗ ನಾಲ್ಕನೇ ಬಾರಿ ಸೂರ್ಯರಿಗೆ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ.
“ನಿರ್ದೇಶಕ ಬಾಲಾ ಅವರಿಗೆ ನನ್ನ ಮೇಲೆ ನನಗಿರುವ ನಂಬಿಕೆಗಿಂತ ಹೆಚ್ಚಿನ ನಂಬಿಕೆ ಇದೆ. ವೃತ್ತಿ ಬದುಕಿಗೆ ತಿರುವು ನೀಡಿ ನನಗೊಂದು ಐಡೆಂಟಿಟಿ ಕೊಟ್ಟ ತಂತ್ರಜ್ಞ ಅವರು. ಇದೀಗ ತಂದೆಯ ಹಾರೈಕೆಯೊಂದಿಗೆ ಉತ್ಸಾಹದೊಂದಿಗೆ ಅವರೆದುರು ನಿಂತಿದ್ದೇನೆ. ಸಹೋದರ ಬಾಲಾ ಜೊತೆ ಮತ್ತೊಂದು ಸುಂದರ ಪಯಣ ಶುರುಮಾಡುತ್ತಿದ್ದೇನೆ” ಎಂದು ನಟ ಸೂರ್ಯ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದು ಈ ಜೋಡಿಯ ನಾಲ್ಕನೇ ಸಿನಿಮಾ.
ವೃತ್ತಿ ಬದುಕಿನ ಆರಂಭದಲ್ಲಿ ನಟ ಸೂರ್ಯ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಕಷ್ಟ ಪಡುತ್ತಿದ್ದರು. 2001ರಲ್ಲಿ ಬಾಲಾ ನಿರ್ದೇಶನದಲ್ಲಿ ಅವರು ನಟಿಸಿದ ‘ನಂದಾ’ ಕ್ರೈಂ – ಡ್ರಾಮಾ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಮುಂದೆ ‘ಪಿತಾಮಗನ್’ ಚಿತ್ರದಲ್ಲಿ ಮತ್ತೆ ಜೊತೆಯಾಗಿದ್ದರು. ಇದು ಸೂರ್ಯ ಸಿನಿಮಾ ಬದುಕಿಗೆ ಮೈಲುಗಲ್ಲಾಯ್ತು. 2005ರಲ್ಲಿ ಸೂರ್ಯ ಅವರಿಗೆ ಬಾಲಾ ‘ಮಾಯಾವಿ’ ನಿರ್ದೇಶಿಸಿದ್ದರು. ಈಗ ನಾಲ್ಕನೇ ಬಾರಿ ಜೊತೆಯಾಗುತ್ತಿದ್ದು, ಈ ಸಿನಿಮಾ ಕುರಿತಾಗಿ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆಯಿದೆ.