ಉಫ್.. ಇಂಥದ್ದೊಂದು ವೆಬ್ ಸೀರೀಸ್ ಬೇಕಿತ್ತು, ಕೇರಳ ಕ್ರೈಮ್ ಫೈಲ್ಸ್ ಎಂಬ ಕ್ರೈಂ ಥ್ರಿಲ್ಲರ್ ವೆಬ್ ಸರಣಿ ನೋಡಿದ ಮೇಲೆ ಹೀಗೊಂದು ಉದ್ಗಾರ ಬಂದಿದ್ದು ನಿಜ. 6 ದಿನಗಳ ಕತೆ 6 ಎಪಿಸೋಡ್, ಎರಡು ಮುಕ್ಕಾಲು ಗಂಟೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡ ಈ ವೆಬ್ ಸಿರೀಸ್ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

ಎರ್ನಾಕುಲಂ ನಾರ್ತ್ ಸ್ಟೇಷನ್ ವ್ಯಾಪ್ತಿಯ ಹಳೆಯ ಲಾಡ್ಜ್‌ನಲ್ಲಿ ನಡೆಯುವ ಕೊಲೆ, ಅದರ ಹಿಂದಿನ ನಿಗೂಢತೆ, ತನಿಖೆಯುದ್ದಕ್ಕೂ ಪ್ರೇಕ್ಷಕರನ್ನು ರೋಮಾಂಚನಗೊಳಿಸುವ ಟ್ವಿಸ್ಟ್ ಆಂಡ್ ಟರ್ನ್ಸ್‌ಗಳು ಇರುವ ಕ್ರೈಂ ಥ್ರಿಲ್ಲರ್ ‘ಕೇರಳ ಕ್ರೈಂ ಫೈಲ್ಸ್’. ಕತೆ ನಡೆಯುತ್ತಿರುವುದು 2010ರಲ್ಲಿ. ಲಾಡ್ಜ್ ಕೊಠಡಿಯಲ್ಲಿ ನಿಗೂಢವಾಗಿ ಕೊಲೆಯಾದ ಲೈಂಗಿಕ ಕಾರ್ಯಕರ್ತೆಯ ಹಂತಕನನ್ನು ಪತ್ತೆ ಹಚ್ಚಲೇ ಬೇಕು. ಹಂತಕನನ್ನು ಪತ್ತೆ ಹಚ್ಚಲು ಮೇಲಧಿಕಾರಿಗಳಿಂದಾಗಲೀ, ರಾಜಕೀಯ ಅಥವಾ ಮಾಧ್ಯಮದವರಿಂದ ಒತ್ತಡವಿಲ್ಲ. ಕೊಲೆಯಾಗಿದ್ದು ಓರ್ವ ಲೈಂಗಿಕ ಕಾರ್ಯಕರ್ತೆ. ಆಕೆಯ ಕಡೆಯಿಂದ ದೂರು ದಾಖಲಿಸುವವರೂ ಇಲ್ಲ. ಆದರೆ ತನಿಖಾಧಿಕಾರಿಗಳಾದ ಸಿಐ ಕುರಿಯನ್ (ಲಾಲ್) ಮತ್ತು ಎಸ್‌ಐ ಮನೋಜ್ ಕುಮಾರ್ (ಅಜು ವರ್ಗೀಸ್) ಈ ಕೊಲೆ ಪ್ರಕರಣದಲ್ಲಿ ಹಂತಕ ಯಾರು ಎಂಬುದನ್ನು ಪತ್ತೆ ಹಚ್ಚಲೇಬೇಕು ಎಂದು ಹೊರಟು ನಿಲ್ಲುತ್ತಾರೆ. ಹಂತಕ ಯಾರು ಎಂಬುದನ್ನು ಪತ್ತೆ ಹಚ್ಚಲು ಇರುವ ಏಕೈಕ ಸುಳಿವು ಲಾಡ್ಜ್ ರಿಜಿಸ್ಟರ್‌ನಲ್ಲಿ ಬರೆದ ಆ ವಿಳಾಸ – ಶಿಜು, ಪಾರಯಿಲ್ ವೀಡ್, ನೀಂಡಕರ. ಈ ವಿಳಾಸದಿಂದ ಪ್ರಾರಂಭಿಸಿ, 6 ದಿನಗಳ ತನಿಖೆಯಲ್ಲಿ ಅಪರಾಧಿಯನ್ನು ಹಿಡಿಯುವವರೆಗೆ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುತ್ತದೆ ಈ ವೆಬ್ ಸರಣಿ.

ತರಬೇತಿ ಅವಧಿಯಿಂದ ಪಡೆದ ಜ್ಞಾನ ಮತ್ತು ಸೇವೆಯಿಂದ ಪಡೆದ ಅನುಭವಗಳಿಂದ ಪ್ರಕರಣಗಳನ್ನು ತನಿಖೆ ಮಾಡುವ ಸಾಮಾನ್ಯ ಕೇರಳ ಪೊಲೀಸ್ ಸಿಬ್ಬಂದಿಗಳೇ ‘ಕೇರಳ ಕ್ರೈಮ್ ಫೈಲ್ಸ್’ ಹೀರೊಗಳು. ತನಿಖೆಯ ಜಟಿಲತೆ, ಪೊಲೀಸರ ವೈಯಕ್ತಿಕ ಜೀವನ ಎಲ್ಲವನ್ನೂ ಅತ್ಯಂತ ಸರಳ ಮತ್ತು ಪರಿಣಾಮಕಾರಿ ರೀತಿಯಲ್ಲಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸಿನಿಮಾಗಳಲ್ಲಿ ಕಂಡುಬರುವ ಅಪಾರ ಶಕ್ತಿಶಾಲಿ, ಭಯಂಕರ ಬುದ್ದಿಶಾಲಿ ಸೂಪರ್ ಪೊಲೀಸರು ಇವರಲ್ಲ, ಇವರು ಕೇರಳದ ಸಾಮಾನ್ಯ ಪೊಲೀಸರು. ನಮ್ಮ ದೇಶದಲ್ಲಿ ಲೈಂಗಿಕ ಕಾರ್ಯಕರ್ತೆ ಅಥವಾ ತೃತೀಯಲಿಂಗಿ ಸತ್ತರೆ, ಯಾವುದೇ ರಾಜಕೀಯ ಒತ್ತಡವಿರುವುದಿಲ್ಲ, ಮಾಧ್ಯಮಗಳಿಗೆ ಅದು ಸುದ್ದಿಯೂ ಅಲ್ಲ ಎನ್ನುವ ಈ ಪೊಲೀಸರು ಲೈಂಗಿಕ ಕಾರ್ಯಕರ್ತೆಯ ಹಂತಕನನ್ನು ಪತ್ತೆ ಹಚ್ಚಲು ಯಾವ ರೀತಿ ಕಾರ್ಯಾಚರಣೆ ಮಾಡುತ್ತಾರೆ ಎಂಬುದೇ ಕಥಾ ವಸ್ತು.

ಮೊದಲ ಸಂಚಿಕೆಯಲ್ಲಿ ಲೈಂಗಿಕ ಕಾರ್ಯಕರ್ತೆ ಸ್ವಪ್ನಾಳ ಕೊಲೆಗಾರನನ್ನು ಪತ್ತೆ ಹಚ್ಚಲು ತನಿಖೆ ಆರಂಭವಾಗುತ್ತದೆ. ಎರಡನೇ ಸಂಚಿಕೆ ಹೊಸತಾಗಿ ಮದುವೆಯಾದ ಮನೋಜ್ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ತೋರಿಸಿದರೆ ಕೊಲೆಯಾದ ಯುವತಿ ಮತ್ತು ಲೈಂಗಿಕ ಕಾರ್ಯಕರ್ತೆಯರ ಬದುಕು, ಅವರ ಮೂಲಕ ಹಂತಕನ ಪತ್ತೆಗಾಗಿ ಪೊಲೀಸರು ನಡೆಸುವ ತನಿಖೆಯನ್ನು ತೋರಿಸುತ್ತದೆ. ಮುಂದಿನ ಸಂಚಿಕೆಯಲ್ಲಿ ಹಂತಕ ಶಿಜು ಸಿಕ್ಕೇ ಬಿಟ್ಟ ಎಂದೆನಿಸಿದರೂ ಅವನಲ್ಲ ಇವನು ಎಂಬುದು ಗೊತ್ತಾದಾಗ ಮತ್ತೆ ಯಾರು ಎಂಬ ಕುತೂಹಲ.

ಶಿಜು ಕೊಟ್ಟ ಸುಳ್ಳು ವಿಳಾಸವನ್ನೇ ಇಟ್ಟುಕೊಂಡು ಅಂಥವನೊಬ್ಬ ಇದ್ದರೆ ಅವನೆಂಥವನು? ಊರು, ಕಂಪನಿ, ಪರಿಚಯದವರು ಹೀಗೆ ಎಲ್ಲ ಕಡೆ ಪೊಲೀಸರು ತನಿಖೆ ನಡೆಸುತ್ತಾರೆ. ಹೆಸರು ಶಿಜು, ಅವನಿಗೆ ಮೆಳ್ಳೆಗಣ್ಣು ಇದೆ ಎಂಬುದಷ್ಟೇ ಸುಳಿವು. ಹಾಗಂತ ಹೇಳಿರುವುದು ಒಬ್ಬನೇ ಒಬ್ಬ. ಅವನಿಗಾಗಿ ಹುಡುಕಾಟ. ನಾಲ್ಕನೇ ಸಂಚಿಕೆಯಲ್ಲಿ ಸಂಪೂರ್ಣ ಚಿತ್ರಣ ಅಥವಾ ಸುಳಿವು ನೀಡದೆ ಹಂತಕನನ್ನು ಮರೆಮಾಚಿರುವುದು ಪ್ರೇಕ್ಷಕನಲ್ಲಿ ಮತ್ತಷ್ಟು ಕುತೂಹಲ ಹುಟ್ಟಿಸುತ್ತದೆ. ಶಿಜು ಎಂಬಾತ ಮೊದಲು ಕೆಲಸ ಮಾಡಿದ ಕಂಪನಿಯಿಂದ ಆತನ ನಿಖರವಾದ ವಿಳಾಸವನ್ನು ಪಡೆದಾಗ ತನಿಖೆ ಸ್ವಲ್ಪ ಪ್ರಗತಿಯನ್ನು ಸಾಧಿಸುತ್ತದೆ. ಐದನೇ ಸಂಚಿಕೆ ಕೊನೆಯಲ್ಲಿ ಶಿಜು ಯಾರು ಎಂಬ ಸ್ವಲ್ಪ ಸುಳಿವು ಸಿಕ್ಕಿ ಆರನೇ ಮತ್ತು ಕೊನೆಯ ಭಾಗದಲ್ಲಿ ಅಪರಾಧಿಯ ಸ್ಪಷ್ಟ ಸುಳಿವು ಸಿಕ್ಕಿಬಿಡುತ್ತದೆ. ತನಿಖೆಯ ಆರನೇ ದಿನದಂದು, ಕೇರಳ ಪೊಲೀಸರು ಅಪರಾಧಿ ಮತ್ತು ಅಪರಾಧದ ಹಿಂದಿನ ನಿಜವಾದ ಕಾರಣಗಳನ್ನು ತೋರಿಸುತ್ತಾರೆ. ವೆಬ್ ಸರಣಿಗೆ ತೆರೆ ಬೀಳುತ್ತದೆ.

‘ಕೇರಳ ಕ್ರೈಮ್ ಫೈಲ್ಸ್‌’ನ ಮೊದಲ ಸೀಸನ್ ಕೊನೆಯಾಗುವುದು ಪೊಲೀಸ್ ಠಾಣೆಯಲ್ಲಿ. ಫೋನ್ ರಿಂಗಣಿಸಿ ಮತ್ತೊಂದು ಪ್ರಕರಣದ ತನಿಖೆಗೆ ಸಿದ್ದರಾಗುತ್ತಿದ್ದಾರೆ ಎಂಬ ಸೂಚನೆ ನೀಡುವ ಮೂಲಕ ಆಗಿದ್ದರಿಂದ ಎರಡನೇ ಸೀಸನ್ ಇರುತ್ತದೆ ಎಂಬುದನ್ನು ಊಹಿಸಬಹುದು. ಗಟ್ಟಿಕಥೆ, ಚೆಂದದ ನಿರೂಪಣೆಯೊಂದಿಗೆ ಎಲ್ಲೂ ಬೋರ್ ಹೊಡಿಸದೆ ಸಾಗುತ್ತದೆ ಸರಣಿ. ‘ಜೂನ್’ ಮತ್ತು ‘ಮಧುರಂ’ ಚಿತ್ರಗಳನ್ನು ನಿರ್ದೇಶಿಸಿದ ಅಹ್ಮದ್ ಕಬೀರ್ ನಿರ್ದೇಶನದ ಈ ವೆಬ್ ಸರಣಿಯಲ್ಲಿ ಅಜು ವರ್ಗೀಸ್, ಲಾಲ್, ನವಾಜ್ ವಲ್ಲಿಕುನ್, ಶಿನ್ಸ್ ಶಾನ್, ಸಂಜು ಸನಿಚನ್, ರುತ್ ಪಿ ಜಾನ್, ದೇವಕಿ ರಾಜೇಂದ್ರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿಶಾಮ್ ಅಬ್ದುಲ್ ವಹಾಬ್ ಕೂಡ ಪ್ರತಿ ದೃಶ್ಯದ ಪಾತ್ರಕ್ಕೆ ಹೊಂದಿಕೆಯಾಗುವ ಹಿನ್ನೆಲೆ ಸಂಗೀತವನ್ನು ಸಂಯೋಜಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here