ಬ್ಲಾಕ್‌ ಬಸ್ಟರ್‌ ‘RRR’ ಸಿನಿಮಾದ ಸರಣಿ ಸೆಟ್ಟೇರುವ ಸೂಚನೆ ನೀಡಿದ್ದಾರೆ ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್‌. ಸೀಕ್ವೆಲ್‌ ಆಫ್ರಿಕಾದಲ್ಲಿ ಚಿತ್ರೀಕರಣಗೊಳ್ಳಲಿದೆ. ಚಿತ್ರನಿರ್ದೇಶಕ ಎಸ್‌ ಎಸ್‌ ರಾಜಮೌಳಿ ಸದ್ಯ ಮಹೇಶ್‌ ಬಾಬು ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದಾದ ನಂತರ ‘RRR 2’ ಸೆಟ್ಟೇರುವ ಸಾಧ್ಯತೆಗಳಿವೆ.

ಕಳೆದ ವರ್ಷದ ಯಶಸ್ವೀ ಚಿತ್ರಗಳ ಪೈಕಿ ‘RRR’ ಮುಂಚೂಣಿಯಲ್ಲಿದೆ. ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಸಿನಿಮಾ ಮಾರುಕಟ್ಟೆಯಲ್ಲೂ ಈ ಸಿನಿಮಾ ಸದ್ದು ಮಾಡಿತು. ಚಿತ್ರದ ‘ನಾಟು ನಾಟು’ ಹಾಡಿನ ಸಂಗೀತಕ್ಕೆ ಆಸ್ಕರ್‌ ಗೌರವ ಲಭಿಸಿದ್ದು ಹೈಲೈಟ್‌. ಅಕಾಡೆಮಿ ಅಂಗಳದಲ್ಲೂ ಸದ್ದು ಮಾಡಿದ ಈ ಸಿನಿಮಾದ ಸೀಕ್ವೆಲ್‌ ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ನಿರ್ದೇಶಕ ರಾಜಮೌಳಿ ಮಾತ್ರ ಈ ಬಗ್ಗೆ ಏನೂ ಹೇಳುತ್ತಿಲ್ಲ. ಆದರೆ ಅವರ ತಂದೆ, ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್‌ ಅವರು ಚಿತ್ರದ ಸೀಕ್ವೆಲ್‌ ಬಗ್ಗೆ ಮಾಹಿತಿ ನೀಡಿದ್ದಾರೆ. ‘RRR 2’ ಆಫ್ರಿಕಾ ನೆಲದಲ್ಲಿ ಚಿತ್ರೀಕರಣಗೊಳ್ಳಲಿದೆ ಎನ್ನುವುದು ವಿಶೇಷ.

Bollywood Hungama ಜೊತೆಗಿನ ಮಾತುಕತೆಯಲ್ಲಿ ವಿಜಯೇಂದ್ರ ಪ್ರಸಾದ್‌ ಈ ಕುರಿತು ಮಾತನಾಡುತ್ತಾ, ‘RRR ಸಿನಿಮಾ ತೆರೆಕಂಡ ನಂತರ ನಾನು ಮಗನೊಂದಿಗೆ ಸೀಕ್ವೆಲ್‌ ಕುರಿತು ಪ್ರಸ್ತಾಪಿಸಿದ್ದೆ. ಚಿತ್ರದ ಮುಖ್ಯಪಾತ್ರಗಳಾದ ಸೀತಾರಾಮ ರಾಜು ಮತ್ತು ಕೊಮರಂ ಭೀಮ್‌ ಇಬ್ಬರ ಕತೆಗಳು ಆಫ್ರಿಕಾ ನೆಲದಲ್ಲಿ ಮುಂದುವರೆಯುತ್ತವೆ ಎಂದಿದ್ದೆ. ರಾಜಮೌಳಿಗೆ ಈ ಐಡಿಯಾ ಇಷ್ಟವಾಗಿತ್ತು. ಚಿತ್ರಕಥೆ ರಚಿಸುವಂತೆ ಹೇಳಿದ್ದರು’ ಎಂದಿದ್ದಾರೆ.

ರಾಜಮೌಳಿ ಪ್ರಸ್ತುತ ಮಹೇಶ್‌ ಬಾಬು ನಟನೆಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಚಿತ್ರಕಥೆ ಕುರಿತು ಅವರಲ್ಲಿ ಪ್ರಸ್ತಾಪಿಸಿಲ್ಲ ಎನ್ನುತ್ತಾರೆ ವಿಜಯೇಂದ್ರ ಪ್ರಸಾದ್‌. ‘ನನಗೆ ನನ್ನ ಮಗನ ಬಗ್ಗೆ ಚೆನ್ನಾಗಿ ಗೊತ್ತು. ಈಗ ಚಿತ್ರಿಸುತ್ತಿರುವ ಸಿನಿಮಾ ಹೊರತಾಗಿ ಅವನು ಬೇರೆ ಪ್ರಾಜೆಕ್ಟ್‌ ಬಗ್ಗೆ ಆಲೋಚಿಸುವುದಿಲ್ಲ. ಮಹೇಶ್‌ ಸಿನಿಮಾ ನಂತರ ಅವನು ಹಾಗೂ ಚಿತ್ರದ ಇಬ್ಬರು ಹೀರೋಗಳು ಚಿತ್ರಕಥೆ ಒಪ್ಪಿದರೆ ಸಿನಿಮಾ ಆಗಲಿದೆ’ ಎನ್ನುತ್ತಾರೆ. ಕಳೆದ ವರ್ಷ ಚಿಕಾಗೋದಲ್ಲಿ ‘RRR’ ಸ್ಕ್ರಿನಿಂಗ್‌ ವೇಳೆ ರಾಜಮೌಳಿ ಅವರಿಗೆ ಸೀಕ್ವೆಲ್‌ ಬಗ್ಗೆ ಪ್ರಶ್ನಿಸಲಾಗಿತ್ತು. ಆಗ ರಾಜಮೌಳಿ, ‘ಈ ಬಗ್ಗೆ ನಾನು ಹೆಚ್ಚಿನ ಮಾಹಿತಿ ಬಿಟ್ಟುಕೊಡುವುದಿಲ್ಲ. ಆದರೆ ನನ್ನೆಲ್ಲಾ ಚಿತ್ರಗಳಿಗೆ ಚಿತ್ರಕಥೆ ರಚಿಸಿರುವ ನನ್ನ ತಂದೆ ಸೀಕ್ವೆಲ್‌ಗೆ ಚಿತ್ರಕಥೆ ಬರೆಯುತ್ತಿದ್ದಾರೆ’ ಎಂದಿದ್ದರು.

Previous articleಸೆಟ್ಟೇರಿದ ‘Aaina’ | ಬಾಲಿವುಡ್‌ ನಟಿ ರಿಚಾ ಛಡ್ಡಾ ನಟನೆಯ ಮೊದಲ ಹಾಲಿವುಡ್‌ ಸಿನಿಮಾ
Next article‘ಹಿರಣ್ಯಕಶ್ಯಪ’ ಕಾನ್ಸೆಪ್ಟ್‌ ಟೀಸರ್‌ | ರಾಣಾ ನಟನೆ, ನಿರ್ಮಾಣದ ಪೌರಾಣಿಕ ಸಿನಿಮಾ

LEAVE A REPLY

Connect with

Please enter your comment!
Please enter your name here