‘ಕ್ಲಾಂತ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ವೈಭವ್‌ – ವಿಘ್ನೇಶ್‌ ನಿರ್ದೇಶನದ ಚಿತ್ರದ ಮುಖ್ಯಭೂಮಿಕೆಯಲ್ಲಿ ವಿಘ್ನೇಶ್‌ ಮತ್ತು ಸಂಗೀತಾ ಭಟ್‌ ನಟಿಸಿದ್ದಾರೆ. ಸಿನಿಮಾ ಇದೇ ಜನವರಿ 19ರಂದು ತೆರೆಕಾಣುತ್ತಿದೆ.

ವೈಭವ್‌ – ವಿಘ್ನೇಶ್ ನಿರ್ದೇಶನದ ‘ಕ್ಲಾಂತ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ನಟ ಅಜಯ್‌ ರಾವ್‌ ಟ್ರೇಲರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. ಕೊರಗಜ್ಜ ದೇವರ ಪವಾಡವನ್ನು ಚಿತ್ರದಲ್ಲಿ ವಿಶೇಷವಾಗಿ ತೋರಿಸಲಾಗಿದೆ. ಈಗಾಗಲೇ ಇದರ ಹಾಡು ಕೂಡ ತುಳುನಾಡಿನಲ್ಲಿ ಜನಪ್ರಿಯವಾಗಿದೆ. ಅಜಯ್ ರಾವ್ ಈ ಕುರಿತು ಮಾತನಾಡಿ, ‘ಟ್ರೇಲರ್ ತುಂಬಾ ಆಕ್ಷನ್‌ನಿಂದ ಕೂಡಿದೆ. ಹೀರೋ, ಹೀರೋಯಿನ್ ಎಲ್ಲರೂ ಚೆನ್ನಾಗಿ ಕಾಣಿಸುತ್ತಿದ್ದಾರೆ. ಒಂದೊಳ್ಳೆ ಪ್ರಯತ್ನ. ಪ್ರಯತ್ನಕ್ಕೂ, ಪ್ರಾರಂಭಕ್ಕೂ ಒಳ್ಳೆ ಉದ್ದೇಶ ಇದ್ದಾಗ ಗೆಲುವು ಸಿಗಬೇಕು ಎಂದು ಆಶಿಸಬೇಕು. ನಿರ್ದೇಶಕರು ಹಾಗೂ ಅವರ ಸಹೋದರರು ನನ್ನ ಸ್ನೇಹಿತರು. ಹೊಸಬರಿಗೆ ಆದಷ್ಟು ಪ್ರೋತ್ಸಾಹಿಸಿ’ ಎಂದರು. ವೈಭವ್‌ ಪ್ರಶಾಂತ್ ಮಾತನಾಡಿ, ‘ಕ್ಲಾಂತ ಒಂದೂವರೆ ವರ್ಷದ ಜರ್ನಿ. ಶೂಟಿಂಗ್‌ಗಾಗಿ 40 ದಿನ ಕಾಡಲ್ಲೇ ಇದ್ದೆವು. ಸುಬ್ರಹ್ಮಣ್ಯ, ಕುದುರೆಮುಖ ಕಾಡುಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಲಾಕ್‌ಡೌನ್ ಟೈಮ್‌ನಲ್ಲಿಯೇ ಸ್ಕ್ರಿಪ್ಟ್ ಮಾಡಿದ್ದೆವು. ಕ್ಲಾಂತ ಎಂದರೆ ದಣಿವು, ಆಯಾಸ ಎಂದರ್ಥ. ಇದು ಸಂಸ್ಕೃತದ ಶಬ್ಧ’ ಎಂದರು.

Anugraha Power Media ಬ್ಯಾನರ್‌ ಅಡಿಯಲ್ಲಿ ಉದಯ್‌ ಅಮ್ಮಣ್ಣಾಯ ಕೆ ನಿರ್ಮಿಸಿರುವ ಚಿತ್ರದಲ್ಲಿ ತುಳು ಮತ್ತು ಕೊಂಕಣಿ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಿರುವ ನಟ ವಿಘ್ನೇಶ್‌ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಚಿತ್ರದಲ್ಲಿ ಸಂಗೀತಾ ಭಟ್, ಶೋಭರಾಜ್‌, ವೀಣಾ ಸುಂದರ್‌, ಸಂಗೀತಾ, ದೀಪಿಕಾ, ಪ್ರವೀಣ್‌ ಜೈನ್‌, ಸ್ವಪ್ನಾ ಶೆಟ್ಟಿಗಾರ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತುಳುನಾಡಿನವರೇ ನಿರ್ಮಾಣ ಮಾಡಿರುವ ಈ ಸಿನಿಮಾಗೆ ಮೋಹನ್‌ ಲೋಕನಾಥನ್‌ ಛಾಯಾಗ್ರಹಣ, ಪಿ ಆರ್‌ ಸೌಂದರ ರಾಜ್‌ ಸಂಕಲನವಿದೆ. ಸಿನಿಮಾದ ಮೂರು ಹಾಡುಗಳಿಗೆ ಎಸ್‌ ಪಿ ಚಂದ್ರಕಾಂತ್‌ ಸಂಗೀತ ಸಂಯೋಜಿಸಿದ್ದಾರೆ. ವಿಜಯ ಪ್ರಕಾಶ್‌, ನಯನಾ ನಾಗರಾಜ್‌, ರಾಜೇಶ್‌ ಕೃಷ್ಣನ್‌, ಚೇತನ್‌, ಐರಾ ಆಚಾರ್ಯ ಮೊದಲಾದವರು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಗುಂಡ್ಯಾ, ಕುಕ್ಕೆ ಸುಬ್ರಮಣ್ಯ, ಕಳಸ, ಮಂಗಳೂರು, ಬೆಂಗಳೂರು ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

LEAVE A REPLY

Connect with

Please enter your comment!
Please enter your name here