‘Too many things on everybody’s plate’ ಎನ್ನುವ ಹಾಗೆ ವೀಕ್ಷಕರಿಗೆ ಕಥೆಯ ಮೂಲ ಸಮಸ್ಯೆ ಮರೆತುಹೋಗಿ ಪ್ರತಿಯೊಂದು ಪಾತ್ರಗಳ ಬವಣೆಗಳನ್ನು ನೋಡುತ್ತಾ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಹಾಗೆಂದು ಯಾವುದೂ ಬಾಲಿಶವಾಗಿಲ್ಲ. ಪಾತ್ರಗಳಾಗಲೀ , ಪಾತ್ರಚಿತ್ರಣವಾಗಲೀ , ಅವುಗಳ ನಡವಳಿಕೆಯಾಗಲೀ ಪ್ರತಿಯೊಂದೂ ಬಹಳ ಪರಿಣಾಮಕಾರಿಯಾಗಿದೆ. ಆದರೆ ಒಂದೇ ಕಥೆಯಲ್ಲಿ ಅಷ್ಟೊಂದು ಘಟನೆಗಳು ಸ್ವಲ್ಪ overwhelming ಅನ್ನಿಸುತ್ತದೆ. ‘ಕೊಹ್ರಾ’ ಸರಣಿ Netflixನಲ್ಲಿ stream ಆಗುತ್ತಿದೆ.
ಕೊಹ್ರಾ ಅಂದ್ರೆ ಮಂಜು ಅಥವ ಮಬ್ಬಾದ ವಾತಾವರಣ. ಕಣ್ಣು ಮಬ್ಬಾದಾಗ ಅಥವ ಬುದ್ಧಿಗೆ ಮಂಕು ಕವಿದಾಗ ಏನೂ ಸರಿಯಾಗಿ ಗೋಚರಿಸುವುದಿಲ್ಲ. ಮಬ್ಬು ಕವಿದಾಗ ಆಗುವ ಅನಾಹುತಗಳೇನು ಎಂದು ನಿರೂಪಿಸುವ ಸರಣಿ ಕೊಹ್ರಾ. ಇದೊಂದು ಮರ್ಡರ್ ಮಿಸ್ಟರಿ. ಇಲ್ಲಿ ನಿಗೂಢತೆ, ಸಂಚು, ಒಳಸಂಚು, ದುರಾಸೆ ಆಸೆ, ಪ್ರೀತಿ, ಕಾಮ, ಮೋಹ, ಕೋಪ, ಅಸೂಯೆ ಇವೇ ಪ್ರಧಾನ ಪಾತ್ರಗಳು ಎಂದೇ ಹೇಳಬಹುದು.
ಒಂದು ಮದುವೆಮನೆ. ಸಂಭ್ರಮವಾಗಿ ಮದುಮಕ್ಕಳು ಸಜ್ಜಾಗುತ್ತಾ ಇರುತ್ತಾರೆ. ಸಂಭ್ರಮದ ನೆರಳಲ್ಲೇ ಕೊಲೆಯ ಸೂತಕವೊಂದು ಘಟಿಸಿಬಿಡುತ್ತದೆ. ಘಟನೆ ಯಾಕಾಯ್ತು, ಹೇಗಾಯ್ತು, ಯಾರಿಂದ ಆಯಿತು, ಅದರ ಪರಿಣಾಮಗಳು ಯಾರ ಮೇಲೆ ಹೇಗಾದವು ಎನ್ನುವುದನ್ನು ಪತ್ತೆ ಮಾಡಲು ಪ್ರಯತ್ನ ಪಟ್ಟಷ್ಟೂ ಗೋಜಲುಗಳು ಹೆಚ್ಚಾಗುತ್ತಾ ಮಬ್ಬು ಜಾಸ್ತಿಯಾಗುತ್ತಲೇ ಹೋಗುತ್ತದೆ. ಕೊನೆಗೂ ಕೊಲೆಗಾರ ಯಾರು ಎಂದು ತಿಳಿಯುತ್ತದಾ ಅಥವಾ ರಹಸ್ಯ ರಹಸ್ಯವಾಗಿಯೇ ಉಳಿದುಬಿಡುತ್ತದಾ ಎಂಬ ಕುತೂಹಲವನ್ನು ಕೊನೆಯ ತನಕ ಕಾಯ್ದುಕೊಂಡು ಹೋಗುವಲ್ಲಿ ಸರಣಿ ಯಶಸ್ವಿಯಾಗಿದೆ.
ಒಂದು ಮರ್ಡರ್ ಮಿಸ್ಟರಿಗೆ ಬೇಕಾದ ಎಲ್ಲ ಅಂಶಗಳೂ ಈ ಸರಣಿಯಲ್ಲಿ ಇವೆಯಾದರೂ ಸ್ವಲ್ಪ ಜಾಸ್ತಿಯೇ ಇವೆ ಎಂದೂ ಅನಿಸುತ್ತದೆ. ಎಷ್ಟು ನಿಗೂಢತೆ ಬೇಕೋ ಅಷ್ಟೇ ಇದ್ದಾಗ ಕಥೆ ಕುತೂಹಲವನ್ನು ಕಾದುಕೊಳ್ಳುತ್ತದೆ. ಆದರೆ ಕೆಲವು ಕಡೆ ಅನಗತ್ಯವಾಗಿ ಕಥೆಯನ್ನು ಗೋಜಲುಗೊಳಿಸಿದ್ದಾರೆಂದು ಭಾಸವಾಗುತ್ತದೆ. ಅಲ್ಲಲ್ಲಿ ಬರುವ ಒಂದಷ್ಟು ಅನಗತ್ಯ ತಿರುವುಗಳು ತೀರಾ ಉದ್ದೇಶಪೂರ್ವಕ ಅನ್ನಿಸಿ ವೀಕ್ಷಕರನ್ನು ದಿಕ್ಕುತಪ್ಪಿಸಲು ಹೆಣೆದ ಘಟನೆಗಳಂತೆ ಭಾಸವಾಗುತ್ತದೆ.
ಆದರೆ ವೀಕ್ಷಕರು ಬುದ್ಧಿವಂತರಾಗಿದ್ದಾರೆ. ಮರ್ಡರ್ ಮಿಸ್ಟರಿ ಎಂದು ತಿಳಿದ ಕೂಡಲೇ ವೀಕ್ಷಕರ ತಲೆಯೊಳಗೆ ಅವರದ್ದೇ ಒಂದು ಊಹೆ, ಚಿತ್ರಕತೆ, ಅನುಮಾನಾಸ್ಪದ ವ್ಯಕ್ತಿಗಳು ಯಾರು ಇತ್ಯಾದಿ ವಿಚಾರಗಳು ಕಥೆಯ ಓಘದ ಜೊತೆಜೊತೆಗೆ ಓಡಲು ಶುರುಮಾಡಿರುತ್ತದೆ ಎನ್ನುವುದನ್ನು ನಿರ್ದೇಶಕರು ಮರೆಯಬಾರದು. ನಿರ್ದೇಶಕ ಒಂದು ಹೆಜ್ಜೆ ಇಟ್ಟರೆ ವೀಕ್ಷಕಪ್ರಭು ಹತ್ತು ಹೆಜ್ಜೆ ಇಟ್ಟಿರುತ್ತಾನೆ. ಅವನ ಕಲ್ಪನೆಯ ವೇಗವನ್ನು ಮೀರಿಸುವ ವೇಗ ಕಥೆಗೆ ಇದ್ದಾಗ ಮಾತ್ರ ಇಂಥ ಮರ್ಡರ್ ಮಿಸ್ಟರಿಗಳು ಸಂಪೂರ್ಣ ಯಶಸ್ಸು ಕಾಣೋದು. ಈ ಸರಣಿ ಆ ವೇಗದಲ್ಲಿ ಸ್ವಲ್ಪ ಎಡವಿದೆ ಅನ್ನಿಸಿತು.
ಒಂದು ಹಂತದಲ್ಲಿ ಇಲ್ಲಿ ಕೊಲೆಯ ಜೊತೆಗೆ ಬಹಳಷ್ಟು ವಿಷಯಗಳನ್ನು ಒಟ್ಟೊಟ್ಟಿಗೆ ತುರುಕಿಬಿಟ್ಟಿದ್ದಾರೆ ಎನಿಸಿಬಿಡುತ್ತದೆ. ಉದಾಹರಣೆಗೆ ಆ ಪೋಲೀಸ್ ಆಫೀಸರಿನ ಮಗಳ ಪ್ರೇಮಕಥಾನಕ. ಕಥೆಗೆ ಯಾವ ನೇರ ಸಂಬಂಧವೂ ಇಲ್ಲದ ಆ ಪ್ರಸಂಗ ಒಟ್ಟಾರೆ ಕಥೆಯ ಓಘಕ್ಕೆ ಧಕ್ಕೆ ನೀಡಿದೆ. ಅದೇ ರೀತಿ ಸಹಾಯಕ ಪೋಲೀಸ್ ಆಫೀಸರಿನ ಅತ್ತಿಗೆಯೊಂದಿಗಿನ ಅಫೇರ್. ಬಲಬೀರ್ ಸಿಂಗ್ ಜೀವನದ ಫ್ಲಾಶ್‌ಬ್ಯಾಕ್‌ಗಳು ಕೂಡ ಆಸ್ಪಷ್ಟ ಮತ್ತು ಅನಗತ್ಯವಾಗಿದೆ. ನಡೆದಿರುವ ಕೊಲೆಗೆ ನೇರ ಸಂಬಂಧವಿರದ ಈ ದೃಶ್ಯಗಳು ಕಥೆಯ ವೇಗಕ್ಕೆ ತಡೆಯಾಗಿವೆ ಮತ್ತು ಬೋರ್ ಹೊಡೆಸುತ್ತವೆ.
‘Too many things on everybody’s plate’ ಎನ್ನುವ ಹಾಗೆ ವೀಕ್ಷಕರಿಗೆ ಕಥೆಯ ಮೂಲ ಸಮಸ್ಯೆ ಮರೆತುಹೋಗಿ ಪ್ರತಿಯೊಂದು ಪಾತ್ರಗಳ ಬವಣೆಗಳನ್ನು ನೋಡುತ್ತಾ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಹಾಗೆಂದು ಯಾವುದೂ ಬಾಲಿಶವಾಗಿಲ್ಲ. ಪಾತ್ರಗಳಾಗಲೀ , ಪಾತ್ರಚಿತ್ರಣವಾಗಲೀ , ಅವುಗಳ ನಡವಳಿಕೆಯಾಗಲೀ ಪ್ರತಿಯೊಂದೂ ಬಹಳ ಪರಿಣಾಮಕಾರಿಯಾಗಿದೆ. ಆದರೆ ಒಂದೇ ಕಥೆಯಲ್ಲಿ ಅಷ್ಟೊಂದು ಘಟನೆಗಳು ಸ್ವಲ್ಪ overwhelming ಅನ್ನಿಸುತ್ತದೆ. ಪಂಜಾಬಿನ ಸೊಗಡು ಹೊತ್ತ ನಿರೂಪಣೆ, ಆ ಭಾಷೆ ಎಲ್ಲವೂ ಸೊಗಸಾಗಿದೆ. ತಾಂತ್ರಿಕವಾಗಿ ಸರಣಿ ಅಚ್ಚುಕಟ್ಟು. ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಆ ಸರಣಿಯ ಪ್ಲಸ್ ಪಾಯಿಂಟ್. ಈ ಕಥೆಯ ಆತ್ಮವನ್ನು ನಿಖರವಾಗಿ ಹಿಡಿದಿಟ್ಟ ಎರಡು ಅಂಶಗಳು ಅಂದರೆ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ.
ಕಥೆಯ ಅಂತ್ಯವನ್ನು ಒಂದು ಮಟ್ಟಕ್ಕೆ ಮೊದಲೇ ಊಹಿಸಿಬಿಡಬಹುದು ಮತ್ತು ತುಸು cliched ಅನ್ನಿಸುವಂತಹ ನಿರೂಪಣೆಯ ವಿನ್ಯಾಸ ಇದೆ ಅನ್ನೋದನ್ನು ಪಕ್ಕಕ್ಕಿಟ್ಟು ನೋಡಿದರೆ ಬಹಳ ಒಳ್ಳೆಯ ಸರಣಿ. ‘ಕೊಹ್ರಾ’ ಸರಣಿ Netflixನಲ್ಲಿ stream ಆಗುತ್ತಿದೆ.