ಸೈಬಲ್‌ ಮುಖರ್ಜಿ ನಿರ್ದೇಶನದ ಬೆಂಗಾಲಿ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಂಕುಶ್‌ ಹಝ್ರಾ ಮತ್ತು ಪ್ರಿಯಾಂಕಾ ಸರ್ಕಾರ್‌ ನಟಿಸಲಿದ್ದಾರೆ. ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿ ಹೆಣೆದ ಚಿತ್ರಕಥೆ ಮಾನವೀಯ ಮೌಲ್ಯಗಳನ್ನು ಹೇಳುತ್ತದೆ ಎನ್ನುತ್ತಾರೆ ನಿರ್ದೇಶಕರು.

ಅಂಕುಶ್ ಹಝ್ರಾ ಮತ್ತು ಪ್ರಿಯಾಂಕಾ ಸರ್ಕಾರ್ ನೂತನ ಬೆಂಗಾಲಿ ಸಿನಿಮಾಗೆ ಜೊತೆಯಾಗಿದ್ದಾರೆ. ಇವರು ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ ‘ಕುರ್ಬಾನ್‌’ ಚಿತ್ರವನ್ನು ಸೈಬಲ್ ಮುಖರ್ಜಿ ನಿರ್ದೇಶಿಸುತ್ತಿದ್ದಾರೆ. ಜೋಡಿಯು ಈ ಹಿಂದೆ ‘ಬಿಬಾಹೋ ಅಭಿಜಾನ್’ ಮತ್ತು ‘ಅಬರ್ ಬಿಬಾಹೋ ಅಭಿಜಾನ್’ ಬೆಂಗಾಲಿ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಚಿತ್ರದಲ್ಲಿ ಇವರಿಬ್ಬರು ‘ಹಸನ್’ ಮತ್ತು ‘ಹಿಜಾಲ್’ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಇದು ಬಂಗಾಳದ ಮುಸಲ್ಮಾನ್ ಕುಟುಂಬದ ಕತೆಯೊಂದನ್ನು ಹೇಳಲಿದೆ. ಗ್ರಾಮೀಣ ಹಿನ್ನೆಲೆಯಲ್ಲಿ ಮಾನವೀಯ ಮೌಲ್ಯಗಳನ್ನು ಹೊಂದಿರುವ ಅಂಶಗಳನ್ನು ಚಿತ್ರ ಒಳಗೊಂಡಿದೆ ಎನ್ನುತ್ತಾರೆ ನಿರ್ದೇಶಕರು.

ಚಿತ್ರದಲ್ಲಿ, ಹಸನ್ ಅವರ ಅಬ್ಬಾ, ಅಮ್ಮಿ, ಅಮ್ಮಿಯ ದತ್ತು ತಂಗಿ, ಅವಳ ಮಗ ಹಸ್ಸು ಮತ್ತು ಹಿಜಾಲ್ ಪ್ರಮುಖ ಪಾತ್ರಧಾರಿಗಳು. ಇವರೆಲ್ಲರೂ ಅನ್ಯೋನ್ಯವಾಗಿ ಒಬ್ಬರಿಗೊಬ್ಬರು ಬಿಟ್ಟುಕೊಡದೇ ಅಪಾರವಾಗಿ ಪ್ರೀತಿಸುತ್ತಿರುತ್ತಾರೆ. ಹಸನ್ ಒಬ್ಬ ಸೂಕ್ಷ್ಮ ಸ್ವಭಾವದ ವ್ಯಕ್ತಿಯಾಗಿದ್ದು, ಬದುಕನ್ನು ಇತರರಿಗಿಂತ ವಿಭಿನ್ನವಾಗಿ ನೋಡುತ್ತಿರುತ್ತಾನೆ. ಅದು ಅವನ ಸುಗಮ ಜೀವನಕ್ಕೆ ಗಂಭೀರ ಸವಾಲುಗಳನ್ನು ತಂದೊಡ್ಡುತ್ತದೆ. ಹಸನ್‌ನ ಸಂತೋಷದ ಕುಟುಂಬಕ್ಕೆ ಕಠಿಣ ಸಂದರ್ಭಗಳು ಎದುರಾಗುತ್ತವೆ ಮತ್ತು ಆತನ ಮೌಲ್ಯಗಳನ್ನು ಪ್ರಶ್ನಿಸಲ್ಟಡುತ್ತವೆ. ಆಗ ಅವನು ಏನು ಮಾಡುತ್ತಾನೆ? ಯಾವ ರೀತಿ ತನ್ನ ಕುಟುಂಬವನ್ನು ಉಳಿಸಿಕೊಳ್ಳುತ್ತಾನೆಂಬುದೇ ಚಿತ್ರದ ಕಥಾಹಂದರ. ಚಿತ್ರದಲ್ಲಿ ಅಂಕುಶ್ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ನಾನು ಈ ಪಾತ್ರವನ್ನು ನಿರ್ವಹಿಸಲು ಕಾತರನಾಗಿದ್ದೇನೆ. ಪಾತ್ರವು ನನ್ನ ಮನಸ್ಸಿನ ಮೇಲೆ ಪ್ರಭಾವ ಬೀರಿದೆ’ ಎಂದಿದ್ದಾರೆ. ಚಿತ್ರದಲ್ಲಿ ಸಂತೀಲಾಲ್ ಮುಖರ್ಜಿ, ಕಾಂಚನ್ ಮಲ್ಲಿಕ್ ಮತ್ತು ಬುದ್ಧದೇಬ್ ಭಟ್ಟಾಚಾರ್ಯ ಇತರ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ, ಈ ಸಿನಿಮಾ ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ.

Previous articleMan Woman Man Woman | ಮೇರು ನಟ ನಾಸಿರುದ್ದೀನ್‌ ಷಾ ನಿರ್ದೇಶನದ ಕಿರುಚಿತ್ರ
Next article‘ತತ್ಸಮ ತದ್ಭವ’ ಟ್ರೈಲರ್‌ | ಮೇಘನಾ ರಾಜ್‌ ಸಿನಿಮಾ ಸೆಪ್ಟೆಂಬರ್‌ 15ರಂದು ತೆರೆಗೆ

LEAVE A REPLY

Connect with

Please enter your comment!
Please enter your name here