ಯೋಗೇಶ್ ಅಭಿನಯದ ‘ಲಂಕೆ’ ಚಿತ್ರ‌‌ ಐವತ್ತನೇ ದಿನದತ್ತ ದಾಪುಗಾಲಿಡುತ್ತಿದೆ. ಕೋವಿಡ್‌ ನಂತರದ ದಿನಗಳಲ್ಲಿ ಚಿತ್ರರಂಗದ ಪಾಲಿಗೆ ಇದು ಆಶಾದಾಯಕ ಬೆಳವಣಿಗೆ.

“ಚಿತ್ರ ಬಿಡುಗಡೆ ಸಮಯದಲ್ಲಿ ಕೆಲವರು ಇದು ಒಂದು ವಾರದ ಸಿನಿಮಾ ಎಂದಿದ್ದರು. ಅವರಿಗೆ ಉತ್ತರವಾಗಿ ‘ಲಂಕೆ’ ಇಪ್ಪತ್ತೈದು ದಿನಗಳನ್ನು ಪೂರೈಸಿದೆ. ಐವತ್ತರ ಸಂಭ್ರಮವೂ ಹತ್ತಿರದಲ್ಲಿದೆ. ನಿರ್ಮಾಪಕರಿಗೆ ಹಾಕಿದ ಹಣ ಬಂದಿದ್ದು, ಲಾಭದ ನಿರೀಕ್ಷೆಯಲ್ಲಿದ್ದಾರೆ. ತೆಲುಗಿನ ಖ್ಯಾತನಾಮರೊಬ್ಬರು ಚಿತ್ರದ ರಿಮೇಕ್ ಹಕ್ಕು ಪಡೆದುಕೊಂಡಿದ್ದಾರೆ. ಆ ಕುರಿತು ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ನೀಡುತ್ತೇನೆ. ನನ್ನ ಹಾಗೂ ಯೋಗಿ ಕಾಂಬಿನೇಶನ್‌ನಲ್ಲಿ ನೂತನ ಚಿತ್ರ ಸಹ ಸದ್ಯದಲ್ಲೇ ಆರಂಭವಾಗಲಿದೆ. ಚಿತ್ರ ಯಶಸ್ಸಿಗೆ ಕಾರಣರಾದ ತಂಡಕ್ಕೆ, ಮಾಧ್ಯಮದವರಿಗೆ, ಪ್ರೇಕ್ಷಕರಿಗೆ ನನ್ನ ತಂಬು ಹೃದಯದ ಧನ್ಯವಾದ” ಎನ್ನುತ್ತಾರೆ ನಿರ್ದೇಶಕ ರಾಮಪ್ರಸಾದ್.

ಕಾವ್ಯಾ ಶೆಟ್ಟಿ, ಎಸ್ತರ್‌ ನೊರಾನ್ಹಾ

ಬಹಳಷ್ಟು ದಿನಗಳ ನಂತರ ತೆರೆಗೆ ಬಂದ ಲೂಸ್ ಮಾದ ಖ್ಯಾತಿಯ ಯೋಗೇಶ್‌ರಿಗೂ ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಉತ್ಸಾಹ ತಂದಿದೆ. “ಶೇಕಡಾ ಐವತ್ತರಷ್ಟು ಚಿತ್ರಮಂದಿರಗಳಲ್ಲಿ ಭರ್ತಿಗೆ ಅವಕಾಶವಿದ್ದಾಗ ನಮ್ಮ ಚಿತ್ರ ಬಿಡುಗಡೆಯಾಯಿತು. ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದಿಂದ ಚಿತ್ರ ಬಿಡುಗಡೆ ಮಾಡಿದ ನಿರ್ದೇಶಕರ ಧೈರ್ಯ ಮೆಚ್ಚಲೇಬೇಕು. ನಮ್ಮ ಚಿತ್ರಕ್ಕೆ ಅಭಿಮಾನಿಗಳು ನೀಡುತ್ತಿರುವ ಪ್ರೋತ್ಸಾಹಕ್ಕೆ ಹೃದಯ ತುಂಬಿ ಬಂದಿದೆ. ಸುಚೀಂದ್ರ ಪ್ರಸಾದ್ ಅವರಂತಹ ನಟರೊಂದಿಗೆ ನಟಿಸಿದ್ದು ಸಂತಸ ತಂದಿದೆ. ನಮ್ಮ ಚಿತ್ರ ಇನ್ನೂ ಹೆಚ್ಚು ದಿನಗಳ ಕಾಲ ಓಡುವ ಭರವಸೆ ಇದೆ” ಎನ್ನುವುದ ಯೋಗಿ ಮಾತು.

ಯೋಗಿ, ರಾಮ್‌ಪ್ರಸಾದ್‌, ಸುಚೇಂದ್ರ ಪ್ರಸಾದ್‌

“ನಾನು ಚಿತ್ರದ ಕೆಲವು ಪತ್ರಿಕಾಗೋಷ್ಠಿಗಳಲ್ಲಿ ಅನಿವಾರ್ಯ ಕಾರಣದಿಂದ ಪಾಲ್ಗೊಳ್ಳಲು ಆಗಿರಲಿಲ್ಲ. ಈ ಸಂದರ್ಭದಲ್ಲಿ ಚಿತ್ರವೊಂದು ಇಪ್ಪತ್ತೈದು ದಿನ ಪೂರೈಸಿ ಮುನ್ನಡೆಯುತ್ತಿರುವುದು ಖುಷಿಯ ವಿಚಾರ” ಎಂದರು ನಟಿ ಕಾವ್ಯ ಶೆಟ್ಟಿ. ಹಿರಿಯ ನಟ ಸುಚೇಂದ್ರ ಪ್ರಸಾದ್ ಈ ಹಿಂದೆ ರಾಮಪ್ರಸಾದ್‌ ನಿರ್ದೇಶನದ ಚಿತ್ರಗಳಲ್ಲಿ ನಟಿಸಿದ್ದವರು. ಈ ನಿರ್ದೇಶಕರು ಬಳಸುವ ಕಂಟೆಂಟ್‌, ಮಾಧ್ಯಮ ವಿಶೇಷವಾಗಿರುತ್ತದೆ ಎನ್ನುವುದು ಅವರ ಗ್ರಹಿಕೆ. ಚಿತ್ರದ ಗೆಲುವು ಅವರಿಗೆ ಖುಷಿ ತಂದಿದೆ. ಚಿತ್ರದ ನಿರ್ಮಾಪಕರಾದ ಸುರೇಖ ರಾಮಪ್ರಸಾದ್ ಹಾಗೂ ಪಟೇಲ್ ಶ್ರೀನಿವಾಸ್ ಅವರ ಸಹೋದರ ಪಟೇಲ್ ನಂಜುಂಡ ಸ್ವಾಮಿ. ಸಂಕಲನಕಾರ ಶಿವರಾಜ್ ಮೇಹು, ಚಿತ್ರದಲ್ಲಿ ನಟಿಸಿರುವ ಸಂಗಮೇಶ್ ಉಪಾಸೆ, ಜಗದೀಶ್ ಕೊಪ್ಪ ಹಾಗೂ ಬೇಬಿ ಜನ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

‘ಲಂಕೆ’ ಚಿತ್ರತಂಡ

LEAVE A REPLY

Connect with

Please enter your comment!
Please enter your name here