ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಖ್ಯಾತ ತಮಿಳು ನಟ ವಿಜಯ್ ಸೇತುಪತಿ ಅವರ ಮೇಲೆ ಹಲ್ಲೆ ನಡೆದಿರುವ ಘಟನೆ ತಡವಾಗಿ ವರದಿಯಾಗಿದೆ. ಮೊನ್ನೆ ರಾತ್ರಿ ಪಾನಮತ್ತ ಯುವಕನೊಬ್ಬ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಸೇತುಪತಿ ಅಭಿಮಾನಿಗಳು ಟ್ವಿಟರ್‌ನಲ್ಲಿ ಈ ವೀಡಿಯೋ ಹಂಚಿಕೊಂಡು ಕಿಡಿಕಾರಿದ್ದಾರೆ.

ತಮಿಳು ನಟ ವಿಜಯ್ ಸೇತುಪತಿ ಅವರ ಮೇಲೆ ಮೊನ್ನೆ ನವೆಂಬರ್ 2ರ ರಾತ್ರಿ ಸುಮಾರು 11ರ ವೇಳೆಗೆ ಹಲ್ಲೆ ನಡೆದಿದೆ. ಸೇತುಪತಿ ಅವರು ಇನ್ನೋವೇಟಿವ್ ಫಿಲ್ಮ್‌ ಸಿಟಿಯಲ್ಲಿ ಮಾಸ್ಟರ್ ಶೆಫ್‌ ಶೋ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಬಂದಿಳಿದಿದ್ದರು. ವಿಮಾನ ನಿಲ್ದಾಣದಿಂದ ಹೊರಬರುವಾಗಿ ಯುವಕನೊಬ್ಬ ಓಡಿಬಂದು ಅವರ ಬೆನ್ನಿಗೆ ಕಾಲಿನಿಂದ ಹೊಡೆದಿದ್ದಾನೆ. ಇದು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೇತುಪತಿ ಅಭಿಮಾನಿಗಳು ಟ್ವಿಟರ್‌ನಲ್ಲಿ ಈ ವೀಡಿಯೋ ಹಂಚಿಕೊಂಡು ಹಲ್ಲೆಕೋರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಲ್ಲೆ ಮಾಡಿದ ಯುವಕ ತಮಿಳುನಾಡು ಮೂಲದವನು ಎನ್ನಲಾಗಿದೆ. ಪಾನಮತ್ತನಾಗಿದ್ದ ಆತ ವಿಮಾನದಲ್ಲಿ ವಿನಾಕಾರಣ ವಿಜಯ ಸೇತುಪತಿ ಮತ್ತು ನಟನ ಮ್ಯಾನೇಜರ್‌ ಜೊತೆ ಜಗಳ ಮಾಡಿಕೊಂಡಿದ್ದ. ಸೇತುಪತಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ವಿಚಾರದಲ್ಲಿ ಈ ಪಾನಮತ್ತ ಯುವಕ ನಟನ ಮ್ಯಾನೇಜರ್‌ ಜೊತೆ ಜಗಳ ಮಾಡಿಕೊಂಡಿದ್ದ ಎಂದೂ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಜಗಳ ಮಾಡಿಕೊಂಡ ಕೋಪದಲ್ಲಿ ಆ ಯುವಕ ವಿಮಾನ ನಿಲ್ದಾಣದಲ್ಲಿ ನಟ ತೆರಳುತ್ತಿದ್ದ ವೇಳೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆದ ಕೂಡಲೇ ಸೇತುಪತಿ ಭದ್ರತೆಯ ಸಿಬ್ಬಂದಿ ಯುವಕನನ್ನು ತಮ್ಮ ವಶಕ್ಕೆ ಪಡೆದು ವಿಮಾನ ನಿಲ್ಣಾಣದ ಪೊಲೀಸರಿಗೆ ಒಪ್ಪಿಸಿ, ದೂರು ನೀಡಿದ್ದಾರೆ. ಈ ಘಟನೆಯನ್ನು ದೊಡ್ಡದು ಮಾಡಲು ಹೋಗದ ಸೇತುಪತಿ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ನಿನ್ನೆ ಸಂಜೆ ಸೇತುಪತಿ ಅವರು ನಟ ಪುನೀತ್‌ ಸಮಾಧಿ ಬಳಿ ತೆರಳಿ ನಮನ ಸಲ್ಲಿಸಿದ್ದು, ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Previous articleಟ್ರೈಲರ್ | ಮನಿ ಹೀಸ್ಟ್‌ 5 ಪಾರ್ಟ್ 2; ನೆಟ್‌ಫ್ಲಿಕ್ಸ್‌ನಲ್ಲಿ ಡಿಸೆಂಬರ್ 3ಕ್ಕೆ ಸರಣಿ
Next articleನವೆಂಬರ್‌ 16ರಂದು ‘ಪುನೀತ್ ನಮನ’; ಅಗಲಿದ ನಟನಿಗೆ ಚಿತ್ರರಂಗದ ಶ್ರದ್ಧಾಂಜಲಿ

LEAVE A REPLY

Connect with

Please enter your comment!
Please enter your name here