ಚಿತ್ರದ ಕಟ್ಟುವಿಕೆಯಲ್ಲಿ ಕಥೆಗಾರ ಬಹಳಷ್ಟು ನಾಜೂಕಿನಿಂದ ಕಾರ್ಯನಿರ್ವಹಿಸಿದ್ದಾನೆ. ಹೆಣ್ಣು – ಗಂಡಿನ ಸ್ವಾಂತಂತ್ರ್ಯ, ಸ್ನೇಹ, ಪ್ರೀತಿ, ಸಂಪ್ರದಾಯ, ಪುರಾಣ ಎಲ್ಲವನ್ನೂ ಪ್ರಬುದ್ಧತೆಯಿಂದ ನಿರೂಪಿಸಿದ್ದಾರೆ – ‘ಮೀನಾಕ್ಷಿ ಸುಂದರೇಶ್ವರ್’ ಹಿಂದಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಮದುರೈ ಮೀನಾಕ್ಷಿ ದೇವಸ್ತಾನ ಮತ್ತು ಕಥಾನಾಯಕ, ನಾಯಕಿಯ ಮದುವೆಯ ಪೀಠಿಕೆಯೊಂದಿಗೆ ಶುರುವಾಗುತ್ತದೆ ಸಿನಿಮಾ. ಹುಡುಗಿ ನೋಡಲು ಹೋಗುವ ಹುಡುಗನ ಕಡೆಯವರಿಗೆ ಕಾಫಿ, ತಿಂಡಿ ಸಮರ್ಪಣೆಯಾಗುತ್ತದೆ. ಹುಡುಗ – ಹುಡುಗಿ ಏಕಾಂತದಲ್ಲಿ ಮಾತನಾಡಿ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಆನಂತರ ಹುಡುಗನ ಕಡೆಯವರಿಗೆ ಗೊತ್ತಾಗುವುದೇನೇಂದರೆ, ತಾವು ತಪ್ಪಾದ ವಿಳಾಸಕ್ಕೆ ಬಂದಿದ್ದೇವೆ ಎನ್ನುವುದು! ಆದಾಗ್ಯೂ ಸಂಬಂಧ ಒಪ್ಪಿಗೆಯಾಗಿ ಮದುವೆ ನಡೆಯುವಂತಹ ಸೋಜಿಗದ ಸನ್ನಿವೇಶದೊಂದಿಗೆ ಸಿನಿಮಾ ತೆರೆದುಕೊಳ್ಳುತ್ತದೆ. ಗಂಡ – ಹೆಂಡತಿ ನಡುವಿನ ಪ್ರಣಯ ಪ್ರಸಂಗ, ಜನರೇಷನ್ ಗ್ಯಾಪ್‌ನಿಂದಾಗಿ ಉಂಟಾಗುವ ಸಣ್ಣಪುಟ್ಟ ತಿಕ್ಕಾಟ, ಗೂಗಲ್ ಜಮಾನವಾಗಿರುವ ಇಂದಿನ ಕಾಲದಲ್ಲಿ ಸಂಬಂಧಗಳನ್ನು ಅರ್ಥೈಸಿಕೊಳ್ಳುವುದರಲ್ಲಿ ಎಡುವುತ್ತಿರುವ ಯುವಪೀಳಿಗೆಗೆ ಕಿವಿಮಾತು ಹೇಳುವಂತಹ ದೃಶ್ಯಗಳು ಇಷ್ಟವಾಗುತ್ತವೆ.
ಸುಂದರೇಶ್ವರ್, ಮದುರೈ ಮಧ್ಯಮ ವರ್ಗದ ಅವಿಭಕ್ತ ಕುಟುಂಬದ ಯುವಕ. ಬಿ.ಟೆಕ್ ಪದವೀಧರನಾಗಿದ್ದು ಅವರ ಫ್ಯಾಮಿಲಿ ಬಿಜಿನೆಸ್ ಆಗಿರುವ ಸೀರೆ ವ್ಯಾಪಾರದಲ್ಲಿ ಭಾಗಿಯಾಗಲು ನಿರಾಸಕ್ತಿ ಹೊಂದಿದ್ದು ತನ್ನಿಚ್ಚೆಯ ಐಟಿ ಉದ್ಯೋಗಕ್ಕಾಗಿ ಕಾಯುತ್ತಿರುತ್ತಾನೆ. ಮನೆಯವರ ಒತ್ತಡಕ್ಕೋ, ವಯಸ್ಸಿನ ಹಂಬಲಕ್ಕೋ ಮನಸೋತು ಸುಂದರ ಹುಡುಗಿ ಸೂಪರ್ ಸ್ಟಾರ್ ರಜನಿಕಾಂತ್ ಫ್ಯಾನ್ ಮೀನಾಕ್ಷಿಯನ್ನು ಮದುವೆಯಾಗುತ್ತಾನೆ. ಮದುವೆಯ ನಂತರದ ದಿನದಲ್ಲೇ ಉದ್ಯೋಗವಕಾಶ ಒದಗಿಬಂದು ಅನಿವಾರ್ಯ ಕಾರಣಗಳಿಂದ ಸುಂದರೇಶ್ವರ್ ತನ್ನ ಪ್ರೀತಿಯ ಹೆಂಡತಿ ಮೀನಾಕ್ಷಿಯನ್ನು ಬಿಟ್ಟು ಬೆಂಗಳೂರು ಸೇರುತ್ತಾನೆ. ಕೆಲಸ ಸಿಕ್ಕ ಸಂಸ್ಥೆಯಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಅವುಗಳನ್ನ ಹೇಗೆ ನಿಭಾಯಿಸುತ್ತಾನೆ ಮತ್ತು ಅದಾಗಷ್ಟೇ ಮದುವೆಯಾಗಿರುವ ಸಂಗಾತಿಗಳ ಭಾವನಾತ್ಮಕ ತೊಳಲಾಟ ಹೇಗಿರುತ್ತದೆ? ಈ ಹಂತದಲ್ಲಿ ಅವರ ಮನಸ್ಸುಗಳನ್ನು ತಿಳಿಗೊಳಿಸುವಲ್ಲಿ ಸುತ್ತಮತ್ತಲಿನ ಸಂಬಂಧಗಳು ಹೇಗೆ ಸಹಾಕಾರಿಯಾಗುತ್ತವೆ ಎನ್ನುವುದೇ ಈ ಸಿನಿಮಾದ ಕಥಾವಸ್ತು.
ಚಿತ್ರದ ಕಟ್ಟುವಿಕೆಯಲ್ಲಿ ಕಥೆಗಾರ ಬಹಳಷ್ಟು ನಾಜೂಕಿನಿಂದ ಕಾರ್ಯನಿರ್ವಹಿಸಿದ್ದಾನೆ. ಹೆಣ್ಣು – ಗಂಡಿನ ಸ್ವಾಂತಂತ್ರ್ಯ, ಸ್ನೇಹ, ಪ್ರೀತಿ, ಸಂಪ್ರದಾಯ, ಪುರಾಣ ಎಲ್ಲವನ್ನೂ ಬ್ಯಾಲೆನ್ಸ್ ಮಾಡಿದ್ದಾರೆ. ಸಿನಿಮಾಟೊಗ್ರಫಿ ಚೌಕಟ್ಟು ವಿಭಿನ್ನವಾಗಿದ್ದು, ಆಸ್ಪೆಕ್ಟ್ ರೇಶಿಯೋ ಸಾಮಾನ್ಯಕ್ಕಿಂತ ತುಸು ಬಿನ್ನವಾಗಿದೆ. ಕಥೆಗೆ ಪೂರಕವಾದ ಟೆಂಪಲ್ ಸಿಟಿ ಮದುರೈ ಮತ್ತು ಸಾಂಪ್ರದಾಯಕ ಕುಟುಂಬದ ರೀತಿ ರಿವಾಜು, ಉಡುಗೆ ತೊಡುಗೆ ಮನೆಯ ವಾತಾವರಣ ಹಾಗೂ ಬೆಂಗಳೂರನ್ನು ಮನಸೂರೆಗೊಳ್ಳುವಂತೆ ಚಿತ್ರಿಸಿದ್ದಾರೆ. ಹಿನ್ನೆಲೆ ಸಂಗೀತ ಇಂಪಾಗಿದ್ದು, ಎಲ್ಲಾ ಪಾತ್ರಗಳು ಮೆಚ್ಚುಗೆ ಗಳಿಸುತ್ತವೆ. ಸುಂದರೇಶ್ವರ್ ಬಾಸ್ ಪಾತ್ರ ಹಾಗು ಕೆಲವು ಸಂದರ್ಭಗಳಲ್ಲಿ ಹಿರಿಯರು ಬಂದು ಹೇಳಬಹುದಾದ ಮಾತುಗಳನ್ನು ಮುಂಚಿತವಾಗಿ ಅನುಕರಣೆ ಮಾಡಿ ಹೇಳುವ ಬಾಲನಟನೊಬ್ಬ ಗಮನಸೆಳೆಯುತ್ತಾನೆ. ಹಿಂದಿ ಚಿತ್ರವಾದರೂ ಮದುರೈನಲ್ಲಿ ನಡೆಯುವ ಕಥೆಯಾಗಿರುವುದರಿಂದ ಅಲ್ಲಲ್ಲಿ ತಮಿಳು ಕೇಳಿಬರುತ್ತದೆ. ಚಿತ್ರದಲ್ಲಿ ರಜನಿಕಾಂತ್ ಕೂಡ ಕಾಣಿಸುತ್ತಾರೆ! ಹೇಗೆ ಅನ್ನೋದನ್ನು ನೀವೇ ನೋಡಿ. ಮನೆಮಂದಿಯ ಮನಸ್ಸು ಗೆಲ್ಲೋ ಸಿನಿಮಾ.
ನಿರ್ದೇಶನ : ವಿವೇಕ್ ಸೋನಿ | ಸಂಗೀತ : ಜಸ್ಟಿನ್ ಪ್ರಭಾಕರನ್ | ಛಾಯಾಗ್ರಹಣ : ದೆಬೋಜಿತ್ ರಾಯ್ | ತಾರಾಬಳಗ : ಸಾನ್ಯಾ ಮಲ್ಹೋತ್ರಾ, ಅಭಿಮನ್ಯು ದಾಸಾನಿ