ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಮೇಲೊಬ್ಬ ಮಾಯಾವಿ’ ಏಪ್ರಿಲ್ 29ರಂದು ತೆರೆಕಾಣುತ್ತಿದೆ. ಚಕ್ರವರ್ತಿ ಚಂದ್ರಚೂಡ್, ಅನನ್ಯ ಶೆಟ್ಟಿ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
“ಪಶ್ಚಿಮ ಘಟ್ಟಗಳಲ್ಲಿ ನಡೆಯುವ ಹರಳು ಮಾಫಿಯಾ ಕುರಿತಾದ ಸಿನಿಮಾ ಇದು. ಚಿತ್ರದಲ್ಲಿ ಮೂರು ಪ್ರಮುಖ ಪಾತ್ರಗಳು ಸಕ್ಕರೆ, ಇರುವೆ ಹಾಗೂ ಸುಲೇಮಾನ್. ಸಕ್ಕರೆ ಪಾತ್ರದಲ್ಲಿ ಅನನ್ಯ ಶೆಟ್ಟಿ, ಇರುವೆ ಪಾತ್ರದಲ್ಲಿ ಸಂಚಾರಿ ವಿಜಯ್ ಹಾಗೂ ಸುಲೇಮಾನ್ ಪತ್ರದಲ್ಲಿ ಚಕ್ರವರ್ತಿ ಚಂದ್ರಚೂಡ್ ನಟಿಸಿದ್ದಾರೆ” ಎಂದರು ನಿರ್ದೇಶಕ ನವೀನ್ ಕೃಷ್ಣ. ಅವರ ‘ಮೇಲೊಬ್ಬ ಮಾಯಾವಿ’ ಸಿನಿಮಾ ಏಪ್ರಿಲ್ 29ರಂದು ತೆರೆಕಾಣುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ನಡೆದ ಸಮಾರಂಭದಲ್ಲಿ ನಟ ಶ್ರೀನಗರ ಕಿಟ್ಟಿ ಅವರು ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದರು.
ಸಂಚಾರಿ ವಿಜಯ್ ಹಾಗೂ ತಮ್ಮ ಸ್ನೇಹದ ಬಗ್ಗೆ ಹೇಳುತ್ತಾ ಮಾತು ಆರಂಭಿಸಿದ ನಟ ಚಕ್ರವರ್ತಿ ಚಂದ್ರಚೂಡ್, ಸಿನಿಮಾ ಆರಂಭವಾದ ಬಗ್ಗೆ ಮಾಧ್ಯಮದ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟರು. ತಾವು, ನಿರ್ದೇಶಕರು, ನಿರ್ಮಾಪಕರು ಹಾಗೂ ಸಂಚಾರಿ ವಿಜಯ್ ಚಿತ್ರೀಕರಣ ಸಮಯದಲ್ಲಿ ಮಾಡಿದ ಕೆಲಸಗಳನ್ನು ಚಂದ್ರಚೂಡ್ ಮೆಲಕು ಹಾಕಿದರು. ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಬಗ್ಗೆ ಕೂಡ ಮಾಹಿತಿ ನೀಡಿದರು. ನಿರ್ಮಾಪಕ ಭರತ್ ಕುಮಾರ್ ಚಿತ್ರ ಸಾಗಿ ಬಂದ ಬಗ್ಗೆ ಹೇಳುತ್ತಾ ಭಾವುಕರಾದರು. ಆಡಿಷನ್ ಮೂಲಕ ಆಯ್ಕೆಯಾದ ಬಗ್ಗೆ ಹೇಳಿದ ನಾಯಕಿ ಅನನ್ಯ ಶೆಟ್ಟಿ, ಅವಕಾಶ ಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ಧನ್ಯವಾದ ಅರ್ಪಿಸಿದರು.
ಅಕಾಲಿಕವಾಗಿ ಅಗಲಿದ ಎಲ್.ಎನ್.ಶಾಸ್ತ್ರಿ ಅವರು ಸಂಗೀತ ಸಂಯೋಜಿಸಿರುವ ಕೊನೆಯ ಚಿತ್ರವಿದು. ಎಲ್.ಎನ್.ಶಾಸ್ತ್ರಿ ಅವರ ಪತ್ನಿ, ಗಾಯಕಿ ಸುಮಾ ಶಾಸ್ತ್ರಿ ಮಾತನಾಡಿ, “ಇದು ನನ್ನ ಪತಿ ಸಂಗೀತ ಸಂಯೋಜಿಸಿದ ಕೊನೆಯ ಚಿತ್ರ. ಕಾಕತಾಳೀಯವೆಂಬಂತೆ ಈ ಚಿತ್ರದ ಹಾಡೊಂದರಲ್ಲಿ ಬರುವ ಸಾಲಿನಂತೆ, ನಮ್ಮ ಯಜಮಾನರ ಜೀವನ ಸಹ ಅಂತ್ಯವಾಯಿತು. ಆದರೆ ಅವರ ಆಸೆಗಳನ್ನು ನಾನು ಪೂರ್ಣ ಮಾಡುತ್ತೇನೆ” ಎಂದರು. ಚಿತ್ರಸಾಹಿತಿ ಚಿ.ಉದಯ್ ಶಂಕರ್ ಅವರ ‘ದೇವನೊಬ್ಬನಿರುವ’ ಹಾಡಿನ ಸಾಲಿನೊಂದಿಗೆ ಮಾತು ಆರಂಭಿಸಿದ ಶ್ರೀನಗರ ಕಿಟ್ಟಿ , ಹರಳು ದಂಧೆಯಂತಹ ವಿಷಯವನ್ನು ತೆರೆಗೆ ತರಲು ಧೈರ್ಯ ಮಾಡಿರುವ ನಿರ್ಮಾಪಕ, ನಿರ್ದೇಶಕರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಬಿ. ನವೀನ್ ಕೃಷ್ಣ ನಿರ್ದೇಶನದ ‘ಮೇಲೊಬ್ಬ ಮಾಯಾವಿ’ ಸಿನಿಮಾವನ್ನು ಶ್ರೀ ಕಟೀಲ್ ಸಿನಿಮಾಸ್ ಅಡಿಯಲ್ಲಿ ಭರತ್ ಕುಮಾರ್ ಮತ್ತು ತನ್ವಿ ಅಮಿನ್ ಕೊಲ್ಯ ನಿರ್ಮಾಣ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ, ಕೆ.ಗಿರೀಶ್ ಕುಮಾರ್ ಸಂಕಲನ, ದೀಪಿತ್ ಬಿ.ಜೈ ರತ್ನಾಕರ್ ಛಾಯಾಗ್ರಾಹಣ ಚಿತ್ರಕ್ಕಿದೆ. ಕೃಷ್ಣಮೂರ್ತಿ ಕವತ್ತಾರ್, ಬೆನಕ ನಂಜಪ್ಪ, ಎಮ್.ಕೆ.ಮಠ, ನವೀನ್ ಕುಮಾರ್, ಆರ್.ವೆಂಕಟ್ ರಾಜು ಲಕ್ಷ್ಮಿ ಅರ್ಪಣ್, ಮುಖೇಶ್, ಡಾ.ಮನೋನ್ಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.