ನಿರ್ದೇಶಕ ಶ್ರೀರಾಮ್ ರಾಘವನ್ ಅವರ ಚಿತ್ರಗಳಲ್ಲಿ ಅವರ ಅಸಾಂಪ್ರದಾಯಿಕ ಶೈಲಿಯ ನಿರೂಪಣೆ, ಕುತೂಹಲ ಕೆರಳಿಸುವ ಚಿತ್ರವಿಚಿತ್ರ ನಡವಳಿಕೆಯ ಪಾತ್ರಗಳು, ನಿರೀಕ್ಷೆಗೂ ಮೀರಿ ಏನೋ ಒಂದು ಘಟಿಸಿಬಿಡುವುದು, ಯಾರೂ ಊಹೆ ಮಾಡಿಕೊಳ್ಳಲಾಗದ ಒಂದು ಫ್ಲಾಶ್‌ಬ್ಯಾಕ್ ಇವೆಲ್ಲವೂ ನೋಡುಗರಿಗೆ ಪಾಪ್‌ಕಾರ್ನ್ ಇದ್ದಂತೆ. ‘ಮೇರಿ ಕ್ರಿಸ್ಮಸ್’ ಚಿತ್ರದಲ್ಲೂ ಇದು ಮುಂದುವರೆದಿದೆ. ಹಿಂದಿ ಮತ್ತು ತಮಿಳು ದ್ವಿಭಾಷಾ ಸಿನಿಮಾ ‘ಮೇರಿ ಕ್ರಿಸ್ಮಸ್’ Netflixನಲ್ಲಿ ಸ್ಟ್ರೀಮ್ ಆಗುತ್ತಿದೆ.
ಕೌಟುಂಬಿಕ ಜೀವನದಲ್ಲಿ ಯಾವುದೇ ಸುಖವಿಲ್ಲದ ಹೆಣ್ಣುಮಗಳು ಮತ್ತು ನಿಗೂಢ ಹಿನ್ನೆಲೆಯ ವ್ಯಕ್ತಿ ಇವರಿಬ್ಬರ ಸುತ್ತ ಕ್ರಿಸ್ಮಸ್ ಮುನ್ನಾ ದಿನ ನಡೆಯುವ ನಿಗೂಢ ಘಟನೆಗಳ ಚಿತ್ರಣವೇ ‘ಮೇರಿ ಕ್ರಿಸ್ಮಸ್’ ಚಿತ್ರದ ತಿರುಳು. ಈ ದಿನಗಳಲ್ಲಿ ಬರುತ್ತಿರುವ ಚಿತ್ರಗಳನ್ನು ಗಮನಿಸಿದರೆ ಮೊತ್ತಮೊದಲು ನಮ್ಮ ಗಮನಕ್ಕೆ ಬರುವುದು ಅವುಗಳ ವೇಗವಾದ ಕಥಾನಿರೂಪಣೆಯ ಶೈಲಿ ಮತ್ತು ಸಂಕಲನದ ವಿನ್ಯಾಸ. ತೆರೆಯ ಮೇಲೆ ಏನು ನಡೆಯುತ್ತಿದೆ ಎಂದು ಅರ್ಥವಾಗುವ ಮುನ್ನವೇ ಸನ್ನಿವೇಶಗಳು ಚಕ್ಕನೆ ಬದಲಾಗುತ್ತಿರುತ್ತವೆ. ಬಹುಶಃ ವೀಕ್ಷಕರನ್ನು ಹಿಡಿದಿಡಲು ಈಗಿನ ನಿರ್ದೇಶಕರು ಈ ತಂತ್ರಕ್ಕೆ ಶರಣಾಗಿದ್ದಾರೆ ಎನಿಸುತ್ತೆ. ಆದರೆ ‘ಮೇರಿ ಕ್ರಿಸ್ಮಸ್’ ಚಿತ್ರ ಈ ವಿನ್ಯಾಸವನ್ನು ಅನುಸರಿಸದೆ ತನ್ನದೇ ಗತಿಯಲ್ಲಿ ಸಾವಕಾಶವಾಗಿ ಸಾಗುವುದು ನಿರ್ದೇಶಕ ಶ್ರೀರಾಮ್ ರಾಘವನ್ ಅವರ ಸೃಜನಶೀಲತೆಯ ಪರಿಚಯ ಆಗುತ್ತದೆ. ಈ ಹಿಂದೆಯೂ ವಿಭಿನ್ನ ಕಥಾಹಂದರ ಮತ್ತು ಕುತೂಹಲಕರ ನಿರೂಪಣೆಯ ಚಿತ್ರಗಳನ್ನು ಕೊಟ್ಟ ಶ್ರೀರಾಮ್ ಇಲ್ಲೂ ತಮ್ಮ ಕಂಫರ್ಟ್ ಜೋನ್ ಅನಿಸುವಂತಹ ಜಾಡನ್ನೇ ಆಯ್ಕೆ ಮಾಡಿಕೊಂಡು ನಿರೂಪಿಸಿದ್ದಾರೆ.
ಇಲ್ಲಿ ಹೆಚ್ಚು ಪಾತ್ರಗಳಿಲ್ಲ. ಇರುವ ಮೂರು ಮತ್ತೊಂದು ಪಾತ್ರಗಳಲ್ಲೇ ಮುಖ್ಯವಾಗಿ ಎರಡೇ ಪಾತ್ರಗಳ ಸುತ್ತ ಕಥೆ ಸುತ್ತುತ್ತದೆ. ವೈವಾಹಿಕ ಜೀವನದಲ್ಲಿ ನೊಂದ ಹೆಣ್ಣುಮಗಳು ಮತ್ತು ನಿಗೂಢ ಹಿನ್ನಲೆಯ ವ್ಯಕ್ತಿಯೊಬ್ಬನ ಸುತ್ತ ಕಥೆ ಗಿರಕಿ ಹೊಡೆಯುತ್ತದೆ. ಎಲ್ಲ ಪಾತ್ರಗಳೂ ಯಾವುದೇ ಅವಸರವಿಲ್ಲದೆ ತಮ್ಮದೇ ಗತಿಯಲ್ಲಿ ಪದರಪದರವಾಗಿ ವೀಕ್ಷಕರ ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತವೆ. ತಮ್ಮ ಜೊತೆಗೆ ನೋಡುಗರನ್ನು ಕೈ ಹಿಡಿದು ನಡೆಸಿಕೊಂಡು ಹೋಗುತ್ತವೆ. ಎಷ್ಟೇ ಬೇಡವೆಂದರೂ ಶ್ರೀರಾಮ್ ಅವರ ಹಿಂದಿನ ಚಿತ್ರ ‘ಅಂಧಾಧುನ್’ ಚಿತ್ರದ ವಿನ್ಯಾಸ ಇಲ್ಲಿ ನೆನಪಾಗದೇ ಇರುವುದಿಲ್ಲ. ಆದರೆ ‘ಅಂಧಾಧುನ್’ ಚಿತ್ರ ಮೊದಲನೇ ಅರ್ಧದಲ್ಲಿ ತನ್ನ ಕುತೂಹಲಗಳನ್ನು ಬಿಟ್ಟುಕೊಟ್ಟರೆ ‘ಮೇರಿ ಕ್ರಿಸ್ಮಸ್’ ನೋಡುಗರಿಗೆ ಎರಡನೇ ಅರ್ಧದಲ್ಲಿ ತನ್ನ ನಿಜರೂಪ ದರ್ಶನ ಮಾಡಿಸುತ್ತದೆ.
ಇದೇನಿದು ಕಥೆಯಲ್ಲಿ ಏನೂ ನಡೆದೇ ಇಲ್ಲವಲ್ಲ ಎಂದುಕೊಳ್ಳುವಷ್ಟರಲ್ಲೇ ಧುತ್ತನೆ ಅನಿರೀಕ್ಷಿತವೊಂದು ಎದುರಾಗುತ್ತದೆ. ಸಸ್ಪೆನ್ಸ್, ಥ್ರಿಲ್ ಇತ್ಯಾದಿ ಅಂಶಗಳನ್ನು ನಿರ್ದೇಶಕರು ಸಶಕ್ತವಾಗಿ ಬಳಸಿಕೊಂಡಿದ್ದಾರೆ. ಅಂದುಕೊಂಡ ರಿಸಲ್ಟ್ ಬಂದಿದೆಯೋ ಇಲ್ಲವೋ ಕಥೆಯಲ್ಲಿ ಆದರೆ ಕುತೂಹಲ ಮಾತ್ರ ಕೊನೆಯವರೆಗೂ ಉಳಿದುಕೊಳ್ಳುತ್ತದೆ. ಕಥೆಯಲ್ಲಿ ಎಷ್ಟೋ ಕಡೆ ಏನು ನಡೆಯುತ್ತಿದೆ ಎಂಬ ಗೊಂದಲ ವೀಕ್ಷಕರನ್ನು ಕಾಡಿದರೂ ಕುತೂಹಲ ಮಾತ್ರ ಕಡಿಮೆಯಾಗದ ಹಾಗೆ ನಿರೂಪಣೆ ಮಾಡಿದ್ದಾರೆ. ಇನ್ನು ನಟರ ಬಗ್ಗೆ ಯೋಚಿಸಿದರೆ ವಿಜಯ್ ಸೇತುಪತಿ ಮತ್ತು ಕತ್ರಿನಾ ಕೈಫ್ ಅವರ ಜೋಡಿಯ ಬಗ್ಗೆ ಆರಂಭದಿಂದಲೂ ಒಂದು ವಿಚಿತ್ರ ಕುತೂಹಲವಿತ್ತು. ಸಿನಿಮಾ ವೀಕ್ಷಿಸಿದಾಗ ಆ ಕುತೂಹಲಕ್ಕೆ ಉತ್ತರ ಸಿಗುತ್ತದೆ. ಕತೆಗೆ ಅವಶ್ಯಕವಾದ ಎಲ್ಲ ಆಯಾಮಗಳಿಗೂ ಈ ಇಬ್ಬರೂ ಕಲಾವಿದರು ಎಲ್ಲಾ ರೀತಿಯ ನ್ಯಾಯ ಒದಗಿಸುವಲ್ಲಿ ಸಫಲವಾಗಿದ್ದಾರೆ.
ಇನ್ನು ಕಥೆಯಲ್ಲಿ ಬಂದು ಹೋಗುವ ಇತರ ಪಾತ್ರಗಳೂ ಕತೆಯ ಆಶಯಕ್ಕೆ, ಓಘಕ್ಕೆ ಸ್ವಲ್ಪವೂ ಧಕ್ಕೆ ಬಾರದಂತೆ ಹುಷಾರಾಗಿ ನೇಯಲ್ಪಟ್ಟಿವೆ ಮತ್ತು ಪೋಷಿಸಲ್ಪಟ್ಟಿವೆ. ಅವುಗಳಿಗಿದ್ದ ಸೀಮಿತ ಅವಕಾಶದಲ್ಲೇ ಮಿಕ್ಕ ಪಾತ್ರಗಳು ಮನಸ್ಸಿನಲ್ಲಿ ನಿಲ್ಲುವಲ್ಲಿ ಯಶಸ್ವಿಯಾಗಿವೆ. ಇನ್ನು ಇದರ ಕಾಲಘಟ್ಟ, ಅದನ್ನು ನಿರೂಪಿಸಲು ಬಳಸಿರುವ ಬೆಳಕಿನ ವಿನ್ಯಾಸ, ಸ್ಥಳಗಳು, ವಸ್ತ್ರ ವಿನ್ಯಾಸ, ಪೂರಕ ಹಿನ್ನೆಲೆ ಸಂಗೀತ ಇವೆಲ್ಲವೂ ಪರಿಣಾಮಕಾರಿಯಾಗಿದ್ದು ಕತೆ ವೀಕ್ಷಕರ ಮೇಲೆ ಹೆಚ್ಚು ಪ್ರಭಾವ ಬೀರುವುದಕ್ಕೆ ಸಹಕಾರಿಯಾಗಿದೆ ಮತ್ತು ಕಥೆಯ ಸಣ್ಣಪುಟ್ಟ ಲೋಪದೋಷಗಳನ್ನು ಮುಚ್ಚುವಲ್ಲಿ ಸಹಕಾರಿಯಾಗಿವೆ. ಸುಮಾರು ಕಡೆ ಒಂದಷ್ಟು ಹಾಲಿವುಡ್ ಚಿತ್ರಗಳ ಛಾಯೆ ಕಂಡುಬಂದರೂ ಚಿತ್ರಕ್ಕೆ ತನ್ನದೇ ಆದ ಛಾಪು ಇರುವುದರಲ್ಲಿ ಸಂಶಯವಿಲ್ಲ.
ಚಿತ್ರದ ಒಂದು ಸನ್ನಿವೇಶದಲ್ಲಿ ಪಾತ್ರವೊಂದು ಪಾಪ್‌ಕಾರ್ನ್ ಇಲ್ಲದೇ ಚಿತ್ರ ನೋಡುವುದು ವ್ಯರ್ಥ ಎಂದು ಹೇಳುತ್ತದೆ. ಅದೇ ರೀತಿ ಶ್ರೀರಾಮ್ ರಾಘವನ್ ಅವರ ಚಿತ್ರಗಳಲ್ಲಿ ಅವರ ಅಸಾಂಪ್ರದಾಯಿಕ ಶೈಲಿಯ ನಿರೂಪಣೆ, ಕುತೂಹಲ ಕೆರಳಿಸುವ ಚಿತ್ರವಿಚಿತ್ರ ನಡವಳಿಕೆಯ ಪಾತ್ರಗಳು, ನಿರೀಕ್ಷೆಗೂ ಮೀರಿ ಏನೋ ಒಂದು ಘಟಿಸಿಬಿಡುವುದು, ಯಾರೂ ಊಹೆ ಮಾಡಿಕೊಳ್ಳಲಾಗದ ಒಂದು ಫ್ಲಾಶ್‌ಬ್ಯಾಕ್ ಇವೆಲ್ಲವೂ ನೋಡುಗರಿಗೆ ಪಾಪ್‌ಕಾರ್ನ್ ಇದ್ದಂತೆ. ಇದ್ಯಾವುದೂ ಇಲ್ಲದ ಅವರ ಚಿತ್ರಗಳನ್ನು ಊಹೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಒಂದು ವಿಭಿನ್ನ ಸಿನಿಮಾ ಅನುಭವಕ್ಕಾಗಿ ಹಾತೊರೆಯುವವರಿಗೆ ‘ಮೇರಿ ಕ್ರಿಸ್ಮಸ್’ ಚಿತ್ರ ಖಂಡಿತ ನಿರಾಸೆ ಮಾಡುವುದಿಲ್ಲ. ಸಿನಿಮಾ Netflixನಲ್ಲಿ ಸ್ಟ್ರೀಮ್ ಆಗುತ್ತಿದೆ.