ರಕ್ಷಣಾ ಕಾರ್ಯಾಚರಣೆಯ ಸುತ್ತ ಹೆಣೆದ ಕಥೆಗಳನ್ನು ಇನ್ನೂ ಆಸಕ್ತಿಕರವಾಗಿ ಮಾಡಬಹುದು. ಪಾತ್ರಗಳ ಅಂತರಂಗವನ್ನು ಇನ್ನೂ ಪರಿಣಾಮಕಾರಿಯಾಗಿ ಅನ್ವೇಷಿಸಬಹುದಿತ್ತು. ಭಾವನಾತ್ಮಕ ಆಯಾಮವನ್ನು ಕಟ್ಟಿಕೊಡಬಹುದಿತ್ತು. ಆದರೆ ನಿರ್ದೇಶಕ ಟೀನು ಸುರೇಶ್ ದೇಸಾಯಿ ಚಿತ್ರವನ್ನು ಬಹಳ ನಾಟಕೀಯವಾಗಿ ನಿರೂಪಿಸಿದ್ದು ಘಟನೆಯ ತೀವ್ರತೆ ಅಂದುಕೊಂಡ ಮಟ್ಟದಲ್ಲಿ ವೀಕ್ಷಕರನ್ನು ತಟ್ಟುವುದಿಲ್ಲ. ‘ಮಿಷನ್ ರಾಣಿಗಂಜ್’ ಹಿಂದಿ ಸಿನಿಮಾ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

1989ರಲ್ಲಿ ನಡೆದ ರಕ್ಷಣಾ ಕಾರ್ಯಚರಣೆಯೊಂದನ್ನು ಆಧರಿಸಿ ತೆಗೆದ ಚಿತ್ರ ‘ಮಿಷನ್ ರಾಣಿಗಂಜ್’. ಜಸ್ವಂತ ಸಿಂಗ್ ಗಿಲ್ ಅವರು ತಮ್ಮ ಪ್ರಾಣ ಪಣಕ್ಕಿಟ್ಟು ಪಶ್ಚಿಮ ಬಂಗಾಳದ ರಾಣಿಗಂಜ್‌ನ ಕಲ್ಲಿದ್ದಲು ಗಣಿಯಲ್ಲಿ ಪ್ರವಾಹದಲ್ಲಿ ಸಿಕ್ಕಿಬಿದ್ದ 65 ಮಂದಿ ಕೆಲಸಗಾರರನ್ನು ರಕ್ಷಿಸಿದ್ದರು. ಈ ಸಿನಿಮಾದ ಮೂಲಕ ದಿವಂಗತ ಜಸ್ವಂತ ಸಿಂಗ್ ಗಿಲ್ ಅವರಿಗೆ ಚಿತ್ರತಂಡ ಶ್ರದ್ಧಾಂಜಲಿ ಸಮರ್ಪಿಸಿದೆ.

ನವೆಂಬರ್ 13, 1989 – ರಾಣಿಗಂಜ್‌ನಲ್ಲಿರುವ ಮಹಾಬೀರ್ ಕಾಲನಿಯ ನಿವಾಸಿಗಳ ಪಾಲಿಗೆ ಕರಾಳ ದಿನ. ಕೆಲಸಗಾರರು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದರು. ನೆಲದ ಅಡಿಯಲ್ಲಿದ್ದ ನೀರಿನ ಪೈಪು ಒತ್ತಡ ಹೆಚ್ಚಾಗಿ ಒಡೆದು ಪ್ರವಾಹದಿಂದ 65 ಕೆಲಸಗಾರರು ಅಪಾಯಕ್ಕೆ ಸಿಲುಕಿದರು. ಆಗ ಇಂಜನಿಯರ್‌ ಜಸ್ವಂತ ಸಿಂಗ್ ಗಿಲ್ ಕಡಿಮೆ ಅವಧಿಯಲ್ಲೇ ರಕ್ಷಣಾ ಯೋಜನೆ ವಿನ್ಯಾಸ ಮಾಡಿ ಒಂದು ಬಾವಿಯನ್ನು ತೋಡಿ ಅದರ ಮೂಲಕ ಒಂದು ರಕ್ಷಣಾ ಕ್ಯಾಪ್ಸುಲ್ ಅನ್ನು ಅದರ ಒಳಗೆ ಇಳಿಬಿಟ್ಟು ಅಪಾಯದಲ್ಲಿ ಸಿಲುಕಿರುವವರ ರಕ್ಷಣೆ ಮಾಡುವ ವಿಧಾನವನ್ನು ಕಾರ್ಯಗತ ಮಾಡಿದ್ದರು. ಕ್ರೇನ್ ವ್ಯವಸ್ಥೆ ಇಲ್ಲದೇ, ಕೋಲ್ ಇಂಡಿಯಾ ಒಳಗಿನ ಭ್ರಷ್ಟಾಚಾರದ ವ್ಯವಸ್ಥೆಯ ಮಧ್ಯದಲ್ಲಿ ಗಿಲ್ ಮತ್ತು ಅವರ ತಂಡ ಅಷ್ಟೂ ಜನ ಕೆಲಸಗಾರರನ್ನು ಅಪಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಯ್ತು.

ನೈಜ ಘಟನೆಗಳನ್ನು ತೆರೆಯ ಮೇಲೆ ತಂದು ತೆರೆಮರೆಯ ನಾಯಕರ ಸಾಮರ್ಥ್ಯವನ್ನು ಬಿಚ್ಚಿಡುವುದು ಪ್ರಶಂಸಾರ್ಹ ವಿಷಯವಾದರೂ ಕಷ್ಟದ ಕೆಲಸವೂ ಹೌದು. ಕೂಡ. ಕಥೆಯನ್ನು ಹೇಗೆ ತೆರೆಯ ಮೇಲೆ ಅಳವಡಿಸುತ್ತಾರೆ ಎನ್ನುವುದೂ ಬಹಳ ಮುಖ್ಯವಾಗುತ್ತದೆ. ಅಪಾಯದ ಕ್ಷಣಗಳಲ್ಲಿ ಸಿಲುಕಿದಾಗ ಮನುಷ್ಯರ ಬುದ್ಧಿ ಮತ್ತು ಸ್ವಭಾವ ಹೇಗೆ ಕೆಲಸ ಮಾಡುತ್ತದೆ ಎನ್ನುವ ಸೂಕ್ಷ್ಮ ವಿಚಾರವನ್ನು ತೆರೆಯ ಮೇಲೆ ತೋರಿಸುವ ಅವಕಾಶ ಇದ್ದರೂ ಅದನ್ನು ಪರಿಪೂರ್ಣವಾಗಿ ಮತ್ತು ಸಮರ್ಥವಾಗಿ ಉಪಯೋಗಿಸಿಕೊಳ್ಳುವಲ್ಲಿ ಚಿತ್ರತಂಡ ಅಷ್ಟು ಸಫಲವಾಗಿಲ್ಲ ಎಂದು ಹೇಳಬಹುದು.

ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಭಾರತದ ಇತಿಹಾಸದಲ್ಲಿ ನಡೆದ ಒಂದು ಕರಾಳ ಘಟನೆಯನ್ನು ತೆರೆಗೆ ತರುವಲ್ಲಿ ಒಂದು ನಿರ್ದಿಷ್ಟ ವಿನ್ಯಾಸವನ್ನು ಇಟ್ಟುಕೊಂಡು ಈ ಚಿತ್ರವನ್ನು ಮಾಡಲಾಗಿದೆ. ಒಂದು ಪಂಜಾಬಿ ಮದುವೆಯ ಹಾಡಿನೊಂದಿಗೆ ಆರಂಭವಾಗುವ ಚಿತ್ರ ನಂತರದಲ್ಲಿ ನಾಯಕಿಯ ಎರಡು ದೃಶ್ಯಗಳೊಂದಿಗೆ ಮುಂದುವರಿದು ನಂತರ ನಾಯಕಿ ಕತೆಯಿಂದ ಕಣ್ಮರೆಯಾಗಿ ಕಥಾನಾಯಕನ ಪರಿಚಯವಾಗಿ ಒಂದು ಸಿನಿಮೀಯ ವೀರೋಚಿತ ಅಂತ್ಯದೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ. ನಾಯಕನ ಗುಣಗಾನದೊಂದಿಗೆ ಚಿತ್ರ ಮುಗಿಯುತ್ತದೆ. ಚಿತ್ರದ ಉದ್ದೇಶ ಚೆನ್ನಾಗಿದ್ದರೂ ಪಾತ್ರಗಳಲ್ಲಿ ಇನ್ನಷ್ಟು ಗಾಢತೆ ಇರಬೇಕಿತ್ತು ಎನಿಸುತ್ತದೆ. ಗಿಲ್ ಅವರ ಪಾತ್ರವನ್ನು ಆಳಕ್ಕೆ ಇಳಿದು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನೇ ಚಿತ್ರತಂಡ ಮಾಡಿಲ್ಲ ಎಂದೂ ಎನಿಸುತ್ತದೆ. ಆ ಪಾತ್ರದ ಬಗ್ಗೆ ಬರೀ ಮಾಹಿತಿ ಕಲೆ ಹಾಕಿದ್ದಾರೆಯೇ ಹೊರತು ಗಿಲ್ ಅವರ ಅಂತರಂಗವನ್ನು ಅರ್ಥ ಮಾಡಿಕೊಂಡಂತೆ ಭಾಸವಾಗುವುದಿಲ್ಲ.

ಚಿತ್ರದ ಮೊದಲನೇ ಅರ್ಧವಂತೂ ಬಹಳವೇ ಬಾಲಿಶವಾಗಿದೆ. ಯಾವ ಪಾತ್ರವನ್ನೂ ಸರಿಯಾಗಿ ಬೆಳೆಸಲಾಗಿಲ್ಲ. ನಿರ್ಮಾಣ ಮತ್ತು ದೃಶ್ಯವಿನ್ಯಾಸ ಕೂಡ ಸಾಧಾರಣವಾಗಿದೆ. ಪ್ರವಾಹದ ದೃಶ್ಯವಂತೂ ಕೃತಕವಾಗಿ ಮೂಡಿಬಂದಿದೆ. ರವಿ ಕಿಶನ್ ಥರದ ಅನುಭವಿ ನಟ ಕೂಡ ನಾಟಕೀಯವಾಗಿ ಅಭಿನಯಿಸಿದ್ದಾರೆ. ಯಾವ ಸಂಭಾಷಣೆಯೂ ಸನ್ನಿವೇಶದ ಗಂಭೀರತೆಯನ್ನು ಎತ್ತಿ ಹಿಡಿದಿಲ್ಲ. ಚಿತ್ರ ಎರಡನೇ ಅರ್ಧದಲ್ಲಿ ಸ್ವಲ್ಪ ವೇಗವನ್ನು ಪಡೆದುಕೊಂಡಿದ್ದರೂ ಆಂತರಿಕ ರಾಜಕೀಯದ ಸಣ್ಣತನಗಳಿಂದ ಆಸಕ್ತಿ ಉಳಿಸಿಕೊಳ್ಳುವುದಿಲ್ಲ. ನಾಯಕಿ ಪರಿಣೀತಿ ಚೋಪ್ರಾ ಅಂತೂ ಹೀಗೆ ಬಂದು ಹಾಗೆ ಹೋಗುತ್ತಾರೆ.

ಈ ರೀತಿಯಾದ ರಕ್ಷಣಾ ಕಾರ್ಯಾಚರಣೆಯ ಸುತ್ತ ಹೆಣೆದ ಕಥೆಗಳನ್ನು ಇನ್ನೂ ಆಸಕ್ತಿಕರವಾಗಿ ಮಾಡಬಹುದು. ಪಾತ್ರಗಳ ಅಂತರಂಗವನ್ನು ಇನ್ನೂ ಪರಿಣಾಮಕಾರಿಯಾಗಿ ಅನ್ವೇಷಿಸಬಹುದಿತ್ತು. ಭಾವನಾತ್ಮಕ ಆಯಾಮವನ್ನು ಕಟ್ಟಿಕೊಡಬಹುದಿತ್ತು. ಆದರೆ ನಿರ್ದೇಶಕ ಟೀನು ಸುರೇಶ್ ದೇಸಾಯಿ ಚಿತ್ರವನ್ನು ಬಹಳ ನಾಟಕೀಯವಾಗಿ ನಿರೂಪಿಸಿದ್ದು ಘಟನೆಯ ತೀವ್ರತೆ ಅಂದುಕೊಂಡ ಮಟ್ಟದಲ್ಲಿ ವೀಕ್ಷಕರನ್ನು ತಟ್ಟುವುದಿಲ್ಲ. ರಕ್ಷಣಾ ಕಾರ್ಯಾಚರಣೆ ಮಾಡುವ ಕೆಲಸ ಸುಲಭವಲ್ಲ. ಪ್ರಾಣವನ್ನು ಒತ್ತೆಯಿಟ್ಟು ಜಸ್ವಂತ ಸಿಂಗ್ ಗಿಲ್ ಅವರ ಸಾಧನೆಯನ್ನು ತೆರೆಯ ಮೇಲೆ ತೋರಿಸಲು ಹೊರಟ ಪ್ರಯತ್ನ ಖಂಡಿತ ಅಭಿನಂದನಾರ್ಹ. ಆದರೂ ಇನ್ನಷ್ಟು ಪಕ್ವತೆಯನ್ನು ನಿರೀಕ್ಷಿಸಿದ್ದ ವೀಕ್ಷಕರಿಗೆ ತುಸು ನಿರಾಸೆಯಾಗಿರುವುದೂ ಹೌದು. ‘ಮಿಷನ್ ರಾಣಿಗಂಜ್’ ಚಿತ್ರವನ್ನು ಒಮ್ಮೆ ನೋಡಲಡ್ಡಿಯಿಲ್ಲ. Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ ಸಿನಿಮಾ.

LEAVE A REPLY

Connect with

Please enter your comment!
Please enter your name here