ಸಾಮಾನ್ಯವಾಗಿ ಗಣಿತದಲ್ಲಿ Unknown factorಗೆ ಎಕ್ಸ್ ಎಂದು ಕರೆದುಕೊಳ್ಳುತ್ತೇವೆ. ತಮ್ಮ ಸಿನಿಮಾಗೆ ಮಿಸ್ಟರ್ ‘ಡಿ’ ಎಂದು ನಾಮಕರಣ ಮಾಡಿರುವ ನಿರ್ದೇಶಕರು ‘ಡಿ’ಗೆ ನಾನಾ ಅರ್ಥಗಳನ್ನು ಕೊಟ್ಟರು. ಹಾಗಾಗಿ ಇದು ‘ಡಿ’ನಾ ಅಥವಾ ‘ಎಕ್ಸಾ’ ಅನ್ನೋ ಗೊಂದಲವಂತೂ ಉಳಿದಿದೆ.
‘ಮಿಸ್ಟರ್ ಡಿ’ ಶೀರ್ಷಿಕೆಯ ಚಿತ್ರಕ್ಕೆ ಮುಹೂರ್ತವಾಗಿದೆ. ಚಿತ್ರದ ಬಗ್ಗೆ ಮಾತನಾಡುವಾಗ ‘ಡಿ’ ಅಂದರೇನು ಎಂಬುದಕ್ಕೆ ನಿರ್ದೇಶಕ ರಮೇಶ್ ಥರೇಹಾವಾರಿ ವ್ಯಾಖ್ಯಾನಗಳನ್ನು ನೀಡಿದರು. ಒಬ್ಬ ವ್ಯಕ್ತಿ ಅಥವಾ ಆತನ ಗುಣವನ್ನು ಸಾಂಕೇತಿಸುವ ಅಕ್ಷರವಾಗಿ ‘ಡಿ’ ಬಳಕೆಯಾಗಿದೆಯಂತೆ. ಡಿಟೆಕ್ಟೀವ್, ಡಾಟರ್, ಡ್ಯಾಡಿ, ಡೈಮೆನ್ಶನ್.. ಹೀಗೆ ‘ಡಿ’ಗೆ ನಾನಾ ಅರ್ಥಗಳಂತೆ. ಇಲ್ಲಿ ಕಥಾನಾಯಕ ಡಿಟಕ್ಟೀವ್. ಹಾಗಾಗಿ ಸದ್ಯಕ್ಕೆ ‘ಡಿ’ ಅಂದರೆ ಡಿಟಕ್ಟೀವ್ ಎಂದಿಟ್ಟುಕೊಳ್ಳಬಹುದು. ‘ಮಿಸ್ಟರ್ ಡಿ’ಗೆ ಇನ್ನೂ ಕಲಾವಿದರ ಆಯ್ಕೆ ನಡೆದಿಲ್ಲ. ‘ಡಿ’ ಗೆ ದಿನ ಚೆನ್ನಾಗಿದೆ ಎಂಬ ಕಾರಣಕ್ಕೆ ಮುಹೂರ್ತ ನೆರವೇರಿದೆ. ಸಿ.ಸಿ.ರಮೇಶ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
“ಸಮಾಜಘಾತುಕರನ್ನು ಪತ್ತೆದಾರಿಯೊಬ್ಬ ಹೇಗೆ ತನ್ನ ಚಾಣಾಕ್ಷತನದಿಂದ ಮಟ್ಟ ಹಾಕುತ್ತಾನೆ ಎನ್ನುವುದೇ ಮಿಸ್ಟರ್ ಡಿ ಕಥೆ” ಎನ್ನುವ ವಿವರಣೆ ನೀಡಿದರು ನಿರ್ದೇಶಕ. “ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಳ್ಳೆಯತನ, ರಾಕ್ಷಸತ್ವ, ದೈವತ್ವ ಎಲ್ಲವೂ ಇದ್ದೇ ಇರುತ್ತದೆ. ‘ಮಿಸ್ಟರ್ ಡಿ’ ಇಂಥ ಎಲ್ಲಾ ಸ್ವಭಾವಗಳ ಹಿನ್ನೆಲೆಯಲ್ಲಿ ಮೂಡಿ ಬರುವ ಚಿತ್ರ, ಒಂದು ರೀತಿಯಲ್ಲಿ ಸತ್ಯದ ಹುಡುಕಾಟ ಎನ್ನಬಹುದು” ಎನ್ನುತ್ತಾರವರು. ಎಸ್.ಎ.ಗೋವಿಂದರಾಜ್, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‍ಕುಮಾರ್ ಮುಹೂರ್ತಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. ಅರ್ಜುನ್ ಜನ್ಯಾ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಅಣಜಿ ನಾಗಾರಾಜ್ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.