ಒಬ್ಬ ಹಂತಕನನ್ನು ಬಂಧಿಸಲು ಇಷ್ಟೆಲ್ಲ ಸಶಕ್ತ ಪಡೆಗಳು ಇದ್ದಾಗಲೂ ಅವನನ್ನು ಮಣಿಸಲು ಆಗದೇ ಅಷ್ಟೊಂದು ನರಬಲಿ ಆಗುವಂತೆ ಮಾಡಿದ ನಮ್ಮ ವ್ಯವಸ್ಥೆಯ ದೌರ್ಬಲ್ಯ ಮತ್ತು ಅಸಹಾಯಕತೆ ಸಣ್ಣಗೆ ಒಂದು ದಿಗಿಲನ್ನು ಹುಟ್ಟಿಸುತ್ತದೆ. ಇಲ್ಲಿ ಘಟನೆಗಳು ಅವವೇ ಆದರೂ ಬಲಿ ಆದವರು ಮತ್ತು ಬಲಿ ತೆಗೆದುಕೊಂಡವರ ವಿಭಿನ್ನ ದೃಷ್ಟಿಕೋನಗಳನ್ನು ವೀಕ್ಷಕರ ಮುಂದೆ ತೆರೆದಿಡಲಾಗಿದೆ. ಖಳನಾಯಕ ವೀರಪ್ಪನ್ ಬೇಟೆಯ ಕಥಾನಕ ‘The hunt for Veerappan’ Netflixನಲ್ಲಿ ಲಭ್ಯವಿದೆ.

ವೀರಪ್ಪನ್! ಅದು ಕೇವಲ ಹೆಸರಲ್ಲ.ಎರಡು ರಾಜ್ಯಗಳನ್ನು ದಶಕಗಳ ಕಾಲ ಅಕ್ಷರಶಃ ನಡುಗಿಸಿದ ದುಃಸ್ವಪ್ನ. ಯಾರೀ ವೀರಪ್ಪನ್? ಅಪರಾಧಿಯೋ, ಹೋರಾಟಗಾರನೋ, ನಾಯಕನೋ , ಖಳನಾಯಕನೋ ಅಥವಾ ತನ್ನ ಆಸೆಬುರುಕತನಕ್ಕೆ, ಕ್ರೂರತೆಗೆ ತಾನೇ ಬಲಿಯಾದ ಬಲಿಪಶುವೋ ಎಂಬಿತ್ಯಾದಿ ಅನೇಕ ದೃಷ್ಟಿಕೋನಗಳು ತೆರೆದುಕೊಳ್ಳುವಂತೆ ಮಾಡಿದ ವ್ಯಕ್ತಿ ಈ ವೀರಪ್ಪನ್. ದಂತಚೋರ, ಕಾಡುಗಳ್ಳ, ಗಂಧಚೋರ ಎಂಬಿತ್ಯಾದಿ ನಾಮಾಂಕಿತಗಳಿಂದ ಪರಿಚಿತನಾದ ವೀರಪ್ಪನ್ ಬಗ್ಗೆ ಸುಮಾರು ಚಲನಚಿತ್ರಗಳು ಬಂದು ಹೋಗಿವೆಯಾದರೂ ಆತನ ಕುರಿತಾದ ವಾಸ್ತವ ವಿಚಾರಗಳನ್ನು ನಿರೂಪಿಸುವ ಸರಣಿ ಬಂದಿರಲಿಲ್ಲ. ಆ ಕೊರತೆಯನ್ನು ‘The hunt for Veerappan’ ಸಾಕ್ಷ್ಯಚಿತ್ರ ಸರಣಿ ನೀಗಿಸುತ್ತದೆ. ಈ ಸರಣಿಯ ನಿರ್ದೇಶಕರು ಸೆಲ್ವಮಣಿ ಸೆಲ್ವರಾಜ್.

ವೀರಪ್ಪನ್ ಬದುಕಿದ ರೀತಿಯನ್ನು, ಅವನಿಂದ ಆದ ಅನಾಹುತಗಳನ್ನು, ಅವ್ಯವಹಾರಗಳನ್ನು, ದುರಂತಗಳನ್ನು ಪದರಪದರವಾಗಿ ನಾಲ್ಕು ಸಂಚಿಕೆಗಳಲ್ಲಿ ಬಿಚ್ಚಿಡುವ ಪ್ರಯತ್ನವನ್ನು ಮಾಡಿದ್ದಾರೆ ನಿರ್ದೇಶಕರು. ಸುಮಾರು ಎರಡು ದಶಕಗಳ ಕಾಲ ಕಾಡಿನ ಸಂಪತ್ತನ್ನು ಲೂಟಿ ಮಾಡಿದ, ಆನೆಗಳ ಸಂತತಿಯನ್ನು ನಾಶಮಾಡಿದ, ಲೆಕ್ಕವಿಲ್ಲದಷ್ಟು ಪೋಲೀಸರ ಹತ್ಯೆ ಮಾಡಿದ ವ್ಯಕ್ತಿಯ ಜೀವನ ಚಿತ್ರಣ ಈ ಸರಣಿಯಲ್ಲಿದೆ. ಪ್ರಾಯಶಃ ಭಾರತದ ಅತ್ಯಂತ ದುಬಾರಿ ಬೇಟೆ ಎಂದೇ ಕರೆಸಿಕೊಳ್ಳುವ ವೀರಪ್ಪನ್ ಬೇಟೆ ಕೊನೆಗೂ ಹೇಗಾಯ್ತು ಎಂದು ಸರಣಿಯಲ್ಲಿ ನೋಡಬಹುದು.

ಇಡೀ ಸಾಕ್ಷ್ಯಚಿತ್ರವನ್ನು ನಾಲ್ಕು ಸಂಚಿಕೆಗಳಲ್ಲಿ ವಿಂಗಡಿಸಿದ್ದಾರೆ. ಈ ಸರಣಿ ವೀರಪ್ಪನ್ ಮಡದಿ ಮುತ್ತುಲಕ್ಷ್ಮಿಯ ದೃಷ್ಟಿಕೋನದಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಮುತ್ತುಲಕ್ಷ್ಮಿ ಯಾರು, ವೀರಪ್ಪನ್ ಭೇಟಿ ಅವರೊಂದಿಗೆ ಹೇಗಾಯ್ತು ಎಂಬಿತ್ಯಾದಿ ವಿವರಗಳನ್ನು ಮುತ್ತುಲಕ್ಷ್ಮಿಯವರ ಮುಖಾಂತರವೇ ಹೇಳಿಸುತ್ತಾ ಹೋಗುತ್ತದೆ. 1989ರಲ್ಲಿ ವೀರಪ್ಪನ್ ಯಾರು ಎಂದು ಇನ್ನೂ ಯಾರಿಗೂ ಅಷ್ಟಾಗಿ ತಿಳಿದಿರದ ಸಮಯದಲ್ಲಿ ಹೇಗೆ ಮೊತ್ತ ಮೊದಲು ಅವರೆಡೆಗೆ ತಾನು ಆಕರ್ಷಿತಳಾದೆ, ಅವರನ್ನು ಮದುವೆಯಾದೆ ಎಂಬ ವಿವರಗಳು ಅವರ ಮಾತುಗಳಲ್ಲಿವೆ. ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಗಡಿಯ ಬಳಿಯಿರುವ ಗೋಪಿನಾಥಮ್ ಗ್ರಾಮ ಈತನ ನಿವಾಸಸ್ಥಳ. ಆದರೆ ಆ ಗ್ರಾಮದ ಯಾರೂ ಈತನ ಬಗ್ಗೆ ಯಾವ ವಿವರಗಳನ್ನೂ ಹಂಚಿಕೊಳ್ಳಲು ಸಿದ್ಧರಿರಲಿಲ್ಲ ಎನ್ನುವುದನ್ನು ಪತ್ರಕರ್ತರು ಮತ್ತು ಲೇಖಕರಾದ ಸುನಾದ್ ವಿವರಿಸುತ್ತಾ ಹೋಗುತ್ತಾರೆ.

ಇಲ್ಲಿಯವರೆಗೂ ಒಂದು ದೃಷ್ಟಿಕೋನ ನಿರೂಪಿತವಾದರೆ, ಇಲ್ಲಿಂದ ಮತ್ತೊಂದು ದೃಷ್ಟಿಕೋನ ಅನಾವರಣಗೊಳ್ಳುತ್ತಾ ಹೋಗುತ್ತದೆ. ಸುನಾದ್ ಅವರ ವಿವರಣೆಯ ಜೊತೆಗೆ ಆಗಿನ ಅರಣ್ಯಾಧಿಕಾರಿ ಆಗಿದ್ದ ಬಿ ಕೆ ಸಿಂಗ್ ಅವರು ವೀರಪ್ಪನ್ ನಡೆಸುತ್ತಿದ್ದ ದಂತಚೌರ್ಯದ ಚಟುವಟಿಕೆಗಳು ಮತ್ತು ಆನೆಗಳ ಮಾರಣಹೋಮದ ಬಗ್ಗೆ ಮಾಹಿತಿ ನೀಡುತ್ತಾ ಹೇಗೆ ವೀರಪ್ಪನ್ ಅವನ ಗ್ರಾಮಸ್ಥರ ವಿಶ್ವಾಸ ಸಂಪಾದಿಸಿದ್ದ ಅನ್ನುವುದನ್ನು ಹೇಳುತ್ತಾ ಹೋಗುತ್ತಾರೆ. ಹಾಗೆಯೇ ದಂತಚೋರ ನಿಧಾನವಾಗಿ ಗಂಧದ ಕಳ್ಳಸಾಗಾಣಿಕೆ ಮಾಡುವವನಾಗಿ ಬದಲಾದ ಘಟನೆಗಳನ್ನು ಸವಿವರವಾಗಿ ಹೇಳುತ್ತಾ ಹೋಗುತ್ತಾರೆ.

ಯಾವಾಗ ಪೊಲೀಸ್ ಅಧಿಕಾರಿಗಳ ಮೇಲೆ ವೀರಪ್ಪನ್ ದಾಳಿ ಶುರುವಾಗುತ್ತದೋ ಆಗ ಡಿಎಫ್‌ಓ ಶ್ರೀನಿವಾಸ್ ಅವರು ವೀರಪ್ಪನ್ ಬಳಗದ ಮನಸ್ಸು ಪರಿವರ್ತನೆ ಮಾಡಿ ಅವರೇ ಬಂದು ಶರಣಾಗುವ ಹಾಗೆ ಮಾಡುತ್ತೀನಿ ಎಂಬ ಶಪಥದೊಂದಿಗೆ ಗೋಪಿನಾಥಮ್ ಗ್ರಾಮಕ್ಕೆ ನಿಯೋಜಿಸಲ್ಪಡುತ್ತಾರೆ. ಶ್ರೀನಿವಾಸ್ ಹೇಗೆ ಗ್ರಾಮಸ್ಥರ ಅಚ್ಚುಮೆಚ್ಚಿನ ಅಧಿಕಾರಿ ಆಗಿದ್ದರು ಎಂಬುದರ ವಿವರಗಳು ನಿರೂಪಿತವಾಗಿವೆ. ಶ್ರೀನಿವಾಸ್ ಗ್ರಾಮದವರಿಗೆ ಹತ್ತಿರವಾದಷ್ಟೂ ವೀರಪ್ಪನ್‌ಗೆ ಅವರ ಬಗೆಗಿನ ವೈರತ್ವ ಜಾಸ್ತಿಯಾದ ವಿವರಗಳೂ, ಶ್ರೀನಿವಾಸ್ ಕಾರಣಕ್ಕೆ ವೀರಪ್ಪನ್ ಸಹೋದರಿ ಮಾರಿಯ ಮರಣವಾಯಿತೆಂದು ವೀರಪ್ಪನ್ ಆಪಾದಿಸಿ ಶ್ರೀನಿವಾಸರನ್ನು ಬರ್ಬರವಾಗಿ ಹತ್ಯೆ ಮಾಡಿದ ಮನಸ್ಸನ್ನು ಕಲಕುವ ಚಿತ್ರಣಗಳೂ ಈ ಸಾಕ್ಷ್ಯಚಿತ್ರದಲ್ಲಿ ದಾಖಲಾಗಿವೆ.

ಎರಡನೇ ಸಂಚಿಕೆಯಲ್ಲಂತೂ ವೀರಪ್ಪನ್ ಪೊಲೀಸ್ ಅಧಿಕಾರಿಗಳ ಮೇಲೆ ನಡೆಸಿದ ಮಾರಣಹೋಮ ಕಣ್ಣಿಗೆ ಕಟ್ಟುವಂತೆ ನಿರೂಪಿತವಾಗಿದೆ. ಟೈಗರ್ ಅಶೋಕ್ ಸಿಂಗ್ ಅವರು ಹರಿಕೃಷ್ಣ, ಶಕೀಲ್ ಅಹ್ಮದ್ ಸೇರಿದಂತೆ ಸ್ಪೆಷಲ್ ಟಾಸ್ಕ್ ಫೋರ್ಸ್ ಪೊಲೀಸ್ ಅಧಿಕಾರಿಗಳ ಹತ್ಯೆಯ ಬಗ್ಗೆ ವಿವರಿಸುತ್ತಿದ್ದರೆ ವೀರಪ್ಪನ್ ಕ್ರೂರತೆ ಹಾಗೇ ಕಣ್ಣಿಗೆ ಕಟ್ಟಿದಂತಾಗಿ ಹೃದಯ ನಡುಗುತ್ತದೆ. ಎರಡು ರಾಜ್ಯಗಳ ವ್ಯವಸ್ಥೆಯ ವಿರುದ್ಧ ನಿಂತು ತನ್ನ ಅಪರಾಧಗಳ ಸರಣಿಯನ್ನು ಎಗ್ಗಿಲ್ಲದೇ ಮುಂದುವರೆಸಿದ ವೀರಪ್ಪನ್ ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ ವಿವರಗಳು ಈ ಸರಣಿಯಲ್ಲಿವೆ.

ಮೂರನೇ ಸಂಚಿಕೆ ಡಾ ರಾಜಕುಮಾರ್ ಅವರ ಅಪಹರಣದ ಕುರಿತಾದ ವಿವರಗಳನ್ನು ನೀಡಿದೆ. ಅಪಹರಣದ ಹಿಂದೆ ವೀರಪ್ಪನ್ ಜೊತೆ ಕೈಜೋಡಿಸಿದ ನಕ್ಸಲ್ ನಾಯಕರು ಯಾರು? ಅವರ ಉದ್ದೇಶಗಳು ಏನಿದ್ದವು? ಎಲ್ಲದರ ಕುರಿತು ವಿವರಗಳು ಇವೆ. ಮಾಜಿ ನಕ್ಸಲ್ ನಾಯಕರೊಬ್ಬರ ಮಾತುಗಳು ಕೂಡ ಇಲ್ಲಿ ದಾಖಲಾಗಿವೆ. ಆದರೆ ರಾಜ್ ಕುಟುಂಬದ ಯಾರೊಬ್ಬರ ಹೇಳಿಕೆಗಳೂ ಈ ಸಾಕ್ಷ್ಯಚಿತ್ರದಲ್ಲಿ ದಾಖಲಾಗಿಲ್ಲ. ಅಪಹರಣದ ಕುರಿತಾದ ಮಾಹಿತಿ ಎಲ್ಲವೂ ಆಗಿನ ಮುಖ್ಯವಾಹಿನಿಗಳಲ್ಲಿ ಬಂದಂತಹ ಸುದ್ದಿಗಳೇ ಹೊರತಾಗಿ ತೀರಾ ಗೊತ್ತಿಲ್ಲದ ಹೊಸ ವಿಚಾರ ಎನಿಸುವಂತಹ ಯಾವ ವಿವರಗಳೂ ಇದರಲ್ಲಿ ದಾಖಲಾಗಿಲ್ಲ. ಕೃಪಾಕರ ಸೇನಾನಿ ಅವರ ಅಪಹರಣದ ವಿವರಗಳು ಕೂಡ ಇಲ್ಲಿ ದಾಖಲಾಗಿಲ್ಲ.

ಶಂಕರ್ ಬಿದರಿಯವರ ಕೆಲಸದ ವಿವರಗಳು, ಅವರ ಕಠಿಣ ನಡೆ, ಮುತ್ತುಲಕ್ಷ್ಮಿಯ ಮೇಲೆ ಆದ ಪೊಲೀಸ್ ದೌರ್ಜನ್ಯದ ವಿವರಗಳು, ವೀರಪ್ಪನ್ ಮತ್ತವನ ತಂಡದ ಬಗ್ಗೆ ವೀಕ್ಷಕನ ಕಠಿಣ ದೃಷ್ಟಿಕೋನವನ್ನು ಸ್ವಲ್ಪ ಮೆತ್ತಗಾಗುವಂತೆ ಮಾಡಿರುವುದು ತುಸು ಉದ್ದೇಶಪೂರ್ವಕವೇನೋ ಎನಿಸುತ್ತದೆ ಅನ್ನುವುದನ್ನು ಬಿಟ್ಟರೆ ಇಡೀ ಸಾಕ್ಷ್ಯಚಿತ್ರದ ನಿರೂಪಣೆ ಬಹಳ ಬಿಗಿಯಾಗಿದ್ದು ವೀಕ್ಷಕರನ್ನು ಕೊನೆಯ ತನಕ ಹಿಡಿದಿಡುವಲ್ಲಿ ಸಫಲವಾಗಿದೆ. ಇಲ್ಲಿ ಒಂದು ಕಡೆ ವೀರಪ್ಪನ್ ಅವರ ಪತ್ನಿಯ ದೃಷ್ಟಿಕೋನದಲ್ಲಿ ವಿವರಗಳು ದಾಖಲಾದರೆ ಮತ್ತೊಂದು ಕಡೆ ವೀರಪ್ಪನ್ ಬೇಟೆಯಲ್ಲಿ ಸಕ್ರಿಯ ಪಾತ್ರ ವಹಿಸಿದ ಅಧಿಕಾರಿಗಳ ಮತ್ತು ಪತ್ರಕರ್ತರ ದೃಷ್ಟಿಕೋನ ಸಮಾನಾಂತರವಾಗಿ ದಾಖಲಾಗುತ್ತಾ ಹೋಗುತ್ತದೆ. ನಿರೂಪಣೆಯನ್ನು ತಟಸ್ಥವಾಗಿ ಇಟ್ಟುಕೊಂಡು ಹೋಗುವ ಪ್ರಯತ್ನ ಮಾಡಿದ್ದು ಯಾವ ಕಡೆಯೂ ಜಾಸ್ತಿ ವಾಲದೇ ವಸ್ತುಚಿತ್ರಣಕ್ಕೆ ಮಾತ್ರ ಒತ್ತುಕೊಟ್ಟು ಸಾಕ್ಷ್ಯಚಿತ್ರ ಮುಗಿಸಿದ್ದಾರೆ. ಇಲ್ಲಿ ಬಳಕೆಯಾದ ದಟ್ಟವಾದ ಕಾಡಿನ ಚಿತ್ರಣ ಮತ್ತು ಹಿನ್ನೆಲೆ ಸಂಗೀತ ಸಾಕ್ಷ್ಯಚಿತ್ರದ ನಿರೂಪಣೆಯ ಧಾಟಿಗೆ ಪೂರಕವಾಗಿದೆ. ಸಂಕಲನ ಕೂಡ ಬಹಳ ಬಿಗಿಯಾಗಿದೆ.

ಒಬ್ಬ ಹಂತಕನನ್ನು ಬಂಧಿಸಲು ಇಷ್ಟೆಲ್ಲ ಸಶಕ್ತ ಪಡೆಗಳು ಇದ್ದಾಗಲೂ ಅವನನ್ನು ಮಣಿಸಲು ಆಗದೇ ಅಷ್ಟೊಂದು ನರಬಲಿ ಆಗುವಂತೆ ಮಾಡಿದ ನಮ್ಮ ವ್ಯವಸ್ಥೆಯ ದೌರ್ಬಲ್ಯ ಮತ್ತು ಅಸಹಾಯಕತೆ ಸಣ್ಣಗೆ ಒಂದು ದಿಗಿಲನ್ನು ಹುಟ್ಟಿಸುತ್ತದೆ. ಇಲ್ಲಿ ಘಟನೆಗಳು ಅವವೇ ಆದರೂ ಬಲಿ ಆದವರು ಮತ್ತು ಬಲಿ ತೆಗೆದುಕೊಂಡವರ ವಿಭಿನ್ನ ದೃಷ್ಟಿಕೋನಗಳನ್ನು ವೀಕ್ಷಕರ ಮುಂದೆ ತೆರೆದಿಡಲಾಗಿದೆ. ಅರ್ಥೈಸಿಕೊಳ್ಳುವ ಜವಾಬ್ದಾರಿ ವೀಕ್ಷಕರದ್ದು.
ಸರಣಿ ಮುಗಿದ ನಂತರ ಇವೆಲ್ಲ ವಿವರಣೆಗಳನ್ನು ಮೀರಿ ಮನಸ್ಸಲ್ಲಿ ನಿಲ್ಲೋದು ಅಸಹಾಯಕ ಆನೆಗಳ ಆರ್ತನಾದ, ರಕ್ತಸಿಕ್ತ ಅಧ್ಯಾಯದ ದೃಶ್ಯಾವಳಿಗಳು ಮತ್ತು ವೀರಪ್ಪನ್ ಕ್ರೂರತೆಗೆ ಬಲಿಪಶುಗಳಾದ ಆತ್ಮಗಳ ಅಸಹಾಯಕ ಕೂಗು ಮಾತ್ರ. ಖಳನಾಯಕ ವೀರಪ್ಪನ್ ಬೇಟೆಯ ಕಥಾನಕ ‘The hunt for Veerappan’ Netflixನಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here