ಕಾಯಿರಸ, ಡೋನಟ್, ಅಪ್ಪನ್ ಡೈರೆಕ್ಷನ್ ಹೇರ್ ಸ್ಟೈಲ್ ಬೈ ಕೃಷ್ಣಣ್ಣ, ಶಬರಿ, ಹಬ್ಬ ಹರಿದಿನ ಸುಗ್ಗಿ ಶಿವರಾತ್ರಿ, THE LAST TIME I SAW THE MOON ಚಂದ್ರ, ಕಲ್ಲರ್ ಕನ್ನಡ್ಕ… ಊರ್‌ಮನೆ ಪ್ರೊಡಕ್ಷನ್ಸ್‌ನಡಿ ತಯಾರಾಗಿರುವ ಕಿರುಚಿತ್ರಗಳಿವೆ. ಈ ಚಿತ್ರಗಳ ಯುವ ನಿರ್ದೇಶಕರು ನಿನ್ನೆ ‘ಊರ್‌ಮನೆ ಹಬ್ಬ’ ಶೀರ್ಷಿಕೆಯಡಿ ಇವುಗಳನ್ನು ಪ್ರದರ್ಶಿಸಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು.
ಪುಟ್ಟ ವಿಷಯವೊಂದನ್ನು ಪ್ರಭಾವಶಾಲಿಯಾಗಿ ದಾಟಿಸಬಲ್ಲ ಮಾಧ್ಯಮ ಕಿರುಚಿತ್ರ. ವಿಶ್ಯುಯಲ್ ಮೀಡಿಯಾದೆಡೆ ಆಸಕ್ತಿಯಿರುವ ಸೃಜನಶೀಲರು ತಯಾರಿಸುತ್ತಿರುವ ಇಂತಹ ಕಿರುಚಿತ್ರಗಳು ಗಮನ ಸೆಳೆಯುತ್ತಿವೆ. ಬಜೆಟ್, ತಂತ್ರಜ್ಞರು ಹಾಗೂ ಕಲಾವಿದರ ಮಿತಿಗಳ ಮಧ್ಯೆ ತಯಾರಿಸಬಹುದಾದ ಈ ಕಿರುಚಿತ್ರಗಳು ಸೃಜನಶೀಲ ಮನಸುಗಳ ಸಿನಿಮಾ ಕನಸಿಗೆ ದಾರಿಯಾಗುತ್ತವೆ. ಅಂತಹ ಏಳು ಕಿರುಚಿತ್ರಗಳು ನಿನ್ನೆ ಪ್ರದರ್ಶನಗೊಂಡವು. ಅನೀಶ್ ಹಾಗೂ ಸಂಗಡಿಗರು ಊರ್‌ಮನೆ ಪ್ರೊಡಕ್ಷನ್ಸ್ ಎನ್ನುವ ಸಣ್ಣ ಪ್ರೊಡಕ್ಷನ್ ಹೌಸ್ ತೆರೆದು ಈ ಚಿತ್ರಗಳನ್ನು ತಯಾರಿಸಿದ್ದಾರೆ. ಪುಟ್ಟ ಊರುಗಳಲ್ಲಿ ನಡೆದ, ನೆಡೆಯುತ್ತಿರುವ ಸಣ್ಣಪುಟ್ಟ ಸಂಗತಿಗಳಿಗೆ ದೃಶ್ಯರೂಪ ಕೊಟ್ಟು, ಕಿರುಚಿತ್ರಗಳನ್ನು ರಚಿಸಿದ್ದಾರೆ. ‘ಊರ್‌ಮನೆ ಹಬ್ಬ’ ಶೀರ್ಷಿಕೆಯಡಿ ನಿನ್ನೆ ಈ ಕಿರುಚಿತ್ರಗಳು ಪ್ರದರ್ಶನಗೊಂಡವು. ಕಾಯಿರಸ, ಡೋನಟ್, ಅಪ್ಪನ್ ಡೈರೆಕ್ಷನ್ ಹೇರ್ ಸ್ಟೈಲ್ ಬೈ ಕೃಷ್ಣಣ್ಣ, ಶಬರಿ, ಹಬ್ಬ ಹರಿದಿನ ಸುಗ್ಗಿ ಶಿವರಾತ್ರಿ,THE LAST TIME I SAW THE MOON ಚಂದ್ರ, ಕಲ್ಲರ್ ಕನ್ನಡ್ಕ… ಪ್ರದರ್ಶನಗೊಂಡ ಏಳು ಕಿರುಚಿತ್ರಗಳು. ಪ್ರದರ್ಶನದ ನಂತರ ಪ್ರೇಕ್ಷಕರೊಂದಿಗೆ ಸಂವಾದ ನಡೆಯಿತು.
ನಮ್ಮ ನಿಮ್ಮ ಊರುಗಳಲ್ಲಿ ನಾವು ಕಾಣಬಹುದಾದಂತಹ ಮಾದೇವ, ರಂಗ, ಸಿದ್ದ, ಅವಿನಾಶ, ಕೆಂಪಜ್ಜಿ, ಮಾಲ್ತೇಶಣ್ಣ, ಗಣೇಶ, ಶಂಕರಣ್ಣ, ಮಂಜಪ್ಪ ಇವರೇ ಇಲ್ಲಿ ಕಥಾನಾಯಕರು. ನಾವು ನೀವು ಕಂಡು ಅನುಭವಿಸಿರುವಂತಹ ಸಂಗತಿಗಳೇ ಕಥೆಗಳು. ಊರು-ಕೇರಿ, ಹೊಲ-ಗದ್ದೆ, ಸಂಸ್ಕಾರ, ಸಂಪ್ರದಾಯಗಳನ್ನು ಆಧರಿಸಿ ಕತೆಕಟ್ಟಿ ತೆರೆಮೇಲೆ ತಂದಿದ್ದಾರೆ. ಇವರ ಈ ಪ್ರಯತ್ನ ಅಥವಾ ಪ್ರಯೋಗ ಪ್ರಶಂಸನೀಯ. ಕಿರುಚಿತ್ರಗಳ ನಿರ್ದೇಶಕರಾದ ಅನೀಶ್ ಎಸ್. ಶರ್ಮ, ನವೀನ್ ತೇಜಸ್ವಿ, ಶರತ್ ರೈಸದ್, ಶ್ರೀಕರ ಭಟ್, ದೀಪಕ್ ರಾಮ್, ನಿಖಿಲ್ ವಿನಯ್, ಅಶ್ವತ್ ಕೆ.ಆರ್. ಅಭಿನಂದನಾರ್ಹರು. ಕತೆ, ನೇಟಿವಿಟಿಗೆ ಹೊಂದುವಂತೆ ಬೇರೆ ಬೇರೆ ಊರುಗಳಲ್ಲಿ ಚಿತ್ರಿಸಿರುವ ಕಿರುಚಿತ್ರಗಳು ಒಂದಕ್ಕಿಂತ ಒಂದು ಚೆಂದ ಅನಿಸಿ ಮನಸ್ಸಿಗೆ ಹತ್ತಿರವಾದವು. ಒಂದೊಂದೂ ಒಂದೊಂದು ಬಗೆ. ಹಬ್ಬ ಹರಿದಿನ ಸುಗ್ಗಿ ಶಿವರಾತ್ರಿ, THE LAST TIME I SAW THE MOON ಚಂದ್ರ, ಕಾಯಿರಸ… ಈ ಮೂರು ವೈಯಕ್ತಿಕವಾಗಿ ನನಗೆ ತುಂಬಾ ಹಿಡಿಸಿದ ಕಿರುಚಿತ್ರಗಳು. ಇಲ್ಲಿ ಅವರು ಹೇಳಲುಹೊರಟ ವಿಷಯಗಳು ಯಾವ ದೊಡ್ಡ ಸಿನಿಮಾಗಳಿಗೂ ಕಡೆಮೆಯಿಲ್ಲ ಎನ್ನುವಂತಿದ್ದವು. ಇವರುಗಳ ಈ ಪ್ರಯತ್ನ ಹೇಗಿತ್ತು ಎನ್ನುವುದಕ್ಕೊಂದು ಉದಾಹರಣೆ ಹೇಳುವುದಾದರೆ, ‘THE LAST TIME I SAW THE MOON ಚಂದ್ರ’ ಚಿತ್ರ ಪ್ರದರ್ಶನದ ನಂತರದ ಸಂವಾದದಲ್ಲಿ ಪ್ರೇಕ್ಷಕರೊಬ್ಬರು, “ನಿಮ್ಮ ಚಿತ್ರದ ವಿಷಯ ಮತ್ತು ಹೇಳಲು ಹೊರಟಿರುವ ಶೈಲಿ ಎಷ್ಟು ಚೆನ್ನಾಗಿದೆ ಎಂದರೆ.. ಚೀನಾ ನಿರ್ದೇಶಕ ವಾಂಗ್ ಬೀಯಿಂಗ್‌ನ ಚಿತ್ರಗಳನ್ನು ನೆನಪಿಸುತ್ತದೆ” ಎಂದರು.
‘ಹಬ್ಬ ಹರಿದಿನ ಸುಗ್ಗಿ ಶಿವರಾತ್ರಿ’ಯಲ್ಲಿ ತೆರೆದಿಟ್ಟಿರುವ ಗಂಭೀರ ವಿಷಯ ಆ ಪೊಲಿಟಿಕಲ್ ಸ್ಟೇಟ್‌ಮೆಂಟ್ ಮತ್ತು ಚಿತ್ರವನ್ನು ಕೊನೆಗೊಳಿಸಿದ ರೀತಿ ಉತ್ತಮ ಆಲೋಚನೆ ಅನಿಸಿತು. ಶಬರಿಯಂತೆ ಕಾಯೋ ಕೆಂಪಜ್ಜಿ ಕಾಡಿದಳು. ಕಾಯಿರಸ ಎನ್ನುವ ಕಿರುಚಿತ್ರ ಬಾಲ್ಯದಲ್ಲಿ ನಾವೇ ಮಾಡುತ್ತಿದ್ದ ಕಿತಾಪತಿಯನ್ನು ಇಷ್ಟು ರಿಯಲಿಸ್ಟಿಕ್ ಆಗಿ ತೆರೆ ಮೇಲೆ ತಂದಿದ್ದಾರಲ್ಲ ಅನಿಸಿತು. ತಮ್ಮೂರು, ಅಲ್ಲಿನ ಸಂಗತಿಗಳಿಗೆ ರೂಪ ಕೊಟ್ಟು ರೋಚಕ ಅನುಭವ ನೀಡುವ ಕತೆಗಳನ್ನು ನಿರೂಪಿಸಿದ್ದಾರೆ. ಹೆಚ್ಚಿನ ತಾಂತ್ರಿಕ ಸೌಲಭ್ಯ, ಆರ್ಥಿಕ ನೆರವು ಸಿಗುವಂತಾದರೆ ಇವರು ಖಂಡಿತ ಈ ಕತೆಗಳನ್ನು ಹಿರಿತೆರೆಯಲ್ಲಿ ಇನ್ನೂ ಪ್ರಭಾವಶಾಲಿಯಾಗಿ ಕಟ್ಟಿಕೊಡಲಬಲ್ಲರು ಎನ್ನುವುದು ಅಲ್ಲಿ ನೆರದಿದ್ದ ಬಹಳಷ್ಟು ಜನರ ಅಭಿಪ್ರಾಯವಾಗಿತ್ತು. ‘ರಾಮಾ ರಾಮಾ ರೇ’ ಮತ್ತು ‘ಒಂದಲ್ಲ ಎರಡಲ್ಲ’ ಸಿನಿಮಾಗಳ ನಿರ್ದೇಶಕರಾದ ಸತ್ಯ ಪ್ರಕಾಶ್, ಸಿನಿಮಾ ಮತ್ತು ರಂಗಭೂಮಿ ನಟರಾದ ಕಿರಣ್‌ನಾಯಕ್, ಸುಂದರ್ ಹಾಗೂ ಸಂಗೀತ ಸಂಯೋಜಕ ವಾಸು ಧೀಕ್ಷಿತ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಯುವ ನಿರ್ದೇಶಕರಿಗೆ ಶುಭ ಹಾರೈಸಿದರು.