ರಾಜಕುಮಾರ್ ಒಬ್ಬ ಉದ್ಧಾಮ ನಟ. ಅವರ ಆ ಕೊಡುಗೆ ಪೋಲಾಗದಂತೆ, ಯಾವುದೇ ಕಾರಣಕ್ಕೂ ನಷ್ಟವಾಗದಂತೆ ಕಾಪಾಡಿಕೊಂಡವರು ಪಾರ್ವತಮ್ಮ. ಮುತ್ತುರಾಜ್‌ರನ್ನು ರಾಜಕುಮಾರನನ್ನಾಗಿಯೇ ಉಳಿಸುವ ದಿಸೆಯಲ್ಲಿ ಅವರು ಅನುಭವಿಸಿದ ಸಂಕಟಗಳು, ಸವಾಲುಗಳು ಅದೆಷ್ಟಿರಬಹುದು. ಹಳ್ಳಿಗಾಡಿನ ಹೆಣ್ಣೊಬ್ಬಳು ಒರಟೊರಟಾಗಿ ಕಂಡರೂ ಆ ಒರಟುತನದ ತಾಯ್ತನದಲ್ಲಿಯೇ ಗಂಡನನ್ನೂ, ಮಕ್ಕಳನ್ನೂ ಕಾಪಾಡಿಕೊಂಡ ’ಬನದ ಕರಡಿ’ ಪಾರ್ವತಮ್ಮ.

ಏಪ್ರಿಲ್ ಎಂದರೆ ಕನ್ನಡಿಗರಿಗೆ ’ರಾಜ್’ ನೆನಪಿನ ಉತ್ಸವ. ಏಪ್ರಿಲ್ 12ರಂದು ರಾಜ್ ವಿದಾಯವನ್ನು, ಆ ದಿನದ ನೋವಿನ ನೆನಪನ್ನು ನೆನೆದು ಬಿಟ್ಟ ನಿಟ್ಟುಸಿರಿನ ಬಿಸಿ ಆರುವ ಹೊತ್ತಿಗೆ ಏಪ್ರಿಲ್ 24ರಂದು ರಾಜ್ ಹುಟ್ಟಿದ ದಿನ ಬರುತ್ತದೆ. ನಿನ್ನೆಯೆಲ್ಲಾ ರಾಜ್ ನೆನಪಿನಲ್ಲಿ, ಅವರ ಹಾಡಿನಲ್ಲಿ ಮಿಂದೆದ್ದಿದ್ದೇವೆ. ನನ್ನ ತಲೆಮಾರಿನವರಿಗೆ ರಾಜಕುಮಾರ್ ಎಂದರೆ ಏಕಮೇವ ಅದ್ವಿತೀಯ ನಾಯಕ. ಅದು ವಿಷ್ಣು ಇರಲಿ, ಅನಂತ್ ನಾಗ್ ಇರಲಿ, ಶಂಕರ್ ಇರಲಿ – ರಾಜಕುಮಾರ್ ನಂತರವೇ!

ನನ್ನ ಅಜ್ಜಿಯ ಮನೆ ಇದ್ದದ್ದು ನಂದಿಬೆಟ್ಟದ ತಪ್ಪಲಿನಲ್ಲಿ. ರಾಜಕುಮಾರ್ ಸಿನಿಮಾ ಬಿಡುಗಡೆಯಾದರೆ ಬಸ್, ಟ್ರ್ಯಾಕ್ಟರ್‌ಗಳನ್ನು ಮಾಡಿಕೊಂಡು, ಬುತ್ತಿ ಕಟ್ಟಿಕೊಂಡು ಜನ ಬೆಂಗಳೂರಿನ ದಾರಿ ಹಿಡಿಯುತ್ತಿದ್ದರು. ಅಪ್ಪನ ಬುಲೆಟ್ ಗುಟುರು ಹಾಕುತ್ತಾ ಸಜ್ಜಾಗುತ್ತಿತ್ತು. ಸಾಧಾರಣವಾಗಿ ಯಾವುದೇ ನಾಯಕನ ಬಗ್ಗೆ ಯಾವುದೋ ಒಂದು ವಯೋಮಾನದವರಿಗೆ ಹುಚ್ಚುಪ್ರೀತಿ ಇರುತ್ತದೆ. ಹಾಗೆ ಬೇರೆಬೇರೆ ವಯೋಮಾನದವರಿಗೆ ಬೇರೆಬೇರೆ ನೆಚ್ಚಿನ ನಾಯಕರಿರುತ್ತಾರೆ. ಕೆಲವು ಹೀರೋಗಳಿಗೆ ಹೆಣ್ಣುಮಕ್ಕಳು, ಕೆಲವರಿಗೆ ಪಡ್ಡೆ ಹುಡುಗರು ಅಭಿಮಾನಿಗಳಾಗಿರುತ್ತಾರೆ. ಆದರೆ ರಾಜಕುಮಾರ್ ಎಂದರೆ ಅಜ್ಜಿ, ತಾತ, ಅಪ್ಪ, ಅಮ್ಮ, ಚಿಕ್ಕಮ್ಮ, ಚಿಕ್ಕಪ್ಪ, ಸೋದರ ಮಾವಂದಿರು ಎಲ್ಲರಿಗೂ ಅಚ್ಚುಮೆಚ್ಚು. ಆಗೆಲ್ಲಾ ನಮ್ಮ ಕಣ್ಣುಗಳ ಮುಂದೆ ಇದ್ದದ್ದು ರಾಜಕುಮಾರ್ ಮತ್ತು ರಾಜಕುಮಾರ್ ಮಾತ್ರ.

ನಾವಿದ್ದ ಜಿಲ್ಲಾ, ತಾಲೂಕು ಕೇಂದ್ರಗಳಿಗೆ ರಾಜಕುಮಾರ್ ಚಿತ್ರಗಳು ಬರುವುದು ತಡವಾಗುತ್ತಿತ್ತು, ಹೀಗಾಗಿ ಬೆಂಗಳೂರಿಗೆ ಬಂದು, ಗಂಟೆಗಟ್ಟಲೆ ಸರತಿಯಲ್ಲಿ ಕಾದು ಮತ್ತೆ ಮತ್ತೆ ಆ ಚಿತ್ರಗಳನ್ನು ನೋಡುತ್ತಿದ್ದೆವು. ರಾಜಕುಮಾರ್ ಅವರ ರೂಪ, ನಿಲುವು, ಭಾಷೆ ಮತ್ತು ಪಾತ್ರಗಳಿಗೆ ಮನಸೋತಿದ್ದ ಕಾಲಕ್ಕೆ ಪಾರ್ವತಮ್ಮ ರಾಜಕುಮಾರ್ ಆಗ ನಮ್ಮ ಕಣ್ಣುಗಳಲ್ಲಿದ್ದ ಸುಕೋಮಲ, ಸಹಧರ್ಮಿಣಿಯ ಪಾತ್ರಕ್ಕೆ ಅಷ್ಟೇನೂ ಒಗ್ಗುತ್ತಿರಲಿಲ್ಲ. ಆದರೆ ನಿಧಾನವಾಗಿ ಅರ್ಥವಾಗಿದ್ದು, ನಾವು ಫೆಮಿನಿಸಂ ಬಗ್ಗೆ ಮಾತನಾಡುವ, ಮಹಿಳಾ ಉದ್ಯಮಿಗಳನ್ನು ಮೆಚ್ಚುಗೆಯಿಂದ, ಗೌರವದಿಂದ ನೋಡುತ್ತಿದ್ದ ಎಷ್ಟೋ ವರ್ಷಗಳಿಗೂ ಮೊದಲು ಪಾರ್ವತಮ್ಮ ಆ ಗಡಿಗಳನ್ನು ಮುಟ್ಟಿದ್ದಷ್ಟೇ ಅಲ್ಲ, ಅದನ್ನು ವಿಸ್ತರಿಸಿಕೊಂಡಿದ್ದರು.

ಅಧಿಕಾರದ ಸಮೀಕರಣ ಯಾವಾಗಲೂ ಪುರುಷ ಕೇಂದ್ರಿತವೇ ಆಗಿದ್ದ, ಈಗಲೂ ಬಹುಮಟ್ಟಿಗೆ ಹಾಗೆಯೇ ಉಳಿದಿರುವ ಚಿತ್ರರಂಗದಲ್ಲಿ ಹಳ್ಳಿಗಾಡಿನಿಂದ ಬಂದ, ಹತ್ತನೆಯ ತರಗತಿಯನ್ನು ಮುಗಿಸದ, ಈ ಮಹಿಳೆ ಹೊಸ ಭಾಷ್ಯವನ್ನೇ ಬರೆದರು. ರಾಜಕುಮಾರ್ ಎನ್ನುವ ಶಕ್ತಿಯ ಹಿಂದಿನ ಶಕ್ತಿ ಅವರು. ’ನಾವು ಇಂದಿಗೂ ಇನ್ನೊಬ್ಬ ರಾಜಕುಮಾರ್‌ರನ್ನು ಕಾಣಲಾಗಿಲ್ಲ ಎಂದರೆ ಅದಕ್ಕೆ ಒಂದು ಕಾರಣ ಇನ್ಯಾರ ಬಳಿಯೂ ಪಾರ್ವತಮ್ಮ ಇರಲಿಲ್ಲ’ ಎಂದು ಒಂದು ಸಲ ಜಯಮಾಲ ಹೇಳಿದ್ದರು. ಈ ವಾರದ ನನ್ನ ಬರವಣಿಗೆ ಕನ್ನಡದ ರಾಜಕುಮಾರನ ಆ ಮಹಾರಾಣಿಯನ್ನು ಕುರಿತು.

ಪಾರ್ವತಮ್ಮ, ಮುತ್ತುರಾಜನಿಗೆ ತಂದೆ ಆರಿಸಿದ ವಧು. ಮದುವೆಯಾಗಿ ಗಂಡನೊಂದಿಗೆ ಮದರಾಸಿನಲ್ಲಿ ನೆಲೆನಿಂತಾಗ ಪಾರ್ವತಮ್ಮ ಗಂಡನ ಇಡೀ ಕುಟುಂಬವನ್ನು ತನ್ನದಾಗಿಸಿಕೊಂಡಿದ್ದಷ್ಟೇ ಅಲ್ಲ, ಆ ಮನೆಯನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನೂ ತಮ್ಮ ಹೆಗಲಿಗೇರಿಸಿಕೊಂಡರು. ರಾಜಕುಮಾರ್ ಬದುಕಿನಲ್ಲಿ ಅವರ ಪಾತ್ರ ಅದೆಷ್ಟಿತ್ತು ಎಂದರೆ ಅವರನ್ನು ಬಿಟ್ಟು ಬದುಕನ್ನು ಬಹುಶಃ ರಾಜಕುಮಾರ್ ಊಹಿಸಿಕೊಳ್ಳಲೂ ಸಾಧ್ಯವಾಗದ ಮಟ್ಟಿಗೆ ಅವರು ವ್ಯಾಪಿಸಿಕೊಂಡಿದ್ದರು. ಮುತ್ತುರಾಜರನ್ನು ಕನ್ನಡದ ರಾಜಕುಮಾರನನ್ನಾಗಿಸುವಲ್ಲಿ ಅನೇಕ ಜನರ ಶ್ರಮ ಇದೆ. ಮನೆಯಲ್ಲಿ ಆ ರಥದ ನೊಗಕ್ಕೆ ಹೆಗಲು ಕೊಟ್ಟವರು ರಾಜಕುಮಾರ್ ತಮ್ಮ ವರದಪ್ಪನವರು ಮತ್ತು ಪಾರ್ವತಮ್ಮನವರು.

ಅಣ್ಣನ ವೃತ್ತಿಬದುಕಿನ ಕಾಲ್ ಶೀಟ್, ಚಿತ್ರಗಳ ಆಯ್ಕೆ ಇತ್ಯಾದಿಗಳಲ್ಲಿ ವರದಪ್ಪನವರು ನಿಂತರೆ, ಒಂದು ಹೆಜ್ಜೆ ಹಿಂದೆ ನಿಂತು ರಾಜಕುಮಾರ್ ಮನೆ ನೋಡಿಕೊಂಡಿದ್ದು ಪಾರ್ವತಮ್ಮ. ಆದರೆ ಅವರು ಹೆಜ್ಜೆ ಮುಂದಿಡಬೇಕಾಗಿ ಬಂದದ್ದು ಸುಮಾರು 80ರ ದಶಕದಲ್ಲಿ ಅನ್ನಿಸುತ್ತದೆ. ವೈಯಕ್ತಿಕ ಕಾರಣಗಳಿಗಾಗಿ ವರದಪ್ಪನವರು ಬೆಂಗಳೂರಿಗೆ ಬರುತ್ತಾರೆ. ಸುಮಾರು ಜನ ಇನ್ನೂ ರಾಜಪರ್ವ ಮುಗಿಯಿತು ಎಂದುಕೊಳ್ಳುತ್ತಾರೆ. ಒಬ್ಬಿಬ್ಬರು ನಿರ್ಮಾಪಕರು ರಾಜಕುಮಾರರನ್ನು ಹಾಕಿಕೊಂಡು ಚಿತ್ರ ಮಾಡಿ ನಷ್ಟವಾಯಿತು ಎಂದು ಹೇಳಿಕೊಂಡು ಓಡಾಡುತ್ತಾರೆ. ರಾಜಕುಮಾರ್‌ರನ್ನು ಹಣಿಯುವುದು ಹಲವರಿಗೆ, ಹಲವಾರು ಕಾರಣಗಳಿಗಾಗಿ ಬೇಕಾಗಿರುತ್ತದೆ. ಆ ಸಮಯದಲ್ಲಿ ರಾಜಕುಮಾರ್ ಸಹ ಅಧೀರರಾಗುತ್ತಾರೆ. ಊರಿಗೆ ಹಿಂದಿರುಗಿ, ವ್ಯವಸಾಯ ನೋಡಿಕೊಂಡಿರೋಣ ಎಂದು ತಯಾರಾಗುತ್ತಾರೆ.

ಆಗ ರಾಜಕುಮಾರ್ ಬೆನ್ನಿಗೆ ಆಲದಮರದಂತೆ ನಿಂತವರು ಪಾರ್ವತಮ್ಮ. ಯಾವುದೇ ಡಿಗ್ರಿ, ಅನುಭವ ಇಲ್ಲದಿದ್ದರೂ ಅವರ ಇನ್ಸ್ಟಿಂಕ್ಟ್ ಕೆಲಸ ಮಾಡುತ್ತದೆ. ಎಲ್ಲೋ ಏನೋ ತಪ್ಪಾಗುತ್ತಿದೆ, ಹೋದಲ್ಲಿ ಬಂದಲ್ಲಿ ಮುತ್ತಿಕೊಳ್ಳುವ ಜನರನ್ನು ನೋಡಿದರೆ ಚಿತ್ರಗಳು ಓಡುವುದಿಲ್ಲ ಎನ್ನುವ ಮಾತಿಗೆ ಅರ್ಥವೇ ಇಲ್ಲ ಎಂದು ಅವರ ಮನಸ್ಸಿಗೆ ಹೊಳೆಯುತ್ತದೆ. ಅವರು ರಾಜಕುಮಾರ್ ಅವರ ಬಳಿ ಕೇಳುವುದು ಮೂರು ವರ್ಷಗಳ ಸಮಯ. ಅಷ್ಟರಲ್ಲಿ ಸರಿಹೋಗದಿದ್ದರೆ ಊರಿಗೆ ವಾಪಸ್ಸಾಗೋಣ ಎನ್ನುತ್ತಾರೆ. ನನಗೆ ಅಚ್ಚರಿಯಾಗುವುದು, ಅಂತಹ ಸಮಯದಲ್ಲೂ ಅವರು ಹೇಗೋ ಗಂಡನನ್ನು ಹುರಿದುಂಬಿಸೋಣ, ಸದ್ಯಕ್ಕೆ ಈ ಕಂಟಕ ಕಳೆದರೆ ಸಾಕು ಎಂದು ಒಂದು ವರ್ಷ ಸಮಯ ಕೇಳುವುದಿಲ್ಲ! ಮೂರುವರ್ಷ ಕೇಳಿದರು ಎಂದರೆ ಅವರ ಮನಸ್ಸಿನಲ್ಲಿ ಆಗಲೇ ಒಂದು ಸ್ಪಷ್ಟ ಲೆಕ್ಕಾಚಾರ ಇರುತ್ತದೆ.

ಹುಬ್ಬಳಿ ಏರಿಯಾದಲ್ಲಿ ರಾಜಕುಮಾರ್ ಚಿತ್ರಗಳು ಓಡುವುದಿಲ್ಲ ಎನ್ನುವ ಕೊಂಕುಮಾತುಗಳಿಗೆ ಉತ್ತರವಾಗಿ ದ್ವಾರಕಾನಾಥ್, ಕೆ.ಎಚ್.ನಾಗರಾಜ್ ಮುಂತಾದವರ ಜೊತೆಯಲ್ಲಿ ಹುಬ್ಬಳ್ಳಿ ಪ್ರಾಂತ್ಯದಲ್ಲಿ ತಾವೇ ’ಚಂದ್ರಿಕಾ ಮೂವೀಸ್’ ಡಿಸ್ಟ್ರಿಬ್ಯೂಷನ್ ಆಫೀಸ್ ತೆಗೆಯುತ್ತಾರೆ. ಆಗ ಅಲ್ಲಿ ಬಿಡುಗಡೆಯಾದ ’ಗಿರಿಕನ್ಯೆ’ ಶತದಿನೋತ್ಸವ ಆಚರಿಸುತ್ತದೆ. ಇದರಿಂದ ಆ ಮಾರುಕಟ್ಟೆಯ ನಿಜವಾದ ಮೌಲ್ಯ ಬೆಳಕಿಗೆ ಬರುತ್ತದೆ. ಇದನ್ನು ನಾವು ಕೇವಲ ರಾಜಕುಮಾರ್ ಅವರ ಚಿತ್ರಗಳಿಗೆ ಅನ್ವಯಿಸಿ ನೋಡಬಾರದು. ಅಲ್ಲಿನ ಕನ್ನಡ ಚಿತ್ರಗಳ ಮಾರುಕಟ್ಟೆಯ ವಾಸ್ತವಾಂಶವನ್ನು ಪಾರ್ವತಮ್ಮನವರು ತೆರೆದಿಟ್ಟಾಗ ಇಡೀ ಕನ್ನಡ ಚಿತ್ರರಂಗ ಅದರ ಫಲಾನುಭವಿ ಆಯಿತು. ಪಾರ್ವತಮ್ಮನವರೇ ಒಂದು ಸಂದರ್ಶನದಲ್ಲಿ ಹೇಳಿರುವ ಪ್ರಕಾರ ಅದುವರೆವಿಗೂ ಅಬ್ಬಬ್ಬಾ ಎಂದರೆ ಚಿತ್ರಕ್ಕೆ ಒಂದೂವರೆ ಲಕ್ಷ ಕೊಡುತ್ತಿದ್ದ ಕಾಲದಲ್ಲಿ ’ಚಂದ್ರಿಕಾ ಮೂವಿಸ್’ ಒಳ್ಳೆಯ ಚಿತ್ರಗಳಿಗೆ ಎಂಟರಿಂದ ಹತ್ತು ಲಕ್ಷ ಕೊಟ್ಟು ವಿತರಣೆ ಪ್ರಾರಂಭಿಸಿತು. ವಿತರಕರು ಮಾಡುವ ಲಾಭದ ಸರಿಯಾದ ಅಂಶ ನಿರ್ಮಾಪಕನನ್ನು ತಲುಪಿದರೆ ಆ ಮೂಲಕ ಚಿತ್ರಗಳು ಹೆಚ್ಚಾಗುತ್ತವೆ, ಉದ್ಯಮ ಬೆಳೆಯುತ್ತದೆ ಎನ್ನುವ ದೂರದೃಷ್ಟಿ ಅವರಿಗಿತ್ತು.

ಇದು ಇಡಿಯಾದ ಮಾರುಕಟ್ಟೆಯ ವಿಷಯವಾಯಿತು. ಪಾರ್ವತಮ್ಮನವರು ರಾಜಕುಮಾರ್ ಚಿತ್ರಗಳ ಮಾರುಕಟ್ಟೆಯನ್ನೂ ಅಧ್ಯಯನ ಮಾಡುತ್ತಾರೆ. ಆ ಕಾಲಕ್ಕೆ ರಾಜಕುಮಾರ್ ವರ್ಷವೊಂದಕ್ಕೆ ಸುಮಾರು 10 – 15 ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರು. ಏಕಕಾಲಕ್ಕೆ ಅವರದೇ ನಾಲ್ಕೈದು ಚಿತ್ರಗಳು ಬಿಡುಗಡೆಯಾಗಿ ಅವರ ಚಿತ್ರಗಳಿಗೆ ಅವರ ಚಿತ್ರಗಳೇ ಪೈಪೋಟಿ ನೀಡುತ್ತಿದ್ದವು. ಅದರಲ್ಲಿ ಯಾವ ಚಿತ್ರ ಹೊಡೆತ ತಿಂದರೂ ಅದು ರಾಜಕುಮಾರ್ ಚಿತ್ರಗಳ ಕುಸಿತವೇ ಆಗುತ್ತಿತ್ತಲ್ಲದೆ, ನಿರ್ಮಾಪಕರಿಗೂ ನಷ್ಟವಾಗುತ್ತಿತ್ತು. ಆಗ ಪಾರ್ವತಮ್ಮನವರು ತಂದ ವ್ಯವಸ್ಥೆಯೇ ’ರಾಜಕುಮಾರ್ ಯೂನಿಟಿ’.

ಈ ವ್ಯವಸ್ಥೆಯ ಅನುಸಾರ ರಾಜಕುಮಾರ್ ಅವರ ಒಂದು ಚಿತ್ರದ ಬಿಡುಗಡೆಯಿಂದ ಅವರ ಇನ್ನೊಂದು ಚಿತ್ರದ ಬಿಡುಗಡೆಗೆ ಕನಿಷ್ಠ ಆರು ವಾರಗಳ ಅಂತರ ಇರುತ್ತಿತು. ಅಂದರೆ ಒಂದೂವರೆ ತಿಂಗಳಿನಲ್ಲಿ ಚಿತ್ರದ ಮೆಲೆ ಹಾಕಿದ ಸುಮಾರು ಬಂಡವಾಳ ವಾಪಸ್ ಬಂದಿರುತ್ತಿತ್ತು. ಯಾವುದೇ ಬ್ಯುಸಿನೆಸ್ ಸ್ಕೂಲ್ ವಿದ್ಯಾರ್ಥಿಗಿಂತ ಹೆಚ್ಚಾಗಿ ಅವರು ಮಾರುಕಟ್ಟೆಯನ್ನು ಅರಿತಿದ್ದರು. ಅವರ ಎಲ್ಲಾ ನಡೆಗಳ ಹಿಂದೆ ಒಂದು ಚಿಂತನೆ ಮತ್ತು ಚತುರತೆ ಇರುತ್ತಿತ್ತು. ಪಾರ್ವತಮ್ಮ ರಾಜಕುಮಾರ್ ಬೆನ್ನಿಗೆ ಹೇಗೆ ನಿಂತರೆಂದರೆ ಏಕಮೇವಾದ್ವಿತೀಯರಾಗಿದ್ದ ರಾಜಕುಮಾರ್‌ರನ್ನು ಉದ್ಯಮದ ಜನ ಸಹ ಏಕಮೇವಾದ್ವಿತೀಯ ಎಂದೇ ಒಪ್ಪಿಕೊಳ್ಳುವಂತೆ ಅವರು ನಿರೂಪಿಸಿ ತೋರಿಸಿದರು. ಅವರ ನಿರ್ಮಾಣದ, ರಾಜಕುಮಾರ್ ತ್ರಿಪಾತ್ರದಲ್ಲಿ ನಟಿಸಿದ ’ಶಂಕರ್ ಗುರು’ ಮೂಲಕ ಅವರು ಕೋಟಿ ರೂಗಳನ್ನು ಗಳಿಸಿದ ಮೊದಲ ಕನ್ನಡ ನಿರ್ಮಾಪಕರಾದರು.

ಚಂದ್ರಿಕಾ ಮೂವಿಸ್ ವಿತರಣಾ ಸಂಸ್ಥೆಯ ನಂತರ ಒಬ್ಬ ಉದ್ಯಮಿಯಾಗಿ ಪಾರ್ವತಮ್ಮನವರು ಇಟ್ಟ ಮುಂದಿನ ಹೆಜ್ಜೆ ಗಾಂಧಿನಗರದ ಆರನೆಯ ಮುಖ್ಯರಸ್ತೆಯಲ್ಲಿರುವ ವಜ್ರೇಶ್ವರಿ ಕಂಬೈನ್ಸ್. ವಜ್ರೇಶ್ವರಿ ಕಂಬೈನ್ಸ್ ತಂತ್ರಜ್ಞರ ಒಂದು ತಂಡವನ್ನೇ ಕಟ್ಟಿತು. ಕನ್ನಡದ ಮೇರುನಟನ ಪತ್ನಿ ಎನ್ನುವ ಹೆಗ್ಗಳಿಕೆಯ ನೆರಳಿನಿಂದ ಹೊರಬಂದ ಅವರು ಪುರುಷ ಪ್ರಧಾನವಾಗಿದ್ದ ಚಿತ್ರೋದ್ಯಮಕ್ಕೆ ಧುಮುಕಿದರು. ಗಂಡ, ಮಕ್ಕಳು, ತಮ್ಮಂದಿರು, ಸ್ನೇಹಿತರು, ಹಿತೈಷಿಗಳು ಇವರೆಲ್ಲರನ್ನೂ ಜೊತೆಜೊತೆಯಲ್ಲಿ ಕರೆದುಕೊಂಡು ಹೋಗುತ್ತಲೇ, ನಿರ್ಮಾಣ, ವಿತರಣೆ, ಪ್ರದರ್ಶನ ಮುಂತಾದ ಉದ್ಯಮದ ಪಟ್ಟುಗಳನ್ನು ಕರಗತ ಮಾಡಿಕೊಂಡರು ಪಾರ್ವತಮ್ಮ.

ವಿತರಣಾ ಕ್ಷೇತ್ರದಲ್ಲಿ ಸಹ, ಅದನ್ನು ಖಚಿತ ಮತ್ತು ನಿರ್ದಿಷ್ಟ ಪ್ರಾಂತ್ಯಗಳಾಗಿ ವಿಂಗಡಿಸಿ, ಚಿತ್ರಕ್ಕಾಗಿ ಹಣಹಾಕಿದ ನಿರ್ಮಾಪಕನಿಗೆ ಲಾಭ ಬರುವಂತೆ ನೋಡಿಕೊಂಡರು. ಇಡೀ ಪ್ರಕ್ರಿಯೆ ಒಂದು ರೀತಿಯಲ್ಲಿ ರಾಜಕುಮಾರ್ ಮತ್ತು ಪಾರ್ವತಮ್ಮ ಪರಸ್ಪರ ಪೂರಕವಾಗಿ ಬೆಳೆದ ರೀತಿಗೆ ಉದಾಹರಣೆ. ಮೊದಮೊದಲಿಗೆ ರಾಜಕುಮಾರ್ ಅವರ ತಾರಾಮೌಲ್ಯ ಪಾರ್ವತಮ್ಮನವರ ಧ್ವನಿಗೆ ತಾಕತ್ತು ಕೊಟ್ಟರೆ, ಪಾರ್ವತಮ್ಮನವರ ಯೋಜನಾಬದ್ಧ ಶಿಸ್ತು ಮತ್ತು ಚಾಣಾಕ್ಷತೆ ರಾಜಕುಮಾರ್ ಅವರ ವೃತ್ತಿಜೀವನಕ್ಕೆ ಬಲಕೊಟ್ಟಿತು. ವ್ಯವಹಾರದಲ್ಲಿ ಮುಗ್ಧರಾಗಿದ್ದ ರಾಜಕುಮಾರ್ ಅವರ ಮುಗ್ಧತೆಯನ್ನು ಕಾಪಾಡುವಲ್ಲಿ ವರದಪ್ಪನವರು ಮತ್ತು ಪಾರ್ವತಮ್ಮನವರು ವಹಿಸಿದ ಪಾತ್ರ ಅನನ್ಯವಾದದ್ದು.

ವಜ್ರೇಶ್ವರಿ ಕಂಬೈನ್ಸ್ ಅನ್ನು ಹುಟ್ಟುಹಾಕಿದ ಪಾರ್ವತಮ್ಮ ಅದನ್ನು ನಂಬುಗೆಯ ಆಡಳಿತಗಾರರ ಕೈಗೆ ಒಪ್ಪಿಸಿ ಮನೆಗೆ ವಾಪಸ್ಸಾಗಲಿಲ್ಲ. ದಿನದಿನದ ವ್ಯವಹಾರ, ಲೆಕ್ಕಾಚಾರ, ಯೋಜನೆ, ಅವುಗಳ ಆಚರಣೆ, ನಿರ್ವಹಣೆ ಎಲ್ಲವನ್ನೂ ನೋಡಿಕೊಂಡರು. ಆ ದಿನಗಳನ್ನು ಕುರಿತು ಸ್ವತಃ ಪಾರ್ವತಮ್ಮನವರು ಮಾತನಾಡಿದ್ದಾರೆ. ”ಕಛೇರಿ ಆಡಳಿತದ ಅವಿಭಾಜ್ಯ ಅಂಗ ದೈನಂದಿನ ಹಣಗಳಿಕೆಯ ವರದಿ. ಪ್ರತಿಯೊಂದು ಪ್ರಾಂತ್ಯದ ಗಳಿಕೆಯ ಮಾಹಿತಿ ನನಗೆ ಪ್ರತಿದಿನ ಐದು ಗಂಟೆಯ ಒಳಗೆ ಮೇಜಿನ ಮೇಲೆ ಇರಬೇಕಿತ್ತು. ಅದಕ್ಕೆ ಸರಿಯಾಗಿ ಹಣಕಾಸಿನ ಖರ್ಚುವೆಚ್ಛಗಳ ಮಾಹಿತಿಯುಳ್ಳ ಬ್ಯಾಂಕ್ ಪತ್ರಗಳನ್ನು ಪರಿಷ್ಕರಿಸಿ, ಅಗತ್ಯವಿದ್ದಲ್ಲಿ ಸಂಬಂಧಪಟ್ಟವರಿಂದ ವಿವರಗಳನ್ನು ಕೇಳುತ್ತಿದ್ದೆ. ಸಾಯಂಕಾಲ ಆರು ಗಂಟೆಗೆ ಮನೆಗೆ ತೆರಳುವ ಮುನ್ನ ಉಗ್ರಾಣದಲ್ಲಿ ಇರುತ್ತಿದ್ದ ಚಲನಚಿತ್ರ ಪ್ರತಿಗಳ ಮಾಹಿತಿಯನ್ನು ಕರಾರುವಕ್ಕಾಗಿ ಲೆಕ್ಕ ಹಾಕಿ ನೋಡಿ ಉಗ್ರಾಣಕ್ಕೆ ಬೀಗ ಹಾಕಿಕೊಂಡು ತೆರಳುತ್ತಿದ್ದೆ. ಚಿತ್ರಮಂದಿರದಲ್ಲಿ ದೈನಂದಿನ ಗಲ್ಲಾಪೆಟ್ಟಿಗೆಯ ಗಳಿಕೆಯನ್ನು ನಿಖರವಾಗಿ ತಿಳಿಯಲು ನಮ್ಮವರೇ ಆದ ಪ್ರತ್ಯೇಕ ಪ್ರತಿನಿಧಿಗಳನ್ನು ಸಹ ನೇಮಕ ಮಾಡಿ, ಚಿತ್ರಮಂದಿರದ ಮಾಲೀಕ ಕೊಡುವ ಲೆಕ್ಕಕ್ಕೂ, ನಮ್ಮ ಪ್ರತಿನಿಧಿ ಕೊಡುವ ಲೆಕ್ಕಕ್ಕೂ ತಾಳೆ ಹಾಕಿ ಗಳಿಕೆಯಲ್ಲಿ ಯಾವುದೇ ರೀತಿಯ ’ಸೋರಿಕೆ’ ಇರಬಾರದು ಎನ್ನುವ ಅಂಶ ಮನದಟ್ಟು ಮಾಡಿಕೊಳ್ಳುತ್ತಿದ್ದೆ.” ಎಂದು ಅವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ’ರವಿಚಂದ್ರ’ ಚಿತ್ರದ ನಿರ್ಮಾಣ, ವಿತರಣೆಯ ಜೊತೆಗೆ ಪ್ರದರ್ಶನವನ್ನೂ ಕೈಗೆತ್ತಿಕೊಂಡ ವಜ್ರೇಶ್ವರಿ ಸಂಸ್ಥೆ ಈ ಮೂರೂ ವಲಯಗಳಲ್ಲಿ ತೊಡಗಿಸಿಕೊಂಡ ಚಿತ್ರೋದ್ಯಮದ ಮೊಟ್ಟಮೊದಲ ಸಂಸ್ಥೆಯಾಯಿತು.

ಎರಡೂವರೆ ತಿಂಗಳ ಬಾಣಂತಿಯಾಗಿದ್ದಾಗಲೂ ಮಗು ಪುನೀತ್‌ನನ್ನು ಎತ್ತಿಕೊಂಡೇ ಅವರು ಕೆಲಸಕ್ಕೆ ಹಿಂದಿರುಗಿದರು. ಎಷ್ಟೋ ಸಲ ಪುನೀತ್ ಅವರು ಹೇಳಿಕೊಂಡ ಹಾಗೆ ಅವರ ಮೊಟ್ಟಮೊದಲ ನೆನಪುಗಳೆಂದರೆ ಅಮ್ಮ ಒಂದು ಕೈಯಲ್ಲಿ ವ್ಯಾನಿಟಿ ಬ್ಯಾಗ್ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ತನ್ನನ್ನು ಸಂಭಾಳಿಸುತ್ತಾ ಕಛೇರಿ ಕೆಲಸ ನಿರ್ವಹಿಸುತ್ತಾ ಇದ್ದದ್ದು. ಸಣ್ಣವರಿದ್ದಾಗ ಅಮ್ಮನ ಬಗ್ಗೆ ಸುತ್ತಲಿನ ಜನ ತೋರಿಸುತ್ತಿದ್ದ ಗೌರವ, ಮಯಾದೆಗಳನ್ನು ಗಮನಿಸುತ್ತಿದ್ದ ಪುನೀತ್‌ಗೆ ಅಮ್ಮನಂತೆ ಆಗಬೇಕು ಎಂದು ಅನ್ನಿಸುತ್ತಿತ್ತಂತೆ.

ಪಾರ್ವತಮ್ಮ ಎಷ್ಟು ದಿಟ್ಟತನದಿಂದ ನಿರ್ಧಾರಗಳನ್ನು ಕೈಗೊಂಡು, ಅದನ್ನು ದಕ್ಕಿಸಿಕೊಳ್ಳುತ್ತಿದ್ದರು ಎನ್ನುವ ಬಗ್ಗೆ ಅನೇಕ ಕಥೆಗಳಿವೆ. ಅವುಗಳಲ್ಲಿ ಒಂದು, ರಾಜಕುಮಾರ್ ನಾಯಕರಾಗಿ ನಟಿಸಿದ್ದ, ಪಂಡರಿಬಾಯಿ ಅವರು ನಿರ್ಮಿಸಿದ್ದ ’ಕೆರಳಿದ ಸಿಂಹ’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಏನೋ ಗಲಾಟೆಯಾಗಿ, ಬಿಡುಗಡೆಗೆ ಸಮಸ್ಯೆಯಾಗಬಹುದು ಎನ್ನುವ ಪರಿಸ್ಥಿತಿ ಎದುರಾಗಿ, ಚಿತ್ರೋದ್ಯಮದ ಹಲವರು ಆಗ ಪಾರ್ವತಮ್ಮನವರಿಗೆ ವಿರುದ್ಧವಾಗಿ ನಿಂತಿದ್ದರು. ಇದ್ಯಾವುದಕ್ಕೂ ಬೆದರದ ಅವರು ರಾತ್ರೋರಾತ್ರಿ ಮದಾರಾಸಿನಿಂದ ಇಪ್ಪತ್ತಕ್ಕೂ ಹೆಚ್ಚು ಪ್ರಿಂಟ್‌ಗಳನ್ನು ಕಾರಿನಲ್ಲಿ ತರಿಸಿಕೊಂಡು (ನೆನಪಿರಲಿ ಅದು ಅಂತರ್ಜಾಲದಲ್ಲಿ ಅಥವಾ ಸಿಡಿ ರೂಪದಲ್ಲಿ ಚಿತ್ರಗಳನ್ನು ಎಲ್ಲಿಂದ ಎಲ್ಲಿಯವರೆಗೂ ಬೇಕಾದರೂ ತಲುಪಿಸಬಲ್ಲ ದಿನಗಳಲ್ಲ) ನಿಗದಿಯಾಗಿದ್ದ ದಿನವೇ ಚಿತ್ರ ಬಿಡುಗಡೆಯಾಗುವಂತೆ ನೋಡಿಕೊಂಡರು.

ಕನ್ನಡ ಚಿತ್ರರಂಗಕ್ಕೆ ಅವರೊಂದು ವೃತ್ತಿಪರ ಚೌಕಟ್ಟನ್ನು ಹಾಕಿಕೊಟ್ಟರಲ್ಲದೆ, ಚಿತ್ರನಿರ್ಮಾಣದಲ್ಲೂ ವೃತ್ತಿಪರತೆಯನ್ನು ತಂದರು. ಚಿತ್ರ ನಿರ್ಮಾಣದ ಎಲ್ಲಾ ಹಂತಗಳ ಸ್ಪಷ್ಟ ಅರಿವು ಮತ್ತು ಆ ಹಂತಗಳು ಚಿತ್ರಕ್ಕೆ ಕೊಡುವ ತಾಕತ್ತು ಅವರಿಗೆ ಚೆನ್ನಾಗಿ ಗೊತ್ತಿತ್ತು. ರಾಜಕುಮಾರ್ ಅವರ ಚಿತ್ರಗಳಿಗೆ ಕಾದಂಬರಿಗಳನ್ನು ಆಯ್ಕೆ ಮಾಡುವುದರಲ್ಲಿ ಅವರು ವಹಿಸಿದ ಪಾತ್ರ ಗಮನಾರ್ಹವಾದದ್ದು. ’ಮಯೂರ’ ಅವರೇ ಓದಿ ಇಷ್ಟಪಟ್ಟ ಕಾದಂಬರಿ. ಗಂಡನನ್ನು ಸ್ಟಾರ್ ಜೊತೆಜೊತೆಯಲ್ಲಿ ಕಲಾವಿದನನ್ನಾಗಿ ರೂಪಿಸುವಲ್ಲಿಯೂ ಅವರ ಪಾತ್ರ ದೊಡ್ಡದು.

’ಗಿರಿಕನ್ಯೆ’ ಶೂಟಿಂಗ್‌ಗೆಂದು ಹಿಂದಿನ ದಿನ ಕೊಡಗಿಗೆ ಬಂದ ಅವರು ರಾಜಕುಮಾರ್ ಅಭಿನಯಿಸುತ್ತಿದ್ದ ’ಚೆನ್ನ’ನ ಪಾತ್ರದ ಬಟ್ಟೆಗಳನ್ನು ಗಮನಿಸುತ್ತಾರೆ. ಅವು ಯಾವುದೇ ’ಸ್ಟಾರ್’ ನಟನ ಇಮೇಜ್ ಗೆ ತಕ್ಕ ಹಾಗಿರುತ್ತದೆ. ಪ್ರೇಕ್ಷಕರ ಕಣ್ಣಿಗೆ ಕಾಣಬೇಕಾದ್ದು ಪಾತ್ರ ಎನ್ನುವ ಸ್ಪಷ್ಟ ಅರಿವಿರುವ ಆಕೆ ಆ ರಾತ್ರಿಯಲ್ಲಿ ಮಡಿಕೇರಿ ಮಾರುಕಟ್ಟೆಗೆ ಹೋಗಿ ಎಸ್ಟೇಟ್ ಕೂಲಿಗಳು ಧರಿಸುವ ಲುಂಗಿ ಮತ್ತು ನೆಟ್ ಬನಿಯನ್‌ಗಳನ್ನು ಕೊಂಡು ತಂದು ಚಿತ್ರೀಕರಣಕ್ಕೆ ಕೊಡುತ್ತಾರೆ. ಅವರ ವೃತ್ತಿಪರತೆ ಆ ಮಟ್ಟಿನದು. ಪರಿಣಾಮಕಾರಿ ಚಿತ್ರವೊಂದು ರೂಪುಗೊಳ್ಳಲು ಸಾಹಿತ್ಯದ ಕೊಡುಗೆಯನ್ನು ಅರಿತಿದ್ದ ಅವರು ಅನುಭವಿ ಚಿತ್ರಸಾಹಿತಿಗಳಿಂದ ಕಥೆ, ಸಂಭಾಷಣೆ, ಚಿತ್ರಕಥೆ ಮತ್ತು ಹಾಡುಗಳನ್ನು ಬರೆಸುತ್ತಿದ್ದರು. ರಾಜ್ ಚಿತ್ರಗಳಿಗೆ ಸದಭಿರುಚಿ ಮತ್ತು ಗಟ್ಟಿತನದ ಕಥೆ ಮತ್ತು ಸಾಹಿತ್ಯದ ನೆಲೆ ಒದಗಿಸುವಲ್ಲಿ ಪಾರ್ವತಮ್ಮನವರ ಪಾತ್ರವೂ ಇದೆ. ಶಿಸ್ತು, ವೃತ್ತಿಪರತೆ ಮತ್ತು ಅದ್ಭುತವಾದ ಯಶಸ್ಸಿನ ಕಾರಣಕ್ಕೆ ವಜ್ರೇಶ್ವರಿ ಸಂಸ್ಥೆ ದಕ್ಷಿಣ ಭಾರತದಲ್ಲೇ ಹೆಸರು ಹೊತ್ತ ಸಂಸ್ಥೆಯಾಯಿತು.

ಗಂಡನ, ಮಕ್ಕಳ ಚಿತ್ರಗಳಿಗಾಗಿ ಜಯಮಾಲ, ಸುಲಕ್ಷಣ, ಸುಮಲತಾ, ಸರಿತಾ, ಮಾಧವಿ, ಗೀತಾ, ಜಯಪ್ರದ, ರೂಪಾದೇವಿ, ಪದ್ಮಪ್ರಿಯ, ಗಾಯತ್ರಿ, ಊರ್ವಶಿ, ಅಂಬಿಕಾ, ಆಶಾರಾಣಿ, ಸುಧಾರಾಣಿ, ಶ್ರುತಿ, ಅನು ಪ್ರಭಾಕರ್‌, ಮಾಲಾಶ್ರೀ, ರಮ್ಯ, ರಕ್ಷಿತಾವರೆಗೆ ಹಲವಾರು ನಾಯಕಿಯರನ್ನು ಅವರು ತಮ್ಮ ಸಂಸ್ಥೆಯ ಮೂಲಕ ರೂಪಿಸಿದ್ದಾರೆ. 83 ಸಿನಿಮಾಗಳನ್ನು ನಿರ್ಮಿಸಿ ಅದರಲ್ಲಿ ಶೇ 85% ಯಶಸ್ಸು ಗಳಿಸಿದ್ದು ಯಾವುದೇ ಕಾಲಕ್ಕೂ ಅಧ್ಯಯನಕ್ಕೆ ಯೋಗ್ಯವಾದ ವಸ್ತು.
ಪಾರ್ವತಮ್ಮನವರ ಆತ್ಮಬಲಕ್ಕೆ ಸವಾಲಾಗಿದ್ದು ವೀರಪ್ಪನ್ ರಾಜಕುಮಾರ್‌ರನ್ನು ಅಪಹರಿಸಿದ ದಿನಗಳಲ್ಲಿ. ವಯಸ್ಸಾದ ಗಂಡನನ್ನು ದರೋಡೆಕೋರನೊಬ್ಬ ಕಾಡಿಗೆ ಕರೆದುಕೊಂಡು ಹೋದಾಗ ಹೆಂಡತಿಯೊಬ್ಬಳು ಅನುಭವಿಸುವ ಎಲ್ಲಾ ತಲ್ಲಣದ ನಡುವೆಯೂ ಅವರು ಕೆಲವೊಮ್ಮೆ ವಿನಂತಿ, ಕೆಲವೊಮ್ಮೆ ಎಚ್ಚರಿಕೆ, ಅಸಾಧಾರಣ ಧಾರಣ ಶಕ್ತಿ ಮತ್ತು ಈ ಕಾರ್ಯಸಾಧನೆಗಾಗಿ ಎಲ್ಲರನ್ನೂ ಒಗ್ಗೂಡಿಸುವ ಸಾಮರ್ಥ್ಯ ಪ್ರದರ್ಶಿಸಿ, ಎರಡೂ ರಾಜ್ಯಗಳಲ್ಲಿಯೂ ಶಾಂತಿಭಂಗವಾಗದಂತೆ ನಿಭಾಯಿಸಿ ಕನ್ನಡದ ರಾಜಕುಮಾರ ಕಾಡಿನಿಂದ ನಾಡಿಗೆ ಬರುವವರೆಗೂ ರಾಜ್ ಅಭಿಮಾನಿ ಸೈನ್ಯದ ಸೇನಾಪತಿಯಾಗಿದ್ದವರು.

ರಾಜಕುಮಾರ್ ಒಬ್ಬ ಉದ್ಧಾಮ ನಟ. ಅವರ ಆ ಕೊಡುಗೆ ಪೋಲಾಗದಂತೆ, ಯಾವುದೇ ಕಾರಣಕ್ಕೂ ನಷ್ಟವಾಗದಂತೆ ಕಾಪಾಡಿಕೊಂಡ ಅವರಿಗೆ ರಾಜಕುಮಾರ್ ಅವರ ಬಲ ಮತ್ತು ಬಲಹೀನತೆ ಎರಡರ ಅರಿವೂ ಇತ್ತು. ಅವೆರಡರ ಜೊತೆಯಲ್ಲಿಯೇ ಮುತ್ತುರಾಜ್‌ರನ್ನು ಸ್ವೀಕರಿಸಿದ ಅವರು ಮುತ್ತುರಾಜ್‌ರನ್ನು ರಾಜಕುಮಾರನನ್ನಾಗಿಯೇ ಉಳಿಸುವ ದಿಸೆಯಲ್ಲಿ ಅನುಭವಿಸಿದ ಸಂಕಟಗಳು, ಸವಾಲುಗಳು ಅದೆಷ್ಟಿರಬಹುದು. ಹಳ್ಳಿಗಾಡಿನ ಹೆಣ್ಣೊಬ್ಬಳು ಒರಟೊರಟಾಗಿ ಕಂಡರೂ ಆ ಒರಟುತನದ ತಾಯ್ತನದಲ್ಲಿಯೇ ಗಂಡನನ್ನೂ, ಮಕ್ಕಳನ್ನೂ ಕಾಪಾಡಿಕೊಂಡ ’ಬನದ ಕರಡಿ’ ಪಾರ್ವತಮ್ಮ.

ಈ ಬಗ್ಗೆ ಚ.ಹ.ರಘುನಾಥ್ ಅವರು ಬರೆದ ಲೇಖನದಿಂದ ಕೆಲವು ಸಾಲುಗಳನ್ನು ಉದ್ಧರಿಸುವ ಮೂಲಕ ಈ ಲೇಖನವನ್ನು ಮುಗಿಸುತ್ತೇನೆ – “ಕವಿರತ್ನ ಕಾಳಿದಾಸ ಸಿನಿಮಾದಲ್ಲೊಂದು ಭಾವುಕ ಸನ್ನಿವೇಶವಿದೆ. ಕುರಿಗಾಹಿಯ ಹೊರಚಾಚಿದ ನಾಲಿಗೆಯ ಮೇಲೆ ಕಾಳಿ ಮಂತ್ರಾಕ್ಷರ ಬರೆಯುವ ದೃಶ್ಯ ಅದು…ಒಂದರ್ಥದಲ್ಲಿ ಆ ಸನ್ನಿವೇಶ ಅವರ ಬದುಕಿನೊಂದಿಗೂ ತಳುಕುಹಾಕಿಕೊಂಡಿತ್ತು. ನಿಜಜೀವನದಲ್ಲಿ ಆ ಪಾತ್ರ ನಿರ್ವಹಿಸಿದ್ದು ಪಾರ್ವತಮ್ಮ ರಾಜಕುಮಾರ್. ದೇವಿಯ ವಾತ್ಸಲ್ಯ ಹಾಗೂ ಕಾಠಿಣ್ಯ – ಅವರ ವ್ಯಕ್ತಿತ್ವದ ಎರಡು ಮುಖಗಳಾಗಿದ್ದವು. ಹರೆಯದ ನಟನೊಬ್ಬ ಜನಪ್ರಿಯತೆಯ ಉತ್ತುಂಗದಲ್ಲಿ ತೇಲುವಾಗ ಆತನನ್ನು ಸಹಿಸಿಕೊಳ್ಳಲಿಕ್ಕೆ ಹಾಗೂ ಕಾಪಾಡಿಕೊಳ್ಳಲಿಕ್ಕೆ ಅಪಾರ ಧಾರಣಶಕ್ತಿ ಬೇಕು. ಅಂಥ ಸಾಮರ್ಥ್ಯ ಅವರಿಗಿತ್ತು.”

LEAVE A REPLY

Connect with

Please enter your comment!
Please enter your name here