ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟಿಸುತ್ತಿರುವ ‘ಸಲಾರ್’ ತೆಲುಗು ಸಿನಿಮಾದ ಚಿತ್ರೀಕರಣ ಆರಂಭವಾಗಿ ಎರಡು ವರ್ಷಗಳೇ ಆಯ್ತು. ನಿರ್ಮಾಪಕರು ಮೊದಲು ಘೋಷಿಸಿದಂತೆ ಸಿನಿಮಾ ಇದೇ ತಿಂಗಳ ಕೊನೆಗೆ ತೆರೆಗೆ ಬರಬೇಕಿತ್ತು. ಆದರೆ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದೆ. ಚಿತ್ರ ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್ ಚಿತ್ರ ತಡವಾಗುತ್ತಿರುವುದೇಕೆ ಎನ್ನುವ ಸ್ಪಷ್ಟೀಕರಣದೊಂದಿಗೆ ಟ್ವೀಟ್ ಮಾಡಿದೆ.
‘KGF2’ ಸಿನಿಮಾ ನಂತರ ಪ್ರಶಾಂತ್ ನೀಲ್ ಕೈಗೆತ್ತಿಕೊಂಡಿದ್ದ ‘ಸಲಾರ್’ ಸಿನಿಮಾ ಸುದ್ದಿಯಲ್ಲಿದೆ. ಪ್ರಭಾಸ್ ನಟನೆಯ ಈ ಸಿನಿಮಾ ಶುರುವಾಗಿ ಎರಡು ವರ್ಷಗಳೇ ಆಯ್ತು. ಆರಂಭದಲ್ಲಿ ಸಿನಿಮಾದ ಮೊದಲ ಪಾರ್ಟ್ ಸೆಪ್ಟೆಂಬರ್ 28ಕ್ಕೆ ರಿಲೀಸ್ ಎಂದು ಘೋಷಿಸಲಾಗಿತ್ತು. ಆದರೆ ಚಿತ್ರದ ಬಿಡುಗಡೆ ಕುರಿತಂತೆ ಯಾವುದೇ ಸುಳಿವು ಇಲ್ಲ. ಚಿತ್ರವನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್ನವರು ಈ ಕುರಿತು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ‘ಸಲಾರ್ ಸಿನಿಮಾಗೆ ನೀವು ನೀಡುತ್ತಿರುವ ಸಹಕಾರಕ್ಕೆ ನಾವು ಆಭಾರಿಯಾಗಿದ್ದೇವೆ. ಕಾರಣಾಂತರಗಳಿಂದ ನಾವು ಮೊದಲು ನೀಡಿದ್ದ ದಿನಾಂಕದಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಉತ್ತಮ ಗುಣಮಟ್ಟದೊಂದಿಗೆ ಒಂದೊಳ್ಳೆಯ ಸಿನಿಮ್ಯಾಟಿಕ್ ಎಕ್ಸ್ಪೀರಿಯನ್ಸ್ ನೀಡುವ ಉದ್ದೇಶದಿಂದ ತಂಡ ಕೆಲಸ ಮಾಡುತ್ತಿದೆ. ನಿಮ್ಮ ಸಹಕಾರವಿರಲಿ’ ಎಂದು ಹೊಂಬಾಳೆ ಬ್ಯಾನರ್ ಟ್ವೀಟ್ ಮಾಡಿದೆ.
We deeply appreciate your unwavering support for #Salaar. With consideration, we must delay the original September 28 release due to unforeseen circumstances.
— Hombale Films (@hombalefilms) September 13, 2023
Please understand this decision is made with care, as we're committed to delivering an exceptional cinematic experience.… pic.twitter.com/abAE9xPeba
ಸಿನಿಮಾ ತಡವಾಗುತ್ತಿರುವ ಕುರಿತು ಟ್ವೀಟ್ ಮಾಡಿರುವ ಹೊಂಬಾಳೆ ಬ್ಯಾನರ್, ಮುಂದಿನ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಮೂಲಗಳ ಪ್ರಕಾರ ಚಿತ್ರದ ಮೊದಲ ಭಾಗ ನವೆಂಬರ್ನಲ್ಲಿ ತೆರೆಕಾಣುವ ಸಂಭವವಿದೆ. ಈ ಚಿತ್ರದೊಂದಿಗೆ ಮಲಯಾಳಂ ನಟ ಪೃಥ್ವಿರಾಜ್ ಅವರು ಖಳಪಾತ್ರದ ಮೂಲಕ ಟಾಲಿವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಜಗಪತಿ ಬಾಬು, ಈಶ್ವರಿ ರಾವ್, ಶ್ರಿಯಾ ರೆಡ್ಡಿ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಪ್ರಶಾಂತ್ ನೀಲ್ ಜೊತೆ ‘KGF’ಗೆ ಕೆಲಸ ಮಾಡಿದ್ದ ತಂತ್ರಜ್ಞರ ತಂಡವೇ ‘ಸಲಾರ್’ಗೂ ಕೆಲಸ ಮಾಡುತ್ತಿದೆ. ‘ಬಾಹುಬಲಿ’ ನಂತರ ನಟ ಪ್ರಭಾಸ್ ಸತತ ಮೂರು ದೊಡ್ಡ ಸೋಲುಗಳನ್ನು ಕಂಡರು. ‘ಸಲಾರ್’ ಅವರಿಗೆ ಗೆಲುವು ತಂದುಕೊಡಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ ನಟನ ಅಭಿಮಾನಿಗಳು.