ಶಿವರಾಜಕುಮಾರ್‌ ಅಭಿನಯದ ಬಹುನಿರೀಕ್ಷಿತ ‘ಭೈರತಿ ರಣಗಲ್‌’ ಸಿನಿಮಾ 2024ರ ಆಗಸ್ಟ್‌ 15ರಂದು ತೆರೆಗೆ ಬರುತ್ತಿದೆ. ಯಶಸ್ವೀ ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್‌ ಇದು. ‘ಗೀತಾ ಪಿಕ್ಚರ್ಸ್‌’ ಬ್ಯಾನರ್‌ನಡಿ ತಯಾರಾಗುತ್ತಿರುವ ಚಿತ್ರವನ್ನು ನರ್ತನ್‌ ನಿರ್ದೇಶಿಸುತ್ತಿದ್ದಾರೆ. ನವೀನ್‌ ಕುಮಾರ್‌ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕೆ ಇರಲಿದೆ.

ಗೀತಾ ಶಿವರಾಜಕುಮಾರ್‌ ನಿರ್ಮಾಣದಲ್ಲಿ ತಯಾರಾಗುತ್ತಿರುವ ‘ಭೈರತಿ ರಣಗಲ್‌’ ಸಿನಿಮಾದ ಶೇ 70ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಈ ಹಂತದಲ್ಲಿ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ನರ್ತನ್‌ ನಿರ್ದೇಶನದ ಈ ಬಹುನಿರೀಕ್ಷಿತ ಸಿನಿಮಾ 2024ರ ಆಗಸ್ಟ್‌ 15 ಸ್ವಾತಂತ್ರ್ಯ ದಿನದಂದು ತೆರೆಕಾಣಲಿದೆ. ಆರು ವರ್ಷಗಳ ಹಿಂದೆ ರಿಲೀಸ್‌ ಆಗಿದ್ದ ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್‌ ಇದು. ‘ಮಫ್ತಿ’ ಸಿನಿಮಾ ನೆನಪು ಮಾಡಿಕೊಳ್ಳುವ ಶಿವರಾಜಕುಮಾರ್‌, ‘ಮಫ್ತಿ ಚಿತ್ರದ ಅವಕಾಶ ಬಂದಾಗ, ಚಿತ್ರದಲ್ಲಿ ನಟಿಸಬೇಕಾ? ಎನ್ನುವ ಗೊಂದಲವಿತ್ತು. ಚಿತ್ರದಲ್ಲಿ ನನ್ನ ಪಾತ್ರ ಬರುವುದೇ ಇಂಟರ್‌ವೆಲ್‌ ನಂತರ. ಶ್ರೀಮುರಳಿ ಚಿತ್ರದ ಪ್ರಮುಖ ಪಾತ್ರ ಮಾಡುತ್ತಿದ್ದರು. ಮುರಳಿ ನನ್ನ ಮಾವನ ಮಗ. ಇಲ್ಲ ಎನ್ನುವಂತೆಯೂ ಇರಲಿಲ್ಲ. ಹಾಗಿರುವಾಗ, ಏನು ಮಾಡುವುದು ಎಂಬ ಪ್ರಶ್ನೆ ಇದ್ದೇ ಇತ್ತು. ಅಂತಹ ಸಂದರ್ಭದಲ್ಲಿ ನಿರ್ದೇಶಕ ನರ್ತನ್ ಕನ್ವಿನ್ಸ್‌ ಮಾಡಿ ಪಾತ್ರ ಮಾಡಿಸಿದರು’ ಎನ್ನುತ್ತಾರೆ.

‘ಮಫ್ತಿ’ ಸಿನಿಮಾದಲ್ಲಿ ನಟಿಸುತ್ತಾ ಪಾತ್ರದ ಬಗ್ಗೆ ತಮಗೆ ಒಲವು ಮೂಡತೊಡಗಿತು ಎನ್ನುತ್ತಾರೆ ಶಿವರಾಜಕುಮಾರ್‌. ‘ಅಲ್ಲಿದ್ದ ಭೈರತಿ ರಣಗಲ್‍ನ ಸಣ್ಣ ಕತೆಯನ್ನು ಇಲ್ಲಿ ಬೆಳೆಸಿದ್ದಾರೆ. ಯಾಕೆ ಅವನು ಭೈರತಿ ರಣಗಲ್‍ ಆಗುತ್ತಾನೆ. ಜನರಿಗೆ ಯಾಕೆ ಅವನನ್ನು ಕಂಡರೆ ಅಷ್ಟು ಪ್ರೀತಿ ಎಂದು ಹೇಳಲಾಗಿದೆ. ಹೆಚ್ಚು ಆಡಂಬರವಿಲ್ಲದೆ, ಸರಳವಾಗಿ ಈ ವಿಷಯವನ್ನು ಹೇಳಲಾಗಿದೆ. ಇಲ್ಲಿ ಎಷ್ಟು ಮಾತು ಬೇಕೋ, ಅಷ್ಟಿದೆ’ ಎನ್ನುತ್ತಾರವರು. ನಿರ್ದೇಶಕ ನರ್ತನ್‌ ತಮ್ಮ ಸಿನಿಮಾ, ಪಾತ್ರದ ಬಗ್ಗೆ ಮಾತನಾಡುತ್ತಾ, ‘ಮಫ್ತಿ ಚಿತ್ರ ಮಾಡುವಾಗಲೇ ಆ ಪಾತ್ರದ ತೂಕ ಹೆಚ್ಚಿತ್ತು. ಚಿತ್ರ ನೋಡಿದಾಗ ಜನರಿಗೆ ಸಾಕಾಗಲಿಲ್ಲ. ಏಕೆಂದರೆ, ಶಿವಣ್ಣ ಅವರ ಪಾತ್ರ ಇಂಟರ್‌ವೆಲ್‍ ನಂತರ ಬರುತ್ತದೆ. ಈ ಪಾತ್ರವನ್ನು ಇಷ್ಟಕ್ಕೇ ಮುಗಿಸಬಾರದು, ಇದರ ಹಿನ್ನೆಲೆ ಏನಾದರೂ ಬರೆಯಬೇಕು ಎಂದಾಗ ರಣಗಲ್‍ ಹಿಂದಿನ ಕತೆ ಸೃಷ್ಟಿಯಾಯಿತು. ಈ ಸಿನಿಮಾ ಬರೆದುಕೊಂಡು ಕತೆ ಹೇಳಿದಾಗ, ಶಿವಣ್ಣ ಹಾಗೂ ಗೀತಕ್ಕ ಅವರು ಬೇರೇನೂ ಕೇಳಲಿಲ್ಲ. ಸಿನಿಮಾ ಮಾಡುವಂತೆ ಹುರಿದುಂಬಿಸಿದರು’ ಎಂದರು. ಚಿತ್ರದ ಪ್ರಮುಖ ಖಳಪಾತ್ರದಲ್ಲಿ ಬಾಲಿವುಡ್‌ ನಟ ರಾಹುಲ್‌ ಬೋಸ್‌ ನಟಿಸುತ್ತಿದ್ದಾರೆ. ರುಕ್ಮಿಣಿ ವಸಂತ್‍, ಅವಿನಾಶ್‍, ದೇವರಾಜ್‍, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ ಇತರೆ ಪ್ರಮುಖ ಪಾತ್ರಧಾರಿಗಳು. ನವೀನ್ ಕುಮಾರ್ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕೆ ಇರಲಿದೆ.

LEAVE A REPLY

Connect with

Please enter your comment!
Please enter your name here