ಭಾರತೀಯ ಸಿನಿಮಾ ಸಂದರ್ಭದಲ್ಲೇ ‘RRR’ ಬಹುನಿರೀಕ್ಷಿತ ಸಿನಿಮಾ. ನಿರ್ದೇಶಕ ರಾಜಮೌಳಿ ಹಾಗೂ ಚಿತ್ರದ ಮೂವರು ಪ್ರಮುಖ ತಾರೆಯರಾದ ಜ್ಯೂನಿಯರ್ ಎನ್‌ಟಿಆರ್, ರಾಮ್‌ಚರಣ್ ತೇಜಾ ಮತ್ತು ಅಲಿಯಾ ಭಟ್ ಇಂದು ಬೆಂಗಳೂರಿಗೆ ಆಗಮಿಸಿದ್ದರು. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಸಿನಿಮಾ ಹಾಗೂ ತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು.
ನಿನ್ನೆ ಬಿಡುಗಡೆಯಾದ ರಾಜಮೌಳಿ ನಿರ್ದೇಶನದ ‘RRR’ ಟ್ರೈಲರ್ ಸಿನಿಮಾ ಕುರಿತಂತೆ ನಿರೀಕ್ಷೆ ಹೆಚ್ಚಿಸಿದೆ. ದೊಡ್ಡ ಪರದೆ ಮೇಲೆ ಮ್ಯಾಜಿಕ್ ಸೃಷ್ಟಿಸುವ ಕಲೆ ರಾಜಮೌಳಿ ಅವರಿಗೆ ಸಿದ್ಧಿಸಿದೆ. ಈ ಹಿಂದಿನ ಚಿತ್ರಗಳಲ್ಲಿ ಇದನ್ನೂ ಸಾಬೀತು ಮಾಡಿರುವ ನಿರ್ದೇಶಕ ‘RRR’ನಲ್ಲೂ ವಿಶ್ಯುಯಲ್ ಟ್ರೀಟ್ ನೀಡುವ ಸೂಚನೆ ಟ್ರೈಲರ್‌ನಲ್ಲಿ ಸಿಕ್ಕಿದೆ. ಟ್ರೈಲರ್ ರಿಲೀಸ್ ಹಿನ್ನೆಲೆಯಲ್ಲಿ ಇಂದು ಚಿತ್ರದ ಪ್ರಚಾರಕಾರ್ಯಕ್ಕೆ ರಾಜಮೌಳಿ ಮತ್ತು ಅವರ ತಾರಾಬಳಗ ಬೆಂಗಳೂರಿಗೆ ಬಂದಿತ್ತು. ಈ ಸಿನಿಮಾ ಕುರಿತಂತೆ ‘RRR’ ತಂಡದವರು ಮಾತನಾಡಿದರು.
ಕನ್ನಡ ಅವತರಣಿಕೆಗೆ ಡಬ್ ಮಾಡಿದ್ದಾರೆ ನಟರು : ‘RRR’ ಟ್ರೈಲರ್ ಇವೆಂಟ್‌ನಲ್ಲಿ ರಾಜಮೌಳಿ, ನಟ ಜ್ಯೂನಿಯರ್ ಎನ್‌ಟಿಆರ್ ಬಹುಪಾಲು ಕನ್ನಡದಲ್ಲೇ ಮಾತನಾಡಿದರು. ಇಬ್ಬರಿಗೂ ಕನ್ನಡದ ನಂಟು ಇದೆ. ಆರಂಭದಲ್ಲಿ ನಟಿ ಅಲಿಯಾ ಭಟ್‌ಗೆ ನಟ ಎನ್‌ಟಿಆರ್ ‘ಎಲ್ಲರಿಗೂ ನಮಸ್ಕಾರ’ ಎಂದು ಕಿವಿಯಲ್ಲಿ ಕನ್ನಡದ ಪದಗಳನ್ನು ಉಸುರಿದರು. ಅವರು ಹೇಳಿಕೊಟ್ಟ ಪದಗಳಿಂದ ಮಾತು ಶುರುಮಾಡಿದ ಅಲಿಯಾ ತಮ್ಮ ಪಾತ್ರ ಮತ್ತು ರಾಜಮೌಳಿ ಕೆಲಸ ಮಾಡುವ ರೀತಿಯ ಬಗ್ಗೆ ಮಾತನಾಡಿದರು. ಬೆಂಗಳೂರಿಗೆ ಆಗಿಂದಾಗ್ಗೆ ಅವರು ಭೇಟಿ ನೀಡಿದ್ದರೂ ದಕ್ಷಿಣದ ಸಿನಿಮಾ ಪ್ರಚಾರಕ್ಕೆ ಬಂದಿದ್ದು ಮಾತ್ರ ಇದೇ ಮೊದಲು.
ಇನ್ನು ಈ ಸಿನಿಮಾ ಕನ್ನಡ ಡಬ್ಬಿಂಗ್ ಅವತರಣಿಕೆಯಲ್ಲೂ ತೆರೆಕಾಣುತ್ತಿದೆ. ವಿಶೇಷವೆಂದರೆ ಜ್ಯೂನಿಯರ್ ಎನ್‌ಟಿಆರ್ ಮತ್ತು ರಾಮ್‌ಚರಣ್ ತೇಜಾ ತಮ್ಮ ಪಾತ್ರಗಳಿಗೆ ತಾವೇ ಡಬ್ ಮಾಡಿದ್ದಾರೆ. ಟ್ರೈಲರ್‌ನಲ್ಲಿ ಅವರ ಧ್ವನಿಗಳು ಕೇಳಿಸುತ್ತವೆ. ಟ್ರೈಲರ್‌ನಲ್ಲಿ ಮಾತ್ರವಲ್ಲ, ಇಡೀ ಸಿನಿಮಾವನ್ನೂ ಕನ್ನಡದಲ್ಲಿಯೇ ಡಬ್ ಮಾಡಿದ್ದೇವೆ ಎಂದು ಇಬ್ಬರು ನಟರು ಹೆಮ್ಮೆಯಿಂದ ಹೇಳಿಕೊಂಡರು. “ನನ್ನ ತಾಯಿ ಕರ್ನಾಟಕದ ಕುಂದಾಪುರ ಮೂಲದವರು. ಆದರೆ ನಾನು ಹುಟ್ಟಿ ಬೆಳೆದದ್ದೆಲ್ಲಾ ಹೈದರಾಬಾದ್‌ನಲ್ಲಿ. ಕನ್ನಡ ಅವತರಣಿಕೆಗೆ ನಾನೇ ಡಬ್ ಮಾಡುತ್ತೇನೆ ಎಂದು ಅಮ್ಮನಿಗೆ ಹೇಳಿದೆ. ‘ಅಲ್ಲಿ ನಮ್ಮವರು ಇದ್ದಾರೆ. ಸರಿಯಾಗಿ ಮಾತನಾಡು. ತಲೆ ತಗ್ಗಿಸುವಂತೆ ಮಾಡಬೇಡ’ ಎಂದು ಅಮ್ಮ ಹೇಳಿದರು. ನಾನು ಕೂಡ ಎಚ್ಚರಿಕೆಯಿಂದ ಡಬ್ ಮಾಡಿದ್ದೇನೆ” ಎಂದರು ಜ್ಯೂನಿಯರ್ ಎನ್‌ಟಿಆರ್. ಕನ್ನಡ ಡಬ್ಬಿಂಗ್‌ಗೆ ಸಂಬಂಧಿಸಿದಂತೆ ವರದರಾಜು ಅವರು ಇಬ್ಬರು ನಟರಿಗೆ ನೆರವಾಗಿದ್ದಾರೆ.
ಕತೆಯೇ ಹೀರೋ : ಚಿತ್ರದಲ್ಲಿ ಹೀರೋ ಯಾರು ಎನ್ನುವ ಪ್ರಶ್ನೆಗೆ ರಾಜಮೌಳಿ, “ಇಲ್ಲಿ ಕತೆಯೇ ಹೀರೋ. ತನ್ನ ತಾಯ್ನಾಡಿನ ಅಸ್ತಿತ್ವಕ್ಕೆ ಸ್ವಾಭಿಮಾನದಿಂದ ಹೋರಾಡುವ ‘ಥೀಮ್’ ಸಿನಿಮಾದ ಹೀರೋ ಎಂದರು ರಾಜಮೌಳಿ. ಚಿತ್ರೀಕರಣದಲ್ಲಿ ನಿರ್ದೇಶಕ ರಾಜಮೌಳಿ ತಮಗೆ ತುಂಬಾ ಕಾಟ ಕೊಟ್ಟರು ಎಂದು ಜ್ಯೂನಿಯರ್ ಎನ್‌ಟಿಆರ್ ಪ್ರೀತಿಯಿಂದ ದೂರು ಹೇಳಿದರು. ನಟ ರಾಮ್ ಚರಣ್ ತೇಜಾ ಮಧ್ಯೆ ಮಾತನಾಡಿ, “ಯೂರೋಪ್ ಚಿತ್ರೀಕರಣದಲ್ಲಿ ಐದಾರು ಗಂಟೆಗಳ ಕಾಲ ರಿಹರ್ಸಲ್ ಮಾಡಿಸಿದರು. ರಿಹರ್ಸಲ್‌ಗೆಂದೇ ವಿದೇಶಕ್ಕೆ ಕರೆದುಕೊಂಡು ಹೋದಹಾಗಿತ್ತು!” ಎಂದರು. ನಿರ್ದೇಶ ರಾಜಮೌಳಿ ತಮ್ಮ ಕಾರ್ಯನಿರ್ವಹಣೆ ಶೈಲಿಯನ್ನು ಸಮರ್ಥಿಸಿಕೊಂಡರು. ಆಗ ಅಲ್ಲೊಂದಿಷ್ಟು ಹೊತ್ತು ತಮಾಷೆಯ ಜಗಳ ನಡೆಯಿತು.
ಪುನೀತ್ ರಾಜಕುಮಾರ್ ನೆನಪು : ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ಅಗಲಿದ ನಟ ಪುನೀತ್ ರಾಜಕುಮಾರ್ ಅವರಿಗೆ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ನಟ ಜ್ಯೂನಿಯರ್ ಎನ್‌ಟಿಆರ್ ಮತ್ತು ಪುನೀತ್ ಆತ್ಮೀಯ ಗೆಳೆಯರು. ಈ ಕುರಿತಾದ ಪ್ರಶ್ನೆಯೊಂದನ್ನು ಕೇಳಿದಾಗ ಜ್ಯೂನಿಯರ್ ಎನ್‌ಟಿಆರ್ ಭಾವುಕರಾದರು. “ಅವರ ಅಗಲಿಕೆಯನ್ನು ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ನನ್ನ ನೆನಪಲ್ಲಿ ಸದಾ ಇರುತ್ತಾರೆ” ಎಂದ ಎನ್‌ಟಿಆರ್ ‘ಪವರ್’ ಸಿನಿಮಾದಲ್ಲಿ ಪುನೀತ್‌ರಿಗೆ ಹಾಡಿದ ‘ಗೆಳೆಯ ಗೆಳೆಯ’ ಹಾಡನ್ನು ಹಾಡಿದರು. “ಈ ಹಾಡನ್ನು ನಾನು ಮತ್ತೆ ಹಾಡುವುದಿಲ್ಲ. ಇದೇ ಕೊನೆ” ಎಂದರು.
ಕೆವಿಎನ್ ಜೊತೆ ರಾಜಮೌಳಿ ಸಿನಿಮಾ : ‘RRR’ ಸಿನಿಮಾದ ಕನ್ನಡ ವಿತರಣೆ ಹಕ್ಕು KVN ಪ್ರೊಡಕ್ಷನ್ ಹೌಸ್ ಪಾಲಾಗಿದೆ. ಕೋಟಿ ಕೋಟಿ ಕೊಟ್ಟು ‘RRR’ ವಿತರಣೆ ಹಕ್ಕು ಪಡೆದಿರುವ KVN ಜೊತೆ ರಾಜಮೌಳಿ ಸಿನಿಮಾ ಮಾಡ್ತಾರಾ ಅನ್ನೋ ಪತ್ರಕರ್ತರೊಬ್ಬರ ಪ್ರಶ್ನೆಗೆ ರಾಜಮೌಳಿ ಅವರು ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದರು. ‘RRR’ ಸಿನಿಮಾದ ಕನ್ನಡ ವಿತರಣೆ ಹಕ್ಕು ಪಡೆಯಲು ದೊಡ್ಡ ಕಾಂಪಿಟೇಷನ್ ಇತ್ತು. ಆ ಕಾಂಪಿಟೇಷನ್ ನಡುವೆ KVN, ಸಿನಿಮಾದ ವಿತರಣೆ ಹಕ್ಕನ್ನು ಖರೀದಿ ಮಾಡಿದೆ. ಈ ಬಗ್ಗೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಕೆವಿಎನ್ ವೆಂಕಟ್, “ಬಾಹುಬಲಿ ಸಿನಿಮಾವನ್ನು ಕರುನಾಡ ಮಂದಿಗೆ ತೋರಿಸುವ ಇಚ್ಛೆ ಇತ್ತು. ಬಟ್ ಬಾಹುಬಲಿ ಕನ್ನಡದಲ್ಲಿ ಇರಲಿಲ್ಲ. ಆದ್ರೆ ‘RRR’ ಕನ್ನಡದಲ್ಲಿ ಇದೆ. ಹೀಗಾಗಿ ಕನ್ನಡ ವಿತರಣೆ ಹಕ್ಕನ್ನು ಎಷ್ಟೇ ಕಾಂಪಿಟೇಷನ್ ಇದ್ರು ಖರೀದಿ ಮಾಡಿದೆ” ಎನ್ನುವ ಅವರಿಗೆ ರಾಜಮೌಳಿ ಅವರ ಮೇಲೆ ಅಪಾರ ಅಭಿಮಾನ. “ಟ್ರೈಲರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಜನರು ಜನವರಿ 7ರಂದು ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ” ಎಂದರು ವೆಂಕಟ್.