ಚಿತ್ರದಲ್ಲಿನ ಎಲ್ಲಾ ಕೊರತೆಗಳನ್ನು ರಜನಿಕಾಂತ್ ಇರುವಿಕೆ ತುಂಬಿ ಬಿಡುತ್ತದೆ. ಈ ನಿಟ್ಟಿನಲ್ಲಿ ನೆಲ್ಸನ್ ರಜನಿಯ ಎಲ್ಲಾ ಗುಣ ವಿಶೇಷಗಳನ್ನು, ಜನಪ್ರಿಯತೆಯನ್ನು, ಹಳೆಯ ಸಿನಿಮಾಗಳನ್ನು ತಮ್ಮ ಈ ಚಿತ್ರದ ಯಶಸ್ಸಿಗಾಗಿ ಬಳಸಿಕೊಂಡಿದ್ದಾರೆ ಮತ್ತು ಯಶಸ್ವಿಯಾಗಿದ್ದಾರೆ.

ಭಾರತದ ಮೇನ್‌ಸ್ಟ್ರೀಮ್‌ ಮಾಸ್ ಸಿನಿಮಾಗಳ ಅನಭಿಷಕ್ತ ದೊರೆ ಸೂಪರ್‌ಸ್ಟಾರ್‌ ರಜನೀಕಾಂತ್ ಅವರ ಚಿತ್ರಗಳಿಗೆ ಅಭಿಮಾನಿಗಳು ಹೋಗುವುದೇ ಹದಿನಾರಾಣೆ ಪಕ್ಕಾ ಎಂಟರ್‌ಟೇನ್‌ಮೆಂಟ್‌ ನಿರೀಕ್ಷೆಯಲ್ಲಿ. ರಜನೀಕಾಂತ್ ಅವರ ಎವರ್‌ಗ್ರೀನ್‌ ಸ್ಟೈಲ್‌, ಶಿಳ್ಳೆ ಹೊಡೆದು ಖುಶಿ ಪಡಬಹುದಾದ ಒಂದೆರಡು ಪಂಚ್ ಡೈಲಾಗ್‌ಗಳು, ಎದ್ದು ಕುಣಿಯುವಂತೆ ಮಾಡುವ ಒಂದು ಹೀರೋ ವಿಜೃಂಭಣೆಯ ಹಾಡು, ಸಾಧಾರಣವೇ ಆದರೂ ಇವಿಷ್ಟೂ ಸಂಗತಿಗಳನ್ನು ಹಿಡಿದಿಡಬಹುದಾದ ರಜನಿಗೆ ಹೊಂದುವ ಕತೆ, ಒಂದಷ್ಟು ಹಾಸ್ಯ ಇದ್ದರೆ ಪೈಸಾ ವಸೂಲ್ ಎಂದೇ ಪರಿಗಣಿಸಬಹುದು.

ಅದಕ್ಕಿಂತ ಹೆಚ್ಚಿನದೇನು ದೊರಕಿದರೂ ಅದು ಬೋನಸ್. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ‘ಜೈಲರ್’ ಚಿತ್ರದಲ್ಲಿ ಅಭಿಮಾನಿಗಳು ಕೇಳುವ ಇವೆಲ್ಲವನ್ನೂ ಇಟ್ಟಿದ್ದಾರೆ ಮತ್ತು ಧಾರಾಳವಾಗಿ ಬೋನಸ್ ಕೂಡ ಕೊಟ್ಟಿದ್ದಾರೆ. ಗಂಟೆಗಟ್ಟಲೆ ಪೂಜೆ ಮಾಡುತ್ತಾ, ತುಂಟ ಮೊಮ್ಮಗನ ತಾಳಕ್ಕೆ ಕುಣಿಯುತ್ತಾ, ಮನೆಯ ಸಣ್ಣ ಪುಟ್ಟ ಕೆಲಸ ಮಾಡುತ್ತಾ ಸಾಮಾನ್ಯ ಹಿರಿಯ ನಾಗರಿಕರ ಜೀವನ ನಡೆಸುತ್ತಿರುವ ಮುತ್ತುವೇಲು ಪಾಂಡ್ಯನ್ (ರಜನೀಕಾಂತ್), ಅಸಿಸ್ಟೆಂಟ್ ಕಮಿಷನರ್ ತಂದೆ ಎಂದೇ ಎಲ್ಲರಿಗೂ ಪರಿಚಿತ. ನಿವೃತ್ತಿ ಹೊಂದಿದ ಮೇಲೆ ಮನೆಯಲ್ಲಾಗಲೀ, ಹೊರಗಾಗಲೀ ಮರ್ಯಾದೆ ಇಲ್ಲ ಎಂದು ಕೊರಗುವ ಪಾಂಡ್ಯನ್‌ಗೆ, ತಾನೇ ಮತ್ತೆ ಫೀಲ್ಡಿಗೆ ಇಳಿಯಬೇಕಾದ ಅನಿವಾರ್ಯತೆ ಬೇಗನೆ ಬರುತ್ತದೆ.

ಪುರಾತನ ಮೂರ್ತಿಗಳ ಕಳ್ಳಸಾಗಣಿಕೆಗೆ ಸಂಬಂಧಿಸಿದ ಕೇಸ್ ಒಂದರ ಹಿಂದೆ ಬಿದ್ದ ಪಾಂಡ್ಯನ್ ಮಗ, ಏಕಾಏಕಿ ಕಾಣೆಯಾಗುತ್ತಾನೆ. ಮಗ ಕೊಲೆಯಾಗಿದ್ದಾನೆಂದು ತಿಳಿದಾಗ ಕೊಲೆಗಡುಕರ ಮೇಲೆ ಪ್ರತೀಕಾರಕ್ಕೆ ಸಿದ್ಧನಾಗುವ ಪಾಂಡ್ಯನ್‌ ಹೆಗಲಿಗೆ ತನ್ನ ಸಂಸಾರವನ್ನು ಶತ್ರುಗಳಿಂದ ಕಾಪಾಡಿಕೊಳ್ಳುವ ಜವಾಬ್ದಾರಿ ಇರುತ್ತದೆ. ಹೀಗೆ, ಆರಂಭವಾಗುವ ಜೈಲರ್ ಪ್ರತೀಕಾರದ ಕಥನ, ಬಹುತೇಕ ಅಂದುಕೊಂಡ ಹಾದಿಯಲ್ಲೇ ಸಾಗಿ. ಕೆಲವು ತಿರುವು ಪಡೆದುಕೊಂಡು ಬಳಿಕ ನಿರೀಕ್ಷಿತ ರೀತಿಯಲ್ಲೇ ಅಂತ್ಯವಾಗುತ್ತದೆ.

‘ಜೈಲರ್’ ಚಿತ್ರದ ಮೂಲ ಕತೆ ಕಮಲ ಹಾಸನ್‌ರ ಎರಡು ಸಿನಿಮಾಗಳನ್ನು ಸೇರಿಸಿ ಸೃಷ್ಟಿಸಿದಂತೆ ಇದೆ. ಮೊದಲಾರ್ಧ ಇತ್ತೀಚಿನ ‘ವಿಕ್ರಮ್’ ಚಿತ್ರವನ್ನು ಢಾಳಾಗಿ ಹೋಲುತ್ತದೆ. ದ್ವಿತಿಯಾರ್ಧ ಹಳೆಯ ‘ಇಂಡಿಯನ್’ ಸಿನಿಮಾವನ್ನು ನೆನಪಿಸುತ್ತದೆ. ಆದರೆ, ಈ ಎರಡೂ ಸಿನಿಮಾಗಳಿಗಿಂತ ಭಿನ್ನವಾಗಿ ಕಾಣುವುದಕ್ಕೆ ಮುಖ್ಯ ಕಾರಣ ನೆಲ್ಸನ್ ತಮ್ಮ ಸಿನಿಮಾಗಳಲ್ಲಿ ಬಳಸುವ ಡಾರ್ಕ್ ಹ್ಯೂಮರ್. ಹೀಗಾಗಿ, ಈ ಎರಡೂ ಸಿನಿಮಾಗಳಿಗೆ ಇರುವ ಸೀರಿಯಸ್ ಟೋನ್ ‘ಜೈಲರ್’ಗೆ ಇಲ್ಲ. ಮಗ ಕೊಲೆಯಾಗಿದ್ದಾನೆಂದು ತಿಳಿದು ಪಾಂಡ್ಯನ್ ಅನುಭವಿಸುವ ನೋವು ಪ್ರೇಕ್ಷಕರನ್ನು ತಟ್ಟಿದರೂ, ಆ ವಿಷಾದ ಭಾವ ಕೆಲವೇ ಕ್ಷಣಗಳಲ್ಲಿ ಬದಲಾಗಿ, ಚಿತ್ರ ಮತ್ತೆ ತನ್ನ ಹ್ಯೂಮರಸ್ ಗುಣವನ್ನು ಪಡೆದುಕೊಳ್ಳುತ್ತದೆ. ಪಾಂಡ್ಯನ್ ಕುಟುಂಬ ಯಾವ ಪರಿ ಮೂವ್ ಆನ್ ಆದಂತೆ ಕಾಣುತ್ತದೆ ಎಂದರೆ, ಮಗ ಸತ್ತಿರುವುದು ಸಾಧ್ಯವಿಲ್ಲವೆಂದು ಪ್ರೇಕ್ಷಕರಿಗೆ ಅನಿಸುವಷ್ಟು.

ಚಿತ್ರದ ಮೊದಲಾರ್ಧ ಆಸಕ್ತಿಕರವಾಗಿದೆ. ಕುಟುಂಬದೊಂದಿಗೆ ನಿವೃತ್ತ ಜೀವನ ನಡೆಸುತ್ತಿರುವ ರಜನಿಯನ್ನು ನೋಡುವುದು ಖುಷಿ ಕೊಡುತ್ತದೆ. ವಯಸ್ಸಿಗೆ ಸರಿಹೊಂದುವ ಪಾತ್ರದಲ್ಲಿ, ಸಣ್ಣ ಹೀರೋಯಿನ್‌ಗಳ ಜೊತೆ ಪ್ರೇಮಗೀತೆ ಹಾಡುವ ಅನಿವಾರ್ಯತೆ ಇಲ್ಲದ ರಜನಿಕಾಂತ್ ಹೆಚ್ಚು ಆಕರ್ಷಕವಾಗಿಯೂ, ಸ್ಟೈಲಿಷ್ ಆಗಿಯೂ ಕಾಣುತ್ತಾರೆ. ದ್ವಿತೀಯಾರ್ಧ ಮಾತ್ರ ಎಲ್ಲೆಲ್ಲೋ ಸಾಗಿ, ನಂತರ ಹಳಿಗೆ ಬರುತ್ತದೆ. ಸುನಿಲ್ ಇರುವ ಭಾಗದಲ್ಲಿನ ಹಾಸ್ಯವೂ ಕ್ಲಿಕ್ ಆಗುವುದಿಲ್ಲ. ಕೊನೆಯ ಒಂದು ತಿರುವು ದೊಡ್ಡದು ಮತ್ತು ಅನಿರೀಕ್ಷಿತವೇ ಆಗಿದ್ದರೂ, ಅದು ನಿರೀಕ್ಷಿಸಿದಷ್ಟು ಪರಿಣಾಮ ಬೀರುವುದಿಲ್ಲ. ಇಷ್ಟಿದ್ದರೂ, ಈ ಎಲ್ಲಾ ಕೊರತೆಗಳನ್ನು ರಜನಿಕಾಂತ್ ಇರುವಿಕೆ ತುಂಬಿ ಬಿಡುತ್ತದೆ. ಈ ನಿಟ್ಟಿನಲ್ಲಿ ನೆಲ್ಸನ್ ರಜನಿಯ ಎಲ್ಲಾ ಗುಣ ವಿಶೇಷಗಳನ್ನು, ಜನಪ್ರಿಯತೆಯನ್ನು, ಹಳೆಯ ಸಿನಿಮಾಗಳನ್ನು ತಮ್ಮ ಈ ಚಿತ್ರದ ಯಶಸ್ಸಿಗಾಗಿ ಬಳಸಿಕೊಂಡಿದ್ದಾರೆ ಮತ್ತು ಯಶಸ್ವಿಯಾಗಿದ್ದಾರೆ.

ರಜನಿಕಾಂತ್ ಚಿತ್ರಗಳು ಸಹಜವಾಗಿಯೇ ಭರಪೂರ ಆ್ಯಕ್ಷನ್‌ಗಳಿಂದ ತುಂಬಿರುತ್ತವೆ. ಆದರೆ, ಎಂತಹ ಹೊಡೆದಾಟ ಬಡಿದಾಟಗಳಿದ್ದರೂ, ಪರದೆಯ ಮೇಲೆ ಧಾರಾಕಾರ ರಕ್ತ ಸುರಿದಿರುವುದು ಕಡಿಮೆಯೇ. ಆದರೆ, ನಿರ್ದೇಶಕ ನೆಲ್ಸನ್ ತೆರೆಯ ಮೇಲೆ ರಕ್ತದೋಕುಳಿ ಆಡಿದ್ದಾರೆ. ಇದು ಖಳನಾಯಕನ ಕ್ರೌರ್ಯವನ್ನು ತಿಳಿಸಲು ಮಾತ್ರವಲ್ಲ, ನಾಯಕನ ಕೈಗೂ ಸಾಕಷ್ಟು ರಕ್ತ ಅಂಟಿದೆ. ಪ್ರಾಯಶಃ ರಜನೀಕಾಂತ್ ಅವರ ಹಿಂದಿನ ಯಾವುದೇ ಚಿತ್ರದಲ್ಲೂ ಕಂಡಿರದಷ್ಟು ರಕ್ತ ಚೆಲ್ಲಾಡಿದೆ. ಪ್ರತೀಕಾರದ ಕತೆಗೆ ಸಂಬಂಧಿಸಿದಂತೆ ಮಾತ್ರವಲ್ಲದೆ, ನ್ಯಾಯ, ನೀತಿಯನ್ನು ಬೋಧಿಸುವ ಪಾಂಡ್ಯನ್ ‘ಜೈಲರ್’ ಆಗಿದ್ದಾಗ ಕೈದಿಗಳ ವಿರುದ್ಧ ನಡೆದುಕೊಳ್ಳುವ ರೀತಿಯೂ ಸಾಕಷ್ಟು ಹಿಂಸಾತ್ಮಕವಾಗಿದೆ.

‘ಜೈಲರ್’ನಲ್ಲಿ ಒಂದು ದೃಶ್ಯವಿದೆ. ಚಿತ್ರದಲ್ಲಿ ಬರುವ ನಿರ್ದೇಶಕನ ಪಾತ್ರವನ್ನು ಉದ್ದೇಶಿಸಿ ‘ಗಾರ್ಬೇಜ್ ರೀತಿಯ ಸಿನಿಮಾ ಮಾಡಬೇಡ, ಕುಟುಂಬ ಎಲ್ಲಾ ಕೂತು ನೋಡುವಂತಹ ಒಳ್ಳೆ ಸಿನಿಮಾ ಮಾಡು’ ಎಂದು ರಜನೀಕಾಂತ್ ಹೇಳುತ್ತಾರೆ. ‘ಜೈಲರ್’ನಲ್ಲಿ ಕುಟುಂಬದ ಕತೆ ಇದ್ದರೂ, ಅಲ್ಲಿರುವ ಹಿಂಸೆಯ, ರಕ್ತದ ದೃಶ್ಯಗಳಿಂದಾಗಿ ಇದೊಂದು ಕೌಟುಂಬಿಕ ಚಿತ್ರ ಎಂದು ಹೇಳುವುದು ಕಷ್ಟವಾಗಬಹುದು. ಇತ್ತೀಚೆಗೆ ಪ್ಯಾನ್ ಇಂಡಿಯಾ ಎಂದು ಕರೆದುಕೊಳ್ಳುವ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಚಿತ್ರವನ್ನು ಡಬ್ ಮಾಡಿ ದೇಶದ ಎಲ್ಲಡೆ ಬಿಡುಗಡೆ ಮಾಡಿ ಪ್ಯಾನ್ ಇಂಡಿಯಾ ಎನ್ನಲಾಗುತ್ತಿದೆ. ಆದರೆ, ಜೈಲರ್ ನಿಜವಾದ ಅರ್ಥದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ. ದಕ್ಷಿಣ ಮತ್ತು ಉತ್ತರ ಭಾರತದ ಹಲವಾರು ನಟರು ಇಲ್ಲಿದ್ದಾರೆ. ತಮಿಳು, ಮಲಯಾಳಂ, ಕನ್ನಡ, ಹಿಂದಿ ಹೀಗೆ ಹಲವು ಭಾಷೆಗಳಿವೆ. ರಜನೀಕಾಂತ್ ಅವರೇ ಹಲವು ಭಾಷೆಗಳಲ್ಲಿ ಮಾತನಾಡುತ್ತಾರೆ. ಚಿತ್ರಕತೆ ಹಲವು ರಾಜ್ಯಗಳನ್ನು ಸಾಗಿ ಹೋಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಆಯಾ ಭಾಷೆಯ ಸಿನಿಪ್ರೇಮಿಗಳನ್ನು ಸೆಳೆಯುವಂತೆ ಆಯಾ ಭಾಷೆಯ ಸ್ಟಾರ್ ನಟರ ಅತಿಥಿ ಪಾತ್ರಗಳಿವೆ.

ಶಿವರಾಜ್ ಕುಮಾರ್ ಮತ್ತು ಮೋಹನ್ ಲಾಲ್ ಚಿತ್ರದ ದೊಡ್ಡ ಆಕರ್ಷಣೆಯಾಗಿದ್ದಾರೆ. ಜೊತೆಗೆ ಜಾಕಿಶ್ರಾಫ್ ಕೂಡ ಗಮನ ಸೆಳೆಯುತ್ತಾರೆ. ಹಾಗೆ ನೋಡಿದರೆ, ಈ ಮಟ್ಟದ ನಿರೀಕ್ಷೆ ಹುಟ್ಟಿಸುವ ಚಿತ್ರಗಳಲ್ಲಿ ಇತ್ತೀಚೆಗೆ ಸಾಮಾನ್ಯವಾಗಿ ಕಂಡು ಬರುವಷ್ಟು ಅದ್ಧೂರಿತನ ‘ಜೈಲರ್’ನಲ್ಲಿ ಇಲ್ಲ. ತೆರೆಯ ಮೇಲೆ ಚಿತ್ರದ ಬಜೆಟ್ ಎದ್ದು ಕಾಣುವುದಿಲ್ಲ. ಅದು ಕಲಾ ನಿರ್ದೇಶನದ ಕೊರತೆಯೂ ಇರಬಹುದು. ಆದರೆ, ಚಿತ್ರಕ್ಕೆ ಬೇಕಾದ ಶ್ರೀಮಂತಿಕೆ ಕೊಟ್ಟಿರುವುದು ಹಲವು ದೃಶ್ಯಗಳ ಜೀವಾಳ ಎನಿಸುವುದು ಅನಿರುದ್ಧ್ ಹಿನ್ನೆಲೆ ಸಂಗೀತ. ಶಿವರಾಜ್ ಕುಮಾರ್‌ಗೆ ನೀಡಲಾಗಿರುವ ಬಿಜಿಎಂ ಅವರ ಸಂಗೀತಕ್ಕಿರುವ ಶಕ್ತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಶಿವರಾಜ್ ಕುಮಾರ್ ಮೊದಲ ಎಂಟ್ರಿ ಸಂಪಾದಿಸುವ ಶಿಳ್ಳೆಗಿಂತ ಹೆಚ್ಚಿನ ಶಿಳ್ಳೆ ಅವರು ಎರಡನೇ ಬಾರಿ ತೆರೆಯ ಮೇಲೆ ಕಾಣಿಸಿಕೊಂಡಾಗ ಕೇಳುತ್ತದೆ. ಶಿವರಾಜ್ ಕುಮಾರ್ ಸ್ವ್ಯಾಗ್ ಜೊತೆಗೆ ಅನಿರುದ್ಧ ಬಿಜಿಎಂ ಸೇರಿಕೊಂಡು ಆ ದೃಶ್ಯ ನಿರೀಕ್ಷೆಗೂ ಮೀರಿ ಎತ್ತರಕ್ಕೆ ಏರುತ್ತದೆ.

ಚಿತ್ರಕ್ಕೆ ಪೂರಕವಾಗಿರುವ ಮತ್ತೊಂದು ಅಂಶ ಸಿನಿಮಾಟೋಗ್ರಫಿ. ಕೆಲವು ಕ್ಲೋಸ್ ಅಪ್ ಮತ್ತು ಸಿಲ್ಹೌಟ್‌ ದೃಶ್ಯಗಳು ಪರಿಣಾಮಕಾರಿಯಾಗಿ ಮೂಡಿಬಂದಿವೆ. ಮೊದಲೇ ಹೇಳಿದಂತೆ ಚಿತ್ರದ ಜೀವಾಳವೇ ರಜನಿಕಾಂತ್. ‘ಜೈಲರ್‌’ನಿಂದ ರಜನಿಯನ್ನು ಹೊರತೆಗೆದರೆ ಚಿತ್ರದಲ್ಲಿ ಬಹುತೇಕ ಏನೂ ಉಳಿಯದೇ ಹೋಗಬಹುದು. ಮುಖ್ಯ ಖಳನ ಪಾತ್ರದಲ್ಲಿ ವಿನಾಯಕನ್ ತುಂಬಾ ಅದ್ಭುತವಾಗಿ ನಟಿಸಿದ್ದಾರೆ. ನೆಲ್ಸನ್ ಅವರ ಡಾರ್ಕ್ ಹ್ಯೂಮರ್ ಅಂಶಗಳನ್ನು ಅವರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ದೇವಾಲಯದಲ್ಲಿ ಕದಿಯಲು ಹೊರಡುವಾಗ, ‘ದೇವರೇ ಎಲ್ಲಾ ಕೆಲಸ ಸುಸೂತ್ರವಾಗಿ ನಡೆಯಲಿ’ ಎಂದು ವರ್ಮನ್ ದೇವರನ್ನೇ ಬೇಡುವುದು ಇದಕ್ಕೊಂದು ಉದಾಹರಣೆ.

ಇರುವ ಸಣ್ಣ ಕಾಲಾವಕಾಶದಲ್ಲಿಯೇ ಶಿವ ರಾಜಕುಮಾರ್ ಮತ್ತಷ್ಟು ಹೊಸ ಅಭಿಮಾನಿಗಳನ್ನು ಸಂಪಾದಿಸುವಂತೆ ಮಿಂಚಿದ್ದಾರೆ. ಮೋಹನ್ ಲಾಲ್ ಅಭಿಮಾನಿಗಳಿಗೆ ಖುಷಿ ಕೊಡುತ್ತಾರೆ. ಜಾಕಿ ಶ್ರಾಫ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಆದರೆ, ಸುನಿಲ್ ತಮಗೆ ದೊರಕಿರುವ ಪಾತ್ರದಿಂದಾಗಿ ಸೋಲುತ್ತಾರೆ. ನೆಲ್ಸನ್ ಚಿತ್ರಗಳಲ್ಲಿ ಸಾಮಾನ್ಯವಾಗಿರುವ ಚಿತ್ರವಿಚಿತ್ರ ಪಾತ್ರಗಳು ಇಲ್ಲೂ ಇವೆ ಮತ್ತು ನೆನಪಿನಲ್ಲಿ ಉಳಿಯುವಂತಿವೆ. ಯೋಗಿ ಬಾಬಾ, ವರ್ಮನ್ ಬಲಗೈ ಬಂಟ, ರೆಡಿನ್ ಕಿಂಗ್‌ಸ್ಲೀ ನೆನಪಿನಲ್ಲುಳಿಯುತ್ತಾರೆ.

ಚಿತ್ರದಲ್ಲಿ ಮಹಿಳಾ ಪಾತ್ರಗಳು ಮಾತ್ರ ಯಾವುದೇ ಮಹತ್ವವಿಲ್ಲದೆ ಸೊರಗಿವೆ. ರಜನಿ ಪತ್ನಿಯಾಗಿ ನಟಿಸಿರುವ ರಮ್ಯಕೃಷ್ಣ ಅವರ ಪ್ರತಿಭೆ ಇಲ್ಲಿ ವ್ಯರ್ಥವಾಗಿದೆ. ‘ಪಡೆಯಪ್ಪ’ ಚಿತ್ರದ ಹಂತಕ್ಕೆ ರಜನಿ – ರಮ್ಯಕೃಷ್ಣ ಜೋಡಿಯನ್ನು ನಿರೀಕ್ಷಿಸಿದವರಿಗೆ ಖಂಡಿತಾ ನಿರಾಸೆಯಾಗುತ್ತದೆ. ತಮನ್ನಾ ಹಾಡಿಗಾಗಿ ಮತ್ತು ಒಂದೆರಡು
ದೃಶ್ಯದಲ್ಲಿ ಬಂದು ಮರೆಯಾಗುತ್ತಾರೆ. ಚಿತ್ರದಲ್ಲಿ ಒಂದೂ ಪ್ರಮುಖವೆನಿಸುವ ಮಹಿಳಾ ಪಾತ್ರಗಳಿಲ್ಲ. ರಜನಿಯನ್ನು ಸಂಭ್ರಮಿಸುವ ಆಸೆ ಇದ್ದವರು ಖಂಡಿತಾ ‘ಜೈಲರ್’ ನೋಡಬಹುದು. ಹಿಂಸೆ ಇಷ್ಟಪಡದ, ಚಿತ್ರಗಳಲ್ಲಿ ಲಾಜಿಕ್ ಬೇಕೆಂದು ಬಯಸುವ, ಚಿತ್ರ ಮನರಂಜನೆಗೆ ಮಾತ್ರವಲ್ಲ ಎಂದು ನಂಬಿರುವವರು ದೂರವಿದ್ದರೆ ಉತ್ತಮ.

LEAVE A REPLY

Connect with

Please enter your comment!
Please enter your name here