ಕಿರುತೆರೆ ಜನಪ್ರಿಯ ಕಾಮಿಡಿ ಶೋ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೀರುಂಡೆ ರಘು ಹೀರೋ ಆಗಿ ನಟಿಸುತ್ತಿರುವ ‘ರಣಾಕ್ಷ’ ಸಿನಿಮಾದ ಫಸ್ಟ್ಲುಕ್ ಬಿಡುಗಡೆಯಾಗಿದೆ. ರಾಘವ ನಿರ್ದೇಶನದ ಈ ಸಸ್ಪೆನ್ಸ್ – ಥ್ರಿಲ್ಲರ್ ಚಿತ್ರದ ನಾಯಕಿಯರಾಗಿ ರಕ್ಷಾ ಮತ್ತು ರೋಹಿ ನಟಿಸುತ್ತಿದ್ದಾರೆ.
ಈ ಹಿಂದೆ ‘ಮರೆಯದೆ ಕ್ಷಮಿಸುʼ ಚಿತ್ರ ನಿರ್ದೇಶಿಸಿದ್ದ ಕೆ ರಾಘವ ಅವರ ಮತ್ತೊಂದು ಸಿನಿಮಾ ‘ರಣಾಕ್ಷ’ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಫಸ್ಟ್ಲುಕ್ ಬಿಡುಗಡೆ ಸಂದರ್ಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಕಿರುತೆರೆಯ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೀರುಂಡೆ ರಘು, ರಕ್ಷಾ ಹನುಮಂತು ಹಾಗೂ ರೋಹಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. KVR Pictures ಬ್ಯಾನರ್ ಅಡಿಯಲ್ಲಿ ಹೆಚ್ ಎಸ್ ರಾಮು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಭಾ ಶಿವಾಜಿರಾವ್ ಸಹ ನಿರ್ಮಾಪಕರು.
ನಿರ್ದೇಶಕ ರಾಘವ ಚಿತ್ರದ ಕುರಿತು ಮಾಹಿತಿ ನೀಡಿ, ‘ರಣಾಕ್ಷ ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಮಾಸ್ ಎಂಟರ್ಟೇನರ್ ಚಿತ್ರ. ಮೊದಲ ಬಾರಿಗೆ ರಘು ಕಾಮಿಡಿ ಬಿಟ್ಟು, ಕ್ಲಾಸ್, ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ರಕ್ಷಾ ಪಾತ್ರ ವಿಶೇಷವಾಗಿದೆ. ಒಂದು ಹುಡುಗಿಯ ಸುತ್ತ ಕತೆ ನಡೆಯುತ್ತದೆ’ ಎನ್ನುತ್ತಾರೆ. ಸಕಲೇಶಪುರ, ಹೊನ್ನಾವರ, ಮೂಡಬಿದ್ರೆ, ಕಾರ್ಕಳ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಮೂರು ಹಾಡು, ಮೂರು ಸಾಹಸ ದೃಶ್ಯಗಳಿವೆಯಂತೆ. ವಿಶಾಲ್ ಆಲಾಪ್ ಸಂಗೀತ ಸಂಯೋಜನೆ, ದೀಪಕ್ ಕುಮಾರ್ ಛಾಯಾಗ್ರಣ ಮಾಡಿದ್ದಾರೆ. ಸದ್ಯ ಚಿತ್ರವು ರೀರೆಕಾರ್ಡಿಂಗ್ ಹಂತದಲ್ಲಿದ್ದು, ಫೆಬ್ರವರಿಗೆ ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ.
ನಿರ್ಮಾಪಕ ರಾಮು ಮಾತನಾಡಿ, ‘ನಿರ್ದೇಶಕರು ಕತೆ ಹೇಳಿದ ಶೈಲಿ, ಕಾನ್ಸೆಪ್ಟ್ ನನಗೆ ತುಂಬಾ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ನನಗೆ ತಂದೆ ಸ್ಥಾನದಲ್ಲಿ ನಿಂತು ಹನುಮಂತರಾಯಪ್ಪ ಸಪೋರ್ಟ್ ಮಾಡಿದ್ದಾರೆ’ ಎಂದಿದ್ದಾರೆ. ನಾಯಕ ಸೀರುಂಡೆ ರಘು ‘ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸೈಡ್ ರೋಲ್ ಮಾಡಿದ್ದೆ. ಮೊದಲ ಬಾರಿಗೆ ಲೀಡ್ ರೋಲ್ ಮಾಡುತ್ತಿದ್ದೇನೆ. ನಾಲ್ವರು ಸ್ನೇಹಿತರ ಜೊತೆ ಸಾಗುವ ಪಾತ್ರ’ ಎಂದರು. ನಾಯಕಿ ರಕ್ಷಾ ಮಾತನಾಡಿ, ‘ನನ್ನದು ಮುಗ್ಧ ಹಳ್ಳಿ ಹುಡುಗಿಯ ಪಾತ್ರ’ ಎಂದರೆ, ಮತ್ತೊಬ್ಬ ನಟಿ ರೋಹಿ ಅವರಿಗೆ ಇದು ಮೊದಲ ಸಿನಿಮಾ. ಛಾಯಾಗ್ರಾಹಕ ದೀಪಕ್, ಉಮೇಶ್ ಬಣಕಾರ್, ಹನುಮಂತರಾಯಪ್ಪ, ವೆಂಕಟೇಶ್ ಚಿತ್ರದ ಕುರಿತು ಮಾತನಾಡಿದರು.