ನಟ ಧನಂಜಯ ಅವರ ‘ರತ್ನನ್ ಪ್ರಪಂಚ’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಆದರೆ ಇದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗದೆ ಓಟಿಟಿಯಲ್ಲಿ ತೆರೆ ಕಾಣುತ್ತಿರೋದು ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಅಮೇಜಾನ್ ಪ್ರೈಮ್‌ನಲ್ಲಿ ಇದೇ 22ರಂದು ಸಿನಿಮಾ ಸ್ಟ್ರೀಮ್ ಆಗಲಿದೆ. ಆ ಬಗ್ಗೆ ಚಿತ್ರದ ನಿರ್ದೇಶಕರಾದ ರೋಹಿತ್ ಪದಕಿ ಅವರ ಜೊತೆ ‘ಮೋಜೋ 360 ಕನ್ನಡ’ದ ಒಂದು ಚುಟುಕು ಸಂದರ್ಶನ ಇಲ್ಲಿದೆ.
ರೋಹಿತ್ ಪದಕಿ ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಬರಹಗಾರರಾಗಿ, ಸಿನಿಕರ್ಮಿಯಾಗಿ ಹೆಸರು ಮಾಡಿದ್ದಾರೆ. ಈಗ ಅವರ ನಿರ್ದೇಶನದ ರತ್ನನ್ ಪ್ರಪಂಚ ಇದೇ ಅಕ್ಟೋಬರ್ 22ರಂದು ಅಮೇಜಾನ್ ಪ್ರೈಮ್ ನಲ್ಲಿ ನೇರವಾಗಿ ತೆರೆ ಕಾಣುತ್ತಿದೆ. ಚಿತ್ರರಂಗದಲ್ಲಿ ಡಾಲಿ ಧನಂಜಯ ಎಂದೇ ಹೆಸರಾಗಿರುವ ಧನಂಜಯ ಅವರನ್ನು ನಾಯಕರನ್ನಾಗಿಸಿ ಒಂದು ಕ್ಲಾಸ್ ಸಿನಿಮಾ ಮಾಡಿದ್ದಾರೆ ರೋಹಿತ್. ಈ ಬಗ್ಗೆ ಅವರ ಜೊತೆಗೊಂದು ಮಾತುಕತೆ.
ರತ್ನನ್ ಪ್ರಪಂಚ ಚಿತ್ರಮಂದಿರದಲ್ಲಿ ಬಿಡುಗಡೆ ಆಗೋದರ ಬದಲು ನೇರವಾಗಿ ಅಮೇಜಾನ್ ಪ್ರೈಮ್ ಗೆ ಹೋಗಿದ್ದು ಯಾಕೆ ಅನ್ನೋ ಪ್ರಶ್ನೆ ಎಲ್ಲರದು. ಇದಕ್ಕೆ ನಿಮ್ಮ ಉತ್ತರ?
ಏನ್ ಮಾಡೋದು, ಈಗ ಸಿನಿಮಾ ಬಿಡುಗಡೆಗೆ ಅವಕಾಶ ಸಿಗೋದು ಕಷ್ಟ ಅನ್ನೋ ಥರ ಆಗಿದೆ.
ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಹಾಜರಾತಿಗೆ ಅನುಮತಿ ಇದೆಯಲ್ಲ?
ನಿಜ. ಆದ್ರೆ ದೊಡ್ಡ ಸಿನಿಮಾಗಳು ಬರ್ತಾ ಇವೆ. ಅದರ ಜೊತೆಯಲ್ಲಿ ಸಾಕಷ್ಟು ಸಿನಿಮಾಗಳು ಕ್ಯೂನಲ್ಲಿ ಇವೆ. ಹಾಗಾಗಿ ಚಿತ್ರಮಂದಿರದಲ್ಲಿ ಬಿಡುಗಡೆ ಆದ್ರೆ, ನಾವು ಒಂದೆರಡು ವಾರಕ್ಕೆ ಸೀಮಿತ ಆಗಿ ಬರಬೇಕಾಗುತ್ತೆ.
ಪ್ರೈಮ್ ನಲ್ಲಿ ‘ರತ್ನನ್ ಪ್ರಪಂಚಕ್ಕೆ’ ಎಷ್ಟು ಬೆಲೆ ಸಿಕ್ತು ಅಂತ ಹೇಳೋದು ಸಾಧ್ಯನಾ?
ನಾನು ಅಮೌಂಟ್ ರಿವೀಲ್ ಮಾಡೋಕಾಗಲ್ಲ. ಆದ್ರೆ, ಕನ್ನಡಕ್ಕೆ ಡೈರೆಕ್ಟ್ ಓಟಿಟಿ ರಿಲೀಸ್ ಆಗಿರೋ ಸಿನಿಮಾಗಳಲ್ಲೇ ಅತಿ ಹೆಚ್ಚು ಎನ್ನುವಂಥ ಮೊತ್ತ ಸಿಕ್ಕಿದೆ ಅಂತ ಹೇಳಬಹುದು. ತುಂಬಾ ಒಳ್ಳೆ ಡೀಲ್ ಸಿಕ್ಕಿದೆ. ಸಿನಿಮಾಗೆ ಸಾಕಷ್ಟು ಖರ್ಚು ಮಾಡಿದ್ವಿ. ಹಾಗಾಗಿ ಹಾಕಿರೋ ಹಣಕ್ಕೆ ಡಬಲ್ ಹಣ ಸಿಕ್ಕಾಗ ಬೇಡ ಅನ್ನೋಕಾಗಲ್ಲ. ಅಲ್ಲದೆ, ನನ್ನ ನಿರ್ದೇಶನದ ಸಿನಿಮಾ ಅನ್ನೋದು ನನ್ನ ಕೈಲಿರೋವರೆಗೂ ಆರ್ಟ್. ಅದಾದ ನಂತರ ಅದು ಕಾಮರ್ಸ್ ಆಗುತ್ತೆ. ನಿರ್ಮಾಪಕರಿಗೆ ದುಡ್ಡು ಆಗಬೇಕು. ನಿರ್ದೇಶಕನಾಗಿ ನನಗೂ ಆ ಜವಾಬ್ದಾರಿ ಇರುತ್ತೆ.
ನಿರ್ಮಾಪಕರು ಚಿತ್ರಮಂದಿರದಲ್ಲಿ ಬಿಡುಗಡೆಗೆ ಆಸಕ್ತಿ ತೋರಿಸಲಿಲ್ವಾ?
ಅದೇನಾಗುತ್ತೆ ಅಂದ್ರೆ, ಚಿತ್ರಮಂದಿರಕ್ಕೆ ಅಂತ ಕಾಯ್ಕೊಂಡು ಕೂತ್ಕೊಳ್ಳೋ ಪರಿಸ್ಥಿತಿಯಲ್ಲಿ ನಾವಿಲ್ಲ. ಕಾಯಬೇಕು ಅಂದ್ರೆ ಮತ್ತೆ ನಾಲ್ಕೈದು ತಿಂಗಳು ಕಾಯಬೇಕಾಗುತ್ತೆ. ಜೊತೆಗೆ ಸ್ಫರ್ಧೆ ಜಾಸ್ತಿ ಇದೆ. ಜೊತೆಗೆ ಚಿತ್ರಮಂದಿರಕ್ಕೆ ಜನ ಬರ್ತಾರೆ ಅಂತ ಇನ್ನೂ ನಂಬಿಕೆ ಬಂದಿಲ್ಲ. ಮತ್ತೆ ಯಾವಾಗ 50 ಪರ್ಸೆಂಟ್ ಹಾಜರಾತಿ ಅಂತ ರೂಲ್ ಬರುತ್ತೋ ಹೇಳೋಕಾಗಲ್ಲ.
ಸರಿ, ನಿರ್ದೇಶಕರಾಗಿ ಸಿನಿಮಾ ಬಗ್ಗೆ ಏನ್ ಹೇಳ್ತೀರಾ?
ಒಂದೆರಡು, ಎರಡೂವರೆ ಗಂಟೆ, ನಗಿಸಿ, ನಗಿಸ್ತಾ ಅಳಿಸಿ, ಅಳಿಸ್ತಾ ನಗಿಸಿ ಒಳ್ಳೆ ಫೀಲ್ ಕೊಡೋ ಸಿನಿಮಾ. ಸಂಬಂಧಗಳು, ಬದುಕಿನ ಜರ್ನಿ ಎಲ್ಲವೂ ತುಂಬಿರೋ ಮನರಂಜನಾತ್ಮಕ ಸಿನಿಮಾ. ಮಿಡ್ಲ್ ಕ್ಲಾಸ್ ಎಮೋಷನ್ಸ್ ಇರೋ ಸಿನಿಮಾ ಜನಕ್ಕೆ ಇಷ್ಟ ಆಗುತ್ತೆ ಅಂತ ನಂಬಿಕೆ ಇದೆ.
ಧನಂಜಯ ಅವರ ಡಾಲಿ ಇಮೇಜ್ ಬದಲಾಯಿಸಿದ್ದು ರಿಸ್ಕಿ ಅನ್ನಿಸಲ್ವಾ?
ನಂಗೆ ಧನಂಜಯ ಅವರು ಮುಂಚೆಯಿಂದಲೇ ಪರಿಚಯ ಇದ್ದಿದ್ದು ಒಳ್ಳೆ ನಟ ಆಗಿ. ಈಗ ಅವರು ಡಾಲಿ ಆಗಿರಬಹುದು. ಆದ್ರೆ ಆ ನಟ ಧನಂಜಯ ಅವರ ಜೊತೆ ಕೆಲಸ ಮಾಡೋದು ಖುಷಿ. ಅವರು ಒಂಥರಾ ನೀರಿನ ಥರ. ಯಾವ ಪಾತ್ರೆಗ ಬೇಕಾದರೂ ಹೊಂದಿಕೊಳ್ತಾರೆ. ನನಗೇನೂ ಇಮೇಜ್ ಬದಲಾಯಿಸಿರೋದ್ರಿಂದ ತೊಂದರೆ ಆಗುತ್ತೆ ಅನ್ನಿಸಲ್ಲ. ಆ ಡಾಲಿ ಫೀಲ್ ಅನ್ನು, ನನ್ನ ಸಿನಿಮಾ, ಈ ಸಿನಿಮಾ ನೋಡುವ ಸಮಯದ ಮಟ್ಟಿಗೆ ಮರೆಸುತ್ತೆ ಅಂತ ನಂಬಿಕೆ ಇದೆ. ಆರಂಭದಲ್ಲಿ ಅವರದ್ದು ಹೊಸ ಇಮೇಜ್ ಅನ್ನಿಸಬಹುದು. ಆದ್ರೆ ಸಿನಿಮಾ ಮುಂದುವರೆದಂತೆ ಅದನ್ನೆಲ್ಲಾ ಮರೆತು ಪ್ರೇಕ್ಷಕ ಸಿನಿಮಾನ ಸಂಪೂರ್ಣ ಎಂಜಾಯ್ ಮಾಡ್ತಾನೆ ಅನ್ನೋ ನಂಬಿಕೆ ನನ್ನದು.