ರಾಜು ಬೋನಗಾನಿ ನಿರ್ಮಾಣ – ನಿರ್ದೇಶನದ ‘ರೇವ್ ಪಾರ್ಟಿ’ ಸಿನಿಮಾ ಆಗಸ್ಟ್‌ನಲ್ಲಿ ತೆರೆಕಾಣಲಿದೆ. ‘ರೇವ್ ಪಾರ್ಟಿ’ ಸುತ್ತ ಕತೆ ಹೆಣೆದು ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಚಿತ್ರವಿದು. ರಂಜನೆ ಜೊತೆ ಸಂದೇಶ ದಾಟಿಸುವುದು ಚಿತ್ರದ ಆಶಯ ಎನ್ನುತ್ತಾರೆ ರಾಜು ಬೋನಗಾವಿ.
ಮೋಜು, ಮಸ್ತಿಗೆ ನಡೆಯುವ ರೇವ್ ಪಾರ್ಟಿಗಳ ಹಿಂದೆ ಭೂಗತ ಜಗತ್ತೂ ಇರುತ್ತದೆ. ಮೋಜಿಗಾಗಿ ನಡೆಯುವ ಪಾರ್ಟಿಗಳು ಕೊನೆಗೆ ಮನಸ್ತಾಪ, ಕೊಲೆಗಳಲ್ಲೂ ಕೊನೆಯಾಗುವುದಿದೆ. ನಿರ್ದೇಶಕ ರಾಜು ಬೋನಗಾನಿ ಅವರು ಈ ಕಾನ್ಸೆಪ್ಟ್ ಮೇಲೆ ಕತೆ, ಚಿತ್ರಕಥೆ ರಚಿಸಿ ಸಿನಿಮಾ ನಿರ್ದೇಶಿಸಿದ್ದಾರೆ. ‘ಸಾಮಾನ್ಯವಾಗಿ ರೇವ್ ಪಾರ್ಟಿಗಳು ಬೆಂಗಳೂರು, ಉಡುಪಿ, ಗೋವಾದಲ್ಲಿ ನಡೆಯುತ್ತವೆ. ಈ ಪಾರ್ಟಿಗಳು ಹೇಗೆ ನಡೆಯುತ್ತವೆ? ಅದರ ಹಿಂದೆ ಯಾರೆಲ್ಲಾ ಇರುತ್ತಾರೆ? ಈ ಪಾರ್ಟಿಗಳು ಯುವ ಜನತೆಯ ಮೇಲೆ ಏನೆಲ್ಲಾ ದುಷ್ಪರಿಣಾಮಗಳು ಬೀರುತ್ತವೆ ಎಂಬ ಅಂಶಗಳನ್ನು ಈ ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇವೆ. ಇಲ್ಲಿ ರಂಜನೆ ಜೊತೆ ಸಂದೇಶವೂ ಇರಲಿದೆ’ ಎನ್ನುತ್ತಾರೆ ‘ರೇವ್ ಪಾರ್ಟಿ’ ಚಿತ್ರದ ನಿರ್ದೇಶಕ ರಾಜು ಬೋನಗಾನಿ.
ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ರಾಜು ಬೋನಗಾವಿ ನಿರ್ದೇಶನದ ಜೊತೆ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ಕ್ರಿಶ್ ಸಿದ್ದಿಪಲ್ಲಿ, ರಿತಿಕಾ ಚರ್ಕವರ್ತಿ, ಐಶ್ವರ್ಯಾ ಗೌಡ, ಸುಚೇಂದ್ರ ಪ್ರಸಾದ್, ತಾರಕ್ ಪೊನ್ನಪ್ಪ ಚಿತ್ರದ ಪ್ರಮುಖ ಕಲಾವಿದರು. ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಉಡುಪಿಯಲ್ಲಿ 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ದಿಲೀಪ್ ಭಂಡಾರಿ ಸಂಗೀತ, ವೆಂಕಟ್ ಮನ್ನಂ ಛಾಯಾಗ್ರಹಣ, ರವಿಕುಮಾರ್ ಸಂಕಲನ, ವೆಂಕಟ್ ಆರೆ ಕಲಾನಿರ್ದೇಶನ ಚಿತ್ರಕ್ಕಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಆಗಸ್ಟ್ ತಿಂಗಳಲ್ಲಿ ಸಿನಿಮಾ ತೆರೆಕಾಣಲಿದೆ.