ಪ್ರಶಾಂತ್‌ ನೀಲ್‌ ನಿರ್ದೇಶನದ ‘KGF’ ಚಾಪ್ಟರ್‌ 2 ಸಿನಿಮಾದ ಡಬ್ಬಿಂಗ್‌ ಪೂರ್ಣಗೊಳಿಸಿದ್ದಾರೆ ನಟಿ ರವೀನಾ ಟಂಡನ್‌. ನಿರ್ದೇಶಕ ಪ್ರಶಾಂತ್‌ ನೀಲ್‌ ಮತ್ತು ನಟಿ ರವೀನಾ ಟ್ವಿಟರ್‌ನಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ. ಯಶ್‌ ಅಭಿನಯದ ಈ ಬಹುನಿರೀಕ್ಷಿತ ಸಿನಿಮಾ ಏಪ್ರಿಲ್‌ 14ರಂದು ತೆರೆಕಾಣಲಿದೆ.

2022ರ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು ‘KGF’ ಚಾಪ್ಟರ್‌ 2. ನಟಿ ರವೀನಾ ಟಂಡನ್‌ ಚಿತ್ರದಲ್ಲಿ ಪ್ರಧಾನ ಮಂತ್ರಿ ರಮಿಕಾ ಸೇನ್‌ ಪಾತ್ರ ನಿರ್ವಹಿಸುತ್ತಿದ್ದಾರೆ. ತಮ್ಮ ಪಾತ್ರದ ಡಬ್ಬಿಂಗ್‌ ಪೂರ್ಣಗೊಳಿಸಿರುವ ನಟಿ ಚಿತ್ರತಂಡಕ್ಕೆ ಧನ್ಯವಾದ ಹೇಳಿದ್ದಾರೆ. “Gavel of brutality! Dubbing completed with the coolest prime minister #RamikaSen. Thank you mam,” ಎಂದು ಟ್ವಿಟರ್‌ನಲ್ಲಿ ರವೀನಾ ಜೊತೆಗಿನ ತಮ್ಮ ಫೋಟೊ ಶೇರ್ ಮಾಡಿದ್ದಾರೆ ನಿರ್ದೇಶಕ ಪ್ರಶಾಂತ್‌ ನೀಲ್‌. ಅವರ ಟ್ವಿಟರ್‌ ಶೇರ್‌ ಮಾಡಿದ ನಟಿ ರವೀನಾ, “What a pleasure to work with you all it has been @prashanth_neel @TheNameIsYash @hombalefilms. Such fine gentlemen you all are! Godbless and Godspeed” ಎಂದು ಶೂಟಿಂಗ್‌ ದಿನಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಅವಕಾಶಕ್ಕಾಗಿ ಧನ್ಯವಾದ ಹೇಳಿದ್ದಾರೆ.

2018ರಲ್ಲಿ ತೆರೆಕಂಡ ಯಶ್‌ ನಟನೆಯ ‘KGF’ ಸಿನಿಮಾ ಭಾರತದಾದ್ಯಂತ ದೊಡ್ಡ ಯಶಸ್ಸು ಕಂಡಿತ್ತು. ಬಡಕುಟುಂಬದಲ್ಲಿ ಬೆಳೆದ ಯುವಕನೊಬ್ಬ ಚಿನ್ನದ ಗಣಿಯ ಒಡೆಯನಾಗುವ ಕತೆ ಚಿತ್ರದ್ದು. ಪಾರ್ಟ್‌ 1ನಲ್ಲಿ ಮೇಕಿಂಗ್‌ನಿಂದ ಜನರನ್ನು ರಂಜಿಸಿದ ಸಿನಿಮಾದ ಸರಣಿ ಬಗ್ಗೆ ಸಿನಿಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿದೆ. ಕೋವಿಡ್‌ನಿಂದಾಗಿ ಚಿತ್ರದ ಬಿಡುಗಡೆ ವಿಳಂಬವಾಗಿದ್ದು, ಏಪ್ರಿಲ್‌ 14ರಂದು ಸಿನಿಮಾ ತೆರೆಕಾಣಲಿದೆ. ಬಾಲಿವುಡ್‌ ನಟ ಸಂಜಯ್‌ ದತ್‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದು, ಪ್ರಕಾಶ್‌ ರಾಜ್‌, ಮಾಳವಿಕಾ ಅವಿನಾಶ್‌ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here