‘ಫಿದಾ’ ಚಿತ್ರದಲ್ಲಿ ಸಾಯಿ ಪಲ್ಲವಿ ‘ವಚ್ಚಿಂದೇ…’ ಹಾಡಿಗೆ ಹಾಗೂ ‘ಮಾರಿ 2’ ಚಿತ್ರದಲ್ಲಿ ‘ರೌಡಿ ಬೇಬಿ…’ ಹಾಡಿನಲ್ಲಿ ಧನುಷ್‌ಗೆ ಕಾಂಪಿಟೇಷನ್‌ ಕೊಡುವಂತೆ ಡ್ಯಾನ್ಸ್‌ ಮಾಡಿರುವ ರೀತಿ ನೋಡಿ ಸಿನಿಪ್ರಿಯರು ಅಬ್ಬಾ ಎಂದಿದ್ದರು. ಸದ್ಯ ನಟಿಯ ಕಾಲೇಜು ದಿನಗಳ ಡ್ಯಾನ್ಸ್‌ ವಿಡಿಯೋ ಒಂದು ವೈರಲ್‌ ಆಗಿದೆ.

ದಕ್ಷಿಣ ಭಾರತದ ಸಹಜ ಸುಂದರಿ ಎಂದೇ ಖ್ಯಾತರಾಗಿರುವ ನಟಿ ಸಾಯಿ ಪಲ್ಲವಿ. ಸರಳತೆಗೇ ಹೆಸರಾಗಿರುವ ಈ ನಟಿ ಎಷ್ಟು ಚೆನ್ನಾಗಿ ಡ್ಯಾನ್ಸ್‌ ಮಾಡುತ್ತಾರೆ ಅಂತ ಪ್ರತ್ಯೇಕವಾಗಿ ವರ್ಣಿಸಬೇಕಿಲ್ಲ. ಸ್ಟಾರ್‌ ನಟರ ಜೊತೆಗೆ ತೆರೆ ಹಂಚಿಕೊಳ್ಳುವ ಈ ನಟಿಯ ನೃತ್ಯಕ್ಕೇ ಮನ ಸೋತವರೇ ಇಲ್ಲ. ಅವರು ರಿಯಾಲಿಟಿ ಡ್ಯಾನ್ಸ್‌ ಶೋಗಳಲ್ಲಿ ನೃತ್ಯ ಮಾಡಿರುವ ಕೆಲವು ವಿಡಿಯೋಗಳು ಈ ಹಿಂದೆಯೂ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದವು. ಈಗಲೂ ಸಾಯಿ ಪಲ್ಲವಿ ಅವರ ಹೆಸರಲ್ಲಿ ಗೂಗಲ್‌ ಮಾಡಿದ್ರೆ ಅವುಗಳನ್ನ ನೋಡಬಹುದು. ಕಾಲೇಜು ದಿನಗಳಿಂದ ಡ್ಯಾನ್ಸ್ ಮಾಡುತ್ತಿದ್ದ ನಟಿಯ ಹಳೇ ವಿಡಿಯೋ ಒಂದು ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಾಯಿ ಪಲ್ಲವಿ ಕಾಲೇಜು ದಿನಗಳಲ್ಲಿ ನಡೆದಿದ್ದ ಫೆಸ್ಟ್‌ವೊಂದರಲ್ಲಿ ಮಾಡಿರುವ ಡ್ಯಾನ್ಸ್‌ ವಿಡಿಯೋ ಒಂದನ್ನು ನೆಟ್ಟಿಗರೊಬ್ಬರು Xನಲ್ಲಿ (ಟ್ವಿಟರ್‌) ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಸಾಯಿ ಪಲ್ಲವಿ ‘ತೀಸ್‌ ಮಾರ್‌ ಖಾನ್‌’ ಚಿತ್ರದಲ್ಲಿ ಕತ್ರಿನಾ ಕೈಫ್‌ ಹೆಜ್ಜೆ ಹಾಕಿ ಫೇಮಸ್‌ ಆದ ‘ಶೀಲಾ ಕಿ ಜವಾನಿ…’ ಹಾಡಿಗೆ ಸಖತ್ತಾಗಿ ಸೊಂಟ ಬಳುಕಿಸಿದ್ದಾರೆ. ಸಾಯಿ ಪಲ್ಲವಿ 2008 ಹಾಗೂ 2009ರಲ್ಲಿ ಎರಡು ರಿಯಾಲಿಟಿ ಡ್ಯಾನ್ಸ್‌ ಶೋಗಳಲ್ಲಿ ಭಾಗವಹಿಸಿದ್ದರು. ಅವರಿಗೆ ಬಾಲ್ಯದಿಂದಲೂ ಡ್ಯಾನ್ಸ್‌ ಮಾಡೋದು ಅಂದರೆ ತುಂಬಾ ಇಷ್ಟವಂತೆ. ಹೀಗಾಗಿಯೇ ಅವರ ತಾಯಿ, ಸಾಯಿ ಪಲ್ಲವಿಗೆ ಮಾಧುರಿ ದೀಕ್ಷಿತ್‌ ಹಾಗೂ ಐಶ್ವಯಾ ರೈ ಅವರ ಡ್ಯಾನ್ಸ್‌ ವಿಡಿಯೋಗಳನ್ನು ತೋರಿಸಿ ಅಭ್ಯಾಸ ಮಾಡಿಸುತ್ತಿದ್ದರಂತೆ. ಯಾವುದೇ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದರೆ ಖುಷಿ ಪಡುವುದರ ಜೊತೆಗೆ ಮತ್ತಷ್ಟು ಎತ್ತರಕ್ಕೆ ಬೆಳೆಯುವಂತೆ ಪ್ರೋತ್ಸಾಹಿಸುತ್ತಿದ್ದರಂತೆ.

ಹೀಗೆ ಡ್ಯಾನ್ಸ್‌ ರಿಯಾಲಿಟಿ ಶೋಗಳಲ್ಲಿ ಹೆಸರು ಮಾಡಿದ ನಟಿ ಈಗ ದಕ್ಷಿಣ ಭಾರತದ ಟಾಪ್‌ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕಮರ್ಷಿಯಲ್‌ ಸಿನಿಮಾಗಳ ಜೊತೆಜೊತೆಗೆ ನಟನೆಗೆ ಸ್ಕೋಪ್‌ ಇರುವ ಪಾತ್ರಗಳಲ್ಲಿ ಹೆಚ್ಚಾಗಿ ಮಿಂಚುತ್ತಿದ್ದಾರೆ. ಇನ್ನು ಇವರು ಸಿನಿಮಾಗಳಲ್ಲಿ ಮಾಡುವ ಡ್ಯಾನ್ಸ್‌ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್‌ ಆಗುತ್ತಿರುತ್ತದೆ. ಸದ್ಯ ಸಾಯಿ ಪಲ್ಲವಿ ಬಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಚಿತ್ರದಲ್ಲಿ ಸೀತೆಯಾಗಿ ನಟಿಸುತ್ತಿದ್ದಾರೆ. ರಣಬೀರ್‌ ಕಪೂರ್‌ ರಾಮನಾಗಿ ನಟಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here