ಬಹುನಿರೀಕ್ಷಿತ ‘ಸಲಾರ್’ PAN ಇಂಡಿಯಾ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ರ ಸಿನಿಮಾ ಕತ್ತಲೆ ಜಗತ್ತಿನ ಮತ್ತೊಂದು ಕತೆ ಹೇಳಲಿದೆ ಎನ್ನುವ ಸೂಚನೆ ಸಿಗುತ್ತದೆ. ಟ್ರೇಲರ್ನಲ್ಲಿ ಪ್ರಮುಖ ಪಾತ್ರಗಳು ಕಾಣಿಸುತ್ತವೆ. ಇದೇ ಡಿಸೆಂಬರ್ 22ರಂದು ಸಿನಿಮಾ ತೆರೆಕಾಣಲಿದೆ.
‘KGF’ ಸರಣಿ ಸಿನಿಮಾಗಳ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಟ್ರೇಲರ್ ಬಿಡುಗಡೆಯಾಗಿದೆ. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ನಲ್ಲಿ ‘KGF’ ಸರಣಿ ಸಿನಿಮಾಗಳ ಮೇಕಿಂಗ್ ನೆನಪಾಗುತ್ತದೆ. ಪ್ರಭಾಸ್, ಪೃಥ್ವಿರಾಜ್, ಶ್ರುತಿ ಹಾಸನ್, ಜಗಪತಿ ಬಾಬು ಸೇರಿದಂತೆ ಹಲವು ಖಳಪಾತ್ರಗಳ ಪರಿಚಯ ಇಲ್ಲಿ ಸಿಗುತ್ತದೆ. ಕನ್ನಡದ ಪ್ರತಿಭಾವಂತ ನಟರಾದ ನವೀನ್ ಶಂಕರ್, ಪ್ರಮೋದ್ ಪಂಜು ಕೂಡ ಚಿತ್ರದಲ್ಲಿ ನಟಿಸಿದ್ದಾರೆ ಎನ್ನುವುದು ಇದೇ ಮೊದಲ ಬಾರಿಗೆ ಟ್ರೇಲರ್ ಮೂಲಕ ತಿಳಿದುಬರುತ್ತದೆ. ಎಂದಿನಂತೆ ಟ್ರೇಲರ್ನಲ್ಲಿ ಪುಟ್ಟದೊಂದು ಕತೆ ಹೇಳಲು ಪ್ರಯತ್ನಿಸಿದ್ದಾರೆ ನಿರ್ದೇಶಕರು. ಪ್ರಭಾಸ್ ಅಭಿಮಾನಿಗಳಿಗೆ ಟ್ರೇಲರ್ ಇಷ್ಟವಾಗಿದೆ. ಆದರೆ ಒಂದು ವರ್ಗದವರು ಟ್ರೇಲರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘Salaar: Part 1 – Ceasefire’ ಎನ್ನುವ ಅಡಿಟಿಪ್ಪಣಿಯೊಂದಿಗೆ ಮೊದಲ ಪಾರ್ಟ್ ಟ್ರೈಲರ್ ಡಿಸೆಂಬರ್ 22ರಂದು ತೆರೆಕಾಣಲಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾ ವಿಶ್ವದಾದ್ಯಂತ IMAXನಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಕಳೆದೆರೆಡು ವರ್ಷಗಳಿಂದ ಚಿತ್ರೀಕರಣದಲ್ಲಿರುವ ಆಕ್ಷನ್ – ಥ್ರಿಲ್ಲರ್ ‘ಸಲಾರ್’ ಈ ಮೊದಲು ಸೆಪ್ಟೆಂಬರ್ 28ರಂದು ತೆರೆಕಾಣಲಿದೆ ಎನ್ನಲಾಗಿತ್ತು. ಅಂತಿಮವಾಗಿ ಚಿತ್ರದ ಬಿಡುಗಡೆ ದಿನಾಂಕ ಡಿಸೆಂಬರ್ 22 ಎಂದಾಯ್ತು. ಇದೇ ದಿನ ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ತೆರೆಕಾಣುತ್ತಿದೆ. ದೊಡ್ಡ ಸಿನಿಮಾಗಳ ಸೋಲಿನ ನಂತರ ಪ್ರಭಾಸ್ ಅವರಿಗೆ ‘ಸಲಾರ್’ ತುಂಬಾ ಮುಖ್ಯ ಚಿತ್ರವಾಗಿದೆ. ಅವರ ಅಭಿಮಾನಿಗಳು ಕೂಡ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇಟ್ಟಿದ್ದಾರೆ. ಟ್ರೇಲರ್ ಭರವಸೆ ಮೂಡಿಸಿದ್ದು, ಸಿನಿಮಾ ಬಗ್ಗೆ ಪ್ರಭಾಸ್ ಅಭಿಮಾನಿಗಳು ಉತ್ಸುಕರಾಗಿದ್ದಾರೆ.