‘ಸಪ್ತಸಾಗರದಾಚೆ ಎಲ್ಲೋ Side-B’ಗೆ ಕ್ಷಣಗಣನೆ ಶುರುವಾಗಿದೆ. Side A ಯಶಸ್ಸಿನ ನಂತರ ಮುಂದುವರೆದ ಭಾಗವಾಗಿ Side B ನವೆಂಬರ್‌ 17ರಂದು ತೆರೆಕಾಣಲಿದೆ. Side B ಟ್ರೇಲರ್‌ ಬಿಡುಗಡೆಯಾಗಿದ್ದು, ಇಲ್ಲಿ ಸಾಕಷ್ಟು ತಿರುವುಗಳು ಇದ್ದಂತಿವೆ.

ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಮತ್ತು ಚೈತ್ರಾ ಜೆ ಆಚಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ Side-B’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಮೊದಲ ಭಾಗದ ಟ್ರೇಲರ್‌ನಲ್ಲಿ ನೀಲಿ ಬಣ್ಣ ಗಾಢವಾಗಿ ಗೋಚರಿಸಿತ್ತು, ಆದರೆ ಸೈಡ್ ಬಿ ನಲ್ಲಿ ನೀಲಿ ಬಣ್ಣದ ಸ್ಥಾನವನ್ನು ಕೆಂಪು ಬಣ್ಣ ಆವರಿಸಿದೆ. ಪ್ರೇಮಿಯಾಗಿದ್ದ ಮನು, ಇಲ್ಲಿ ಅವತಾರ ಬದಲಿಸಿಕೊಂಡು ಕ್ರೂರ ರೂಪ ತಾಳಿದ್ದಾನೆ. ಮೊದಲ ಭಾಗದಲ್ಲಿ ಜೈಲು ಪಾಲಾಗಿ ತನ್ನ ಪ್ರೀತಿಯ ಪ್ರಿಯಾಳಿಂದ ದೂರವಾಗುವ ಸನ್ನಿವೇಶ ತಂದುಕೊಂಡಿದ್ದ ಮನು, ಎರಡನೇ ಭಾಗದಲ್ಲಿ ಜೈಲಿನಿಂದ ಬಿಡುಗಡೆ ಪಡೆದಿದ್ದಾನೆ. ಆದರೆ ಪ್ರಿಯಾಳ ನೆನಪಿನಿಂದ ಹೊರಗೆ ಬಂದಿಲ್ಲ. ಪ್ರಿಯಾ ಈಗ ಭಿನ್ನ ಜಗತ್ತಿನಲ್ಲಿ ಬದುಕುತ್ತಿದ್ದಾಳೆ. ಎದುರು – ಬದುರು ಇದ್ದರೂ ಸಹ ಒಬ್ಬೊಬ್ಬರು ಒಂದೊಂದು ತೀರವಾಗಿದ್ದಾರೆ.

Side-Bನಲ್ಲಿ ಚೈತ್ರಾ ಆಚಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಮನು, ಪ್ರಿಯಾಳ ನೆನಪಿನಿಂದ ಹೊರಗೆ ಬರಲು ಚೈತ್ರಾ ಆಚಾರ್ ನಿರ್ವಹಿಸಿರುವ ಸುರಭಿ ಪಾತ್ರದ ಕೆಲವು ದೃಶ್ಯಗಳನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಅಚ್ಯುತ್ ಕುಮಾರ್ ಈ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಎರಡನೇ ಭಾಗದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅವರಿಗೆ ಹೆಚ್ಚು ಸ್ಕ್ರೀನ್‌ಸ್ಪೇಸ್‌ ಇರುವಂತಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವು ಒಂದು ಕುತೂಹಲಕಾರಿ ಘಟ್ಟದಲ್ಲಿ ಅಂತ್ಯವಾಗಿ, ಕತೆಯಲ್ಲಿ ಮುಂದೆ ಏನಾಗಲಿದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಹೇಮಂತ್ ರಾವ್ ನಿರ್ದೇಶನದ ಈ ಸಿನಿಮಾಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಹೀರೋ ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾ ನವೆಂಬರ್ 17ರಂದು ಮೂಲ ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here