‘ಮುದಲ್ ಮರ್ಯಾದೈ’ ಚಿತ್ರದ ಬಗ್ಗೆ ಮಾತನಾಡುತ್ತಾ ನಿರ್ದೇಶಕ ಭಾರತಿರಾಜ ಇದನ್ನು ‘The voyage of a man from house to home’ ಎಂದು ಕರೆಯುತ್ತಾರೆ. ಆದರೆ ಚಿತ್ರ ಅದಷ್ಟೇ ಅಲ್ಲ. ಇದು ವಯಸ್ಸು, ಜಾತಿ, ವರ್ಗಗಳ ಎರಡು ತುದಿಗಳಲ್ಲಿರುವ ಎರಡು ಹೃದಯಗಳ ಅಲೌಕಿಕ ಪ್ರೇಮದ ಕಥೆಯೂ ಹೌದು.

ಒಂದು ಚಿತ್ರ ಏಕೆ ಕ್ಲಾಸಿಕ್ ಅನ್ನಿಸುತ್ತದೆ, ಏಕೆ ಒಂದು cult ಸ್ಥಾನವನ್ನು ಪಡೆಯುತ್ತದೆ ಎನ್ನುವ ಪ್ರಶ್ನೆಯನ್ನು ಹಿಡಿದು ಕೂತರೆ ನಾನಾ ಉತ್ತರಗಳು ದೊರೆಯುತ್ತವೆ. ಅದು ಆಲೋಚನೆ ಮತ್ತು ವಿವೇಚನೆಗಳಿಗೆ ಸಂಬಂಧಿಸಿದ ವಿಷಯ. ಅದರಲ್ಲಿ ಜೀವನವನ್ನು ನೋಡುವ ನೋಟ ಇರಬೇಕು, ದರ್ಶನ ಇರಬೇಕು, ಬದುಕುಗಳನ್ನು ಕುರಿತ ಘನತೆಯ ಜೊತೆಜೊತೆಯಲ್ಲೇ ಬದುಕಿನ ಸಣ್ಣತನಗಳ ಕಡೆಗೆ ಅದು ಕನ್ನಡಿಯನ್ನು ಹಿಡಿಯಬೇಕು. ಯಾವುದೇ ಚಿತ್ರ ತನ್ನ ಕಾಲದ ಧ್ವನಿಗಳಿಗೆ ಕಿವುಡಾಗಿರಲು ಸಾಧ್ಯವಿಲ್ಲ, ಆದರೆ ಹಾಗೆ ಇರುವಾಗಲೂ ಯಾವುದೇ ಕಾಲಕ್ಕೂ ಬದಲಾಗದ ನಮ್ಮ ನಮ್ಮ ನೋವು, ಸಂಕಟ, ಪ್ರೇಮ, ಅನುರಾಗಗಳ ಕಡೆಗೂ ಅದರ ದರ್ಶನ ಇರಬೇಕು. ಸಿನಿಮಾ ಒಂದು ದೃಶ್ಯ ಮಾಧ್ಯಮ. ಇಲ್ಲಿ ದೃಶ್ಯಗಳು ಕಥೆಯನ್ನು ಹೇಳಬೇಕು. ಸಾಹಿತ್ಯ, ಸಂಗೀತ, ಛಾಯಾಗ್ರಹಣ ಎಲ್ಲವೂ ಆ ಕಥೆಗೆ ಪೂರಕವಾಗಿರಬೇಕು. ಹಾಗೆ ನನಗೆ ಇಷ್ಟವಾದ ಮತ್ತು ಇಂದಿಗೂ ಇಷ್ಟವೇ ಆಗಿರುವ ಚಿತ್ರಗಳಲ್ಲಿ ಒಂದು ‘ಮುದಲ್ ಮರ್ಯಾದೈ’.

ಚಿತ್ರ ಶುರುವಾಗುವುದು ಪಾಳುಬಿದ್ದ ಗುಡಿಸಲಿನಲ್ಲಿ ಮಲಗಿರುವ ಇಳಿವಯಸ್ಸಿನ ಶಿವಾಜಿಯ ದೃಶ್ಯದಿಂದ. ಮುಂದಿನ ದೃಶ್ಯದಲ್ಲಿ ಆತನ ಹೆಂಡತಿ ಮನೆಯಲ್ಲಿ ಪಂಚಾಯತಿ ಕೂರಿಸಿದ್ದಾಳೆ. ಗಂಡ ಯಾವಳದೋ ಮನೆಯಲ್ಲಿ ಹೋಗಿ ಬಿದ್ದಿದ್ದಾನೆ. ಅಲ್ಲೇ ಸತ್ತರೆ ಆಸ್ತಿಯ ಕಥೆ ಏನು ಎನ್ನುವುದು ಅವಳ ಕಳವಳ. ‘ಪ್ರತಿ ಎದೆಯಲ್ಲೂ ಕೊಳಲೊಂದು ಮಾತಾಗದ ಶೋಕವನ್ನು ನುಡಿಸುತ್ತಲೇ ಇರುತ್ತದೆ. ಇದು ಅಂತಹ ಒಂದು ಶೋಕಗೀತೆ’ ಎನ್ನುವ ಹಿನ್ನೆಲೆಯ ನುಡಿಗಳೊಡನೆ ಚಿತ್ರದ ಹಿಂದಿನ ಕಥೆ ತೆರೆದುಕೊಳ್ಳುತ್ತದೆ.

ಅವನು ಒಬ್ಬ ನಡುವಯಸ್ಕ, ಮಲೈಚಾಮಿ. ಎಲ್ಲರನ್ನೂ ತಮಾಷೆ ಮಾಡಿಕೊಂಡು, ನಗುತ್ತಾ, ನಗಿಸುತ್ತಾ ಇರುವವ. ಅವನ ಮಾವ ಇವನ ಕಾಲುಮುಟ್ಟಿ ನಮಸ್ಕಾರ ಮಾಡಿದ್ದಾನೆ ಎನ್ನುವ ಕಾರಣಕ್ಕೆ, ಆ ಕಾಲುಗಳಿಗೆ ಚಪ್ಪಲಿ ಸೋಕಿಸಬಾರದು ಎಂದು 20 ವರ್ಷಗಳಿಂದ ಬರಿಗಾಲಿನಲ್ಲಿ ನಡೆಯುತ್ತಾನೆ. ಆದರೆ ಮನೆಯಲ್ಲಿ ವಿಷಮ ದಾಂಪತ್ಯ. ಅವನ ಹೆಂಡತಿ ಇಲ್ಲದಿದ್ದಾಗ ಅಥವಾ ಅವನು ಮನೆಯಿಂದ ಹೊರಗೆ ಹೆಜ್ಜೆಯಿಟ್ಟಾಗಲೇ ಅವನ ಕಣ್ಣುಗಳಲ್ಲಿ ನಗು ಕಾಣುವುದು. ಬರದ ಸೀಮೆಯಿಂದ ಹೊಟ್ಟೆಪಾಡಿಗಾಗಿ ಈ ಊರಿಗೆ ಬರುವ ತಂದೆ ಮಗಳು. ಮಗಳು ಚಿನಕುರಳಿ. ಮೊದಲ ದಿನವೇ ಈ ನಡುವಯಸ್ಕ ಅವಳನ್ನು ತಮಾಷೆಯಾಗಿ ಮಾತನಾಡಿಸಿರುತ್ತಾನೆ. ಅವನಿಗೆ ಹಾಡೆಂದರೆ ಪ್ರಾಣ. ಅವನೂ ಹಾಡುತ್ತಾನೆ. ಹೊಲದಲ್ಲಿ ಕೆಲಸ ಮಾಡಲು ಬರುವ ಹೆಂಗಸರಿಂದಲೂ ಬಲವಂತ ಮಾಡಿ ಹಾಡಿಸುತ್ತಾನೆ. ಅವನ ಅಕ್ಕನ ಮಗ, ತಬ್ಬಲಿ. ಇವನ ಮನೆಯಲ್ಲೇ ಇರುತ್ತಾನೆ. ಮೋಹಕವಾಗಿ ಕೊಳಲು ನುಡಿಸುತ್ತಾನೆ. ಒಂದು ಸಲ ಮನೆಯಲ್ಲಿನ ಗುಬ್ಬಿ ನೋಡಿ ಮಲೈಚಾಮಿ ಹಾಡು ಶುರು ಮಾಡಿದಾಗ, ಆ ಹುಡುಗಿ ಬೀದಿಯಲ್ಲಿ ಮೀನು ಮಾರುತ್ತಿರುವವಳು, ಆ ಹಾಡಿಗೆ ಉತ್ತರವಾಗಿ ತಾನೂ ಹಾಡುತ್ತಾಳೆ. ಅವನು ತಟ್ಟನೆ ಹೊರಗೆ ಬಂದು ನೋಡುತ್ತಾನೆ, ಆದರೆ ಯಾರೂ ಕಾಣುವುದಿಲ್ಲ.

ಚಿತ್ರದ ಆತ್ಮ ಇದರ ಹಾಡುಗಳು. ಅದರಲ್ಲೂ
‘ಪೂಂಗಾಟ್ರು ತಿರುಂಬುಮಾ
ಎನ್ ಪಾಟ್ಟ ವಿರುಂಬುಮಾ?’
ಎನ್ನುವ ಹಾಡಂತೂ ಎದೆಯ ಹಾಡನ್ನು ಮೆಚ್ಚುವವರು ಯಾರೂ ಇಲ್ಲದವರ ಹೃದಯಗೀತೆಯೇ ಸರಿ. ‘ಗಾಳಿ ಬೀಸುವ ದಿಕ್ಕು ಎಂದಾದರೂ ಬದಲಾಗದೆ, ನನ್ನ ಹಾಡನ್ನೂ ಮೆಚ್ಚುವವರು ಎಂದಾದರೂ ಬರಲಾರರೆ?’ ಎನ್ನುವ ಅವನ ದನಿಗೆ ಮುಂದೊಮ್ಮೆ ‘ಅರಸನೇ ದುಗುಡವೆ? ಆ ಗಾಯ ಸುಡುವುದೆ? ಎನ್ನುವ ದನಿ ಉತ್ತರಿಸುತ್ತದೆ. ‘ಮೆತ್ತೆಯನ್ನು ಕೊಂಡೆ, ಆದರೆ ನಿದ್ದೆಯನ್ನು ಕೊಳ್ಳಲಿಲ್ಲ’ ಎಂದು ಅವನೆಂದರೆ ‘ಮನವನ್ನು ಸೆಳೆಯುವುದು ನೋವಿನ ಹಾಡುಗಳೇ’ ಎಂದು ಅವಳು ಸಂತೈಸುತ್ತಾಳೆ.

ಕಡೆಗೆ ತನ್ನ ಹಾಡಿಗೆ ಉತ್ತರಿಸುವವಳು ಇವಳೇ ಎಂದು ಅವನಿಗೆ ತಿಳಿಯುತ್ತದೆ. ಇನ್ನೊಂದು ಸಲ ಅವಳು ಅವನಿಗೆ ವಯಸ್ಸಾಯಿತು ಎಂದು ತಮಾಷೆ ಮಾಡುತ್ತಾಳೆ. ಅವನು ಹುಸಿಸಿಟ್ಟಿನಲ್ಲಿ ತೋಳು ಮಡಿಸಿ ನಿಂತು ನಿನ್ನಂತಹ 9 ಹುಡುಗಿಯರು ತೋಳು ಹಿಡಿದು ಜೋಕಾಲಿ ಆಡಬಹುದು, ಇನ್ನೂ ಅಷ್ಟು ಶಕ್ತಿ ಇದೆ ನನಗೆ ಅನ್ನುತ್ತಾನೆ. ಹೊಟ್ಟೆ ಹಿಡಿದು ನಗುವ ಅವಳು ಅಲ್ಲಿದ್ದ ಕಲ್ಲುಗುಂಡನ್ನು ತೋರಿಸಿ, ‘ಹಾಗಾದರೆ ಇದನ್ನು ಎತ್ತು ನೋಡೋಣ’ ಎನ್ನುತ್ತಾಳೆ. ‘ಎತ್ತಿದರೆ?’ ಎನ್ನುವ ಅವನು ‘ಅದನ್ನು ಎತ್ತಿದರೆ ನೀನು ನನ್ನ ಮದುವೆ ಆಗಬೇಕು’ ಎಂದು ಸವಾಲು ಹಾಕುತ್ತಾನೆ. ಇದು ತಮಾಷೆ ತಮಾಷೆಗಾಗಿಯೇ ನಡೆಯುವ ಮಾತುಕತೆ. ಅವನು ನಕ್ಕು ಅವಳನ್ನು ಬೈದು ಹೋಗಿ ಬಿಡುತ್ತಾನೆ. ಆದರೆ ಅವನು ಆ ದಾರಿಯಲ್ಲಿ ಹೋಗುವಾಗ, ಬರುವಾಗ ಆ ಕಲ್ಲು ಅವನಿಗೆ ಸವಾಲು ಹಾಕುತ್ತಲೇ ಇರುತ್ತದೆ. ಕಡೆಗೊಮ್ಮೆ ಅವನು ಆ ಕಲ್ಲನ್ನು ಎತ್ತಿಯೇ ಬಿಡುತ್ತಾನೆ. ಅದನ್ನು ನೋಡಿದ ಅವಳು ಅಚ್ಚರಿಯಲ್ಲಿ ಓಡಿ ಬರುತ್ತಾಳೆ. ಅವನು ಇನ್ನಿಲ್ಲದಂತೆ ನಾಚಿಕೊಂಡು ಕಲ್ಲು ಎತ್ತಿ ಹಾಕಿ ಓಡಿಬಿಡುತ್ತಾನೆ!

ಈ ಪಾತ್ರಕ್ಕಾಗಿ ಶಿವಾಜಿ ಗಣೇಶನ್ ವಿಗ್ ಹಾಕಿಲ್ಲ, ಅತ್ಯಂತ ಕಡಿಮೆ ಮೇಕಪ್, ವಯಸ್ಸಿಗೆ ತಕ್ಕಂತಹ ಹೊಟ್ಟೆ, ಅದರ ಅಳತೆಯಲ್ಲಿ ಸಣ್ಣ ಕಾಣುವ ಕಾಲ್ಗಳು, ಪಟಾಪಟಿ ನಿಕ್ಕರ್, ಪಂಚೆ. ಬಾಹ್ಯ ಆಕಾರದಲ್ಲಿ ಶಿವಾಜಿ ಶಿವಾಜಿಯಾಗೇ ಕಂಡುಬರುತ್ತಾರೆ, ಆದರೆ ಪಾತ್ರವಾಗಿ ಅವರು ಆ ಮಲೈಚಾಮಿಯೇ ಸರಿ.

ಇಷ್ಟೇ ಸುಂದರವಾದ ಇನ್ನೊಂದು ದೃಶ್ಯ ಅವರಿಬ್ಬರೂ ಸೇರಿ ಹಿಡಿದ ಮೀನನ್ನು ತೊಳೆದು ಅವಳು ಸಾರು ಮಾಡಿರುತ್ತಾಳೆ. ಮಳೆ ಎಂದು ಮನೆಬಾಗಿಲಲ್ಲಿ ನಿಂತ ಅವನನ್ನು ಒಳಗೆ ಕರೆದು ಊಟ ಮಾಡು ಎನ್ನುತ್ತಾಳೆ. ‘ನಾನು ತಿನ್ನಲ್ಲ’ ಎಂದ ಅವನನ್ನು ಬಲವಂತ ಮಾಡುತ್ತಾಳೆ. ಅಷ್ಟರಲ್ಲಿ ಅಡಿಗೆಯ ಘಮಲಿಗೆ ಮನಸೋತಿರುವ ಅವನು, ‘ಒಂದೇ ಸೌಟು ಅನ್ನ, ಒಂದೇ ಮೀನು’ ಎಂದು ಕಂಡಿಶನ್ ಹಾಕಿ ಊಟಕ್ಕೆ ಕೂರುತ್ತಾನೆ. ಆ ದೃಶ್ಯದಲ್ಲಿ ಅವನ ಕಂಗಳಲ್ಲಿ ತನ್ನ ಹೆಂಡತಿಗೂ, ಇವಳಿಗೂ ಇರುವ ವ್ಯತ್ಯಾಸವನ್ನು ನಿರ್ದೇಶಕರು ಕಾಣಿಸುತ್ತಾರೆ. ಇಷ್ಟೇ ಇಷ್ಟು ಎಂದು ಕೂತ ಅವನು ಇನ್ನಷ್ಟು, ಮತ್ತಷ್ಟು ಎಂದು ಬಡಿಸಿಕೊಳ್ಳುವುದಲ್ಲದೆ, ‘ನಂಗೆ ಖಾರ ಆಗಲ್ಲ ಅಂತ ನಮ್ಮ ಅಮ್ಮ ಕೂಡ ನಾಲ್ಕೇ ನಾಲ್ಕು ಮೆಣಸಿನಕಾಯಿ ಹಾಕಿ ಹಿಂಗೇ ಸಾರು ಮಾಡ್ತಾ ಇದ್ದರು’ ಎನ್ನುವಾಗ ಕಣ್ಣುಗಳು ತುಂಬಿ ಬರುತ್ತವೆ. ಶಿವಾಜಿ ಅದೆಷ್ಟು ನಿರಾಯಾಸವಾಗಿ ಈ ದೃಶ್ಯದಲ್ಲಿ ನಟಿಸಿದ್ದಾರೆ ಎಂದರೆ ಯಾವುದೋ ಸಂದರ್ಶನದಲ್ಲಿ ಧನುಷ್ ಇದನ್ನು ತಮ್ಮ ಅತ್ಯಂತ ಮೆಚ್ಚಿನ ದೃಶ್ಯಗಳಲ್ಲಿ ಒಂದು ಎಂದು ಹೆಸರಿಸಿದ್ದಾರೆ.

ಇಲ್ಲಿ ಮುಖ್ಯವಾಗುವುದು ಇವರಿಬ್ಬರ ನಡುವೆ ಪ್ರೀತಿ, ವಿಶ್ವಾಸ, ಆಪ್ಯಾಯತೆಗಳು ಬೆಳೆಯುವ ಕಥೆ ಹೇಳುವಾಗ ನಿರ್ದೇಶಕರು ಬಳಸಿಕೊಳ್ಳುವ ದೃಶ್ಯಗಳು ಆರ್ಗಾನಿಕ್ ಆಗಿ ಹಳ್ಳಿ ಬದುಕಿನಲ್ಲಿ ಬರುವವೇ ಹೊರತು ಕಥೆಗಾಗಿ ತುರುಕಿರುವುದಲ್ಲ. ಸಂತೆಯಲ್ಲಿ ತೆಗೆಸಿಕೊಳ್ಳುವ ಫೋಟೋ, ಬಟ್ಟೆಯ ಮರೆಯಲ್ಲಿ ಕೈಬೆರಳುಗಳ ಮೂಲಕ ನಡೆಯುವ ಜೀವರಾಸುಗಳ ವ್ಯಾಪಾರ, ಕೆಂಡದಲ್ಲಿ ಸುಟ್ಟು ತಿನ್ನುವ ಜೋಳ, ‘ನನಗೆ ಈ ನಿಜ ಗೊತ್ತಾಗಲೇ ಬೇಕು ಸಾಮಿ’ ಎನ್ನುವ ಚಪ್ಪಲಿ ಹೊಲೆಯುವ ಸೆಂಗೋಡಿ ಎಲ್ಲವೂ ಜೀವಂತ.

ಅಲ್ಲಿ ಇನ್ನೊಂದು ಪ್ರೇಮಕಥೆ ಇದೆ. ಮಲೈಚಾಮಿಯ ಅಕ್ಕನ ಮಗ ಪೊನ್ನುಕಣ್ಣ ಮತ್ತು ಸೆಂಗೋಡಿಯ ಮಗಳು ಸೆವುಲಿಯದು. ಮತ್ತೊಮ್ಮೆ ‘ಮನೆ ಮರ್ಯಾದೆ ಉಳಿಸಲು’ ಅವರಿಬ್ಬರನ್ನು ಬೇರೆ ಮಾಡಲು ಮಲೈಚಾಮಿ ಬಂದಾಗ, ತೆಪ್ಪವನ್ನು ನೀರಿನಲ್ಲಿ ತೇಲಿಬಿಟ್ಟು ಹಗ್ಗವನ್ನು ಇವನ ಕೈಗೆ ಕೊಟ್ಟು ರಾತ್ರಿಯಿಡೀ ಕದಲದಂತೆ ನಿಲ್ಲಿಸುವ ಅವಳು ಅವನಿಗೆ ನೆಚ್ಚಿದವರನ್ನೇ ಮದುವೆಯಾಗಿ ಸುಖವಾಗಿರುವ ಬದುಕನ್ನು ವಿವರಿಸುತ್ತಾಳೆ. ಬೆಳಗಿನ ಜಾವ ಅವನು ಒಪ್ಪಿದ ಮೇಲೆ ಬೊಬ್ಬೆ ಭಂದ ಅವನ ಕೈಗಳಿಗೆ, ನವಿಲುಗರಿಯಲ್ಲಿ ಎಣ್ಣೆ ಅದ್ದಿ ಸವರಿ ಆರೈಕೆ ಮಾಡುತ್ತಾಳೆ.

ಇವರಿಬ್ಬರ ನಡುವೆ ಸಂಬಂಧ ಇದೆ ಎಂದು ಯಾರೋ ಚಾಡಿ ಹೇಳಿದಾಗ ಮಲೈಚಾಮಿ ಹೆಂಡತಿ ರಸ್ತೆಯಲ್ಲಿ ಅವಳಿಗೆ ಪೊರಕೆಯಿಂದ ರಪ್ಪರಪ್ಪನೆ ಭಾರಿಸುತ್ತಾಳೆ. ಆದರೆ ಅವಳ ಮನಸನ್ನು ನಿರ್ದೇಶಕರು ಸುಂದರವಾಗಿ ಕಟ್ಟಿಕೊಡುತ್ತಾರೆ. ಗುಡಿಸಲಿಗೆ ವಾಪಸ್ಸಾಗಿ ಕೂರುವ ಹುಡುಗಿಗೆ ಪೊನ್ನಾತ್ತ ‘ನೀನು ನನ್ನ ಗಂಡನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದೀಯ’ ಎನ್ನುವ ಮಾತಗಳನ್ನು ನೆನೆದಾಗೆಲ್ಲಾ ಪೊರಕೆಯಲ್ಲಿ ಹೊಡೆದಿರುವ ಏಟು ಹೂವಿನ ಮಳೆಯಂತೆ ಭಾಸವಾಗುತ್ತಿರುತ್ತದೆ. ಬೇರೆ ಊರಿಂದ ಬಂದ ಮಲೈಚಾಮಿ ಊರೊಳಗೆ ಹೋಗುವ ಮೊದಲೇ ನೀರು ಕುಡಿಯಲೆಂದು ಇಲ್ಲಿಗೆ ಬರುತ್ತಾನೆ. ಅವನ ತಲೆಯಲ್ಲಿರುವ ಬೆಳ್ಳಿಕೂದಲ ಬಗೆಗೂ ಅವಳಲ್ಲಿ ಮೋಹ! ನನ್ನ ಬಳಿ ಇರುವ ಕರಿಮಣಿ ಪೋಣಿಸಿಕೊಳ್ಳುತ್ತೇನೆ ಎಂದು ಅವನ ಬೆಳ್ಳಿಕೂದಲನ್ನು ಕಿತ್ತುಕೊಳ್ಳುತ್ತಾಳೆ.

ನಮ್ಮ ದೇಸೀನೆಲೆಯಾದ ಗ್ರಾಮ್ಯ ಬದುಕನ್ನು ಅತ್ಯಂತ ಆರ್ದ್ರವಾಗಿ, ಸಮರ್ಥವಾಗಿ ಕಟ್ಟಿಕೊಟ್ಟ ನಿರ್ದೇಶಕರಲ್ಲಿ ಒಬ್ಬರಾದ ಭಾರತಿರಾಜ ಇದರ ನಿರ್ದೇಶಕರು. ದೇಸಿತನವನ್ನು ತಮ್ಮ ರಾಗದೊಳಗಣ ಉಸಿರಾಗಿಸಿಕೊಂಡ ಇಳಯರಾಜ ಇದಕ್ಕೆ ಸಂಗೀತ ಕೊಟ್ಟಿದ್ದಾರೆ. ಸಾಧಾರಣವಾಗಿ ಅತಿ ಭಾವುಕತೆಯನ್ನು ತೆರೆಯ ಮೇಲೆ ಕಟ್ಟುವ ಶಿವಾಜಿ ಗಣೇಶನ್ ಇಲ್ಲಿ ಅದೇನೂ ಇಲ್ಲದೆ ಹಳ್ಳಿಯ ಹಿರಿತಲೆಯಾಗಿ ಪಾತ್ರವೇ ಇವರಾಗಿದ್ದಾರೆ. ಗಾಂಭೀರ್ಯ, ಭಾವುಕತೆ ಮತ್ತು charm ಎರಡೂ ಅವರ ಪಾತ್ರದಲ್ಲಿ ಹದವಾಗಿ ಬೆರೆತಿದೆ. ನಟಿ ರಾಧಾ ಅವರ ವೃತ್ತಿ ಬದುಕಿನ ಮಹತ್ವದ ಪಾತ್ರಗಳಲ್ಲಿ ಒಂದು ಈ ಚಿತ್ರದ ಬೆಸ್ತರ ಹುಡುಗಿ ಪಾತ್ರ. ವಡಿವುಕ್ಕರಸಿ ಸಹ ಸವಾಲಿನ ಪಾತ್ರವನ್ನು ಸವಾಲಾಗಿ ತೆಗೆದುಕೊಂಡು ನಟಿಸಿದ್ದಾರೆ. ಅದ್ಭುತ ಕಥೆ, ಸ್ಕ್ರೀನ್ ಪ್ಲೇ, ಸಂಭಾಷಣೆ, ಅಭಿನಯ ಎಲ್ಲಾ ಇರುವ ಚಿತ್ರದ ಹೃದಯ ಇದರ ಸಂಗೀತ. ಭಾಷೆ ಬಂದರೆ ತುಂಬಾ ಸಂತೋಷ, ಆದರೆ ಬರದೆ ಇದ್ದರೂ ಪರವಾಗಿಲ್ಲ, ಪ್ರತ್ಯೇಕವಾಗಿ ಕೇಳುವಾಗಲೂ, ಚಿತ್ರದೊಡನೆ ನೋಡುವಾಗಲೂ ಹಾಡುಗಳು ಗಾಳ ಹಾಕಿ ಮನಸ್ಸನ್ನು ಎಳೆದುಕೊಂಡು ಬಿಡುತ್ತವೆ. ಗ್ರಾಮ್ಯ ಬದುಕಿನಲ್ಲಿ ಬರುವ ಜಾತಿ ಮತ್ತು ವರ್ಗಗಳ ಸಂಘರ್ಷದ ಬಗೆಗೂ ಚಿತ್ರ ಕುರುಡಾಗುವುದಿಲ್ಲ. 1985ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ರಾಷ್ಟ್ರೀಯ ಪುರಸ್ಕಾರ ಸಹ ಸಿಕ್ಕಿದೆ. ನಮ್ಮ ತಲಕಾಡಿನ ಸುತ್ತಮುತ್ತಲಲ್ಲಿ ಇದು ಚಿತ್ರೀಕರಣಗೊಂಡಿದೆ.

ಈ ಚಿತ್ರದ ಬಗ್ಗೆ ಮಾತನಾಡುತ್ತಾ ಭಾರತಿರಾಜ ಇದನ್ನು ‘The voyage of a man from house to home’ ಎಂದು ಕರೆಯುತ್ತಾರೆ. ಆದರೆ ಚಿತ್ರ ಅದಷ್ಟೇ ಅಲ್ಲ. ಇದು ವಯಸ್ಸು, ಜಾತಿ, ವರ್ಗಗಳ ಎರಡು ತುದಿಗಳಲ್ಲಿರುವ ಎರಡು ಹೃದಯಗಳ ಅಲೌಕಿಕ ಪ್ರೇಮದ ಕಥೆಯೂ ಹೌದು. ಹಾಗೆಯೇ ಇಲ್ಲಿ ಇನ್ನೊಂದು ದುರಂತ ಬದುಕಿನ ಚಿತ್ರಣವೂ ಇದೆ. ಅದು ಶಿವಾಜಿಯ ಪತ್ನಿ ಪೊನ್ನಾತ್ತಾಳ ಪಾತ್ರ. ಮೇಲು ನೋಟಕ್ಕೆ ಅವಳು ಬಜಾರಿ ಹೆಂಗಸಾಗಿ, ಗಂಡನನ್ನು ಕಿತ್ತು ತಿನ್ನುವವಳಾಗಿ ಕಂಡರೂ, ಯೋಚಿಸಿದರೆ ಅವಳ ಬದುಕಿನ ಕಹಿಯೆಲ್ಲವೂ ಅವಳ ನಾಲಿಗೆಗೆ ಬಂದಿದೆ ಅನ್ನಿಸದಿರದು. ಅವಳು ಮದುವೆಗೆ ಮೊದಲೇ ಯಾರೋ ಒಬ್ಬನ ಜೊತೆಗೆ ಕೂಡಿದ್ದರ ಫಲವಾಗಿ ಗರ್ಭಿಣಿಯಾಗಿದ್ದಾಳೆ. ತಕ್ಷಣ ಅವಳ ತಂದೆ ಅವಳನ್ನು ಅವಳ ದೃಷ್ಟಿಯಲ್ಲಿ ಅವರ ಅಂತಸ್ತಿಗೆ ತಕ್ಕವನಲ್ಲದ ಹುಡುಗನೊಬ್ಬನ ಕಾಲಿಗೆ ಬಿದ್ದು, ಅವನನ್ನು ‘ಒಪ್ಪಿಸಿ’, ಅವಳನ್ನು ಅವನಿಗೆ ಒಪ್ಪಿಸಿ, ಆಸ್ತಿಯನ್ನೂ ಅವನ ಹೆಸರಿಗೆ ಬರೆದು ಮದುವೆ ಮಾಡಿಕೊಟ್ಟಿದ್ದಾನೆ. ಆದರೆ ಮದುವೆ ಆದ ಗಂಡ ಅವಳನ್ನು ಮಾವನ ಮರ್ಯಾದೆ ‘ಉಳಿಸಲು’ ಮದುವೆಯಾಗಿದ್ದಾನೆಯೇ ಹೊರತು ಅವಳನ್ನೆಂದೂ ಪತ್ನಿಯಾಗಿ ಸ್ವೀಕರಿಸಿಲ್ಲ. ಅವಳನ್ನು ಸ್ಪರ್ಶಿಸಿಲ್ಲ, ಅವಳೊಡನೆ ಸಂಸಾರ ಮಾಡಿಲ್ಲ. ಅವಳ ದೃಷ್ಟಿಯಲ್ಲಿ ಅವನು ಅವಳನ್ನು ಆಸ್ತಿಗಾಗಿಯೇ ಮದುವೆಯಾಗಿದ್ದಾನೆ. ಚಿತ್ರ ಶುರುವಾಗುವಾಗ ನಾವು ನೋಡುವುದು 20 ವರ್ಷಗಳಷ್ಟು ಕಾಲ ಗಂಡನ ಮೌನ ನಿರಾಕರಣೆಯನ್ನು ಅನುಭವಿಸಿದ ಪೊನ್ನಾತ್ತಾಳನ್ನು. ಅವಳಲ್ಲಿನ ಕಹಿ ಅವಳ ಮಾತಿನಲ್ಲಿ, ನಡವಳಿಕೆಯಲ್ಲಿ, ಅಲಂಕಾರದೆಡೆಗಿನ ಅವಳ ನಿರ್ಲಕ್ಷ್ಯದಲ್ಲಿ, ಗಂಡನ ಸಂತಸವನ್ನು ಕಂಡರೆ ಅವಳಲ್ಲಿ ಮೂಡುವ ಕುದಿಯಲ್ಲಿ, ಗಂಡ ‘ಹೌದು ನನಗೂ ಅವಳಿಗೂ ಸಂಬಂಧ ಇದೆ’ ಎಂದು ಪಂಚಾಯತಿಯಲ್ಲಿ ಒಪ್ಪಿಕೊಂಡವಳ ಮೇಲಿನ ದ್ವೇಷದಲ್ಲಿ ಉಕ್ಕುಕ್ಕಿ ಹರಿಯುತ್ತದೆ.

ತಮಿಳಿನ ಹಲವು ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ತಮ್ಮ ದೇಸೀತನವನ್ನು ಎತ್ತಿ ಹಿಡಿಯುತ್ತಾರೆ. ಈ ಚಿತ್ರದಲ್ಲಿ ಭಾರತಿರಾಜ ತಮ್ಮ ಪಾತ್ರಗಳಿಗೆ ಇಡುವ ಮಲೈಚಾಮಿ, ಕುಯಿಲ್, ಸೆವುಲಿ, ಸೆಂಗೋಡಿ, ಪೊನ್ನಕಣ್ಣ, ರಾಸಮ್ಮ ಇತ್ಯಾದಿ ಹೆಸರುಗಳಲ್ಲಿ, ಅವರ ಪಾತ್ರಗಳ ಪಂಚೆ, ಸಡಿಲ ಶರ್ಟಿನ, ತಮಿಳ್ ಕಟ್ಟಿನ ಸೀರೆಗಳಲ್ಲಿ, ಬಿಳಿಬಣ್ಣ ಮೆತ್ತದ ಅವರ ನಾಯಕಿಯರಲ್ಲಿ ಕಾಣಬಹುದು. ಚಿಕ್ಕವಯಸ್ಸಿನ ಆ ಹುಡುಗ ಹುಡುಗಿಯ ನಡುವಣ ಪ್ರೇಮ ಮತ್ತು ವಯಸ್ಸನ್ನು ಮೀರಿದ ಇವರಿಬ್ಬರ ಪ್ರೇಮ ಎದುರಿಸುವ ಸವಾಲುಗಳು, ಅಲ್ಲಿನ ನೋವು, ಸೋಲು, ಪ್ರೇಮದ ತಾಕತ್ತು ಎಲ್ಲವನ್ನೂ ಅನುಭವಿಸಲು, ಅದನ್ನು ಕಥೆಯಾಗಿಸಿರುವ ನಿರ್ದೇಶಕರ ಕಸುಬನ್ನು ಅರಿಯಬೇಕೆಂದರೆ ಚಿತ್ರವನ್ನೇ ನೋಡಬೇಕು.

LEAVE A REPLY

Connect with

Please enter your comment!
Please enter your name here