ನಟ ಶಿವರಾಜಕುಮಾರ್ ಇಂದು ಮೈಸೂರಿನ ‘ಶಕ್ತಿಧಾಮ’ದಲ್ಲಿ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಆಚರಿಸಿದ್ದಾರೆ. ಸಿಟಿಯಲ್ಲಿ ವ್ಯಾನ್ ಡ್ರೈವ್ ಮಾಡುತ್ತಾ ಅಲ್ಲಿನ ಮಕ್ಕಳನ್ನು ಜಾಲಿ ರೈಡ್ ಕರೆದೊಯ್ದ ಶಿವರಾಜಕುಮಾರ್ ವೀಡಿಯೊವನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ಧಾರೆ.
ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಆರಂಭಿಸಿದ್ದ ‘ಶಕ್ತಿಧಾಮ’ ಅನಾಥ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ಪೋಷಿಸುತ್ತಿರುವ ಸಂಸ್ಥೆ. ಪಾರ್ವತಮ್ಮನವರು ಕಾಲವಾದ ನಂತರ ನಟ ಪುನೀತ್ ರಾಜಕುಮಾರ್ ಈ ಸಂಸ್ಥೆಯ ಹೊಣೆ ಹೊತ್ತಿದ್ದರು. ಪುನೀತ್‌ರ ಅಕಾಲಿಕ ಅಗಲಿಕೆಯ ನಂತರ ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ‘ಶಕ್ತಿಧಾಮ’ದ ಹೊಣೆ ಹೊತ್ತಿದ್ದಾರೆ. ಇಂದು ದಂಪತಿ ಅಲ್ಲಿನ ಮಕ್ಕಳೊಂದಿಗೆ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಶಿವರಾಜಕುಮಾರ್ ಆತ್ಮೀಯರೂ ಆದ ಚಿತ್ರನಿರ್ದೇಶಕ ಗುರುದತ್ ಉಪಸ್ತಿತರಿದ್ದರು. ಇನ್ನು ಇದೇ ವೇಳೆ ಶಿವರಾಜಕುಮಾರ್ ತಾವೇ ವ್ಯಾನ್ ಡ್ರೈವ್ ಮಾಡಿಕೊಂಡು ‘ಶಕ್ತಿಧಾಮ’ದ ಮಕ್ಕಳನ್ನು ಸಿಟಿಯಲ್ಲಿ ಜಾಲಿ ರೈಡ್ ಕರೆದೊಯ್ದಿದ್ದಾರೆ. ಈ ವೀಡಿಯೊ ವೈರಲ್ ಆಗಿದೆ. ಶಿವರಾಜಕುಮಾರ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋವನ್ನು ಹಂಚಿಕೊಂಡು ಖುಷಿ ಪಟ್ಟಿದ್ದಾರೆ. ಈ ಹಿಂದೆ ನಟ ಶಿವರಾಜಕುಮಾರ್ ‘ಶಕ್ತಿಧಾಮ’ದ ಮಕ್ಕಳೊಂದಿಗೆ ಖೋಖೋ ಆಡಿದ್ದ ವೀಡಿಯೋ ವೈರಲ್ ಆಗಿತ್ತು.