ತುಂಟತನ ಮಾಡುತ್ತಲೇ ಪ್ರೇಯಸಿಯ ಕನಸುಗಳಿಗೆ ಮಿಡಿಯುವ ಮನುವಾಗಿ ರಕ್ಷಿತ್‌ ಶೆಟ್ಟಿ, ಪ್ರೀತಿ ಒಂದು ಜವಾಬ್ದಾರಿ ಎಂದು ನಿಭಾಯಿಸುವ ಯುವತಿಯಾಗಿ ರುಕ್ಮಿಣಿ ತಮ್ಮ ಪಾತ್ರಗಳನ್ನು ಸಹಜವಾಗಿ ನಿರ್ವಹಿಸಿದ್ದಾರೆ. ಕೊಂಚ ಸಾವಧಾನದ ವೀಕ್ಷಣೆಗೆ ನೀವು ಅನುವಾದರೆ ‘ಸಪ್ತ ಸಾಗರದಾಚೆ ಎಲ್ಲೋ’ ಒಂದೊಳ್ಳೆಯ ‘ಫೀಲ್‌ ಗುಡ್‌’ ಸಿನಿಮಾ ಆಗಿ ಖಂಡಿತ ನಿಮಗಿಷ್ಟವಾಗುತ್ತದೆ.

ಅವನು ಮನು. ಸಿರಿವಂತರ ಮನೆಯ ಕಾರು ಡ್ರೈವರ್‌. ಗೆಳತಿ ಪ್ರಿಯಾ ಆತನ ಜಗತ್ತು. ಆಕೆ ಪ್ರಿಯಾ. ಕಡಲೂರಿನವಳು. ಹಾಡುವುದು ಇಷ್ಟ. ತಂದೆಯಲ್ಲದ ಕುಟುಂಬ. ಆಕೆಗೆ ಮನುವೇ ಕಡಲು! ಈ ಎರಡು ಪಾತ್ರಗಳೊಂದಿಗೆ ನಿರ್ದೇಶಕ ಹೇಮಂತ ರಾವ್‌ ಚೆಂದದ ಲವ್‌ಸ್ಟೋರಿ ಕಟ್ಟಿದ್ದಾರೆ. ಸಿನಿಮಾದ ಶುರುವಿನಲ್ಲೇ ಇವರ ಮಧ್ಯೆಯ ಗಾಢ ಪ್ರೀತಿಯ ಪರಿಚಯ ಪ್ರೇಕ್ಷಕನಿಗೆ ಆಗಿರುತ್ತದೆ. ಮದುವೆಗೆ ಮುಂಚೆಯೇ ಅವರು ತಮಗೊಂದು ಬಾಡಿಗೆ ಮನೆಯ ಹುಡುಕಾಟ ನಡೆಸುತ್ತಾರೆ. ಅಲ್ಲೊಂದಿಷ್ಟು ಹುಡುಗಾಟ, ತಮಾಷೆ, ಕನಸುಗಳು. ಪ್ರಿಯಾಳ ಕನಸಿಗಾಗಿ ಮನು ತೆಗೆದುಕೊಳ್ಳುವ ರಿಸ್ಕ್‌ ಚಿತ್ರದ ಬಹುದೊಡ್ಡ ತಿರುವು. ಮುಂದಿನದ್ದು ಎಮೋಷನಲ್‌ ಜರ್ನೀ.

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’ ಚಿತ್ರಗಳ ನಿರ್ದೇಶಕ ಹೇಮಂತ್‌ ರಾವ್‌ ಈ ಬಾರಿ ಲವ್‌ಸ್ಟೋರಿ ಮಾಡಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರವನ್ನು Part A ಮತ್ತು Part B ಎರಡು ಭಾಗಗಳಲ್ಲಿ ಹೇಳಬೇಕೆಂದು ಸೂತ್ರಬದ್ಧವಾಗಿಯೇ ಚಿತ್ರಕಥೆ ಮಾಡಿಕೊಂಡು ಶೂಟಿಂಗ್‌ ನಡೆಸಿದ್ದಾರೆ. ಇದೀಗ Part A ಥಿಯೇಟರ್‌ಗೆ ಬಂದಿದ್ದು, Part B ಮುಂದಿನ ಕೆಲ ದಿನಗಳಲ್ಲಿ ರಿಲೀಸ್‌ ಆಗಲಿದೆ. Part A ಪ್ರೀತಿಯ ಕತೆಗೊಂದು ತಾರ್ಕಿಕ ಅಂತ್ಯವೂ ಸಿಕ್ಕಿದೆ. Part B, ಮನು ಮತ್ತು ಪ್ರಿಯಾ ಬದುಕಿನಲ್ಲಿ ಮತ್ತಷ್ಟು ತಿರುವುಗಳಿಗೆ ಸಾಕ್ಷಿಯಾಗಬಹುದು. ದಶಕದ ನಂತರದ ಕತೆ ಅದು. ಅಲ್ಲಿ ಮನುಗೆ ಹೊಸ ಗೆಳತಿ ಇದ್ದಾಳೆ! ಜೈಲಿನ ಗೆಳೆಯರ ಉಪಕತೆಗಳೂ ಕಾಣಿಸಲಿವೆ. ಪ್ರೀತಿಯ ಜೊತೆಗೆ ಥ್ರಿಲ್‌ ಕೂಡ ಇರಲಿದೆ ಎಂದು ನಿರ್ದೇಶಕರು Part A ಕೊನೆಯಲ್ಲಿ Glimpses ಮೂಲಕ ಸುಳಿವು ನೀಡಿದ್ದಾರೆ.

ನಿರ್ದೇಶಕ ಹೇಮಂತ್‌ ಪ್ರೀತಿಯ ಕತೆಯನ್ನು ಸಾಕಷ್ಟು ಸಾವಧಾನದಿಂದಲೇ ಹೇಳುತ್ತಾರೆ. ಕೆಲವೆಡೆ ಸಿನಿಮಾದ ವೇಗ ತೀರಾ ಕಡಿಮೆಯಾಯ್ತು ಎನಿಸುವಲ್ಲೆಲ್ಲಾ ಹಿನ್ನೆಲೆ ಸಂಗೀತ ಅದನ್ನು ಸರಿಗಟ್ಟುತ್ತದೆ. ಅದರೊಟ್ಟಿಗೆ ಮನು, ಪ್ರಿಯಾ ಪಾತ್ರಧಾರಿಗಳು – ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‌. ಪ್ರೇಮಿಗಳಾಗಿ ಇಬ್ಬರ ಮಧ್ಯೆಯ ಕೆಮಿಸ್ಟ್ರಿ ತೆರೆ ಮೇಲೆ ಚೆನ್ನಾಗಿ ವರ್ಕ್‌ ಆಗಿದೆ. ತುಂಟತನ ಮಾಡುತ್ತಲೇ ಪ್ರೇಯಸಿಯ ಕನಸುಗಳಿಗೆ ಮಿಡಿಯುವ ಮನುವಾಗಿ ರಕ್ಷಿತ್‌ ಮತ್ತು ಪ್ರೀತಿ ಒಂದು ಜವಾಬ್ದಾರಿ ಎಂದು ನಿಭಾಯಿಸುವ ಯುವತಿಯಾಗಿ ರುಕ್ಮಿಣಿ ತಮ್ಮ ಪಾತ್ರಗಳನ್ನು ಸಹಜವಾಗಿ ನಿಭಾಯಿಸಿದ್ದಾರೆ. ಮನು ಜೈಲಿನಲ್ಲಿ ಬಂಧಿಯಾಗಿದ್ದರೆ ಪ್ರಿಯಾಳ ಮನಸ್ಸೇ ಒಂದು ಬಂಧೀಖಾನೆ. ಒತ್ತಡ, ರೋಷ, ಆವೇಷದ ಜೊತೆ ಪ್ರೀತಿ ಉಳಿಸಿಕೊಳ್ಳುವ ಉತ್ಸಾಹಿ ಪ್ರಿಯಾ ಪಾತ್ರಕ್ಕೆ ತುಂಬಾ ಏರಿಳಿತಗಳಿವೆ. ರುಕ್ಮಿಣಿ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಇನ್ನು ಚಿತ್ರದಲ್ಲಿ ಇಷ್ಟವಾಗುವುದು ಪಾತ್ರಗಳ ಸರಳ ಕಟ್ಟುವಿಕೆ ಮತ್ತು ಸಹಜ ನಿರೂಪಣೆ. ಗಿಜಿಗುಟ್ಟುವ ಕೋರ್ಟ್‌ ಸನ್ನಿವೇಶ ಇದಕ್ಕೊಂದು ಉದಾಹರಣೆ. ಊರು, ಪಟ್ಟಣಗಳಲ್ಲಿ ನಾವು ನೋಡುವ ಕೋರ್ಟ್‌ನ ಚಟುವಟಿಕೆಗಳು, ಪ್ರೊಸೀಡಿಂಗ್‌ಗಳೇ ತೆರೆ ಮೇಲೆ ಕಾಣಿಸುತ್ತವೆ. ಕೋರ್ಟ್‌ ಕ್ರೌಡ್‌ ಕೂಡ ನಿರ್ದೇಶಕರ ಅಣತಿಯಂತೆ ಕೆಲಸ ಮಾಡಿದೆ. ಕಾಡುವ ಏಕಾಂಗಿತನದ ಜೈಲಿನ ಕೆಲವು ಸನ್ನಿವೇಶಗಳು ಪ್ರೇಕ್ಷಕರನ್ನೂ ಕಾಡುತ್ತವೆ. ‘ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗೋಕೆ ಹುಟ್ಟಿದ್ದೇವೆ’ ಎಂದು ಜೈಲಿನ ಹಿರಿಯ ಖೈದಿ (ಶರತ್‌ ಲೋಹಿತಾಶ್ವ) ಹೇಳುವ ಮಾತು ಮನಸ್ಸಿನಲ್ಲುಳಿಯುತ್ತದೆ. ಇಂತಹ ಮತ್ತಷ್ಟು ಸಾಲುಗಳು ಚಿತ್ರದಲ್ಲಿವೆ. ಪವಿತ್ರಾ ಲೋಕೇಶ್‌, ಅಚ್ಯುತ್‌ ಕುಮಾರ್‌, ಗೋಪಾಲಕೃಷ್ಣ ದೇಶಪಾಂಡೆ, ರಮೇಶ್‌ ಇಂದಿರಾ, ಅವಿನಾಶ್‌ ಪಾತ್ರಗಳಿಗೂ ತೂಕವಿದೆ. ಸರಳ, ಸಹಜ ನಿರೂಪಣೆಗೆ ಇಂಬು ನೀಡುವಂತೆ ಹಿನ್ನೆಲೆ ಸಂಗೀತ, ಛಾಯಾಗ್ರಹಣ ಮತ್ತು ಸಂಕಲನ ವಿಭಾಗದ ತಂತ್ರಜ್ಞರಿಂದ ಹೊಂದಾಣಿಕೆಯ ಕೆಲಸ ಆಗಿದೆ. ಕೊಂಚ ಸಾವಧಾನದ ವೀಕ್ಷಣೆಗೆ ನೀವು ಅನುವಾದರೆ ‘ಸಪ್ತ ಸಾಗರದಾಚೆ ಎಲ್ಲೋ’ ಒಂದೊಳ್ಳೆಯ ‘ಫೀಲ್‌ ಗುಡ್‌’ ಸಿನಿಮಾ ಆಗಿ ಖಂಡಿತ ನಿಮಗಿಷ್ಟವಾಗುತ್ತದೆ.

LEAVE A REPLY

Connect with

Please enter your comment!
Please enter your name here