2023ರ ಮೊದಲಾರ್ಧದಲ್ಲಿ ಒಟ್ಟಾರೆ ಭಾರತೀಯ ಸಿನಿಮಾ ವಹಿವಾಟು 5000 ಕೋಟಿ ರೂಪಾಯಿ ದಾಖಲಾಗಿದೆ. ಈ ಪೈಕಿ ಶಾರುಖ್‌ರ ‘ಪಠಾಣ್’ ಹಿಂದಿ ಸಿನಿಮಾದ ಗಳಿಕೆಯೇ ಹೈಲೈಟ್. ಇನ್ನು ಕಳೆದ ವರ್ಷಕ್ಕೆ (8%) ಹೋಲಿಸಿದರೆ ಕನ್ನಡ ಸಿನಿಮಾಗಳ ಶೇರ್ 2%ಗೆ ಇಳಿದಿದೆ ಎನ್ನುವುದು ಸೋಜಿಗದ ಸಂಗತಿ.
2023ರ ಜನವರಿಯಿಂದ ಜೂನ್‌ವರೆಗೆ ಆರು ತಿಂಗಳಲ್ಲಿ ಒಟ್ಟಾರೆ ಭಾರತೀಯ ಸಿನಿಮಾಗಳ ವಹಿವಾಟು 4,868 ಕೋಟಿ ರೂಪಾಯಿ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು 15% ಕಡಿಮೆ. ಈ ವರ್ಷ ಶಾರುಖ್ ಖಾನ್ ನಟನೆಯ ಸೂಪರ್‌ಹಿಟ್ ‘ಪಠಾಣ್’ ಸಿನಿಮಾದ ಗಳಿಕೆಯೇ 13%. ಕಳೆದ ವರ್ಷ ಹಿಂದಿ ಸಿನಿಮಾಗಳ ವಹಿವಾಟು 33% ಇದ್ದುದು ಈ ಬಾರಿ 37%ಗೆ ಏರಿದೆ. ಮುಂದಿನ ಆರು ತಿಂಗಳಿನಲ್ಲಿ ಹಿಂದಿ ಸೇರಿದಂತೆ ದಕ್ಷಿಣದ ದೊಡ್ಡ ಸಿನಿಮಾಗಳು ಬಿಡುಗಡೆಯಾಗಲಿದ್ದು ಪರಿಸ್ಥಿತಿ ಸುಧಾರಿಸಬಹುದು ಎನ್ನಲಾಗುತ್ತಿದೆ.
ormaxmedia.com ಸಮೀಕ್ಷೆಯನ್ವಯ 2023ರ ಜನವರಿಯಲ್ಲಿ ಅತಿ ಹೆಚ್ಚು 1,388 ಕೋಟಿ ರೂಪಾಯಿ ವಹಿವಾಟು ದಾಖಲಾಗಿದೆ. ಉಳಿದಂತೆ ಫೆಬ್ರವರಿ (396), ಮಾರ್ಚ್ (670), ಏಪ್ರಿಲ್ (619), ಮೇ (761) ಮತ್ತು ಜೂನ್‌ನಲ್ಲಿ 1,035 ಕೋಟಿ ರೂಪಾಯಿ ವಹಿವಾಟು ನಡೆದಿದೆ. 2023ರ ಮೊದಲಾರ್ಧದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹತ್ತು ಸಿನಿಮಾಗಳಿವು – ಪಠಾಣ್ (ಹಿಂದಿ), ಆದಿಪುರುಷ್ (ಹಿಂದಿ), ದಿ ಕೇರಳ ಸ್ಟೋರಿ (ಮಲಯಾಳಂ), ವಾರಿಸು (ತಮಿಳು), ಪೊನ್ನಿಯಿನ್ ಸೆಲ್ವನ್ 2 (ತಮಿಳು), ವಾಲ್ಟರ್ ವೀರಯ್ಯ (ತೆಲುಗು), ತೂ ಝೂಟಿ ಮೈ ಮಖ್ಖರ್ (ಹಿಂದಿ), Fast X (ಇಂಗ್ಲಿಷ್), ಥುನಿವು (ತಮಿಳು) ಮತ್ತು ಕಿಸೀ ಕಾ ಭಾಯ್ ಕಿಸೀ ಕಿ ಜಾನ್. ಒಟ್ಟಾರೆ ವಹಿವಾಟಿನಲ್ಲಿ ಹಿಂದಿ ಸಿನಿಮಾಗಳ ಶೇರ್ 37% ಆದರೆ ತೆಲುಗು (20%), ತಮಿಳು (17%), ಹಾಲಿವುಡ್ (12%), ಮಲಯಾಳಂ (5%), ಪಂಜಾಬಿ (3%) ಮತ್ತು ಇತರೆ ಭಾಷೆ ಸಿನಿಮಾಗಳ ಶೇರ್ 6% ಆಗಿದೆ.
2019ರಲ್ಲಿ ಭಾರತೀಯ ಸಿನಿಮಾಗಳ ವಾರ್ಷಿಕ ವಹಿವಾಟು 10,948 ಕೋಟಿ ರೂಪಾಯಿ ತಲುಪಿತ್ತು. ಇದು All time record. ಕೋವಿಡ್‌ನಿಂದಾಗಿ ಸಂಪೂರ್ಣ ನೆಲಕಚ್ಚಿದ್ದ ಸಿನಿಮಾ ಮಾರುಕಟ್ಟೆ 2022ರಲ್ಲಿ ಚೇತರಿಕೆ ಕಂಡಿತ್ತು. ಒಟ್ಟು ವಹಿವಾಟು 10,000 ಕೋಟಿ ರೂಪಾಯಿ ದಾಟಿತ್ತು. ‘KGF 2’ ಮತ್ತು ‘RRR’ ಸಿನಿಮಾಗಳ ದೊಡ್ಡ ಯಶಸ್ಸಿನಿಂದಾಗಿ ದಕ್ಷಿಣ ಭಾರತದ ಶೇರ್ 50% ಆಗಿತ್ತು. ಆಗ ಬಾಲಿವುಡ್ ಶೇರ್ 33%. ಈ ವರ್ಷ ದಕ್ಷಿಣ ಭಾರತದ ಶೇರ್ 50%ನಿಂದ 44%ಗೆ ಇಳಿದಿದೆ. ಕನ್ನಡ ಸಿನಿಮಾದ ಗಳಿಕೆ 8%ನಿಂದ (2022) 2%ಗೆ ಇಳಿದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
2023ರ ಇದೇ ಶೇಕಡಾವಾರು ದಾಖಲಾದಲ್ಲಿ ವರ್ಷದ ಕೊನೆಗೆ ಒಟ್ಟು ಭಾರತೀಯ ಸಿನಿಮಾದ ವಹಿವಾಟು 9,736 ಕೋಟಿ ರೂಪಾಯಿ ಆಗಬಹುದು ಎನ್ನುವುದು ಒಂದು ಅಂದಾಜು. ಸಿನಿಮಾ ವಿಶ್ಲೇಷಕರು ಗಳಿಕೆ ಇನ್ನೂ ಹೆಚ್ಚಾಗುತ್ತದೆ ಎನ್ನುತ್ತಾರೆ. 2023ರ ದ್ವಿತಿಯಾರ್ಧದಲ್ಲಿ ಜವಾನ್, ಸಲಾರ್, ಟೈಗರ್3 ನಂತಹ ದೊಡ್ಡ ಸಿನಿಮಾಗಳು ಬಿಡುಗಡೆಯಾಗಲಿದ್ದು, ಗಳಿಕೆ ಹೆಚ್ಚಾಗಲಿದೆ ಎಂದು ಅಂದಾಜಿಸುತ್ತಾರೆ. ಇನ್ನು ಕನ್ನಡ ಸಿನಿಮಾ ವಿಚಾರಕ್ಕೆ ಬರುವುದಾದರೆ ವರ್ಷದ ದ್ವಿತಿಯಾರ್ಧದಲ್ಲಿ ದೊಡ್ಡ ಸಿನಿಮಾಗಳು ತೆರೆಗೆ ಸಿದ್ಧವಾಗುತ್ತಿವೆ. ಮಾರ್ಟಿನ್, ಘೋಸ್ಟ್, ಸಪ್ತಸಾಗರದಾಚೆ ಎಲ್ಲೋ, UI, ಭೀಮ, ಉತ್ತರಕಾಂಡ ಚಿತ್ರಗಳು ತೆರೆಕಾಣಲಿದ್ದು ಪರಿಸ್ಥಿತಿ ಸುಧಾರಿಸಬಹುದು.