ಇಂತಹ ಶೋಗಳನ್ನು ನೋಡಿದಾಗ Virtual presence ಎಂಬ ಮೇಲ್ಪದರದ ಬದುಕು ನಮ್ಮ ನಮ್ಮ ವ್ಯಕ್ತಿತ್ವದ ಮೇಲೆ ಎಷ್ಟು ಮತ್ತು ಹೇಗೆ ಪರಿಣಾಮ ಬೀರುತ್ತದೆ ಎನ್ನುವ ಅಂದಾಜು ಸಿಕ್ಕರೂ ಸಿಗಬಹುದು. ಈ ನಿಟ್ಟಿನಲ್ಲಿ ಇಂತಹ ಇನ್ನಷ್ಟು ಪ್ರಯೋಗಗಳು ಆಗಬೇಕು. ಆದರೆ ಅವು ಧನಾತ್ಮಕವಾಗಿದ್ದಷ್ಟೂ, ಕ್ರಿಯಾತ್ಮಕವಾಗಿದ್ದಷ್ಟೂ ಒಳ್ಳೆಯದು ಅನ್ನೋದು ಆಶಯ. ‘Social Currency’ ರಿಯಾಲಿಟಿ ಶೋ Netflixನಲ್ಲಿ ಸ್ಟ್ರೀಮ್ ಆಗುತ್ತಿದೆ.
ಎಂಟು ಜನ ಸಾಮಾಜಿಕ ಜಾಲತಾಣದ influencers ಒಂದೇ ಮನೆಯಲ್ಲಿ 21 ದಿನಗಳ ಕಾಲ ಪರಸ್ಪರ ಸ್ಪರ್ಧೆ ನೀಡುತ್ತಾ ಅಡ್ಮಿನ್ ಒಡ್ಡುವ ಸವಾಲುಗಳನ್ನು ಎದುರಿಸಬೇಕು. ಒಬ್ಬ ಮಾತ್ರ ಜಯಶಾಲಿಯಾಗಲು ಸಾಧ್ಯ. ಇದೇ ‘ಸೋಷಿಯಲ್ ಕರೆನ್ಸಿ’ ಎನ್ನುವ ರಿಯಾಲಿಟಿ ಶೋ. ಹೆಸರೇ ಹೇಳುವ ಹಾಗೆ ಅವರವರ ಆನ್‌ಲೈನ್ ಪ್ರೆಸೆನ್ಸೇ ಅವರವರ ಬಂಡವಾಳ ಇದರಲ್ಲಿ. ಆದರೆ ಒಂದು ಟ್ವಿಸ್ಟ್ ಇದೆ. ಈಗಾಗಲೇ ಇರುವ ಆನ್‌ಲೈನ್ ಫಾಲೋವರ್ಸ್ ಅನ್ನು ಸ್ಪರ್ಧಿಗಳು ಸಂಪೂರ್ಣ ತ್ಯಜಿಸಬೇಕು. ಎಲ್ಲರಿಗೂ ಮನೆಯಲ್ಲಿ ಅಡ್ಮಿನ್ ಹೊಸ ಖಾತೆ ತೆರೆಯುತ್ತಾರೆ. ಈಗ ಈ ಎಂಟು ಜನರು ಅವರವರ ಪ್ರತಿಭೆ, ಚಾಕಚಕ್ಯತೆ ಮತ್ತು ಇನ್ಫ್ಲುಯೆನ್ಸಿಂಗ್ ಸಾಮರ್ಥ್ಯ ಬಳಸಿ ಮತ್ತೆ ಫಾಲೋವರ್ಸ್ ಅನ್ನು ಸಂಪಾದಿಸಿಕೊಳ್ಳಬೇಕು ಮತ್ತು ಜಯಶಾಲಿಗಳಾಗಬೇಕು. ಹಾಗೆಯೇ ನಿತ್ಯದ ಊಟ, ತಿಂಡಿ ಮೊದಲಾದ ಸವಲತ್ತುಗಳನ್ನೂ ಅಡ್ಮಿನ್ ನೀಡುವ ಚಟುವಟಿಕೆಗಳನ್ನು ಪೂರ್ಣಗೊಳಿಸುವ ಮೂಲಕ ದುಡಿದುಕೊಳ್ಳಬೇಕು. ಒಟ್ಟಿನಲ್ಲಿ ಇಲ್ಲಿ ಯಾವುದೂ ಬಿಟ್ಟಿ ಬರೋದಿಲ್ಲ. ಎಲ್ಲದಕ್ಕೂ ಬೆಲೆ ತೆರಲೇಬೇಕು. ಇದು ಈ ರಿಯಾಲಿಟಿ ಶೋನ ಸಾರಾಂಶ.
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿರುವ ಎಂಟು ಜನ ಬೇರೆ ಬೇರೆ ಹಿನ್ನೆಲೆಯ influencers ಈ ಶೋನಲ್ಲಿ ಸ್ಪರ್ಧಿಗಳು. ಈಗಾಗಲೇ ಬಿಗ್ ಬಾಸ್ ಮಾದರಿಯ ರಿಯಾಲಿಟಿ ಶೋಗಳು ಜನಪ್ರಿಯವಾಗಿರುವ ಹಿನ್ನೆಲೆಯಲ್ಲಿ ಕೊಂಚ ಅದೇ ಮಾದರಿಯ ಆದರೆ ವಿಭಿನ್ನ ಆಯಾಮಗಳಿರುವ ಅನೇಕ ರಿಯಾಲಿಟಿ ಶೋಗಳ ಸಾಲಿಗೆ ‘ಸೋಷಿಯಲ್ ಕರೆನ್ಸಿ’ ಒಂದು ಹೊಸ ಸೇರ್ಪಡೆ. ಆದರೆ ಇದುವರೆಗೂ instagram ಮೊದಲಾದ ಜನಪ್ರಿಯ ಸಾಮಾಜಿಕ ಜಾಲತಾಣಗಳನ್ನೇ ಉಸಿರನ್ನಾಗಿಸಿಕೊಂಡು ಅದರ ಮೂಲಕವೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ influencersಗಳು ವಾಸ್ತವದಲ್ಲೂ ತಮ್ಮ online charm ಅನ್ನು ಉಳಿಸಿಕೊಂಡು ಜನಮನ್ನಣೆ ಗಳಿಸುತ್ತಾರಾ ಅನ್ನುವುದು ಈ ಶೋನ ವಿಶೇಷ. ಮೊಬೈಲ್ ಪರದೆಯ ಮೂಲಕವಷ್ಟೇ ಪರಿಚಿತರಾದ influencers ಜನಗಳ ಎದುರಿಗೇ ಹೋಗಿ ನಿಂತಾಗ ಅವರುಗಳಿಗೆ ಸಿಗುವ ಮನ್ನಣೆ ಎಂಥದ್ದು ಮತ್ತು ಎಷ್ಟು ಎಂದು ಅಳೆಯುವ ಅಳತೆಗೋಲು ಈ ಶೋ. ಈ ನಿಟ್ಟಿನಲ್ಲಿ ಇದೊಂದು ವಿಭಿನ್ನವಾದ ಸಾಮಾಜಿಕ ಪ್ರಯೋಗ ಎಂದೂ ಹೇಳಬಹುದು.
ಈ ಶೋ ಯಾಕೆ ಈ ಕಾಲಘಟ್ಟಕ್ಕೆ ಪ್ರಸ್ತುತ ಆಗುತ್ತದೆ ಎಂದು ನೋಡಿದರೆ ಸುಮಾರು ಕಾರಣಗಳು ಗೋಚರಿಸುತ್ತವೆ. ಸಾಮಾಜಿಕ ಜಾಲತಾಣ ಸದ್ಯದ ತಲೆಮಾರಿನ ಆಕ್ಸಿಜನ್ ಅಂದರೆ ಖಂಡಿತ ಉತ್ಪ್ರೇಕ್ಷೆ ಅಲ್ಲ. ಒಂದು ಇಡೀ ತಲೆಮಾರು ತಮ್ಮ ಸಾಮಾಜಿಕ ಅಸ್ತಿತ್ವವನ್ನು ಕಳೆದ ಒಂದೂವರೆ ದಶಕಗಳಲ್ಲಿ ವಾಸ್ತವದಿಂದ virtual ಪ್ರಪಂಚಕ್ಕೆ ಹಸ್ತಾಂತರಿಸಿಕೊಂಡಿದೆ ಅಂದರೆ ಸಾಮಾಜಿಕ ಜಾಲತಾಣಗಳ ಪ್ರಖರತೆಯನ್ನು ಅಂದಾಜಿಸಬಹುದು. ಸುತ್ತಲೂ ಸಾವಿರ ಜನಗಳು ಇದ್ದರೂ ಮುಖಾಮುಖಿ ಮಾತುಕತೆಗಿಂತಲೂ ತಮ್ಮದೇ ಲೋಕದಲ್ಲಿ ಮುಳುಗಿ ಅಂಗೈ ಅಗಲದ ಮೊಬೈಲ್ ಪರದೆಯೊಳಗೆ ಸಂವಹನದಲ್ಲಿ ಕಳೆದುಹೋಗಿರುವ ಬಹು ದೊಡ್ಡ ಸಮೂಹ ಏನು ಮಾಡುತ್ತಾ ಇದ್ದಾರೆ, ಎತ್ತ ಸಾಗುತ್ತಾ ಇದ್ದಾರೆ, ಯಾರ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಅವಲೋಕಿಸಿದರೆ ಕಣ್ಣಿಗೆ ರಾಚುವಂತೆ ಕಾಣೋದೇ ಈ influencers / ಪ್ರಭಾವಶಾಲಿಗಳು.
ಪ್ರತಿಭೆ, ಆಕರ್ಷಕ ವ್ಯಕ್ತಿತ್ವ ಮತ್ತು ಮಾತುಗಾರಿಕೆಯನ್ನು ಬಂಡವಾಳ ಮಾಡಿಕೊಂಡು ಲೈಕು, ಕಮೆಂಟು ಗಿಟ್ಟಿಸಿ ಜನಪ್ರಿಯತೆ ಹೊಂದುವ virtual ಪ್ರಪಂಚದ ತಾರೆಗಳೇ ಈ influencers. Virtual ಪ್ರಪಂಚದ ಜನಪ್ರಿಯತೆಗೆ ಮಾನದಂಡ ಅಂತೇನೂ ಇರಬೇಕಿಲ್ಲ. ಕೆಲವೊಮ್ಮೆ ಚಿತ್ರವಿಚಿತ್ರವಾಗಿ ಕಾಣಿಸಿಕೊಂಡು ಜನಪ್ರಿಯರಾದವರೂ ಇಲ್ಲಿ ಇದ್ದಾರೆ. ಹಾಗೆ ಬಂದು ಹೀಗೆ ಮಿಂಚಿ ಮರೆಯಾದವರು ಇದ್ದಾರೆ. ಜನಗಳಿಗೆ ಹತ್ತಿರವಾಗಬೇಕಾದರೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಅರಿತ ಜಾಣರು ಇದ್ದಾರೆ, ಕಂಟೆಂಟ್ ಅನ್ನು ಹಣವಾಗಿ ಪರಿವರ್ತಿಸುವುದನ್ನು ಅರಿತ ಚಾಣಾಕ್ಷರು ಇದ್ದಾರೆ. ತಮ್ಮ ಪ್ರತಿಭೆಯನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಬಲ್ಲ ಪ್ರತಿಭಾವಂತರು ಇದ್ದಾರೆ.
ಒಟ್ಟಿನಲ್ಲಿ ಇಲ್ಲಿ ಎಲ್ಲ ಥರದವರಿಗೂ ವೇದಿಕೆ ಇದೆ. ಎಲ್ಲ ಥರದ ಕಂಟೆಂಟ್‌ಗೂ ವೀಕ್ಷಕರು ಇದ್ದಾರೆ. ಅವರವರ ವೀಕ್ಷಕ ಗಣಗಳನ್ನು( ಟಾರ್ಗೆಟ್ ಆಡಿಯೆನ್ಸ್ ) ಗುರುತಿಸಿಕೊಂಡು ಆಯಾ ವಲಯಕ್ಕೆ ತಲುಪುವುದು influencersಗಳ ಸಾಮರ್ಥ್ಯದ ಮೇಲೆ ಅವಲಂಬಿತ. ಕೆಲವರಿಗೆ ಅನಿರೀಕ್ಷಿತ ಜನಪ್ರಿಯತೆ ದಕ್ಕುತ್ತದೆ . ಕೆಲವರಿಗೆ ನಿರೀಕ್ಷೆಗೆ ತಕ್ಕಂತೆ ಜನಪ್ರಿಯತೆ ಸಿಗದೇ ನಿರಾಸೆಯಾಗುತ್ತದೆ. ಹತಾಶೆಗೆ ಬಿದ್ದು ಜನಪ್ರಿಯತೆ ಗಿಟ್ಟಿಸಿಕೊಳ್ಳಲು ಹರಸಾಹಸ ಮಾಡುವವರೂ ಇಲ್ಲಿದ್ದಾರೆ. ಧನಾತ್ಮಕವೋ, ಋಣಾತ್ಮಕವೋ, ಒಟ್ಟಿನಲ್ಲಿ ಹೇಗಾದರೂ influence ಉಂಟುಮಾಡಬೇಕು. ಬೈದುಕೊಂಡಾದರೂ ಜನ ತಮ್ಮ ಕಂಟೆಂಟ್ ನೋಡಬೇಕು ಎನ್ನುವ ಟ್ರೆಂಡ್ ಸಹಜವಾಗಿಬಿಟ್ಟಿದೆ.
ಇಷ್ಟನ್ನೂ ಗಮನದಲ್ಲಿ ಇಟ್ಟುಕೊಂಡು ಎಂಟು ಬೇರೆ ಬೇರೆ ಹಿನ್ನೆಲೆಯ ಸ್ಪರ್ಧಿಗಳನ್ನು ಈ ಶೋನಲ್ಲಿ ಒಂದು ಮನೆಯೊಳಗೆ ತಂದು ಬಿಟ್ಟಿದ್ದಾರೆ. ಇವರಲ್ಲಿ ಸಾಕ್ಷಿ ಮತ್ತು ರೌಹಿ ತಮ್ಮ ಚಿತ್ರವಿಚಿತ್ರ ನಡವಳಿಕೆಯಿಂದ ಗಮನ ಸೆಳೆದರೆ, ವಾಗ್ಮಿತ ಒಬ್ಬ ಬರಹಗಾರ್ತಿಯಾಗಿ, ಪಾರ್ಥ್ ಮತ್ತು ರೂಹಿ ತಮ್ಮ ಗ್ಲಾಮರ್‌ನಿಂದ, ಮೃದುಲ್ ಮತ್ತು ಆಕಾಶ್ ತಮ್ಮ ಮಾತುಗಾರಿಕೆಯಿಂದ ಹಾಗೂ stand up comedian ಆಕಾಶ್ ತಮ್ಮ ಹಾಸ್ಯ ಪ್ರವೃತ್ತಿಯಿಂದ ಗಮನ ಸೆಳೆಯಲು ನೋಡುತ್ತಾರೆ. ಎಲ್ಲರಿಗಿಂತ ಕಡಿಮೆ ಫಾಲೋವರ್ಸ್ ಹೊಂದಿರುವ ಆಕಾಶ್ ತಮ್ಮ ಹತಾಶೆಯನ್ನು ಬಂಡವಾಳ ಮಾಡಿಕೊಂಡರೆ ವಾಗ್ಮಿತಾ ತಮ್ಮ positivity ಮತ್ತು ಸ್ಪರ್ಧಾತ್ಮಕ ಗುಣದಿಂದ ತಮಗಿಂತ ಜನಪ್ರಿಯರಾದ ಮಿಕ್ಕ ಸ್ಪರ್ಧಿಗಳಿಗೆ ಒಳ್ಳೆ ಪೈಪೋಟಿ ನೀಡುತ್ತಾ ಹೋಗುತ್ತಾರೆ. ಹುಡುಗಾಟದ ಹುಡುಗಿಯಾಗಿ ಪರಿಚಯವಾಗುವ ರೌಹಿ ಆಶ್ಚರ್ಯಕರವಾಗಿ reveal ಆಗುತ್ತಾ ಹೋಗುತ್ತಾರೆ.
ಜನಪ್ರಿಯತೆಯ ಈ ಯುದ್ಧದಲ್ಲಿ ಕೊನೆಗೆ ಯಾರು ಜಯಶಾಲಿಯಾಗುತ್ತಾರೆ ಅನ್ನೋದೇ ಕುತೂಹಲ. ಶೋನ ಗುಣಮಟ್ಟ ಮತ್ತು pattern ಬಗ್ಗೆ ಹೇಳಬೇಕು ಅಂದರೆ 21 ದಿನಗಳ ಸ್ಪರ್ಧೆಯನ್ನು ಆಯಾ ದಿನದ ಲೆಕ್ಕದಲ್ಲಿ 21 ಸಂಚಿಕೆಗಳ ಮಾದರಿಯಲ್ಲಿ ತೋರಿಸಿದ್ದರೆ ಇನ್ನೂ ಸ್ಪಷ್ಟವಾಗಿ ಹಾಗೂ ಪರಿಣಾಮಕಾರಿಯಾಗಿ ಇರುತ್ತಿತ್ತೇನೋ. 21 ದಿನಗಳ ಆಟವನ್ನು ಎಂಟು ಸಂಚಿಕೆಗಳಲ್ಲಿ ತೋರಿಸಿರೋದು ಯಾವ ದಿನ ಯಾವ ಸ್ಪರ್ಧಿ ಏನು ಮಾಡಿದರು, ಎಷ್ಟು ಗೆದ್ದರು, ಎಷ್ಟು ಸೋತರು ಎಂಬ ಸ್ಪಷ್ಟವಾದ ಚಿತ್ರಣವನ್ನು ಕೊಡದೆ ಸ್ವಲ್ಪ ಗೊಂದಲ ಉಂಟುಮಾಡುತ್ತದೆ.
ಸ್ಪರ್ಧಿಗಳು ತಮಗೆ ನೀಡಿರುವ ಯಾವ ಟಾಸ್ಕಿನಲ್ಲಿಯೂ ಕನಿಷ್ಟ ಮಟ್ಟದ ಸೃಜನಶೀಲತೆಯನ್ನೂ ತೋರಿಸದೆ ಇರುವುದು ಬೇಸರ ಮತ್ತು ಆಶ್ಚರ್ಯ ಉಂಟುಮಾಡುತ್ತದೆ. ಇವರೇನಾ ನಮ್ಮ influencers ಎಂಬ ನಿರಾಶೆಯೂ ಆಗುತ್ತದೆ. ಇನ್ನೂ ಎಷ್ಟೋ ಪ್ರತಿಭಾನ್ವಿತ, ಸೃಜನಶೀಲ influencersಗೆ ಅವಕಾಶ ನೀಡಬಹುದಿತ್ತು ಎಂದೆನಿಸಿದ್ದು ಹೌದು. ಸೃಜನಶೀಲತೆ ಪಕ್ಕಕ್ಕಿಟ್ಟು ನೋಡಿದರೂ ಮನರಂಜನೆಯ ಮಟ್ಟ ಸೊನ್ನೆ ಎಂದೇ ಹೇಳಬಹುದು. Netflix ಈ ಬಾರಿ ಸ್ಪರ್ಧಿಗಳ ಚಿತ್ರವಿಚಿತ್ರ ಉಡುಪು, ಭಾವಭಂಗಿ ಮತ್ತು ಅವಾಚ್ಯ ಪದಪ್ರಯೋಗಗಳ ಭಾಷೆಯನ್ನೇ ಬಂಡವಾಳ ಮಾಡಿಕೊಂಡು ವಿಷಯ, ಮನರಂಜನೆ ಮತ್ತು ಕ್ರಿಯಾಶೀಲತೆ ಎಲ್ಲದಕ್ಕೂ ಕೊನೆಯ ಆದ್ಯತೆ ಕೊಟ್ಟಿರುವುದು ಬೇಸರದ ವಿಷಯ. ಅತಿಯಾದ ಅವಾಚ್ಯ ಶಬ್ದಗಳ ಬಳಕೆ ಕಿರಿಕಿರಿ ಉಂಟುಮಾಡುತ್ತದೆ.
ಒಟ್ಟಾರೆ ಹೇಳಬೇಕೆಂದರೆ ‘ಸೋಷಿಯಲ್ ಕರೆನ್ಸಿ’ ಒಂದು ವಿಭಿನ್ನವಾದ, ವಿನೂತನವಾದ , ಹೊಸತನಕ್ಕೆ ಬಹಳ ಅವಕಾಶವಿದ್ದ ಆದರೆ ಬಹಳ ನಿರಾಶಾದಾಯಕವಾಗಿ execute ಮಾಡಲಾದ ಶೋ ಎಂದು ಹೇಳಬಹುದು. ಆದರೆ ಇಂತಹ ಶೋಗಳನ್ನು ನೋಡಿದಾಗ Virtual presence ಎಂಬ ಮೇಲ್ಪದರದ ಬದುಕು ನಮ್ಮ ನಮ್ಮ ವ್ಯಕ್ತಿತ್ವದ ಮೇಲೆ ಎಷ್ಟು ಮತ್ತು ಹೇಗೆ ಪರಿಣಾಮ ಬೀರುತ್ತದೆ ಎನ್ನುವ ಅಂದಾಜು ಸಿಕ್ಕರೂ ಸಿಗಬಹುದು. ಈ ನಿಟ್ಟಿನಲ್ಲಿ ಇಂತಹ ಇನ್ನಷ್ಟು ಪ್ರಯೋಗಗಳು ಆಗಬೇಕು. ಆದರೆ ಅವು ಧನಾತ್ಮಕವಾಗಿದ್ದಷ್ಟೂ, ಕ್ರಿಯಾತ್ಮಕವಾಗಿದ್ದಷ್ಟೂ ಒಳ್ಳೆಯದು ಅನ್ನೋದು ಆಶಯ.