ಚಿತ್ರನಿರ್ದೇಶಕ ಶ್ರೀನಿವಾಸರಾಜು ಅವರು ಅಯೋಧ್ಯೆ ರಾಮಮಂದಿರ ಬಯೋಪಿಕ್ ಸಿನಿಮಾ ಘೋಷಿಸಿದ್ದಾರೆ. ಚಿತ್ರದ ಶೀರ್ಷಿಕೆಯಿನ್ನೂ ನಿಗದಿಯಾಗಿಲ್ಲ. ಆದರೆ ಶೀರ್ಷಿಕೆಗೆ ‘ಸತ್ಯಂ ಶಿವಂ ಸುಂದರಂ’ ಎನ್ನುವ ಟ್ಯಾಗ್‌ಲೈನ್ ಇರಲಿದೆ. ಮೂರು ಭಾಗಗಳಲ್ಲಿ ಬರಲಿರುವ ಚಿತ್ರದಲ್ಲಿ ಭಾರತದ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ.
ಈ ವರ್ಷದ ಆರಂಭದಲ್ಲಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾದ ರಾಮಮಂದಿರ ಕುರಿತು ಬಯೋಪಿಕ್ ಕನ್ನಡ ಸಿನಿಮಾ ಸೆಟ್ಟೇರುತ್ತಿದೆ. ಶ್ರೀನಿವಾಸರಾಜು ನಿರ್ದೇಶನದಲ್ಲಿ ತಯಾರಾಗಲಿರುವ ಚಿತ್ರ ಮೂರು ಭಾಗಗಳಲ್ಲಿ ಬರಲಿದೆ ಎನ್ನುವುದು ವಿಶೇಷ. ಚಿತ್ರದ ಶೀರ್ಷಿಕೆಯಿನ್ನೂ ನಿಗದಿಯಾಗಿಲ್ಲ. ಆದರೆ ಶೀರ್ಷಿಕೆಗೆ ‘ಸತ್ಯಂ ಶಿವಂ ಸುಂದರಂ’ ಎನ್ನುವ ಟ್ಯಾಗ್‌ಲೈನ್ ಇರಲಿದೆ. ‘ಕೃಷ್ಣಂ ಪ್ರಣಯ ಸಖಿ’ ಚಿತ್ರ ನಿರ್ಮಿಸಿರುವ ಪ್ರಶಾಂತ್ ಜಿ ರುದ್ರಪ್ಪ, ತ್ರಿಶೂಲ್ ಎಂಟರ್‌ಟೇನ್‌ಮೆಂಟ್ ಬ್ಯಾನರ್‌ನಡಿ ಚಿತ್ರ ನಿರ್ಮಾಣ ಮಾಡಲಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಶ್ರೀನಿವಾಸರಾಜು, ‘ಸಾಮಾನ್ಯವಾಗಿ ಸಾಧಕ ವ್ಯಕ್ತಿಗಳ ಬಯೋಪಿಕ್ ತಯಾರಾಗುತ್ತವೆ. ಆದರೆ, ದೇವಸ್ಥಾನವೊಂದರ ಬಯೋಪಿಕ್ ಇರುವುದು ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಮಾತ್ರ ಎನ್ನುವುದು ನನ್ನ ಅಭಿಪ್ರಾಯ. ಸುಮಾರು 500 ವರ್ಷಗಳ ಇತಿಹಾಸವನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದೇನೆ. ಕನ್ನಡದಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಬಾಬರಿ ಮಸೀದಿಗೂ ಮೊದಲು ರಾಜಾ ವಿಕ್ರಮಾದಿತ್ಯ ಪ್ರತಿಷ್ಠಾಪಿಸಿದ ಶ್ರೀರಾಮ ಮಂದಿರದಿಂದ ಚಿತ್ರದ ಕತೆ ತೆರೆದುಕೊಳ್ಳುತ್ತದೆ. ಇದರ ಜೊತೆಗೆ ರಾಮಾಯಣದ ಕೆಲವು ಅಂಶಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಹಾಗಂತ ಇದು ಸಂಪೂರ್ಣ ರಾಮಾಯಣದ ಕಥೆಯಲ್ಲ. ದಶರಥ, ರಾಮ, ಸೀತಾ, ಹನುಮಂತ, ವಾಲಿ ಹಾಗೂ ವಾಲ್ಮೀಕಿ ಈ ಆರು ಪಾತ್ರಗಳು ಮಾತ್ರ ಇರುತ್ತವೆ. ತುಳಿಸಿದಾಸರ ಪಾತ್ರ ಕೂಡ ಈ ಚಿತ್ರದಲ್ಲಿರಲಿದೆ’ ಎನ್ನುತ್ತಾರೆ. ನಿರ್ದೇಶಕರೇ ಕತೆ, ಚಿತ್ರಕಥೆ ರಚಿಸಿದ್ದಾರೆ. ಭಾರತದ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ.