ಬ್ಲಾಕ್ ಬಸ್ಟರ್ ‘ಗದ್ದಾರ್’ ತೆರೆಕಂಡ 22 ವರ್ಷಗಳ ನಂತರ ಈ ಹಿಂದಿ ಚಿತ್ರದ ಸರಣಿ ತೆರೆಗೆ ಬರುತ್ತಿದೆ. ಮೊದಲ ಸಿನಿಮಾದಲ್ಲಿ ಭಾರತ – ಪಾಕಿಸ್ತಾನ್ ವಿಭಜನೆ ಹಿನ್ನೆಲೆಯ ಕತೆಯಿತ್ತು. ಈಗ ಸರಣಿಯಲ್ಲಿ ಭಾರತ – ಪಾಕಿಸ್ತಾನ್ ಯುದ್ಧದ ಹಿನ್ನೆಲೆಯಲ್ಲಿ ಕತೆ ಹೆಣೆದಿದ್ದಾರೆ ನಿರ್ದೇಶಕ ಅನಿಲ್ ಶರ್ಮಾ. ಆಗಸ್ಟ್ 11ರಂದು ಸಿನಿಮಾ ತೆರೆಕಾಣಲಿದೆ.
ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅಭಿನಯದ ‘ಗದ್ದಾರ್ 2’ ಹಿಂದಿ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. 22 ವರ್ಷಗಳ ಹಿಂದೆ ತೆರೆಕಂಡ ಮೊದಲ ಚಿತ್ರದಲ್ಲಿ ಭಾರತ ಮತ್ತು ಪಾಕಿಸ್ತಾನ್ ವಿಭಜನೆಯ ಹಿನ್ನೆಲೆಯಲ್ಲಿ ಕತೆ ಹೇಳಲಾಗಿತ್ತು. ತಾರಾ ಸಿಂಗ್ (ಸನ್ನಿ ಡಿಯೋಲ್) ಮತ್ತು ಪಾಕಿಸ್ತಾನ್ ಯುವತಿ ಸಕೀನಾ (ಅಮೀಶಾ ಪಟೇಲ್) ಪ್ರೇಮಕತೆ ಅದು. ಈಗ ಸರಣಿಯಲ್ಲಿ 1971ರ ಭಾರತ – ಪಾಕಿಸ್ತಾನ್ ಯುದ್ಧದ ಹಿನ್ನೆಲೆಯಲ್ಲಿ ಕತೆ ಮಾಡಿದ್ದಾರೆ ನಿರ್ದೇಶಕ ಅನಿಲ್ ಶರ್ಮಾ. ಚಿತ್ರದ ಕಥಾನಾಯಕ ಮತ್ತು ಕಥಾನಾಯಕಿಯ ಹೆಸರುಗಳು ತಾರಾ ಸಿಂಗ್ ಮತ್ತು ಸಕೀನಾ ಎಂದೇ ಇರಲಿವೆ. ಯುದ್ಧದ ಹಿನ್ನೆಲೆಯಲ್ಲಿ ‘ಕ್ರಷ್ ಇಂಡಿಯಾ’ ಎನ್ನುವ ಫಲಕಗಳು ಮತ್ತು ದೊಂಬಿಯೊಂದಿಗೆ ಟೀಸರ್ ಶುರುವಾಗುತ್ತದೆ.
ತಾರಾ ಸಿಂಗ್ ಪಾತ್ರದಲ್ಲಿ ಸನ್ನಿ ಡಿಯೋಲ್ ಆಕ್ಷನ್ನ ಝಲಕ್ನೊಂದಿಗಿನ ಟೀಸರ್ನಲ್ಲಿ ನಾಯಕಿ ಅಮೀಶಾ ಪಾತ್ರದ ಪರಿಚಯವಿಲ್ಲ. ಆಕ್ಷನ್ ಜೊತೆಗೆ ಸಮಾಧಿಯೊಂದರ ಎದುರು ಕುಳಿತ ಸನ್ನಿ ಎಮೋಷನಲ್ ಸನ್ನಿವೇಶವೊಂದಿದೆ. ಮೊದಲ ಚಿತ್ರದಲ್ಲಿದ್ದ ‘ಘರ್ ಆ ಜಾ ಪರ್ದೇಸಿ’ ಹಾಡನ್ನು ಇಲ್ಲಿ ಮರುಬಳಕೆ ಮಾಡಿಕೊಳ್ಳಲಾಗದೆ. ಆ ಚಿತ್ರವನ್ನು ನಿರ್ದೇಶಿಸಿದ್ದ ಅನಿಲ್ ಶರ್ಮಾ ಅವರೇ ಇಲ್ಲಿಯೂ ಸಾರಥ್ಯ ವಹಿಸಿದ್ದಾರೆ. ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಜೊತೆಗೆ ಉತ್ಕರ್ಷ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸನ್ನಿ – ಅಮೀಶಾ ಪುತ್ರ ಜೀತ್ ಸಿಂಗ್ ಪಾತ್ರದಲ್ಲಿದ್ದಾರೆ ಉತ್ಕರ್ಷ್. ಆಗಸ್ಟ್ 11ರಂದು ಸಿನಿಮಾ ತೆರೆಕಾಣುತ್ತಿದ್ದು, ಅದೇ ದಿನ ರಣಬೀರ್ ಕಪೂರ್ ಅವರ ‘ಅನಿಮಲ್’ ಸಿನಿಮಾ ಬಿಡುಗಡೆಯಾಗುತ್ತಿದೆ.