ತಮಿಳು ಚಿತ್ರರಂಗದಲ್ಲಿ ಇತ್ತೀಚೆಗೆ ಶೋಷಿತ ವರ್ಗಗಳ ಕುರಿತ ಕಥಾನಕಗಳ ಸಿನಿಮಾಗಳು ಆಗಿಂದಾಗ್ಗೆ ತಯಾರಾಗುತ್ತಿವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ‘ಜೈ ಭೀಮ್’. ನಟ ಸೂರ್ಯ ಅಭಿನಯದ ತಮಿಳು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಕಾಲಿವುಡ್ ಸ್ಟಾರ್ ಹೀರೋ ಸೂರ್ಯ ತಮ್ಮ ಬಹುನಿರೀಕ್ಷಿತ ಕೋರ್ಟ್ – ರೂಮ್ ಡ್ರಾಮಾ ‘ಜೈ ಭೀಮ್’ ಚಲನಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ಚಿತ್ರದಲ್ಲಿ ಸೂರ್ಯ ವಕೀಲನ ಪಾತ್ರ ನಿರ್ವಹಿಸುವುದು ಚಿತ್ರದ ಮೊದಲ ಪೋಸ್ಟರ್‌ನಲ್ಲೇ ಗೊತ್ತಾಗಿತ್ತು. ಈಗ ಅಭಿಮಾನಿಗಳಿಗೆ ತಾವು ಚಿತ್ರದಲ್ಲಿ ನಿರ್ವಹಿಸಿರುವ ಪಾತ್ರದ ಒಳನೋಟವನ್ನು ನೀಡಿದ್ದಾರೆ. ಸೂರ್ಯ ತಮ್ಮ ತಾರಾಪತ್ನಿ ಜ್ಯೋತಿಕಾ ಅವರ ಜೊತೆಗೂಡಿ ನಿರ್ಮಿಸಿರುವ ಪ್ರಯೋಗವಿದು. ಅಮೆಜಾನ್ ಪ್ರೈಮ್ ಓಟಿಟಿ ಪ್ಲಾಟ್‌ಫಾರ್ಮ್ ಮೂಲಕ ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. ಸೂರ್ಯ ಅವರ ನಿರ್ಮಾಣ ಸಂಸ್ಥೆ 2D ಎಂಟರ್‌ಟೇನರ್ಸ್ ಮತ್ತು ಪ್ರೈಮ್ ನಡುವಿನ ನಾಲ್ಕು ಸಿನಿಮಾಗಳ ಒಪ್ಪಂದದ ಅನ್ವಯ ಸಿದ್ಧವಾಗುತ್ತಿರುವ ಮೂರನೇ ಚಿತ್ರವಿದು.
ಮೋಷನ್ ಪೋಸ್ಟರ್‌ನಲ್ಲಿ ಅನಿಮೇಟೆಡ್ ಕೋರ್ಟ್ ತೋರಿಸಲಾಗಿದೆ. ಅಲ್ಲದೆ, ಅಲ್ಲಿನ ಗೋಡೆಗಳ ಮೇಲೆ ನೇತಾಡುವ ವಿಶ್ವ ನಾಯಕರ ಭಾವಚಿತ್ರಗಳೂ ಇಲ್ಲಿವೆ. ಭಾರತದ ಸಂವಿಧಾನವನ್ನು ಮೇಜಿನ ಮೇಲೆ ಇಟ್ಟಿರುವ ಸೂರ್ಯನ ಕೊಠಡಿಯ ದರ್ಶನವನ್ನೂ ಮಾಡಿಸುತ್ತದೆ ಪೋಸ್ಟರ್. ಮೋಷನ್ ಪೋಸ್ಟರ್‌ನಲ್ಲಿ ಸೂರ್ಯ ಅವರ ಪಾತ್ರವು ಯಾವುದೋ ಒಂದು ವಿಷಯವನ್ನು ವಿರೋಧಿಸುವ ಮೂಡಿನಲ್ಲಿದೆ. ಅಮೆಜಾನ್ ಪ್ರೈಮ್ OTT ಪ್ಲಾಟ್‌ಫಾರ್ಮ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಪ್ರಕಾಶ್ ರಾಜ್, ರಾವ್ ರಮೇಶ್, ರಜೀಶಾ ವಿಜಯನ್ ಮತ್ತು ಲಿಜೊ ಮೋಲ್ ಜೋಸ್ ಪ್ರಮುಖ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಸೀನ್ ರೋಲ್ಡನ್ ಸಂಗೀತ ಸಂಯೋಜಿಸಿದ್ದಾರೆ. ಅಮೇಜಾನ್ ಪ್ರೈಂನಲ್ಲಿ ನವೆಂಬರ್ 2ರಿಂದ ‘ಜೈ ಭೀಮ್’ ಸ್ಟ್ರೀಮ್ ಆಗಲಿದೆ.