‘ರನ್ ಲೋಲಾ ರನ್’ ಜರ್ಮನ್ ಕ್ಲಾಸಿಕ್ ಸಿನಿಮಾದ ಹಿಂದಿ ಅವತರಣಿಕೆ ‘ಲೂಪ್ ಲಪೇಟಾ’. ತಾಪ್ಸಿ ಪನ್ನು ಮತ್ತು ತಾಹೀರ್ ಭಾಸಿನ್ ಮುಖ್ಯಪಾತ್ರಗಳಲ್ಲಿ ನಟಿಸಿರುವ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಫೆಬ್ರವರಿಗೆ ಸ್ಟ್ರೀಮ್ ಆಗಲಿದೆ.
ಆಕಾಶ್ ಭಾಟಿಯಾ ನಿರ್ದೇಶನದ ‘ಲೂಪ್ ಲಪೇಟಾ’ ಸಿನಿಮಾ ಫೆಬ್ರವರಿಯಲ್ಲಿ ಸ್ಟ್ರೀಮ್ ಆಗಲಿದೆ ಎಂದು ನೆಟ್‌ಫ್ಲಿಕ್ಸ್ ಇಂದು ಘೋಷಿಸಿದೆ. ಆದರೆ ಸ್ಟ್ರೀಮಿಂಗ್ ದಿನಾಂಕವಿನ್ನೂ ನಿಗದಿಯಾಗಿಲ್ಲ. ಟಾಮ್ ಟಿಕ್ವರ್ ನಿರ್ದೇಶನದ ಜರ್ಮನ್ ಕ್ಲಾಸಿಕ್ ‘ರನ್ ಲೋಲಾ ರನ್’ ಹಿಂದಿ ಅವತರಣಿಕೆಯಿದು. ‘ರನ್ ಲೋಲಾ ರನ್’ ಸಿನಿಮಾದಲ್ಲಿ ಫ್ರಾಂಕಾ ಪೊಟೆಂಟ್ ಮತ್ತು ಮಾರಿಟ್ಜ್ ಬ್ಲೀಬ್‌ಟ್ರ್ಯೂ ನಟಿಸಿದ್ದರು. ಪ್ರೇಕ್ಷಕರು ‘ಫ್ರಾಂಕಾ’ ಪಾತ್ರವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದರು. ಹಿಂದಿ ಅವತರಣಿಕೆಯಲ್ಲಿ ತಾಪ್ಸಿ ಈ ಪಾತ್ರ ನಿರ್ವಹಿಸುತ್ತಿದ್ದಾರೆ. ತೊಂದರೆಗೆ ಸಿಲುಕಿರುವ ಬಾಯ್‌ಫ್ರೆಂಡ್‌ನನ್ನು ರಕ್ಷಿಸುವ ಯುವತಿಯ ಅಡ್ವೆಂಚರಸ್ ಕತೆ. ಈ ಹಾದಿಯಲ್ಲಿನ ಘಟನೆಗಳು ಆಕೆಯ ಬದುಕಿಗೆ ತಿರುವಾಗುತ್ತವೆ.
ಲೂಪ್ ಲಪೇಟಾ’ದಲ್ಲಿ ತಾಪ್ಸಿ ‘ಸವಿ’ ಮತ್ತು ನಟ ತಾಹೀರ್ ಆಕೆಯ ಲವರ್ ‘ಸತ್ಯ’ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ತಾಪ್ಸಿ, “ಕೆಲವು ಚಿತ್ರಗಳ ಹಿಂದೆ ನಾನೇ ಹೋಗುತ್ತೇನೆ. ಮತ್ತೆ ಕೆಲವು ಸಿನಿಮಾಗಳು ತಾನಾಗಿಯೇ ನನ್ನ ಪಾಲಿಗೆ ಬರುತ್ತವೆ. ಈ ಚಿತ್ರದ ತಾನಾಗಿಯೇ ಒದಗಿಬಂದದ್ದು. ಸದೃಢ ಚಿತ್ರಕಥೆಯೊಂದಿಗೆ ನನ್ನನ್ನು ಅಪ್ರೋಚ್ ಮಾಡಿದ ನಿರ್ದೇಶಕರಿಗೆ ಋಣಿ. ಈ ಅಡ್ವೆಂಚರಸ್ – ಥ್ರಿಲ್ಲರ್ ಚಿತ್ರಕ್ಕೆ ವೀಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಎನ್ನುವ ಕುತೂಹಲ ನನ್ನದು” ಎಂದಿದ್ದಾರೆ ತಾಪ್ಸಿ. ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ರಿವುದು ನಿರ್ದೇಶಕ ಆಕಾಶ್ ಭಾಟಿಯಾರಿಗೆ ಖುಷಿ ತಂದಿದೆ. ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಇಂಡಿಯಾ, ಎಲಿಪ್ಸಿಸ್ ಎಂಟರ್‌ಟೇನ್‌ಮೆಂಟ್ ಮತ್ತು ಆಯುಷ್ ಮಹೇಶ್ವರಿ ಸಿನಿಮಾ ನಿರ್ಮಿಸಿದ್ದಾರೆ.