ಕಳೆದ ವಾರ ತೆರೆಕಂಡ ‘ಬಯಲುಸೀಮೆ’ ಸಿನಿಮಾಗೆ ಮಾನಸ ಹೊಳ್ಳ ಅವರ ಸಂಗೀತ ಸಂಯೋಜನೆಯಿತ್ತು. ಚಿತ್ರದಲ್ಲಿ ಉತ್ತರ ಕರ್ನಾಟಕ ನೆಲದ ದೇಸಿ ಸೊಗಡಿನ ಸಂಗೀತದೊಂದಿಗೆ ಮಾನಸ ಗಮನ ಸೆಳೆದಿದ್ದರು. ಗಾಯಕಿಯಾಗಿದ್ದ ಅವರು ಸಂಗೀತ ಸಂಯೋಜನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮಹಿಳಾ ಸಂಗೀತ ನಿರ್ದೇಶಕಿಯರ ಸಂಖ್ಯೆ ಕಡಿಮೆಯೇ. ವಾಣಿ ಹರಿಕೃಷ್ಣ, ಚೈತ್ರಾ, ಶಮಿತಾ ಮಲ್ನಾಡ್ ಕೆಲವು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಈ ಪಟ್ಟಿಯಲ್ಲೀಗ ಮಾನಸ ಹೊಳ್ಳ ಗಮನ ಸೆಳೆಯುವ ಪ್ರತಿಭೆ. ನಟ ದಿವಂಗತ ಶಂಖನಾದ ಅರವಿಂದ್ ಅವರ ಪುತ್ರಿ ಮಾನಸ ಹೊಳ್ಳ ಗಾಯನ, ಸಂಗೀತ ಎರಡೂ ವಿಭಾಗಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಕಳೆದ ವಾರವಷ್ಟೇ ತೆರೆಕಂಡ ‘ಬಯಲು ಸೀಮೆ’ ಚಿತ್ರಕ್ಕೆ ಅವರು ಏಳು ಸುಂದರ ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತವನ್ನೂ ನಿರ್ವಹಿಸಿದ್ದಾರೆ. ಉತ್ತರ ಕರ್ನಾಟಕದ ಕತೆಗೆ ಅಲ್ಲಿನ ಸೊಗಡಿಗೆ ಹೊಂದುವಂತಹ ಸಂಯೋಜನೆಯೊಂದಿಗೆ ಮೆಚ್ಚುಗೆ ಗಳಿಸಿದ್ದಾರೆ.

ಗಾಯಕಿಯಾಗಿ ಸಿನಿಮಾರಂಗಕ್ಕೆ ಪರಿಚಯವಾದ ಮಾನಸ ಈವರೆಗೆ ಸುಮಾರು 400ಕ್ಕೂ ಹೆಚ್ಚು ಗೀತೆಗಳಿಗೆ ದನಿಯಾಗಿದ್ದಾರೆ. ‘ಅಧ್ಯಕ್ಷ’ ಚಿತ್ರದ ಕಣ್ಣಿಗೂ ಕಣ್ಣಿಗೂ, ’99’, ‘ಧಮಾಕಾ’ ಸೇರಿದಂತೆ ಅವರ ಹೆಸರಿಗೆ ಸಾಕಷ್ಟು ಹಿಟ್‌ ಹಾಡುಗಳು ಸೇರ್ಪಡೆಯಾಗಿವೆ. ಮನೆಯಲ್ಲಿ ತಾಯಿ ಹಾಡುಗಾರ್ತಿಯಾದ್ದರಿಂದ ಮನೆಯಲ್ಲೇ ಅವರಿಗೆ ಸಂಗೀತದ ಮೊದಲ ಪಾಠ ಲಭಿಸಿತ್ತು. ಸಂಗೀತದಲ್ಲಿ ಪದವಿ ಪಡೆದ ಅವರು ಹಿಂದೂಸ್ತಾನಿ, ಪಾಶ್ಚಿಮಾತ್ಯ ಸಂಗೀತದಲ್ಲೂ ತರಬೇತಿ ಪಡೆದಿದ್ದಾರೆ. ‘6 To 6’, ‘ಕನಸು ಮಾರಾಟಕ್ಕಿದೆ’, ‘ಮನಸಾಗಿದೆ’, ‘ಮಸಣದ ಹೂ’ ಸೇರಿದಂತೆ ಆರು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ‘ಕನಸು ಮಾರಾಟಕ್ಕಿದೆ’ ಚಿತ್ರದ ಸಂಗೀತ ನಿರ್ದೇಶನಕ್ಕೆ ಗೋವಾ ಫಿಲಂ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ. ಆಲ್ಬಂ, ಟೀವಿ ಸೀರಿಯಲ್‌ಗಳಿಗೂ ಮಾನಸ ಸಂಗೀತ ಸಂಯೋಜಿಸಿದ್ದಾರೆ.

LEAVE A REPLY

Connect with

Please enter your comment!
Please enter your name here