ಕೋವಿಡ್ ಆತಂಕ ದೂರಾಗುವ ಸೂಚನೆ ಸಿಗುತ್ತಿದ್ದಂತೆ ಟಾಲಿವುಡ್‌ನಲ್ಲಿ ದೊಡ್ಡ ಸಿನಿಮಾಗಳ ನಿರ್ಮಾಣ ಸಂಸ್ಥೆಗಳು ರಿಲೀಸ್ ಡೇಟ್‌ಗಳನ್ನು ಘೋಷಿಸುತ್ತಿದ್ದಾರೆ. ‘RRR’ ಸಿನಿಮಾ ನಂತರ ಇತರೆ ಕೆಲವು ಬಹುನಿರೀಕ್ಷಿತ ಸಿನಿಮಾಗಳ ಬಿಡುಗಡೆ ದಿನಾಂಕಗಳು ಅನೌನ್ಸ್ ಆಗಿವೆ.
ರಾಜಮೌಳಿ ನಿರ್ದೇಶನದ ‘RRR’ ಸಿನಿಮಾ ಮಾರ್ಚ್ 25ರಂದು ಥಿಯೇಟರ್‌ಗೆ ಬರುತ್ತಿದೆ. ನಿನ್ನೆ ಈ ಸಿನಿಮಾದ ರಿಲೀಸ್ ಡೇಟ್ ಹೊರಬೀಳುತ್ತಿದ್ದಂತೆ ಇತರೆ ಕೆಲವು ದೊಡ್ಡ ಚಿತ್ರಗಳ ಬಿಡುಗಡೆ ದಿನಾಂಕಗಳು ಘೋಷಣೆಯಾಗಿವೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟನೆಯ ‘ರಾಧೆ ಶ್ಯಾಮ್’ ಮಾರ್ಚ್ 11ಕ್ಕೆ ತೆರೆಕಾಣಲಿದೆ. ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ ‘ಸರ್ಕಾರು ವಾರಿ ಪಾಟ’ ತೆಲುಗು ಸಿನಿಮಾ ಮೇ 12ರಂದು ಥಿಯೇಟರ್‌ಗೆ ಬರುತ್ತಿದೆ. ಫೆಬ್ರವರಿ 14ರಂದು ಚಿತ್ರದ ಮೊದಲ ವೀಡಿಯೋ ಸಾಂಗ್ ರಿಲೀಸ್ ಆಗಲಿದೆ. ಪರಶುರಾಮ್ ನಿರ್ದೇಶನದ ಸಿನಿಮಾದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಕೀರ್ತಿ ಸುರೇಶ್ ಇದ್ದಾರೆ. ಸಮುದ್ರಖನಿ, ವೆನ್ನೆಲ ಕಿಶೋರ್, ಸುಬ್ಬರಾಜು ಇತರೆ ಪ್ರಮುಖ ತಾರೆಯರು. ಸದ್ಯ ಮಹೇಶ್ ಬಾಬು ತ್ರಿವಿಕ್ರಿಮ್ ನಿರ್ದೇಶನದ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದು, ನಂತರ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ.
ಅನಿಲ್ ರವಿಪುಡಿ ನಿರ್ದೇಶನದಲ್ಲಿ ವೆಂಕಟೇಶ್ ಮತ್ತು ವರುಣ್ ತೇಜ್ ನಟನೆಯ ‘F3’ ತೆಲುಗು ಸಿನಿಮಾ ಏಪ್ರಿಲ್ 28ರಂದು ತೆರೆಗೆ ಬರುತ್ತಿದೆ. ಈ ಮೊದಲು ಚಿತ್ರವನ್ನು ಫೆಬ್ರವರಿ 25ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಕೋವಿಡ್ ಭಯದಿಂದ ಮುಂದೂಡಲ್ಪಟ್ಟಿದ್ದ ಸಿನಿಮಾಗೆ ಹೊಸ ಬಿಡುಗಡೆ ದಿನಾಂಕ ಸಿಕ್ಕಿದೆ. 2019ರ ಯಶಸ್ವೀ ಸಿನಿಮಾ ‘F2’ ಸೀಕ್ವೆಲ್ ಇದು. ತಮನ್ನಾ ಭಾಟಿಯಾ ಮತ್ತು ಮೆಹ್ರೀನ್ ಪಿರ್ಝಾದಾ ಚಿತ್ರದ ನಾಯಕಿಯರು.
ಇನ್ನು ನಟ ಚಿರಂಜೀವಿ ಅಭಿನಯದ ‘ಆಚಾರ್ಯ’ ಸಿನಿಮಾ ಏಪ್ರಿಲ್ 29ರಂದು ತೆರೆಗೆ ಬರುತ್ತಿದೆ. ಇಂದು ಅಧಿಕೃತವಾಗಿ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಕೊರಟಾಲ ಶಿವಾ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರದಲ್ಲಿ ರಾಮ್ ಚರಣ್ ತೇಜಾ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ‘ಆಚಾರ್ಯ’ ಸಿನಿಮಾದಲ್ಲಿ ತಂದೆ – ಮಗ, ಚಿರಂಜೀವಿ ಮತ್ತು ರಾಮ್ ಚರಣ್ ತೇಜಾ ಪೂರ್ಣಪ್ರಮಾಣದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಜಲ್ ಅಗರ್‌ವಾಲ್, ಪೂಜಾ ಹೆಗ್ಡೆ ಚಿತ್ರದ ನಾಯಕಿಯರು. ಮಣಿಶರ್ಮ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಅಭಿನಯದ ‘ಭೀಮ್ಲಾ ನಾಯಕ್’ ಸಿನಿಮಾ ಎರಡು ದಿನಾಂಕಗಳನ್ನು ಘೋಷಿಸಿಕೊಂಡಿದೆ. ಫೆಬ್ರವರಿ 25 ಇಲ್ಲವೇ ಏಪ್ರಿಲ್ 1ರಂದು ಸಿನಿಮಾವನ್ನು ತೆರೆಗೆ ತರಲಿದ್ದೇವೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ. “ಇದು ಅದ್ಭುತ ಥಿಯೇಟ್ರಿಕಲ್ ಎಕ್ಸ್‌ಪೀರಿಯನ್ಸ್ ನೀಡಲಿದೆ. ಕೋವಿಡ್ ಪ್ರಮಾಣ, ಸರ್ಕಾರದ ಮಾರ್ಗಸೂಚಿ ಹಾಗೂ ಇನ್ನಿತರೆ ಸಂಗತಿಗಳನ್ನು ನೋಡಿಕೊಂಡು ಥಿಯೇಟರ್‌ಗೆ ಬರುವುದು ನಮ್ಮ ಯೋಜನೆ” ಎಂದಿದ್ದಾರೆ ‘ಭೀಮ್ಲಾ ನಾಯಕ್’ ಚಿತ್ರದ ನಿರ್ಮಾಪಕರು. ಯಶಸ್ವೀ ಮಲಯಾಳಂ ಸಿನಿಮಾ ‘ಅಯ್ಯಪ್ಪನಂ ಕೊಶಿಯಮ್’ ರೀಮೇಕ್ ಇದು. ನಿತ್ಯಾ ಮೆನನ್ ಮತ್ತು ಸಂಯುಕ್ತಾ ಮೆನನ್ ಚಿತ್ರದ ನಾಯಕಿಯರು.
ಸ್ಟಾರ್ ಹೀರೋಗಳ ಸಿನಿಮಾಗಳ ಮಧ್ಯೆ ಇತರೆ ತೆಲುಗು ಚಿತ್ರಗಳೂ ಬಿಡುಗಡೆಗೆ ಸಾಲುಟ್ಟಿವೆ. ಕೊಟಾಲು ರಾಯುಡು, ಖಿಲಾಡಿ, ಸೆಹರಿ, ಆಡವಲ್ಲು ಮೀಕು, ಜೋಹರ್ಲು, ಸೆಬಾಸ್ಟಿಯನ್, ಘನಿ, ಸೇರಿದಂತೆ ಹತ್ತಾರು ಚಿತ್ರಗಳು ತೆರೆಗೆ ಬರುತ್ತಿವೆ. ಈ ಮಧ್ಯೆ ಇತರೆ ಭಾಷೆಗಳ ಡಬ್ಬಿಂಗ್ ಸಿನಿಮಾಗಳಿವೆ. ಯಶ್ ಅಭಿನಯದ ‘ಕೆಜಿಎಫ್ 2’ ಮೊದಲೇ ಘೋಷಿಸಿಕೊಂಡಂತೆ ಏಪ್ರಿಲ್ 14ರಂದು ತೆರೆಕಾಣಲಿದೆ. ಅಜಿತ್ ಅಭಿನಯದ ತಮಿಳು ಸಿನಿಮಾ ‘ವಾಲಿಮೈ’ ತೆಲುಗು ಡಬ್ಬಿಂಗ್ ಅವತರಣಿಕೆ ಫೆಬ್ರವರಿ 24ರಂದು ಬರುತ್ತಿದೆ. ವಿಜಯ್‌ರ ತಮಿಳು ಸಿನಿಮಾ ‘ಬೀಸ್ಟ್’, ಅಮೀರ್ ಖಾನ್ ಅಭಿನಯದ ಹಿಂದಿ ಸಿನಿಮಾ ‘ಲಾಲ್ ಸಿಂಗ್ ಛಡ್ಡಾ’ ತೆಲುಗು ಅವತರಣಿಕೆಗಳೂ ಇದೇ ದಿನಾಂಕದಂದು ರಿಲೀಸ್ ಆಗುತ್ತಿವೆ.