ಅಂಜನ್‌ ನಾಗೇಂದ್ರ ನಟನೆಯ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ‘ಹೌದು ಹುಲಿಯಾ’ ಮಾಸ್‌ ಸಾಂಗ್‌ ಚಿತ್ರೀಕರಣದೊಂದಿಗೆ ಶೂಟಿಂಗ್‌ ಮುಕ್ತಾಯವಾಗಿದೆ. ನಿರ್ದೇಶಕ ಹಯವದನ ಅವರು ಚಿತ್ರದಲ್ಲಿ ತಂದೆ – ಮಗನ ಬಾಂಧವ್ಯದ ಕತೆಯನ್ನು ತೆರೆಗೆ ಅಳವಡಿಸಿದ್ದಾರೆ.

‘ಎಲ್ಲೋ ಜೋಗಪ್ಪ ನಿನ್ನ ಅರಮನೆ ಸಿನಿಮಾ ಬೆಂಗಳೂರಿನಿಂದ ಶುರುವಾಗಿ ಉತ್ತರ ಭಾರತದ ಕಡೆ ಹೋಗುತ್ತದೆ. ಬಹಳಷ್ಟು ರಾಜ್ಯಗಳಲ್ಲಿ ಶೂಟ್ ಆಗಿದೆ. ಕತೆಯ ಮೂಲ ಪಾತ್ರ ಹೋಗಿ ತಲುಪುವುದು ಹಿಮಾಲಯದಲ್ಲಿ. ಅದಕ್ಕೊಂದು ಉದ್ದೇಶ – ಕಾರಣವಿದೆ. ಈ ಚಿತ್ರ ಎಲ್ಲರಿಗೂ‌ ಕನೆಕ್ಟ್ ಆಗುತ್ತದೆ’ ಎನ್ನುತ್ತಾರೆ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರದ ನಿರ್ದೇಶಕ ಹಯವದನ. ಜನಪ್ರಿಯ ಜನಪದ ಗೀತೆಯನ್ನು ಅವರು ತಮ್ಮ ಚಿತ್ರದ ಶೀರ್ಷಿಕೆಯನ್ನಾಗಿ ಬಳಕೆ ಮಾಡಿದ್ದಾರೆ. ಶಿವರಾಜಕುಮಾರ್‌ ಅವರ ‘ಜೋಗಿ’ ಸಿನಿಮಾದಲ್ಲಿ ಈ ಹಾಡು ಮತ್ತಷ್ಟು ಜನಪ್ರಿಯತೆ ಪಡೆಯಿತು. ಎರಡನ್ನೂ ಜಸ್ಟಿಫೈ ಮಾಡಿಕೊಂಡು ಆ ಟೈಟಲ್‌ಗೆ ಚಿತ್ರದ ಕತೆ ನ್ಯಾಯ ಸಲ್ಲಿಸುತ್ತದೆ ಎನ್ನುತ್ತಾರೆ ಹಯವದನ.

‘ಹೌದು ಹುಲಿಯಾ’ ಮಾಸ್‌ ಸಾಂಗ್‌ ಮೂಲಕ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದೆ. ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋದಲ್ಲಿ ಕಲಾನಿರ್ದೇಶಕ ಹೊಸಮನೆ ಮೂರ್ತಿ ಅವರು ಹಾಕಿದ್ದ ಅದ್ಧೂರಿ ಸೆಟ್‌ನಲ್ಲಿ ಈ ಹಾಡನ್ನು ಚಿತ್ರಿಸಿದ್ದಾರೆ. ಮೋಹನ್ ಮಾಸ್ಟರ್ ನೃತ್ಯ ಸಂಯೋಜನೆಯ ಈ ಹಾಡಿಗೆ ಅಂಜನ್ ಹೆಜ್ಜೆ ಹಾಕಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಹೀರೋ ಅಂಜನ್‌ ನಾಗೇಂದ್ರ, ‘ಈ ಸಿನಿಮಾಗಾಗಿ‌ ಇಡೀ ಇಂಡಿಯಾ ಸುತ್ತಿದ್ದೇನೆ. ಇದೊಂದು ಜರ್ನೀ ಕತೆ. ಅಪ್ಪ-ಮಗನ ಬಾಂಧವ್ಯ ಹೇಳುವ ಕತೆ. ಬೆಂಗಳೂರಿನಿಂದ ಶುರುವಾದ ಜರ್ನೀ ಹಿಮಾಲಯದ ತನಕ ಹೋಗುತ್ತದೆ. ಒಂದೊಳ್ಳೆ ಎಮೋಷನಲ್ ಸಿನಿಮಾ ಆಗಲಿದೆ’ ಎನ್ನುತ್ತಾರೆ.

ಅಂಜನ್ ನಾಗೇಂದ್ರ ಅವರಿಗೆ ಜೋಡಿಯಾಗಿ ವೆನ್ಯ ರೈ ನಟಿಸುತ್ತಿದ್ದಾರೆ. ‘ಕೆಟಿಎಂ’, ‘ಮೂನ್ ವಾಕ್’ ಹಾಗೂ ‘ಮನಸ್ಮಿತ’ ಮಲಯಾಳಂ ಚಿತ್ರದಲ್ಲಿ ನಟಿಸಿರುವ ಸಂಜನಾ ದಾಸ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಸ್ವಾತಿ, ದಾನಪ್ಪ, ಲಕ್ಷ್ಮೀ ನಾಡಗೌಡ, ದಿನೇಶ್ ಮಂಗಳೂರು, ಬಿರಾದರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ಸ್‌ ಹಾಗೂ ಕೃಷ್ಣಛಾಯಾ ಚಿತ್ರ ಬ್ಯಾನರ್ ನಡಿ ತಯಾರಾಗುತ್ತಿರುಚ ಚಿತ್ರಕ್ಕೆ ಶಿವ ಪ್ರಸಾದ್ ಸಂಗೀತ ಸಂಯೋಜನೆ, ನಟರಾಜ್ ಮದ್ದಾಲ ಛಾಯಾಗ್ರಹಣ, ರವಿಚಂದ್ರನ್ ಸಂಕಲನ, ರವೀಂದ್ರ ಮುದ್ದಿ, ಪ್ರಮೋದ್ ಮರವಂತೆ ಸಾಹಿತ್ಯ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ನರಸಿಂಹ ಮಾಸ್ಟರ್ ಸಾಹಸ ನಿರ್ದೇಶನವಿದೆ.

LEAVE A REPLY

Connect with

Please enter your comment!
Please enter your name here