ಸರಣಿಯ ನಿರ್ಮಾಣದ ಗುಣಮಟ್ಟ ಬಹಳ ಅದ್ಭುತವಾಗಿ ಮೂಡಿಬಂದಿರುವುದರ ಹೆಗ್ಗಳಿಕೆ ಯಶ್ ರಾಜ್ ಫಿಲಂಸ್‌ಗೆ ಸಲ್ಲಬೇಕು. ಕತೆಯ ಕಾಲಘಟ್ಟ, ಪ್ರತಿಯೊಂದು ದೃಶ್ಯದ ವಿನ್ಯಾಸ ಎಲ್ಲವೂ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ. ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ, ವೀಕ್ಷಣೆಯ ಅನುಭವವನ್ನು ಎತ್ತರಕ್ಕೆ ಕೊಂಡೊಯ್ದಿವೆ. ‘ದ ರೈಲ್ವೇ ಮೆನ್’ ಸರಣಿ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಜನಪ್ರಿಯ ನಿರ್ಮಾಣ ಸಂಸ್ಥೆ ಯಶರಾಜ್ ಫಿಲಂಸ್ ಅವರ ಓಟಿಟಿ ಸರಣಿ ‘ದ ರೈಲ್ವೆ ಮೆನ್’ Netflixನಲ್ಲಿ ಬಿಡುಗಡೆಯಾಗಿ ಜನಮನ್ನಣೆ ಗಳಿಸುತ್ತಿದೆ. ಕೆ ಕೆ ಮೆನನ್, ಮಾಧವನ್, ದಿವ್ಯೇಂದು ಬಾಬಿಲ್ ಖಾನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸರಣಿಯಲ್ಲಿ ಭೋಪಾಲ್ ಗ್ಯಾಸ್ ದುರಂತದ ಸಮಯದಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಮಂದಿ ಹೇಗೆ ಜನಗಳ ಪ್ರಾಣ ಉಳಿಸಿದರು ಎನ್ನುವುದರ ಕಥಾನಕವಿದೆ. ಪ್ರಪಂಚದ ಅತ್ಯಂತ ಘೋರ ದುರಂತಗಳ ಪಟ್ಟಿಗೆ ಸೇರುವ ಭೋಪಾಲ್ ಗ್ಯಾಸ್ ದುರಂತ ಘಟಿಸಿದ್ದು 1984ರ ಡಿಸೆಂಬರ್ 2ನೇ ತಾರೀಖು. ಸ್ಥಳ ಭೋಪಾಲ್ ನಗರದ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಅವರ ಕೀಟನಾಶಕ ಘಟಕ.

ಸರಣಿಯಲ್ಲಿ ಮೆಚ್ಚಬೇಕಾದ ಒಂದು ಮುಖ್ಯ ಅಂಶವೆಂದರೆ ಈ ದುರಂತ ನಡೆದಾಗ ಸಾವಿರಾರು ಜನರ ಪ್ರಾಣ ಉಳಿಸಿ ತೆರೆಮರೆಯಲ್ಲೇ ಉಳಿದ ರೈಲ್ವೆ ಕಾರ್ಮಿಕರ ತ್ಯಾಗ ಮತ್ತು ಧೈರ್ಯದ ಕಥೆಯನ್ನು ತೋರಿಸಿರುವುದು. ಈ ದುರಂತಕ್ಕೆ ಮುಖ್ಯ ಕಾರಣವೆಂದರೆ ಯೂನಿಯನ್ ಕಾರ್ಬೈಡ್ ಕೆಲಸಗಾರರಿಗೆ ತರಬೇತಿಯ ಕೊರತೆ ಮತ್ತು ಘಟಕದಲ್ಲಿನ ಸುರಕ್ಷತಾ ಕ್ರಮಗಳಲ್ಲಿನ ಲೋಪ. ಈ ಅಂಶಗಳನ್ನು ಸರಣಿಯಲ್ಲಿ ಬಹಳ ನಿಖರವಾಗಿ ತೋರಿಸಲಾಗಿದೆ. ದುರಂತದ ಚಿತ್ರಣವನ್ನು ತೆರೆಯ ಮೇಲೆ ಚಿತ್ರೀಕರಿಸಿರುವ ರೀತಿಯಂತೂ ಬಹಳ ಹೃದಯಸ್ಪರ್ಶಿಯಾಗಿದೆ. ಸಾವಿರಾರು ಅಮಾಯಕರು ಯಾರದ್ದೋ ನಿರ್ಲಕ್ಷ್ಯಕ್ಕೆ ತಮ್ಮ ಪ್ರಾಣ ತೆರುವ ಸನ್ನಿವೇಶಗಳು ಮನಸ್ಸನ್ನು ಆರ್ಧ್ರಗೊಳಿಸುತ್ತವೆ. ತಮ್ಮ ನಡುವೆ ಏನಾಗುತ್ತಿದೆ ಎನ್ನುವುದರ ಸುಳಿವೇ ಇಲ್ಲದೆ ತಮ್ಮತಮ್ಮೊಳಗೆ ಕಿತ್ತಾಡುತ್ತಾ ದೊಂಬಿ ಸೃಷ್ಟಿಯಾಗುವ ದೃಶ್ಯಗಳು ಮನಸ್ಸನ್ನು ಕಲಕುತ್ತವೆ.

ಮುಖ್ಯ ಪಾತ್ರಧಾರಿಗಳ ನಟನೆ ಒಬ್ಬರಿಗಿಂತ ಒಬ್ಬರದ್ದು ಅದ್ಭುತವಾಗಿದೆ. ಅದರಲ್ಲೂ ಎಲ್ಲಕ್ಕಿಂತ ಗಮನ ಸೆಳೆಯುವುದು ಸ್ಟೇಷನ್ ಮಾಸ್ಟರ್ ಪಾತ್ರದಲ್ಲಿ ಕೆ ಕೆ ಮೆನನ್. ಶಕ್ತಿಮೀರಿ ಜನಗಳ ಪ್ರಾಣ ಉಳಿಸಲು ಮುನ್ನುಗ್ಗುವ ಪಾತ್ರದಲ್ಲಿ ಅವರ ಅಭಿನಯ ಅಮೋಘ. ಮಿರ್ಜಾಪುರ ಖ್ಯಾತಿಯ ದಿವ್ಯೇಂದು ಮತ್ತು ಇರ್ಫಾನ್ ಖಾನ್ ಪುತ್ರ ಬಾಬಿಲ್ ಖಾನ್ ಅವರು ಕೆ ಕೆ ಮೆನನ್ ಅವರ ಜೊತೆಗೂ ಸರಿಸಮವಾಗಿ ಅಭಿನಯಿಸುತ್ತಾ ಮನಸ್ಸು ಗೆಲ್ಲುತ್ತಾರೆ.

ಆದರೂ ಈ ಸರಣಿಯಲ್ಲಿ ಹಿನ್ನೆಡೆ ಎನಿಸಿದ ಅಂಶವೆಂದರೆ ಕಥೆಯಲ್ಲಿ ಸಿಕ್ಕಾಪಟ್ಟೆ ಉಪಕಥೆಗಳು ಇರುವುದು. ಕೆಲವೊಂದು ಉಪಕಥೆಗಳನ್ನು ಸೂಕ್ತವಾಗಿ ಹೇಳಲಾಗಿಲ್ಲ ಮತ್ತು ಈ ಕಾರಣದಿಂದ ಮುಖ್ಯಕತೆಯ ಓಘ ತುಸು ಮಂದವಾದಂತೆ ತೋರುತ್ತದೆ. ಕೆಲವೊಂದು ಉಪಕತೆಗಳ ಅಂತ್ಯ ಕೂಡಾ ಅಷ್ಟು ಸರಿಯಾಗಿಲ್ಲದಿರುವುದರಿಂದ ಒಟ್ಟಾರೆ ಕಥೆಯ ಮೇಲೆ ಇದು ಋಣಾತ್ಮಕ ಪರಿಣಾಮವನ್ನು ಲಘುವಾಗಿ ಬೀರಿರುವುದು ಹೌದು. ಕೆಲವು ದೃಶ್ಯಗಳು ಅತಿ ನಾಟಕೀಯತೆಯಿಂದ ಕೂಡಿದಂತಿವೆ.

ನೀವು ಈಗಾಗಲೇ ಇಂಗ್ಲೀಷ್‌ ವೆಬ್ ಸರಣಿ ಚೆರ್ನೋಬಿಲ್‌ ಅಭಿಮಾನಿಗಳಾಗಿದ್ದರೆ ಈ ಸರಣಿ ಸ್ವಲ್ಪ ಸಪ್ಪೆ ಎನಿಸಬಹುದು. ಎರಡೂ ಒಂದೇ ಮಾದರಿಯ ದುರಂತದ ಸುತ್ತ ಹೆಣೆದ ಕಥೆಗಳಾದರೂ ಚೆರ್ನೋಬಿಲ್ ಕಥೆಯಲ್ಲಿ ಕಾಣುವ ಅಚ್ಚುಕಟ್ಟುತನ ಮತ್ತು ನಿಖರತೆ ಇಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ. ಮಾಧವನ್ ಅವರ ಪಾತ್ರವನ್ನು ಇನ್ನೂ ಚೆನ್ನಾಗಿ ಪ್ರಸ್ತುತ ಪಡಿಸಬಹುದಿತ್ತು ಅನಿಸಿದ್ದು ಹೌದು. ಕಥೆ ಅಲ್ಲಲ್ಲಿ ತನ್ನ ವೇಗ ಕಳೆದುಕೊಂಡಿದೆ. ಸರಣಿಯ ನಿರ್ಮಾಣದ ಗುಣಮಟ್ಟ ಬಹಳ ಅದ್ಭುತವಾಗಿ ಮೂಡಿಬಂದಿರುವುದರ ಹೆಗ್ಗಳಿಕೆ ಯಶ್ ರಾಜ್ ಫಿಲಂಸ್‌ಗೆ ಸಲ್ಲಬೇಕು. ಕತೆಯ ಕಾಲಘಟ್ಟ, ಪ್ರತಿಯೊಂದು ದೃಶ್ಯದ ವಿನ್ಯಾಸ ಎಲ್ಲವೂ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ. ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ, ವೀಕ್ಷಣೆಯ ಅನುಭವವನ್ನು ಎತ್ತರಕ್ಕೆ ಕೊಂಡೊಯ್ದಿವೆ.

ಪ್ರತಿಯೊಂದು ದೃಶ್ಯದಲ್ಲೂ ನಿರ್ದೇಶಕ ಶಿವ ರಾವಳಿ ಅವರ ಪರಿಶ್ರಮ ಎದ್ದು ಕಾಣುತ್ತದೆ. ಚರಿತ್ರೆಯಲ್ಲಿ ನಡೆದ ಘೋರ ದುರಂತವೊಂದರ ಚಿತ್ರಣ ಮಾಡಲು ಬೇಕಾದ ಸಾಕಷ್ಟು ಹೋಂವರ್ಕ್‌ ಮಾಡಿದ್ದಾರೆ. ಆದರೂ ಕಥೆಯನ್ನು ತೆರೆಗೆ ಅಳವಡಿಸುವಾಗ ಅಲ್ಲಲ್ಲಿ ನಾಟಕೀಯತೆಯ ಮೊರೆ ಹೋಗಿರುವುದು ಗೋಚರಿಸುತ್ತದೆಯಾದರೂ ಚಿತ್ರದ ಉಳಿದ ಒಳ್ಳೆಯ ಅಂಶಗಳು ಈ ಕೊರತೆಯನ್ನು ಮುಚ್ಚಿಹಾಕಿವೆ. ಒಟ್ಟಾರೆಯಾಗಿ ‘ದ ರೈಲ್ವೇ ಮೆನ್’ ಈಚಿನ ದಿನಗಳಲ್ಲಿ ಬಂದಿರುವ ಅತ್ಯುತ್ತಮ ಸರಣಿಗಳಲ್ಲಿ ಒಂದು. ಉತ್ತಮ ಅಭಿನಯ, ಉತ್ತಮ ನಿರ್ಮಾಣ ಮತ್ತು ಉತ್ತಮ ಸಂದೇಶವನ್ನು ಹೊತ್ತ ‘ದ ರೈಲ್ವೇ ಮೆನ್’ ಕುಟುಂಬಸಮೇತ ಕೂತು ನೋಡಬೇಕಾದ ಸರಣಿ. ಸರಣಿ Netflixನಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here