ಟಿಂಡರ್ ಮತ್ತು ತತ್ಸಮಾನ ಡೇಟಿಂಗ್ ಆ್ಯಪ್‌ಗಳ ಈ ಕಾಲದಲ್ಲಿ ಕಾಲು ಜಾರಲು ಕ್ಷಣ ಮಾತ್ರ ಸಾಕು. ಪೂರ್ವಾಪರ ತಿಳಿಯುವ ಮೊದಲೇ ತೋರಣ ನೋಡಿ ಹೊಸಿಲು ದಾಟಿ ಆಗಿರುತ್ತದೆ. ಇಂಥ ವೇಳೆಯಲ್ಲಿ ಆಗಂತುಕನೊಬ್ಬನ ಆಟ-ಬೊಂಬಾಟಗಳ ದಾಖಲೀಕರಣ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಂ ಆಗುತ್ತಿರುವ ಸಿನಿಮೀಯ ಡಾಕ್ಯುಮೆಂಟರಿ ‘ದ ಟಿಂಡರ್ ಸ್ವಿಂಡ್ಲರ್’
ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಳ್ಳುವುದು ಹೇಗೆ? ಪ್ರಪ್ರಥಮವಾಗಿ ನೀವೊಬ್ಬ ಅಚ್ಚುಕಟ್ಟಿನ ಹುಡುಗನಂತೆ ಕಾಣಬೇಕು. ಮಾತು ಮೇಲ್ನೋಟಕ್ಕೆ ಮೃದುವಾಗಿರಬೇಕು. ಆದರೆ ಆಂತರ್ಯದಲ್ಲಿ ತೀಕ್ಷ್ಣವಾಗಿರಬೇಕು, ಸ್ಪಷ್ಟತೆ ಇರಬೇಕು. ಸಾಧಾರಣ ಗಂಡಸರ ಕಣ್ಣಿಗೆ ಕಾಣದ ಸೂಕ್ಷ್ಮತೆ ನಿಮ್ಮ ಕಣ್ಣಿಗೆ ಕಾಣಬೇಕು. ನಿಮ್ಮ ಜಗತ್ತು ವಿಶಾಲವಾಗಿರಬೇಕು, ಅದರೆ ಆ ಕ್ಷಣಕ್ಕೆ ಅವಳೊಬ್ಬಳೇ ನಿಮ್ಮ ಜಗತ್ತು ಎಂಬ ಏಕಾಗ್ರತೆ ನಿಮಗಿರಬೇಕು. ಅವಳು ನಿರೀಕ್ಷಿಸದ ಕಡೆ, ನಿರೀಕ್ಷೆ ಮಾಡಿರದ ಕ್ಷಣದಲ್ಲಿ ಅನಿರೀಕ್ಷಿತವಾದ ಉಡುಗೊರೆ ನೀಡಬೇಕು. ಅದು ಒಂದು ಹೂಗುಚ್ಛವೇ ಇರಲಿ, ಅವಳಿಗಾಗಿಯೇ ಮಾಡಿಸಿ ತಂದಂತಿರಬೇಕು.
ಏನಿವ? ಲವ್ ಗುರು ಆಗಲು ಹೊರಟಿದ್ದಾನೋ ಅಂದುಕೊಳ್ಳಬೇಡಿ. ಇವಿಷ್ಟೂ ಶಿಮೋನ್ ಹಯೂತ್ ಎಂಬ ನಯವಂಚಕನ ಗುಣ ನಡತೆ. ಡೇಟಿಂಗ್ ಆ್ಯಪ್ ಟಿಂಡರ್ ಮೂಲಕ ಅಸಂಖ್ಯ ಮಹಿಳೆಯರ ಮೇಲೆ ಪ್ರೀತಿಯ ಮಳೆ ಸುರಿಸಿ ತೋಯಿಸಿದಾತ. ಅವರನ್ನು ವಂಚಿಸಿ ಮಿಲಿಯಗಟ್ಟಲೆ ಹಣ ಕಕ್ಕಿಸಿದಾತ. ಆತನ ಬಗ್ಗೆ ‘ದಿ ಟಿಂಡರ್ ಸ್ವಿಂಡ್ಲರ್’ ಹೆಸರಿನಲ್ಲಿ ನೆಟ್‌ಫ್ಲಿಕ್ಸ್ ಒಂದು ಡಾಕ್ಯುಮೆಂಟರಿ ಮಾಡಿದೆ. ಈತನ ವ್ಯಕ್ತಿತ್ವ ಅದೆಷ್ಟು ವರ್ಣರಂಜಿತವೋ ಅಷ್ಟೇ ವರ್ಣರಂಜಿತ ಸಾಕ್ಷ್ಯಚಿತ್ರವಿದು.
ಸಾಮಾನ್ಯವಾಗಿ ಡಾಕ್ಯುಮೆಂಟರಿಗಳು ಎಂದರೆ ಅಲ್ಲಿ ರಸಕ್ಕಿಂತ ವಿಷಯಕ್ಕೆ ಹೆಚ್ಚು ಮಾನ್ಯತೆ. ಒಂದು ಸಿನಿಮಾ ಕೊಡುವ ಅನುಭವ ಸಾಕ್ಷ್ಯಚಿತ್ರ ಕೊಡಲಾರದು. ಆದರೆ ‘ದ ಟಿಂಡರ್ ಸ್ವಿಂಡ್ಲರ್’ ಅದಕ್ಕೆ ಅಪವಾದ. ಈ ಡಿಜಿಟಲ್ ಜಗತ್ತಿನಲ್ಲಿ, ಕೈಯಲ್ಲಿ ಸ್ಮಾರ್ಟ್ ಫೋನ್ ಹಿಡಿದ ಹೊತ್ತಿನಲ್ಲಿ ಒಂದೇ ಒಂದು ಸ್ವೈಪ್ ಬದುಕನ್ನೇ ಹೇಗೆ ಅಡಿಮೇಲು ಮಾಡಿತು ಎಂಬ ಕತೆಯಿದು. ಈ ವಿಚಾರ ಅನಾವರಣ ಮಾಡುವ ಮೊದಲು ಈ ಡಾಕ್ಯುಮೆಂಟರಿ ನಮಗೆ ಪಾತ್ರಗಳನ್ನು ಅನಾವರಣ ಮಾಡುತ್ತದೆ. ಆ ಪಾತ್ರಗಳ ಜತೆ ನಾವು ಮಿಡಿಯಲು ಶುರು ಮಾಡುವಾಗ ಅವರಿಗೆ ಎದುರಾದ ಸವಾಲುಗಳನ್ನು ಬಿಚ್ಚಿ ತೋರಿಸುತ್ತದೆ. ಹಾಗಾಗಿ ಸರಿಸುಮಾರು ಎರಡು ಗಂಟೆ ಪೂರ್ತಿ ಆಸಕ್ತಿ ಸೆಳೆದು ನೋಡಿಸುತ್ತದೆ.
ಪೊಲೀಸರ ಭಾಷೆಯಲ್ಲಿ ಹೇಳುವುದಾದರೆ ಶಿಮೋನ್ ಹಯೂತ್‌ನದ್ದು ಯಕಶ್ಚಿತ್ ಒಬ್ಬ ವಂಚಕನ ಮೋಡಸ್ ಒಪರಾಂಡಿ. ಆತನ ಕಾರ್ಯಶೈಲಿ ಬಹು ಸರಳ. ಕೊನೆಗೆ ಕೊಲೆ ಮಾಡುತ್ತಿರಲಿಲ್ಲ ಎಂಬುದು ಬಿಟ್ಟರೆ ಒಂಟಿ ಮಹಿಳೆಯರನ್ನು ವಂಚಿಸಿ ದೋಚಿದ ಸೈನೈಡ್ ಮೋಹನನಿಗೂ ಶಿಮೋನ್‌ಗೂ ಅಂಥಾ ವ್ಯತ್ಯಾಸವೇನಿಲ್ಲ. ಆತ ಹೊಂಚು ಹಾಕಿ ಒಂಟಿ ಹುಡುಗಿಯರನ್ನು ಗುರುತು ಮಾಡಿಕೊಳ್ಳುತ್ತಿದ್ದ. ಆದರೆ ಶಿಮೋನ್‌ಗೆ ಅದು ಮತ್ತೂ ಸುಲಭದಲ್ಲಿ ಆಯಿತು. ಆತ ಮಾಡುತ್ತಿದುದು ಇಷ್ಟೇ. ತನ್ನ ಭರ್ಜರಿಯಾದ ಕೆಲವು ಪೋಟೋಗಳನ್ನು ಹಾಕಿ ಟಿಂಡರ್‌ನಲ್ಲಿ ದುಕಾನು ತೆರೆದು ಕೂರುತ್ತಿದ್ದ. ಡೇಟಿಂಗ್ ಆ್ಯಪ್‌ಗೆ ಕಾಲಿಡುವವರು ಒಂಟಿಯಾಗಿಯೇ ಇರುತ್ತಾರೆ ಎಂಬುದು ಅವನಿಗೆ ಚೆನ್ನಾಗಿ ಗೊತ್ತು. ಒಂಟಿಯಾಗಿ ಮನಸು ಮಹಾ ಮರ್ಕಟ. ಒಂದು ಸೇಬೋ, ಬಾಳೆ ಹಣ್ಣೋ ಕಂಡರೆ ಬೇರೆಯವರಿಗಿಂತ ಮೊದಲು ತಾನೇ ಕಬಳಿಸಬೇಕು ಎಂದು ಸಿದ್ಧವಾಗಿಬಿಡುತ್ತದೆ. ಹಾಗಾಗಿ ಟಿಂಡರ್‌ನಲ್ಲಿ ಹುಡುಗಿಯರೇ ಮೊದಲಾಗಿ ಮೆಸೇಜು ಮಾಡುವಂತೆ ಅವನ ಪ್ರೊಫೈಲನ್ನು ಕಣ್ಸೆಳೆಯುವಂತೆ ಇಡುತ್ತಿದ್ದ.
ಅವನಿಂದ ಮೋಸಕ್ಕೊಳಗಾದ ಸಿಸಿಲಿಯಿಂದ ಕತೆ ಆರಂಭವಾಗುತ್ತದೆ. ಸಿಸಿಲಿಗೆ ಆತ ಪರಿಚಯಿಸಿಕೊಂಡದ್ದು ಸೈಮನ್ ಲೆವಿವ್ ಎಂಬ ಹೆಸರಿನಿಂದ. ತಾನು ಲೆವ್ ಲೆವಿವ್ ಎಂಬ ರಷ್ಯಾದ ವಜ್ರೋದ್ಯಮಿಯ ಮಗ ಎಂದು ಹೇಳಿಕೊಳ್ಳುವ ಆತನಲ್ಲಿ ಹುಡುಗಿಯೊಬ್ಬಳು ಇಷ್ಟಪಡುವ ಎಲ್ಲಾ ಗುಣಗಳೂ ಇವೆ. ಡಾಕ್ಯುಮೆಂಟರಿ ತಯಾರಕರಿಗೆ ಸೈಮನ್ ಸಿಗಲು ಸಾಧ್ಯವಿಲ್ಲ. ಹಾಗಾಗಿಯೇ ಸಿಸಿಲಿಯ ಕೋನದಿಂದ ಆತನನ್ನು ಪರಿಚಯ ಮಾಡಿಸುತ್ತಾರೆ. ಆಕೆ ಮತ್ತು ಆತನ ನಡುವೆ ವಾಟ್ಸಾಪಿನಲ್ಲಿ ನಡೆದ ಮೆಸೇಜ್ ಸಂಭಾಷಣೆಗಳು ಸೈಮನ್ನನ್ನು ವೀಕ್ಷಕರ ಪಾಲಿಗೆ ಸಜೀವವಾಗಿ ತರುತ್ತದೆ. ಐಷಾರಾಮಿ ಹೋಟೆಲ್‌ಗಳಿಗೆ ಆತ ಕರೆದ ಕುರುಹುಗಳು ಮ್ಯಾಪ್ ಮೇಲಿನ ಲೊಕೇಶನ್ ರೂಪದಲ್ಲಿ ಬರುವುದು ಕಳೆದ ದಿನಗಳಿಗೂ ಪ್ರಸ್ತುತ ದಿನಕ್ಕೂ ಇರುವ ಅಂತರವನ್ನು ಪೋಣಿಸುತ್ತದೆ.
ಸಿಸಿಲಿಗೆ ಆತ ಮೊದಲು ತೋರಿಸುವುದು ಹೂಮಳೆಯ ಸ್ನಾನ. ಐಷಾರಾಮಿ ಹೋಟೆಲ್‌ಗೆ ಆಕೆಯನ್ನು ಕರೆಸಿದಾತ ಹೋಟೆಲ್‌ನವರು ತನಗೇ ವಿಶೇಷವಾಗಿ ತಯಾರು ಮಾಡಿ ಕೊಡುವ ರೆಸಿಪಿಗಳನ್ನು ಪರಿಚಯಿಸುತ್ತಾನೆ. ಖಾಸಗಿ ಜೆಟ್ ವಿಮಾನದಲ್ಲಿ ಆಕೆಯನ್ನು ಪ್ರವಾಸಕ್ಕೆ ಕರೆದೊಯ್ಯುತ್ತಾನೆ. ಇವೆಲ್ಲ ಮಾಡುವಾಗಲೂ ಒಂದು ಕ್ಷಣ ಯೋಚಿಸುವುದಕ್ಕೂ ಆತ ಸಮಯ ಕೊಡುವುದಿಲ್ಲ. ಎಲ್ಲವೂ ಕೊನೆ ಕ್ಷಣದ ಸರ್ಪೈಸ್. ಅವಳ ಹುಟ್ಟುಹಬ್ಬದ ದಿನ ಆತ ಇಲ್ಲದಿದ್ದರೂ ಆಕೆಯ ಮನೆಗೆ ಹೂಗುಚ್ಛ ತಲುಪಿಸಿ ಸರ್ಪೈಸ್ ಕೊಡಲು ಮರೆಯುವುದಿಲ್ಲ.
ಇಷ್ಟೆಲ್ಲ ಆಗುವಾಗ ಬೆಣ್ಣೆ ಜಾರಿ ರೊಟ್ಟಿಗೆ ಬೀಳದೇ ಇರುತ್ತದೆಯೇ? ಆದರೆ ಬೆಣ್ಣೆ ಕರಗಿದ ಕೂಡಲೇ ಸಿಸಿಲಿಗೆ ಅಚಾನಕ್ ಆಘಾತ. ವಜ್ರದ ವ್ಯವಹಾರಕ್ಕೆ ಎಂದು ದೂರದ ಊರಲ್ಲಿದ್ದಾಗ ಸೈಮನ್‌ನ ಮೇಲೆ ಅದ್ಯಾರೋ ಆಗಂತುಕರು ದಾಳಿ ಮಾಡುತ್ತಾರೆ. ಆತನ ಬಾಡಿ ಗಾರ್ಡ್‌ನ ತಲೆಗೆ ಪೆಟ್ಟು ಬಿದ್ದ ಪೋಟೋ ಸಿಸಿಲಿಯ ವಾಟ್ಸಾಪಿಗೆ ಕಳಿಸುತ್ತಾನೆ. ಪಾಪ ಸೈಮನ್ ಕೂಡ ರಕ್ತ ಸಿಕ್ತ ಅಂಗಿಯಲ್ಲಿರುತ್ತಾನೆ. ಅವನ ವ್ಯಾಪಾರ ವಹಿವಾಟು ಹಾಳು ಮಾಡುವ ಉದ್ದೇಶದಿಂದ ಎದುರು ಪಾಳಯದವರು ಮಾಡಿದ ದಾಳಿಯದು. ಅವನ ಬ್ಯಾಂಕ್ ಖಾತೆಯೂ ನಿಷ್ಕ್ರಿಯವಾಗುವಂತೆ ಅವರು ನೋಡಿಕೊಂಡಿರುತ್ತಾರೆ. ಆ ಕಾರಣಕ್ಕಾಗಿ ಸೈಮನ್‌ಗೆ ಆಪತ್ಕಾಲದಲ್ಲಿ ಒಂಚೂರು ಹಣದ ಅಗತ್ಯ ಬಂದಿರುತ್ತದಷ್ಟೆ.
ಇಂಥ ಸನ್ನಿವೇಶದಲ್ಲಿ ಆತನೇ ಅವಳ ಹೆಸರಲ್ಲಿ ಒಂದು ಕ್ರೆಡಿಟ್ ಕಾರ್ಡ್ ಮಾಡಿಸಿಕೊಡುತ್ತಾನೆ. ಅದನ್ನು ತಾತ್ಕಾಲಿಕವಾಗಿ ಆತ ಬಳಸುತ್ತಾನಷ್ಟೇ. ತನ್ನ ಕಾರ್ಡಿನಿಂದ ಲಕ್ಷಗಟ್ಟಲೆ ಡಾಲರ್ ವಹಿವಾಟು ನಡೆದದು ಸಿಸಿಲಿಗೆ ತಿಳಿದಾಗ ಮೊದಲು ಗಲಿಬಿಲಿಯಾದರೂ ತಿಂಗಳ ಬಾಕಿಯನ್ನು ಆತನೇ ತುಂಬುವಾಗ ಸಿಸಿಲಿಯ ವಿಶ್ವಾಸ ಇಮ್ಮಡಿಗೊಳ್ಳುತ್ತದೆ. ಆದರೆ ವಾಸ್ತವದಲ್ಲಿ ಆತ ಮತ್ತೊಂದು ಹುಡುಗಿಯನ್ನು ಬಲೆಗೆ ಹಾಕಿಕೊಂಡಿದ್ದಾನೆ. ಈಗ ಐಷಾರಾಮಿ ಜೀವನದ ಪ್ರದರ್ಶನ ನೀಡುತ್ತಿರುವುದು ಆಕೆಗೆ. ಖಾಸಗಿ ಜೆಟ್‌ಗೆ ಹಣ ಹೋಗುವುದು ಇವಳ ಕ್ರೆಡಿಟ್ ಕಾರ್ಡಿನಿಂದ. ಅಂದರೆ ಇವಳು ಹೋದ ಪ್ರಯಾಣಕ್ಕೆ ಮತ್ಯಾರದ್ದೋ ಕ್ರೆಡಿಟ್ ಕಾರ್ಡ್ ಬಳಕೆಯಾಗಿತ್ತು.
ಹೀಗೆ ನಿರಂತರವಾಗಿ ಒಬ್ಬರಾದ ಮೇಲೊಬ್ಬರನ್ನು ವಂಚಿಸಿದ ಮನ್ಮಥ ರಾಜನ ರಹಸ್ಯ ಬಯಲು ಮಾಡಲು ಮೋಸ ಹೋದ ಕೆಲವು ಹುಡುಗಿಯರು ಒಂದಾದ ಕತೆಯನ್ನು ‘ದ ಟಿಂಡರ್ ಸ್ವಿಂಡ್ಲರ್’ ರಸವತ್ತಾಗಿ ಕಣ್ಣ ಮುಂದೆ ಇಟ್ಟಿದೆ. ಆದರೆ ಸತ್ಯ ಬಯಲು ಮಾಡಿದಾಗ ಈ ಹುಡುಗಿಯರಿಗೆ ಸಿಗುವುದು ಮಿಶ್ರ ಪ್ರತಿಕ್ರಿಯೆ. ಸಿರಿವಂತ ಹುಡುಗನನ್ನು ಬಯಸಿ ಹೋದ ಇವರದ್ದೀಗ ಮುಳ್ಳಿನ ಹಾದಿ. ಕೊನೆಗೂ ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುವುದು ಕತೆಯ ಮಟ್ಟಿಗೆ ನ್ಯಾಯ ಅಲ್ಲದಿದ್ದರೂ ಅದೇ ವಾಸ್ತವ. ನೆಟ್‌ಫ್ಲಿಕ್ಸ್‌ನ ಈ ಡಾಕ್ಯುಮೆಂಟರಿ ಬಂದ ಮೇಲೂ ಆತನ ಟಿಂಡರ್ ಖಾತೆ ಸಕ್ರಿಯವಾಗಿಯೇ ಇತ್ತು ಎಂಬುದು ಡೇಟಿಂಗ್ ಪ್ರಿಯರ ಪಾಲಿಗೆ ಎಚ್ಚರಿಕೆಯ ಗಂಟೆ.
ಈ ಡಾಕ್ಯುಮೆಂಟರಿ ಎಲ್ಲಿಯೂ ವಂಚಕನ ವೈಭವೀಕರಣ ಮಾಡಿಲ್ಲ. ಹಾಗೆಂದು ವಂಚನೆಗೆ ಒಳಗಾದವರ ನೆನೆಸಿ ನಿಮಗೆ ಕಣ್ಣೀರು ತರಿಸುವುದಿಲ್ಲ. ಅವರೆಲ್ಲ ಮೋಸ ಹೋದ ಬಗೆ ನೋಡುತ್ತಾ ಹೋದಾಗ ಕಾಣುವುದು ಒಂಟಿತನ ತರುವ ಅಪಾಯಗಳು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿದಾಗ ಆಗುವ ಅನಾಹುತಗಳು. ಸಿಸಿಲಿ ಸೋತಾಗ ಅವಳ ಅಮ್ಮನ ಬಳಿಗೆ ಹೋಗುವಾಗ ಕಾಣುವುದು ಕೌಟುಂಬಿಕ ಮೌಲ್ಯ. ಅವನಿಂದ ವಂಚನೆಗೆ ಒಳಗಾದ ಎಲ್ಲಾ ಹುಡುಗಿಯರೂ ಮೊದಲು ಆಶ್ರಯಿಸಿದ್ದು ತಾಯಿಯನ್ನಲ್ಲ, ಗೂಗಲ್ ಮಹಾಮಾತೆಯನ್ನು. ಅಲ್ಲಿ ಪರಿಶೀಲಿಸಿದಾಗ ಈತ ಹೇಳಿದ ವಿಷಯಕ್ಕೂ ಅಲ್ಲಿ ಕಾಣುವ ವಿಚಾರಕ್ಕೂ ಹೊಂದಿಕೆಯಾಗುತ್ತದೆ. ತನ್ನ ತಂದೆ ಎಂದು ಸೈಮನ್ ಹೇಳಿದ ಲೆವ್ ಲಿವೈವ್ ನಿಜಕ್ಕೂ ವಜ್ರದ ವ್ಯಾಪಾರಿ. ಆತನೂ ಗೂಗಲ್ ಮಾಡಿಯೇ ತನ್ನದೊಂದು ಚಿತ್ರಣ ರಚಿಸಿದ್ದ ಎಂಬದು ಮರ್ಕಟ ಮನಸ್ಸಿಗೆ ಅರ್ಥವಾಗುವುದಿಲ್ಲ.
ಡಿಜಿಟಲ್ ಜಗತ್ತಿನಲ್ಲಿ ಸಂಗಾತಿ ಹುಡುಕುವವರ ಪಾಲಿಗೆ ಈ ಡಾಕ್ಯುಮೆಂಟರಿ ಹೈಸ್ಕೂಲು ಪಾಠ. ಅದರ ಸಹವಾಸಕ್ಕೆ ಹೋಗದವರಿಗೆ ಇದು ಕಾಣದ ಕಡಲಿನ ಪರಿಚಯ. ಮೊದಲೇ ಕಡಲು ಕಂಡವರ ಪಾಲಿಗೆ ಇದೊಂದು ಮನರಂಜನೆ.