ನೆಚ್ಚಿನ ಹೀರೋ ಯಶ್ ಬರ್ತ್‌ಡೇ ಸಂಭ್ರಮಕ್ಕೆ ಕಟೌಟ್ ಕಟ್ಟುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಮೂವರು ಯುವಕರು ಮೃತಪಟ್ಟಿದ್ದಾರೆ. ಆಕಸ್ಮಿಕದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಹಾರ ಘೋಷಿಸಿದ್ದಾರೆ. ನಟ ಯಶ್ ಮೃತ ಯುವಕರ ಮನೆಗಳಿಗೆ ಭೇಟಿ ನೀಡಿದ್ದಾರೆ.
ನಟ ಯಶ್ ಅವರ ಹುಟ್ಟುಹಬ್ಬವಿಂದು. ಆದರೆ ಆಕಸ್ಮಿಕದಲ್ಲಿ ಅವರ ಮೂವರು ಅಭಿಮಾನಿಗಳ ಅಗಲಿದ್ದು, ಬರ್ತ್‌ಡೇ ಸಂಭ್ರಮ ಕಳೆಗುಂದಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಸೂರಣಗಿ ಗ್ರಾಮದ ಮೂವರು ಯಶ್ ಅಭಿಮಾನಿಗಳು ನಿನ್ನೆ ರಾತ್ರಿ ಕಟೌಟ್ ಕಟ್ಟಲು ಸಿದ್ಧತೆ ನಡೆಸಿದ್ದರು. ಯಶ್‌ರ 25 ಅಡಿ ಬೃಹತ್ ಕಟೌಟ್ ಕಟ್ಟುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ಸಂಪರ್ಕವಾಗಿದ್ದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಕಸ್ಮಿಕದಲ್ಲಿ ಅಗಲಿದ ಯುವಕರನ್ನು ಹನುಮಂತ ಹರಿಜನ, ಮುರಳಿ ನಡುವಿನಮನಿ, ನವೀನ್ ಗಾಜಿ ಎಂದು ಗುರುತಿಸಲಾಗಿದೆ. ಅವರ ಜೊತೆಯಲ್ಲಿದ್ದ ಇನ್ನೂ ಮೂವರು ಯುವಕರಿಗೂ ವಿದ್ಯುತ್ ತಗುಲಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು (ಸೋಮವಾರ) ಬೆಳಗ್ಗೆ ಮೃತಪಟ್ಟ ಮೂವರು ಯುವಕರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಮೃತ ಯುವಕರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನೆ ಬಗ್ಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು ಪರಿಹಾರ ಘೋಷಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ನಟ ಯಶ್ ಅವರು ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ಗದಗಕ್ಕೆ ಪ್ರಯಾಣ ಬೆಳೆಸಿದರು. ಮೃತ ಯುವಕರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ರಾತ್ರಿ ಹನ್ನೊಂದರ ಸುಮಾರಿಗೆ ಯುವಕರು ಕಟೌಟ್ ಕಟ್ಟಲು ಹೋಗಿದ್ದಾರೆ. ಗ್ರಾಮಸ್ಥರು ಎಚ್ಚರಿಸಿದರೂ ಯುವಕರು ಎಚ್ಚರಿಕೆ ವಹಿಸಿಲ್ಲ. ಇದು ದುರಂತಕ್ಕೆ ಕಾರಣವಾಗಿದೆ.