ಕಳೆದ ಸೀಸನ್ನುಗಳಿಗೆ ಹೋಲಿಸಿದರೆ ಇದರಲ್ಲಿ ಕಥಾನಿರೂಪಣೆಯ ವೇಗ ಉತ್ತಮವಾಗಿದೆ. ಸರಣಿಯ ಆರಂಭದಿಂದಲೇ ವೀಕ್ಷಕರಿಗೆ ಪಾತ್ರಗಳ ಜೊತೆಗೆ ಒಂದು ಭಾವನಾತ್ಮಕ ಸಂಬಂಧ ಕಲ್ಪಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಕೆಲವೊಂದು ಪಾತ್ರಗಳು ಮತ್ತು ಸನ್ನಿವೇಶಗಳು ಬಹಳ ಗಾಢವಾಗಿ ನಿಮ್ಮನ್ನು ಆವರಿಸಿಕೊಳ್ಳುತ್ತವೆ. ಆದರೆ ನಿರೂಪಣೆಯ ಭಾವ ಒಂದೇ ಸಮನಾಗಿಲ್ಲ ಅನ್ನುವುದು ಬೇಸರದ ವಿಷಯ. ‘ವರ್ಜಿನ್ ರಿವರ್’ ಸರಣಿಯ 5ನೇ ಸೀಸನ್ Netflixನಲ್ಲಿ ಸ್ಟ್ರೀಮ್ ಆಗುತ್ತಿದೆ.
ವರ್ಜಿನ್ ರಿವರ್ ಸರಣಿ Netflixನ ಅತ್ಯಂತ ಜನಪ್ರಿಯ ಸರಣಿಗಳಲ್ಲೊಂದು. ಕಳೆದ ನಾಲ್ಕು ಸೀಸನ್ನುಗಳು ಇದಕ್ಕೆ ಸಾಕ್ಷಿ. ಇದೊಂದು ರೀತಿಯ ಸರಾಗವಾಗಿ ನೋಡಿಸಿಕೊಂಡು ಹೋಗುವಂತಹ, ಅನಾಯಾಸವಾದ ಅನುಭವ ಕೊಡುವಂತಹ, ಮನೋಲ್ಲಾಸ ಹುಟ್ಟಿಸುವ ಸರಣಿ. ಅನಗತ್ಯ ಗೋಜಲುಗಳು ಇಲ್ಲದ, ಆಸಕ್ತಿಕರ ಮತ್ತು ಲವಲವಿಕೆ, ರೋಮ್ಯಾನ್ಸ್, ಲಘು ಹಾಸ್ಯ ಎಲ್ಲವೂ ಇರುವಂತಹ ಸರಣಿ. ವೀಕ್ಷಕರಿಗೆ ಮತ್ತೆ ಮತ್ತೆ ನೋಡಬೇಕೆನಿಸುವಂತೆ ಮಾಡುವ ಸರಣಿ. ಈಗ ಸೀಸನ್ 5 ಭಾಗ ಒಂದು ಬಿಡುಗಡೆಯಾಗಿದೆ. ಅದೇ ಆಕರ್ಷಣೆಯನ್ನು ಉಳಿಸಿಕೊಂಡಿದೆಯೇ ನೋಡೋಣ ಬನ್ನಿ.
ತನ್ನ ಎಂದಿನ ಶೈಲಿಯಲ್ಲೇ ಸಾಕಷ್ಟು ನಾಟಕೀಯತೆ ಮತ್ತು ರೋಮ್ಯಾನ್ಸ್ ಅನ್ನು ಉಳಿಸಿಕೊಳ್ಳುತ್ತಾ ಮತ್ತಷ್ಟು ಆಸಕ್ತಿ ಹುಟ್ಟಿಸುವಂತೆ ಈ ಸೀಸನ್ ಆರಂಭವಾಗುತ್ತದೆ. ಹಾಗೆಂದು ಇದರಲ್ಲಿ ತಪ್ಪುಗಳೇ ಇಲ್ಲವೆಂದಿಲ್ಲ. ಆದರೆ ಕಳೆದ ಸೀಸನ್ನುಗಳಲ್ಲಿ ಆದ ತಪ್ಪುಗಳನ್ನು ಇದರಲ್ಲಿ ಸರಿಪಡಿಸಲಾಗಿದೆ. ಹತ್ತರಲ್ಲಿ ಹನ್ನೊಂದರಂತೆ ಬರುತ್ತಿರುವ ಅನೇಕ ಸರಣಿಗಳಲ್ಲಿ ಇದು ಒಂದಾಗದಂತೆ ಎಚ್ಚರಿಕೆ ವಹಿಸಿ ಕಥೆ ಹೆಣೆಯಲಾಗಿದೆ. ಹತ್ತು ಹೊಸ ಸಂಚಿಕೆಗಳೊಡನೆ ಈ ಸೀಸನ್ ಪ್ರಸ್ತುತವಾಗಿದೆ. ಇದಲ್ಲದೆ ನವೆಂಬರ್ ತಿಂಗಳಲ್ಲಿ ವಿಶೇಷ ಹಾಲಿಡೇ ಸಂಚಿಕೆಗಳನ್ನು ಹೊರತರುವ ಸುದ್ದಿ ಕೇಳಿಬರುತ್ತಿದೆ.
ಸೀಸನ್ 4 ಎಲ್ಲಿಗೆ ಮುಗಿದಿತ್ತೋ ಅಲ್ಲಿಂದಲೇ ಐದನೇ ಸೀಸನ್ ಭಾಗ ಒಂದು ಶುರುವಾಗುತ್ತದೆ. ವರ್ಜಿನ್ ರಿವರ್ ಊರಿನ ನಗರವಾಸಿಗಳ ಗಡಿಬಿಡಿ, ಗೊಂದಲಗಳು, ವೈಯಕ್ತಿಕ ಜೀವನದ ತಳಮಳಗಳು ಎಂದಿನಂತೆ ಇಲ್ಲೂ ಮುಂದುವರೆದಿದೆ. ಮೆಲ್ ಮತ್ತು ಜ್ಯಾಕ್ ಜನಪ್ರಿಯ ಜೋಡಿ ಇಲ್ಲಿ ತಮ್ಮ ಮೊದಲನೇ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ. ಅವರವರದ್ದೇ ಸಂಕೀರ್ಣ ಸನ್ನಿವೇಶಗಳನ್ನು ಎದುರಿಸುತ್ತಲೇ ಮೊದಲನೇ ಸಲ ಪೋಷಕರಾಗುವ ಸಂಭ್ರಮ ಮತ್ತು ತಲ್ಲಣ ಎರಡನ್ನೂ ಒಟ್ಟಿಗೆ ಎದುರಿಸಲು ಸಿದ್ಧವಾಗಿದ್ದಾರೆ. ಮೆಲ್ ತನ್ನ ತಾಯ್ತನದ ಬಗ್ಗೆ ಜಾಸ್ತಿ ಗಮನವಹಿಸಲು ತನ್ನ ಕ್ಲಿನಿಕ್ ಅನ್ನು ಬಿಡುವ ಯೋಚನೆ ಮಾಡುತ್ತಾಳೆ. ಜ್ಯಾಕ್ ತನ್ನ ಹಳೆಯ ಪ್ರೇಯಸಿ ಕಾರ್ಮೆನ್‌ಳ ಮೋಸವನ್ನು ಜೀರ್ಣಿಸಿಕೊಳ್ಳಲು ಹೆಣಗುತ್ತಿದ್ದಾನೆ.
4ನೇ ಸೀಸನ್ ಇವರಿಬ್ಬರ ನಡುವಿನ ರೋಚಕ ತಿರುವಿನೊಂದಿಗೆ ಅಂತ್ಯವಾಗಿದ್ದನ್ನು ಸ್ಮರಿಸಬಹುದು. ವರ್ಜಿನ್ ರಿವರ್ ನಗರವಾಸಿಗಳ ಜೀವನದಲ್ಲಿ ಬಹುತೇಕರ ಪಾಲಿಗೆ ಪ್ರೀತಿ ಪ್ರೇಮದ ಘಳಿಗೆಗಳು ತೆರೆದ ಬಾಗಿಲಿನ ಸ್ವಾಗತ ನೀಡಲು ಸಿದ್ಧವಾಗಿರುತ್ತದೆ. ಈ ಹಂತದಲ್ಲಿ ಕಥೆಯಲ್ಲಿ ಬರುವ ತಿರುವುಗಳು ನಗರವಾಸಿಗಳ ಗೊಂದಲ, ತಳಮಳಗಳನ್ನು ಮತ್ತಷ್ಟು ಸಂಕೀರ್ಣವಾಗಿಸುತ್ತವೆ. ಕತೆಗೆ ಹೊಸ ಭಾವನಾತ್ಮಕ ಮಜಲು ಕೂಡ ತೆರೆದುಕೊಳ್ಳುತ್ತದೆ. ಹಳೆಯ ಸೀಸನ್ನುಗಳ ಜನಪ್ರಿಯ ನಟರು ಇಲ್ಲೂ ಮಿಂಚಿದ್ದಾರೆ. ಹೊಸ ಹೊಸ ಕಥಾಸರಣಿಗಳೂ ತೆರೆದುಕೊಳ್ಳುತ್ತವೆ. ಎಲ್ಲಕ್ಕಿಂತ ಮುಖ್ಯ ಅಂದರೆ ಈ ಸೀಸನ್‌ನಲ್ಲಿ ಕಥೆ ಧನಾತ್ಮಕವಾಗಿ ಮುಂದುವರೆಯುತ್ತಾ ಹೋಗುತ್ತದೆ. ಸರಣಿಯಲ್ಲಿ ಲವಲವಿಕೆಯ ಅಂಶವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗಿದ್ದಾರೆ.
ಕಳೆದ ಸೀಸನ್ನುಗಳಿಗೆ ಹೋಲಿಸಿದರೆ ಇದರಲ್ಲಿ ಕಥಾನಿರೂಪಣೆಯ ವೇಗ ಉತ್ತಮವಾಗಿದೆ. ಸರಣಿಯ ಆರಂಭದಿಂದಲೇ ವೀಕ್ಷಕರಿಗೆ ಪಾತ್ರಗಳ ಜೊತೆಗೆ ಒಂದು ಭಾವನಾತ್ಮಕ ಸಂಬಂಧ ಕಲ್ಪಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಕೆಲವೊಂದು ಪಾತ್ರಗಳು ಮತ್ತು ಸನ್ನಿವೇಶಗಳು ಬಹಳ ಗಾಢವಾಗಿ ನಿಮ್ಮನ್ನು ಆವರಿಸಿಕೊಳ್ಳುತ್ತವೆ. ಆದರೆ ನಿರೂಪಣೆಯ ಭಾವ ಒಂದೇ ಸಮನಾಗಿಲ್ಲ ಅನ್ನುವುದು ಬೇಸರದ ವಿಷಯ. ಹಳೆಯ ಸೀಸನ್ನುಗಳಲ್ಲಿ ಆದ ತಪ್ಪುಗಳೇ ಇಲ್ಲೂ ಕೆಲವು ಕಡೆ ಆಗಿವೆ. ಕೆಲವು ಅತಿ ನಾಟಕೀಯ ತಿರುವುಗಳು ಮತ್ತು ಅತಿರೇಕದ ತಿರುವುಗಳು ಆಸಕ್ತಿಯನ್ನು ಕುಗ್ಗಿಸುತ್ತವೆ. ಆದರೆ ಶೃಂಗಾರದ ದೃಶ್ಯಗಳು ಮತ್ತು ವೈಲ್ಡ್ ಫೈರ್ ದೃಶ್ಯಾವಳಿಗಳು ವೀಕ್ಷಕರನ್ನು ಹಿಡಿದಿಡುತ್ತವೆ. ಅಲ್ಲಲ್ಲಿ ಕತೆ ಮೊನಚು ಕಳೆದುಕೊಂಡರೂ ಕತೆಯ ಮುಖ್ಯ ತಿರುಳು ಹದವಾಗಿ ನಿರೂಪಿತವಾಗಿದೆ. ಭಾವನಾತ್ಮಕ ದೃಶ್ಯಗಳು ಈ ಸೀಸನ್ನಿನ ಹೈಲೈಟ್. ವರ್ಜಿನ್ ರಿವರ್ ಸೀಸನ್ 5 ಭಾಗ 1 ಅಭಿಮಾನಿಗಳಿಗೆ ನಿರಾಸೆಯನ್ನಂತೂ ಮಾಡುವುದಿಲ್ಲ. ಕಿರುತೆರೆಯ ಹಲವು ಇತಿಮಿತಿಗಳ ನಡುವೆಯೇ ಒಂದು ಮಟ್ಟಕ್ಕೆ ತನ್ನ ಭಾವತೀವ್ರತೆಯನ್ನು ವೀಕ್ಷಕರಿಗೆ ತಲುಪಿಸುವಲ್ಲಿ ಸರಣಿ ಯಶಸ್ವಿಯಾಗಿದೆ. ಭಾಗ 2ಕ್ಕೆ ಕುತೂಹಲದಿಂದ ಕಾಯುವಂತೆ ಮಾಡಿದೆ.