ಇದು ಬರವಣಿಗೆಯನ್ನೇ ನಂಬಿಕೊಂಡು ತೆರೆಗೆ ಬಂದಿರುವ ಸಿನಿಮಾ. ದೈಹಿಕ ವಾಂಛೆ, ವೇಶ್ಯಾವಾಟಿಕೆ, ಮಧ್ಯವರ್ತಿ, ಪೊಲೀಸು, ಅಂಗವೈಕಲ್ಯತೆ ಅನ್ನುವ ಅನೇಕ ವಿಷಯಗಳಿದ್ದರೂ ನಿರ್ದೇಶಕ ಎಲ್ಲಿಯೂ ಒಂದು ಇಂಚಾದರೂ ತನ್ನ ಪರಿಧಿ ಬಿಟ್ಟು ಹೊರಹೋಗಿಲ್ಲ.
ಈ ಸಿನಿಮಾದ ಕತೆಯನ್ನು ಯಾರಿಗಾದರೂ ಹೇಳಿದರೆ ಕೇಳಿಸಿಕೊಂಡವರು ಬಹುಶಃ ಇದು Art Cinema ಇರಬೇಕು ಅಂದುಕೊಳ್ಳಬಹುದು. ಅಲ್ಲ, ಇದೊಂದು ಕಮರ್ಶಿಯಲ್ ಸಿನಿಮಾನೇ ಅಂದರೆ ಬಹುಶಃ ಅಷ್ಟೊಂದು ಹೇಳಿಕೊಳ್ಳುವಷ್ಟು ಮನಸ್ಸಿಗೆ ನಾಟಲಾರದು ಅಂದುಕೊಳ್ಳಬಹುದು. ಅದರಲ್ಲೂ ನೀವೇನಾದರೂ ಇದು ಕಾಮಿಡಿ ಸಿನಿಮಾ ಅಂದರೆ ಮುಗಿದು ಹೋಯ್ತು! ಇದರಲ್ಲಿ ಏನೆಲ್ಲ ಡಬ್ಬಲ್ ಮೀನಿಂಗ್, ಪೋಲಿತನದ ಡೈಲಾಗು ಇರಬಹುದು ಅಂತ ಅಂದುಕೊಳ್ಳಬಹುದು. ಆದರೆ ಇಲ್ಲಿ ಅಂಥದ್ಯಾವುದಕ್ಕೂ ಅವಕಾಶವಿಲ್ಲ.
ಏಕೆಂದರೆ ಇದು ಬರವಣಿಗೆಯನ್ನೇ ನಂಬಿಕೊಂಡು ತೆರೆಗೆ ಬಂದಿರುವ ಸಿನಿಮಾ. ದೈಹಿಕ ವಾಂಛೆ, ವೇಶ್ಯಾವಾಟಿಕೆ, ಮಧ್ಯವರ್ತಿ, ಪೊಲೀಸು, ಅಂಗವೈಕಲ್ಯತೆ ಅನ್ನುವ ಅನೇಕ ವಿಷಯಗಳಿದ್ದರೂ ನಿರ್ದೇಶಕ ಎಲ್ಲಿಯೂ ಒಂದು ಇಂಚಾದರೂ ತನ್ನ ಪರಿಧಿ ಬಿಟ್ಟು ಹೊರಹೋಗಿಲ್ಲ. ಯಾಕಾದರೂ ಈ ಸಿನಿಮಾಗೆ ‘ಎ’ ಸರ್ಟಿಫಿಕೇಟ್ ಕೊಟ್ಟಿದ್ದಾರೋ ಎಂದು ಸಿನಿಮಾ ಮುಗಿದ ಮೇಲೆ ಸೆನ್ಸಾರ್ ಮಂಡಳಿಯನ್ನು ಪ್ರೇಕ್ಷಕ ಬೈದುಕೊಳ್ಳುವ ಹಾಗೆ ಸೂಕ್ಷ್ಮವಾಗಿ ಎಲ್ಲ ವಿಷಯಗಳನ್ನು ಜೋಪಾನವಾಗಿ ನಿರ್ವಹಿಸಿದ್ದಾರೆ. ಸಿನಿಮಾಗೆ ಹೋಗುವ ಮೊದಲೇ ಅನೇಕರಿಂದ ಈ ಅಭಿಪ್ರಾಯ ವ್ಯಕ್ತವಾಗಿದ್ದರೂ, ನಾನು ನೋಡುವವರೆಗೆ ಇದನ್ನು ನಂಬಲಾಗಿರಲಿಲ್ಲ.
ನಾಯಕಿಗೆ ತನ್ನ ಮೇಲೆ ಪ್ರೀತಿ ಉಂಟಾಗಿರಬಹುದೆಂಬ ನಂಬಿಕೆ ನಾಯಕನಿಗೆ. ಅವಳು ಹೊರಟು ಹೋಗುವಾಗ ಅವಳ ಆ ಒಂದು ನೋಟಕ್ಕಾಗಿ ಕಾಯುತ್ತಾನೆ. ಆದರೆ ಆಕೆ ಅಂಧಳು. ಅವಳಿಗೆ ಹೇಗೆ ತಾನೇ ತಿರುಗಿ ನೋಡಲು ಸಾಧ್ಯ? ನಾಯಕ ಕಾಯುವಾಗ ಆಕೆಯ ಜೊತೆಯಲ್ಲಿದ್ದ ಆ ಮಂಗಳಮುಖಿ ಈತನತ್ತ ತಿರುಗುತ್ತಾಳೆ. ಈತನ ಗೆಳೆಯ ಇವನನ್ನು ನೋಡಿ ಲೇವಡಿ ಮಾಡುತ್ತಾನೆ. ಮುಂದಿನ ಕ್ಷಣ ನಾಯಕ ‘ಅವಳ ಕಣ್ಣು ಇವಳೇ ಅಲ್ಲವೇನೋ?’ ಎಂದು ಹೇಳುತ್ತಾನೆ. ಏಕೆಂದರೆ ಆ ಅಂಧ ನಾಯಕಿ ಇಡೀ ಪ್ರಪಂಚದೊಂದಿಗೆ ಒಡನಾಡುವುದು ಆ ಜೊತೆಗಾರ್ತಿ ಮಂಗಳಮುಖಿಯ ಮೂಲಕವೇ. ಆ ಕ್ಷಣದಲ್ಲಾದ ಅರಿವಿಗೆ ನಾಯಕನ ಗೆಳೆಯ ಮೂಕನಾಗುತ್ತಾನೆ. ಆ ದೃಶ್ಯ ನೋಡುತ್ತಿರುವ ಪ್ರೇಕ್ಷಕನ ಮನಸ್ಸಿಗೂ ಇದು ಅರಿವಾಗುತ್ತದೆ. ಎಂತಹ ಸನ್ನಿವೇಶವನ್ನೂ ಪ್ರೇಕ್ಷಕನಿಗೆ ಬೇರೊಂದು ರೀತಿಯಲ್ಲಿ ಉಣಬಡಿಸುವುದು ಹೇಗೆಂದು ನಿರ್ದೇಶಕನಿಗೆ ಗೊತ್ತಿದ್ದರೆ ಮಾತ್ರ ಇಂಥ ದೃಶ್ಯಗಳು ಮೂಡಲು ಸಾಧ್ಯ.
ಮಂಗಳಮುಖಿಯರ ಬಗ್ಗೆ ಅತ್ತ ತಿರಸ್ಕಾರವೂ ಮೂಡದಂತೆ, ಅತ್ತ ಸಿಕ್ಕಾಪಟ್ಟೆ ಕನಿಕರವೂ ಮೂಡದಂತೆ ಸಾಮಾನ್ಯ ಮನುಷ್ಯರಂತೆಯೇ ಭಾವಗಳಿರುವ ಜೀವ ಅನ್ನುವಂತೆ ತೋರಿಸಿದ್ದು ಈ ಚಿತ್ರದ ಹೈಲೈಟ್. ಹಿಂದೊಮ್ಮೆ ಈ ಸಿನಿಮಾದ ಟ್ರೈಲರ್ ನೋಡಿದಾಗ ಬಹುಶಃ ಈ ಸಿನಿಮಾ ಅ ಅಂಗವಿಕಲ ಮಗನ ಲೈಂಗಿಕ ಬಯಕೆಯನ್ನು ತೀರಿಸಲು ಹೋರಾಡುವ ಅಪ್ಪನ ಕತೆಯಂತೆ ಕಂಡರೂ ಸಿನಿಮಾ ನೋಡಿದ ಮೇಲೆ ಇದು ಕೇವಲ ಸಿನಿಮಾ ನೋಡಲು ಪ್ರೇಕ್ಷಕರಿಗೆ ಬರುವಂತೆ ಕೊಡಲಾದ ಆಮಂತ್ರಣ ಪತ್ರಿಕೆಯಂತೆ ಕಂಡಿತು. ಇದಕ್ಕೆ ಕಾರಣ ಆ ಕತೆಗೆ ಹೊರತಾಗಿ, ಅದಕ್ಕೆ ಹೊಂದಿಕೊಂಡಂತೆ ಸಿಕ್ಕಾಪಟ್ಟೆ ವಿಷಯಗಳನ್ನು ಮನೋಜ್ಞವಾಗಿ ಹೇಳಲಾಗಿದೆ.
ಒಂದು ಕಡೆ ತನ್ನ ಅಂಗವೈಕಲ್ಯಕ್ಕೆ ಕಾರಣವನ್ನು ಹುಡುಕುತ್ತ ತನ್ನನ್ನು ತಾನು ಹಳಿದುಕೊಳ್ಳುವ ಹುಡುಗನಿಗೆ ಆತನ ತಂದೆ ಧೈರ್ಯ ತುಂಬುವ ರೀತಿ. ಇನ್ನೊಂದು ಕಡೆ ಕುರುಡಿಯಾಗಿದ್ದರೂ ತನ್ನ ಪಾಡಿಗೆ ಖುಷಿಯಾಗಿರುವ ಆ ಹುಡುಗಿಯನ್ನು ನರಕಕೂಪಕ್ಕೆ ತಳ್ಳುವ ತಂದೆ. ಎರಡು ವೈರುಧ್ಯಗಳನ್ನು ಅಲ್ಲಿ ಬರುವ ಡೈಲಾಗು, ಹಾಡಿನಿಂದಲೇ ಅರ್ಥ ಮಾಡಿಕೊಳ್ಳಬಹುದು. ಒಂದು ಕಡೆ ‘ದೇವರು ತಾವರೆ, ಕಮಲದ ಹೂವುಗಳನ್ನು ಕೆಸರಿನಲ್ಲೇ ಇಟ್ಟಿದ್ದರೂ ಆ ಹೂವುಗಳು ಬೇಸರಿಸಿಕೊಳ್ಳುವುದಿಲ್ಲ. ಏಕೆಂದರೆ ಉಳಿದೆಲ್ಲ ಹೂವುಗಳು ದೇವರ ತಲೆಯ ಮೇಲೆ ಕುಳಿತುಕೊಳ್ಳಲು ಹವಣಿಸುತ್ತಿದ್ದರೆ, ತಾವರೆ , ಕಮಲದ ಹೂವುಗಳ ಮೇಲೆ ಪರಮಾತ್ಮನೇ ಕುಳಿತುಕೊಳ್ಳುತ್ತಾನೆ’ ಎಂದು ಆ ತಂದೆ ಅಂಗವಿಕಲ ಮಗನಿಗೆ ಹೇಳುತ್ತ ಧೈರ್ಯ ತುಂಬುತ್ತಿದ್ದರೆ, ಇತ್ತ ಆ ಹುಡುಗಿಯನ್ನು ಹೆತ್ತ ತಂದೆಯೇ ದಂಧೆಗೆ ತಳ್ಳುವಾಗ ‘ನಮ್ಮೂರಲ್ಲಿ ಅರಳೋ ಹೂವೆಲ್ಲ ಗುಡಿಯ ಸೇರೊಲ್ಲ’ ಅಂತ ಹಿನ್ನೆಲೆಯಲ್ಲಿ ಹಾಡೊಂದು ಬಂದು ಹೋಗುತ್ತದೆ. ನಮಗೆ ಗೊತ್ತಿಲ್ಲದೆಯೇ ಮಕ್ಕಳ ಬಾಳಿನಲ್ಲಿ ಅಪ್ಪನೆಂಬುವನ ಜವಾಬ್ದಾರಿಯೇನು ಅಂತ ಹೇಳದೆಯೂ ಹೇಳಲಾಗುತ್ತದೆ. ಇದು ತುಂಬಾ ಇಷ್ಟವಾಯಿತು.
ನಾಯಕನ ಅಪ್ಪನ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಅದ್ಬುತ ಅಭಿನಯ. ನಾಯಕಿಯ ಪಾತ್ರದಲ್ಲಿ ಸಿಕ್ಕ ಅವಕಾಶದಲ್ಲೇ ಮಯೂರಿ ಮನಗೆಲ್ಲುತ್ತಾರೆ. ನಾಯಕನ ಪಾತ್ರಕ್ಕೆ ಜಾಸ್ತಿ ಅವಕಾಶವಿಲ್ಲದಿದ್ದರೂ ಡೈಲಾಗುಗಳನ್ನು ಹೇಳುವ ರೀತಿಯಲ್ಲೇ ಇಷ್ಟವಾಗುತ್ತಾರೆ. ಗಿರಿ ಅವರಿಗೆ ಒಳ್ಳೆಯ ಪಾತ್ರವಿದೆ. ಆದರೆ ಇಡೀ ಸಿನಿಮಾದಲ್ಲಿ ಎಲ್ಲರ ಚಪ್ಪಾಳೆ ಗಿಟ್ಟಿಸುವುದೆಂದರೆ ಮಧ್ಯವರ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ರಂಗಾಯಣ ರಘು. ಒಂದು ದೃಶ್ಯದಲ್ಲಿ ನಗು ತರಿಸಿದರೆ ಮತ್ತೊಂದು ದೃಶ್ಯದಲ್ಲಿ ವ್ಹಾವ್ ಅನ್ನಿಸುವಂತೆ ಅಭಿನಯಿಸುತ್ತಾರೆ. ಸಿನಿಮಾ ನೋಡಿದವರು ಆ ಪಾತ್ರವನ್ನು ‘ಆ ಪಾತ್ರದ ಹೆಸರಿನಿಂದ’ ಕರೆಯುವುದಿಲ್ಲ. ಸಿನಿಮಾ ಯಾವ ಬಗೆಯಲ್ಲಿ ಜನರ ಮನಪರಿವರ್ತನೆ ಮಾಡಬಲ್ಲದು ಅನ್ನುವುದಕ್ಕೆ ಇದೇ ಸಾಕ್ಷಿ.
ಹಾಗಿದ್ದರೆ ಸಿನಿಮಾದ ನಿಜವಾದ ನಾಯಕ ಯಾರು? ಸಿನಿಮಾ ನೋಡುವ ಎಲ್ಲ ಪ್ರೇಕ್ಷಕರು ಕೇಳುವ ಒಂದೇ ಪ್ರಶ್ನೆ “ಯಾವನ್ ಗುರೂ ಡೈಲಾಗ್ ಬರೆದಿದ್ದು?” ಅಂತ. ಬಹುಶಃ ‘ಎದ್ದೇಳು ಮಂಜುನಾಥ’ ಆದ ಮೇಲೆ ಒಂದು ಡೈಲಾಗಿಗೂ ಇನ್ನೊಂದು ಡೈಲಾಗಿಗೂ ಮಧ್ಯೆ ಸ್ಪೇಸ್ ಇದ್ದರೆ ಇನ್ನೂ ಚೆಂದವಿರುತ್ತಿತ್ತು ಅನ್ನಿಸುವಷ್ಟು. ಎಲ್ಲ ಡೈಲಾಗುಗಳು ಚೆನ್ನಾಗಿವೆ. ಯಾವ ಸಾಲೂ ತೂರಿಸಿದ್ದು ಅನ್ನಿಸುವುದಿಲ್ಲ. ಅಷ್ಟು ಸಹಜವಾಗಿಯೇ ಸನ್ನಿವೇಶಕ್ಕೆ ಹೊಂದಿಕೊಂಡಿವೆ. ಒಂದು ಡೈಲಾಗು ಕೊಟ್ಟ ಪಂಚ್ ‘ವ್ಹಾವ್’ ಅನ್ನಿಸಿ ಮುಂದೆ ಹೋಗುವುದರೊಳಗೆ ಮುಂದಿನ ಡೈಲಾಗು ‘ನಾನು?!’ ಅಂತ ಕಾಯುತ್ತದೆ. ಏನಿಲ್ಲವೆಂದರೂ ಮೂರು ಸಿನಿಮಾಗಳಿಗೆ ಸಾಕಾಗುವಷ್ಟು ತೂಕದ ಡೈಲಾಗುಗಳನ್ನು ಬರೆದಿದ್ದಾರೆ ಗುರು ಕಶ್ಯಪ್. ಸಿನಿಮಾ ನೋಡಿ ಮುಗಿಸುವಾಗ “ಎಂಥ ಪ್ರತಿಭೆಯನ್ನು ಕಳೆದುಕೊಂಡೆವಲ್ಲ” ಅಂತ ಬೇಸರ ಮೂಡುವಷ್ಟರ ಮಟ್ಟಿಗೆ ಗುರು ಕಶ್ಯಪ್ ಇದರಲ್ಲಿ ಅದ್ಭುತ ಸಾಲುಗಳನ್ನು ಬರೆದಿದ್ದಾರೆ. ಮತ್ತೊಮ್ಮೆ ಹೇಳಬೇಕೆಂದರೆ ಪ್ರೇಕ್ಷಕನಿಗೆ ಮುಜುಗರವಾಗದ ಹಾಗೆ ಪ್ರತೀ ಸಾಲೂ ಇದೆ. ಈ ಸಿನಿಮಾ ಓಟಿಟಿಯಲ್ಲಿ ಬಂದಾಗಲೂ ಮತ್ತೊಮ್ಮೆ ನಿಧಾನಕ್ಕೆ ನೋಡಬೇಕು. ಆ ಡೈಲಾಗುಗಳನ್ನು ಸಿನಿಮಾ ನಿಲ್ಲಿಸಿ ನಿಲ್ಲಿಸಿ ಕೇಳುತ್ತಲೇ ಪ್ರತೀ ಸಾಲನ್ನು ತರ್ಕ ಮಾಡಬೇಕು ಅನ್ನಿಸುವಷ್ಟು.
ಮೊದಲಾರ್ಧ ಡೈಲಾಗುಗಳಲ್ಲೇ ಕಥೆ ಹೇಳಿದರೆ, ದ್ವಿತೀಯಾರ್ಧದಲ್ಲಿ ಡೈಲಾಗುಗಳ ಜೊತೆ ಕಥೆಯ ಓಟವೂ ಮೊದಲಾದ ಕಡೆ ಸಾಗುತ್ತದೆ. ಕೆಲವೇ ಹಾಡುಗಳಿದ್ದರೂ ಭರತ್ ಬಿಜೆ ಅವರ ನಿಜವಾದ ಪ್ರತಿಭೆ ಅನಾವರಣಗೊಳ್ಳುವುದು ‘ನಮ್ಮೂರಲ್ಲಿ ಅರಳೋ ಹೂವೆಲ್ಲ’ ಹಾಡಿನಲ್ಲಿ. ಹಿನ್ನೆಲೆ ಸಂಗೀತವೂ ಚೆನ್ನಾಗಿದೆ. ಈ ಬಗೆಯ ಸಿನಿಮಾಗಳು ಗೆಲ್ಲಬೇಕು. ಈ ಬಗೆಯ ಕತೆಗಳನ್ನು ದಿಟ್ಟವಾಗಿ ಎಲ್ಲರಿಗೂ ಅರ್ಥವಾಗುವಂತೆ ಸಿನಿಮಾ ಮಾಡಬಲ್ಲ ನಟರಾಜ್ ಥರದ ನಿರ್ದೇಶಕರು ಗೆಲ್ಲಬೇಕು. ಈ ಸಿನಿಮಾ ಖಂಡಿತ ನಿಮ್ಮನ್ನು ನಿರಾಶೆ ಮಾಡಲಾರದು.